ಅಪರೂಪವಾಗುತ್ತಿರುವ ಚಂಪೇರಾ ಹಣ್ಣು


ಪಶ್ಚಿಮ ಘಟ್ಟದ ಕಾಡುಗಳಲ್ಲಿ ಹೇರಳವಾಗಿ ಕಂಡುಬರುವ ಹಣ್ಣಿನ ಮರಗಳಲ್ಲಿ ಪುನರ್‌ಪುಳಿ, ಹೆಬ್ಬೆಲೆಸು, ಬಿಂಬುಳಿ, ಚಂಪೇರಾ, ಅಮಟೆಕಾಯಿ, ಕೌಳಿ ಹಣ್ಣು ಹಾಗೂ ಅನೇಕ ಹಣ್ಣಿನ ಮರಗಳು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಅವುಗಳಲ್ಲಿ ಪುನರ್‌ಪುಳಿ, ಬಿಂಬುಳಿ ಮತ್ತು ಅಮಟೆಕಾಯಿಗಳನ್ನು ಹುಣಸೆಗೆ ಬದಲಾಗಿ ಅಡುಗೆಗೆ ಬಳಸುತ್ತಾರೆ. ಚಂಪೇರಾ ಹಣ್ಣನ್ನು ಕಾಡಿನವಾಸಿಗಳು, ಕಾಡುಪ್ರಾಣಿಗಳು ಮತ್ತು ಕಾಡಿಗೆ ಕಟ್ಟಿಗೆ ತರಲು ಹೋದ ಕರಾವಳಿಗರು ಅದರ ಸ್ವಾದವನ್ನು ಅನುಭವಿಸಿರುತ್ತಾರೆ.
ಚಂಪೇರಾ ಹಣ್ಣಿನಮರವನ್ನು ವೈಜ್ಞಾನಿಕವಾಗಿ ಫ್ಲಾಕೋರ್ಟಿಯಾ ಮೊಂಟಾನಾ ಎಂದು ಮತ್ತು ಇದು ಮಾಲ್ಫಿಜಿಯಸಿಯೆ ಎಂಬ ಕುಟಂಬಕ್ಕೆ ಸೇರಿದೆ. ಸಾಮಾನ್ಯವಾಗಿ ಇದು ನಿತ್ಯಹರಿದ್ವರ್ಣ ಮತ್ತು ಅರೆ-ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತವೆ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ಈ ಹಣ್ಣನ್ನು ಚಾಪೆ ಹಣ್ಣು, ಸಂಪಿಗೆ ಹಣ್ಣು, ಕಕ್ಕಡೆ ಹಣ್ಣು, ಚಾಂಪರ್ ಮತ್ತು ರಾನ್ ತಾಂಬುಟ್ ಎಂದೂ ಕರೆಯುತ್ತಾರೆ. ಇದು ೧೦-೧೫ ಮೀ
ಎತ್ತರಕ್ಕೆ ಮರವಾಗಿ ಬೆಳೆಯುತ್ತದೆ. ಮರದ ತೊಗಟೆಯು ನೊಣಪಿಲ್ಲದ (ಮಂದವಾದ) ಮುಳ್ಳಿನಿಂದ (೩-೫ ಸೆಂ. ಮೀ) ಆವೃತವಾಗಿರುತ್ತದೆ. ಹಣ್ಣುಗಳು ಆಳವಾದ ಕೆಂಪು ಬಣ್ಣದಿಂದ ಕೂಡಿದ್ದು, ಮೃದುವಾದ ಸಿಹಿ-ಹುಳಿ ಮಿಶ್ರಿತ ರಸಭರಿತವಾದ ತಿರುಳನ್ನು ಹೊಂದಿರುತ್ತದೆ. ಹಣ್ಣುಗಳು ಗಾತ್ರದಲ್ಲಿ ೧-೧.೫ ಸೆಂ. ಮೀ ನಷ್ಟಿದ್ದು ೩-೫ ಬೀಜಗಳನ್ನು ಹೊಂದಿರುತ್ತದೆ
ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದ ಸಹ್ಯಾದ್ರಿ ವನ ಪ್ರದೇಶಗಳಲ್ಲಿ ಇದು ಕಂಡುಬರುವುದು ಸರ್ವೇ-ಸಾಮಾನ್ಯ. ಚಂಪೇ ಹಣ್ಣು ಮತ್ತು ಅದಕ್ಕೆ ಸಂಬಂಧಿಸಿದ ಪ್ರಬೇಧಗಳನ್ನು ಸಾಂಪ್ರದಾಯಿಕವಾಗಿ ವಿವಿಧ ರೋಗಗಳ ಚಕಿತ್ಸೆಗಾಗಿ ಬಳಸಲಾಗುತ್ತದೆ.
ಔಷಧಿ ಉಪಯೋಗಗಳು: ಆಯುರ್ವೇದದಲ್ಲಿ ಇದನ್ನು ಒಂದು ಗಿಡಮೂಲಿಕೆಯಾಗಿ ಬಳಸುತ್ತಾರೆ. ಜ್ವರ, ಅತಿಸಾರ ಮತ್ತು ಉರಿಯೂತದಂತಹ ಪರಿಸ್ಥಿತಿಗಳಲ್ಲಿ ಚಕಿತ್ಸೆ ನೀಡಲು ತೊಗಟೆ, ಎಲೆಗಳು ಮತ್ತು ಬೇರಿನ ಕಷಾಯವನ್ನು ಔಷಧಿಯಾಗಿ ಬಳಸುತ್ತಾರೆ. ಹಾವಿನ ಕಡಿತಕ್ಕೆ ಎಲೆಗಳನ್ನು ಪ್ರತಿವಿಷವಾಗಿ ಬಳಸಲಾಗುತ್ತದೆ. ಕೆಲವು ಬುಟಕಟ್ಟು ಜನಾಂಗದವರು ದೇಹದ ನೋವುಗಳ ಪರಿಹಾರಕ್ಕಾಗಿ ಎಲೆಯ ಕಷಾಯವನ್ನು ತಗೆದುಕೊಳ್ಳುತ್ತಾರೆ.
ಈ ಹಣ್ಣಿನ ಉಪಯೋಗ ಮತ್ತು ಬಳಕೆಯ ಬಗ್ಗೆ ಇನ್ನೂ ಸಾಕಷ್ಟು ಸಂಶೋಧನೆ ನಡೆಯಬೇಕಾಗಿದೆ. ಭಾರತವು ಗಿಡ-ಮರಗಳ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ನಾಗರಿಕತೆಯ ಪ್ರಾರಂಭದಿಂದಲೂ ಔಷಧಿ ಮೌಲ್ಯವುಳ್ಳ ಗಿಡಮರಗಳನ್ನು ಪ್ರತ್ಯೇಕಿಸಿ, ಬೆಳಸಿ ಅದನ್ನು ಉಳಿಸಿಕೊಂಡುಬಂದಿದ್ದೇವೆ. ಹಾಗೆಯೇ ಈ ತರಹದ ಅಪರಿಚಿತ, ಔಷಧಿ ಗುಣಗಳುಳ್ಳ ಹಣ್ಣುಗಳ ಬಳಕೆ ಹೆಚ್ಚಾಗಬೇಕು. ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಸಿಗುವ ಗಿಡಮೂಲಿಕೆಗಳನ್ನು ಉಳಸಿ, ಸಂರಕ್ಷಿಸಬೇಕಾಗಿದೆ.
(ಮಾಹಿತಿ ಸಹಕಾರ: ಪವಿತ್ರಾ ಎಸ್, ತೋಟಗಾರಿಕಾ ಕಾಲೇಜು, ಮೂಡಿಗೆರೆ)
ಚಿತ್ರ ಕೃಪೆ: ಅಂತರ್ಜಾಲ ತಾಣ