ಅಪಹರಣಕಾರರಿಂದ ಮುಕ್ತಿಗೆ ದೇಹದೊಳಕ್ಕೆ ಚಿಪ್ ಹುದುಗಿಸಿಕೊಳ್ಳುವ ಮೆಕ್ಸಿಕನ್ನರು!

ಅಪಹರಣಕಾರರಿಂದ ಮುಕ್ತಿಗೆ ದೇಹದೊಳಕ್ಕೆ ಚಿಪ್ ಹುದುಗಿಸಿಕೊಳ್ಳುವ ಮೆಕ್ಸಿಕನ್ನರು!

ಬರಹ

 

chip implant
    ಮೆಕ್ಸಿಕೋ ದೇಶದಲ್ಲಿ ಜನರನ್ನು ಅಪಹರಿಸಿ,ಹಣ ಕೀಳುವ ಸಮಸ್ಯೆ ಇತ್ತೀಚೆಗೆ ಅತಿಯಾಗಿದೆ. ವ್ಯವಹಾರಸ್ಥನ್ನು ಅಪಹರಿಸಿ,ಅವರ ಏಟಿಎಂ ಖಾತೆಯಿಂದ ಹಣ ತೆಗೆಸಿಕೊಡುವಂತೆ ಧಮಕಿ ಹಾಕುವುದು ಅಲ್ಲಿ ಸಾಮಾನ್ಯ.ಈಗ ಸಾಮಾನ್ಯ ಜನರ ಅಪಹರಣವೂ ಆರಂಭವಾಗಿದೆಯಂತೆ. ಜನರಿಗಿದು ಗಾಬರಿ ಹುಟ್ಟಿಸಿದೆ. ಪೊಲೀಸರನ್ನು ನಂಬಿದರೆ ಉಳಿಗಾಲವಿಲ್ಲವೆಂದು ಜನರು ತಂತ್ರಜ್ಞಾನದ ಮೊರೆ ಹೊಕ್ಕಿದ್ದಾರೆ.ಕ್ಸೆಗಾ ಎನ್ನುವ ಭದ್ರತಾ ಕಂಪೆನಿಯು ಸ್ಥಾನ ಪತ್ತೆ ತಂತ್ರಜ್ಞಾನದ ಸಾಧನ ಜಿಪಿಎಸ್ ಸಾಧನವನ್ನು ಅಕ್ಕಿ ಕಾಳಿನಷ್ಟು ಸಣ್ಣ ಚಿಪ್‌ನಲ್ಲಿ ಅಳವಡಿಸಿದೆ. ಇದನ್ನು ಸಿರಿಂಜ್ ಮೂಲಕ ದೇಹದೊಳಗೆ ಸೇರಿಸಲು ಸಾಧ್ಯ.ಸಾಮಾನ್ಯವಾಗಿ ತೋಳಿನಲ್ಲಿ ಇದನ್ನಿಡಲಾಗುತ್ತದೆ. ಈ ಚಿಪ್‌ನ ತರಂಗಗಳು ಉಪಗ್ರಹಕ್ಕೆ ತಲುಪಿಸಲು ಇನ್ನೊಂದು ಪ್ರೇಷಕ ಯಂತ್ರ ಬೇಕಾಗುತ್ತದೆ. ಇದನ್ನು ವ್ಯಕ್ತಿ ತನ್ನಲ್ಲಿ ಹಿಡಿದು ಕೊಂಡಿರಬೇಕು. ಅಕಸ್ಮಾತ್ ಆತನನ್ನು ಯಾರಾದರೂ ಬಲಾತ್ಕಾರದಿಂದ ಹೊತ್ತೊಯ್ಯಲು ಯತ್ನಿಸಿದರೆ,ಆತ ಸಾಧನದ ಸ್ವಿಚ್ ಒತ್ತಬೇಕು. ಒಡನೆಯ ಕ್ಸೆಗಾ ಕಂಪೆನಿಯ ಕಚೇರಿಗೆ ಸಂದೇಶ ಹೋಗುತ್ತದೆ. ಅವರು ಪೊಲೀಸರಿಗೆ ತಿಳಿಸುತ್ತಾರೆ. ಜಿ ಪಿ ಎಸ್ ಸ್ಥಾನ ತಿಳಿಸುವ ವ್ಯವಸ್ಥೆಯ ಕಾರಣ ವ್ಯಕ್ತಿ ಎಲ್ಲಿದಾನೆ ಎನ್ನುವುದು ಪೊಲೀಸರಿಗೆ ತಿಳಿಯುವ ಕಾರಣ ಅವರು ಬಲೆ ಬೀಸಿ, ಅಪಹರಣಕಾರರ ಜಾಲದಿಂದ ವ್ಯಕ್ತಿಯನ್ನು ಬಿಡಿಸಲು ಕಠಿನವಾಗದು. ಆದರೆ ಇದನ್ನು ದೇಹದೊಳಗೆ ಹುದುಗಿಸಲು ಎರಡು ಲಕ್ಷಕ್ಕೂ ಅಧಿಕ ಖರ್ಚು ಬರುತ್ತದೆ.ವರ್ಷ ವರ್ಷವೂ ಬದಲಿಸುವ ಖರ್ಚೂ ಇದೆ.
ಅಂತರ್ಜಾಲ ಕರೆ ಮಾಡಲು ದೂರವಾಣಿ ಯಂತ್ರnet tel
    ಡಿಲಿಂಕ್ ಕಂಪ್ಯೂಟರ್ ಜಾಲಗಳನ್ನು ನಿರ್ವಹಿಸಲು ಅಗತ್ಯ ಸಾಧನಗಳನ್ನು ತಯಾರಿಸುವುದರಲ್ಲಿ ಹೆಸರು ಮಾಡಿರುವ ಕಂಪೆನಿ. ಈ ಕಂಪೆನಿಯಿದೀಗ ಭಾರತದಲ್ಲೇ ಮೊದಲ ಬಾರಿಗೆ ಅಂತರ್ಜಾಲ ಮೂಲಕ ವಿಡಿಯೋ ಕರೆ ಮಾಡಲು ಅನುವು ಮಾಡುವ ಸ್ಥಿರ ದೂರವಾಣಿ ಯಂತ್ರವನ್ನು ಹೋಲುವ ಸಾಧನ ತಯಾರಿಸಿ,ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಇಪ್ಪತ್ತಮೂರು ಸಾವಿರ ಬೆಲೆಯ ಈ ಸಾಧನ ಹೊಂದಿದ್ದರೆ, ಅಂತರ್ಜಾಲ ಮೂಲಕ,ಐಪಿ ಪ್ರೊಟೊಕಾಲ್ ಬಳಸಿ, ಅತಿ ಕಡಿಮೆ ದರದಲ್ಲಿ ಧ್ವನಿ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಬೋನಸ್ ಅಂದರೆ, ಧ್ವನಿಯ ಜತೆ ಬಳಕೆದಾರರಿಗೆ ತಮ್ಮ ಮುಖಾರವಿಂದದ ದರ್ಶನವೂ ಆಗುತ್ತದೆ. ಅಂತರ್ಜಾಲ ಕರೆಯಾದ್ದರಿಂದ ಕರೆಯನ್ನು ಸಾಮಾನ್ಯಕ್ಕಿಂತ ಅಗ್ಗದಲ್ಲಿ ಮಾಡಬಹುದು. ಕಂಪ್ಯೂಟರ್ ಅಗತ್ಯವಿಲ್ಲವೆನ್ನುವುದು ಪ್ಲಸ್ ಪಾಯಿಂಟ್. ಕಂಪ್ಯೂಟರ್ ಬಳಕೆ ಗೊತ್ತಿಲ್ಲದವರೂ ಸಾಮಾನ್ಯ ದೂರವಾಣಿ ಕರೆ ಮಾಡುವಂತೆ ಡಯಲ್ ಮಾಡಿ ಕರೆ ಮಾಡಬಹುದು. ಆದರೆ ಕರೆ ಸ್ವೀಕರಿಸುವವರಲ್ಲೂ ಇದೇ ರೀತಿಯ ಸಾಧನ ಇರಬೇಕಾಗುತ್ತದೆ. ಅದು ಡಿಲಿಂಕಿನ ಸಾಧನವೇ ಆಗಬೇಕೆಂದಿಲ್ಲ. ಅದರೆ ಅದಕ್ಕೆ ಹೊಂದಿಕೆಯಾಗುವ ಸಾಧನವಾಗಿರಬೇಕು.ಅಲ್ಲದೆ ಕರೆ ಮಾಡುವ ಮೊದಲು ಅಂತರ್ಜಾಲ ಕರೆಗಳ ಸೇವೆ ಒದಗಿಸುವ ಯಾವುದಾದರೂ ಕಂಪೆನಿಯಲ್ಲಿ ಗ್ರಾಹಕನ ಸಾಧನವನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.www.iptel.org , www.voiptalk.org , www.freeworlddialup.com, www.sipphone.com  ಇಂತಹ ಕೆಲ ಅಂತರ್ಜಾಲ ತಾಣಗಳಲ್ಲಿ ಸೇವೆಗೆ ನೋಂದಾಯಿಸಿಕೊಳ್ಳಲು ಬರುತ್ತದೆ.ವೀಡಿಯೋ ಇಲ್ಲದೆ ಬರೇ ಧ್ವನಿ ಕರೆಗಳನ್ನು ಮಾಡಲು ಅಸ್ಪದ ಕೊಡುವ ಸಾಧನಕ್ಕೆ ಬರೇ ಏಳು ಸಾವಿರ ರೂಪಾಯಿ ಬೆಲೆಯಿದೆ.ಸದ್ಯ ಭಾರತದಲ್ಲಿ ಮಾತ್ರಾ ಈ ಯಂತ್ರ ಲಭ್ಯವಿದ್ದು, ಇತರೆಡೆಯೂ ಇದನ್ನು ಮಾರಾಟಕ್ಕೆ ಒದಗಿಸುವ ಹಂಚಿಕೆ ಕಂಪೆನಿಯದು.
ಐಫೋನ್ ಭಾರತದಲ್ಲೂ
    ಭಾರತದಲ್ಲೂ ಐಫೋನ್ ಈಗ ಲಭ್ಯ.ಭಾರತಿ ಏರ್‌ಟೆಲ್ ಕಂಪೆನಿ ಇದನ್ನು ಒದಗಿಸ ಹತ್ತಿದೆ. ಮೂವತ್ತು ಸಾವಿರಕ್ಕು ಹೆಚ್ಚು ಬೆಲೆ ತೆರಬೇಕಾದ್ದರಿಂದ ಈ ಮೊಬೈಲ್ ಸಾಧನಕ್ಕೆ ಬಹಳ ಬೇಡಿಕೆಯೇನೂ ಕಂಡು ಬರಲಿಲ್ಲ. ಇತರ ದೇಶಗಳಲ್ಲಿ ಜನ ಇದನ್ನು ಮುಗಿಬಿದ್ದು ಖರೀದಿಸಿದ್ದರು. ಕಾರಣ ಅಲ್ಲಿ ಅದರ ಬೆಲೆ ಮೂರನೇ ಒಂದಂಶ. ಭಾರತದಲ್ಲಿ ಮಾರಾಟವಾಗುತ್ತಿರುವ ಐಫೋನಿನಲ್ಲಿ ಮೂರನೇ ತಲೆಮಾರಿನ 3G ಇದೆ. ಆ ಸೇವೆಯಿನ್ನೂ ಲಭ್ಯವಾಗಬೇಕಷ್ಟೇ.
ನಿ(ಸ್ತಂತು)ವಿದ್ಯುಚ್ಛಕ್ತಿ: ಕೇಬಲ್ ಗೋಳಿಲ್ಲ
    ಲ್ಯಾಪ್‌ಟಾಪ್‌ನ ಬ್ಯಾಟರಿ ಚಾರ್ಜ್ ಮಾಡಲು ವಿದ್ಯುತ್ ಕೇಬಲನ್ನು ಸಂಪರ್ಕಿಸುವ ಅಗತ್ಯ ಇಲ್ಲದೆ ಇದ್ದರೆ ಅದೆಷ್ಟು ಚೆನ್ನು! ನಿಸ್ತಂತು ಮೂಲಕ ಅಂತರ್ಜಾಲವನ್ನದರಲ್ಲಿ ಪಡೆಯಬಹುದೇನೋ ಹೌದು-ಆದರೆ ವಿದ್ಯುಚ್ಛಕ್ತಿಯ ಮಟ್ಟಿಗೆ ಇದಿನ್ನೂ ಸಾಧ್ಯವಿಲ್ಲ. ಚಿಪ್ ತಯಾರಕ ಕಂಪೆನಿ ಈ ನಿಟ್ಟಿನಲ್ಲಿ ಆಗಬೇಕಿರುವ ಬದಲಾವಣೆಗಳನ್ನು ಅಭ್ಯಾಸ ಮಾಡುತ್ತಿದೆ. ಕಂಪೆನಿಯು ಮಸಾಚುಸೆಟ್ಸ್ ವಿಶ್ವವಿದ್ಯಾಲಯದ ಜತೆ ಕೈಗೂಡಿಸಿ ಸಂಶೋಧನೆ ನಡೆಸಿದೆ. ಈ ನಿಟ್ಟಿನಲ್ಲಿ ಸಂಶೋಧಕರು ಮೊದಲ ಹೆಜ್ಜೆಗಳನ್ನೀಗಲೇ ಇಟ್ಟಿದ್ದಾರೆ. ತಂತಿಯ ಸುರುಳಿಯನ್ನು ವಿದ್ಯುತ್ ಸಾಕೆಟಿಗೆ ಸಂಪರ್ಕಿಸಿ,ಕೆಲವಡಿ ದೂರದಲ್ಲಿಟ್ಟ ಇನ್ನೊಂದು ತಂತಿ ಸುರುಳಿಯ ಮೂಲಕ ಬಲ್ಬ್‌ನ್ನು ಉರಿಸಲು ಅವರಿಗೆ ಸಾಧ್ಯವಾಗಿದೆ. ಹೀಗೆ ಮಾಡುವಾಗ ನಿಸ್ತಂತುವಾಗಿ ಕಳುಸಿದ ವಿದ್ಯುಚ್ಛಕ್ತಿಯ ಅರ್ಧಾಂಶ ಪಾಲಿನಷ್ಟು ಶಕ್ತಿ ಪೋಲಾಗುತ್ತದೆ.ಈ ಪೋಲಾಗುವ ಶಕ್ತಿಯಲ್ಲಿ ಕಡಿತ ಮಾಡುವುದು ಮತ್ತು ಇನ್ನಷ್ಟು ದೂರದಲ್ಲಿಟ್ಟ ತಂತಿ ಸುರುಳಿಯಲ್ಲೂ ವಿದ್ಯುತ್ ಪ್ರವಹಿಸುವಂತೆ ಮಾಡುವುದು ನಿಜವಾದ ಸವಾಲು. ವಿದ್ಯುತ್ ಸುರುಳಿಯ ಸುತ್ತ ಕಾಂತ ಕ್ಷೇತ್ರ ಹರಡುತ್ತದೆ. ಈ ಕಾಂತ ಕ್ಷೇತ್ರ ಇನ್ನೊಂದು ತಂತಿ ಸುರುಳಿಯನ್ನು ಕಡಿದಾಗ ಸುರುಳಿಯಲ್ಲಿ ವಿದ್ಯುತ್ತನ್ನು ಪ್ರೇರೇಪಿಸುತ್ತದೆ.ಮೊಬೈಲ್ ಸಾಧನಗಳನ್ನು ಹೀಗೆ ನಿಸ್ತಂತುವಾಗಿಯೇ ಚಾರ್ಜ್ ಮಾಡಲು ಸಾಧ್ಯವಾದರೆ,ಕೇಬಲ್ ಜಾಲದ ಹಂಗಿಲ್ಲದೆ,ಸಾಧನವನ್ನು ಬಹು ಹೊತ್ತು ಬಳಸಲು ಸಾಧ್ಯವಾಗುತ್ತದೆ. ಇದು ಬಳಕೆದಾರನಿಗೆ ಬಹಳ ಅನುಕೂಲಕರ ಎನ್ನಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಇಂತಹ ಪ್ರಯೋಗವನ್ನು ಲ್ಯಾಪ್‌ಟಾಪ್‌ನಲ್ಲಿ ಮಾಡಲು ಅದರಲ್ಲಿ ಬಹಳಷ್ಟು ಬದಲಾವಣೆಗಳ ಅಗತ್ಯ ಬರುತ್ತದೆ. ಇಂಟೆಲ್ ಅದರ ಅಧ್ಯಯನಕ್ಕೆ ಮುಂದಡಿಯಿಟ್ಟಿದೆ. ನಿಸ್ತಂತು ವಿದ್ಯುತ್‌ಗೆ ವೈಟ್ರಿಸಿಟಿ(ವಯರ್‌ಲೆಸ್ ಇಲೆಕ್ಟ್ರಿಸಿಟಿ) ಎಂದು ನಾಮಕರಣ ಮಾಡಲಾಗಿದೆ. ನೀವಿದನ್ನು ನಿವಿದ್ಯುಚ್ಛಕ್ತಿ ಎನ್ನುತ್ತೀರೋ(ನಿಸ್ತಂತು ವಿದ್ಯುಚ್ಛಕ್ತಿ)?ಮುಂದಿನ ದಿನಗಳಲ್ಲಿ ಮೊಬೈಲ್ ಸಾಧನ, ಹೃದಯಕ್ಕೆ ಅಳವಡಿಸಿದ ಪೇಸ್‌ಮೇಕರ್ ಸಾಧನ ಮತ್ತು ಕೃತಕ ಹೃದಯಗಳನ್ನು ಚಲಾಯಿಸಲು ಅಗತ್ಯವಾದ ಶಕ್ತಿಯನ್ನು ನಿಸ್ತಂತು ಮೂಲಕ ಒದಗಿಸುವ ನಿಟ್ಟಿನಲ್ಲಿ ಈ ಪ್ರಯೋಗಗಳು ಪ್ರಾಮುಖ್ಯತೆ ಪಡೆದಿವೆ.
*ಅಶೋಕ್‌ಕುಮಾರ್ ಎ

udayavani

ashokworld