ಅಪಹರಣ, ಅತ್ಯಾಚಾರ, ನಂತರ ವಿವಾಹ

ಅಪಹರಣ, ಅತ್ಯಾಚಾರ, ನಂತರ ವಿವಾಹ

ಬರಹ

ಪ್ರತಿಯೊಬ್ಬ ವಿವಾಹಿತ ಮಹಿಳೆಯೂ ತನ್ನ ವಿವಾಹ ದ ದಿನವನ್ನು ಒಂದು ಹನಿ ಕಣ್ಣೀರಿನೊಂದಿಗೆ ಸ್ಮರಿಸುತ್ತಾಳೆ. ಆದರೆ ಇಥಿಯೋಪಿಯ ದೇಶದಲ್ಲಿ ಓರ್ವ ಹೆಣ್ಣಿನ ಈ ಕಣ್ಣೀರು ಬೇರೆಯದೇ ಆದ ವ್ಯಥೆಯನ್ನು ಹೇಳುತ್ತದೆ. "ನುರಾಮೆ ಅಬೇದೋ" ತನ್ನ ಗುಡಿಸಿಲಿನಲ್ಲಿ ಕುಳಿತು ತಾನು ಪತ್ನಿಯಾದ ದಿನವನ್ನು ನೆನೆಸುತ್ತಾಳೆ. ಕನ್ಯಾಪಹರಣ ದ ರಾಜಧಾನಿಯಾದ ಗುಡ್ಡ ಗಾಡಿನಲ್ಲಿ ಆಕೆಯ ವಾಸ. ೪೦ ವರ್ಷಗಳ ಯಾತನೆಯನ್ನು ಆಕೆ ಹೇಳಲು ಹೊರಟರೆ ಆಕೆ ಯನ್ನು ಬಂಧಿಸಿದವರು ಅದಕ್ಕೆ ಆಸ್ಪದ ಕೊಡುವುದಿಲ್ಲ; ಒಳ್ಳೆಯ ಹೆಣ್ಣುಮಕ್ಕಳು ಈ ರೀತಿ ಮಾತನಾಡುವುದಿಲ್ಲ ಎಂದು. ಆದರೂ ಆಕೆ ತನ್ನ ವ್ಯಥೆಯ ಗಾಥೆಯನ್ನು ನಿಧಾನವಾಗಿ ಹೇಳುತ್ತಾಳೆ, ಆಗಾಗ ತನ್ನ ಒಡಲಿನಿಂದ ತನಗರಿವಿಲ್ಲದೆ ಬರುವ ನಗುವಿನೊಂದಿಗೆ.


ತುಳಿತಕ್ಕೊಳಗಾದ ಬಡವನ ಮತ್ತೊಂದು ಅಸ್ತ್ರ ನಗು. ಒಣ ನಗು.  


ಮಲಗಿದ್ದ ನುರಾಮೆ ಎಚ್ಚರಗೊಂದಿದ್ದು ಅಬ್ಬರದ ಗಲಾಟೆ ಕೇಳಿ. ಆಕೆಯ ಕುಟುಂಬದಲ್ಲಿ ಗಂಡಸರ ಸಂಖ್ಯೆ ೧೦ ಅಥವಾ ಹೆಚ್ಚು. ಆಕೆಯ ತಂದೆಯ ಎದುರಿನಲ್ಲಿ ಅವರೆಲ್ಲಾ ಅರಚುತ್ತಿದ್ದರು. ವಿದ್ಯುಚ್ಚಕ್ತಿ ಇಲ್ಲದ ಕಗ್ಗತ್ತಲ ರಾತ್ರಿ ಆಕೆಗೆ ಎಲ್ಲವೂ ಮಸುಕು. ಆಕೆ ಕೇವಲ ೮ ವರ್ಷ ದ ಪೋರಿಯಾದರೂ ಅಲ್ಲಿ ಏನು ನಡೆಯುತ್ತಿದೆ ಎಂದು ಆಕೆ ಶಂಕಿಸಿದಳು.


ಆಕೆ ಜನ ಪಿಸುಗುಟ್ಟುವುದನ್ನು ಕೇಳಿದ್ದಳು, ಹುಡುಗಿ ಪ್ರಾಯಕ್ಕೆ ಬಂದಾಗ ಗಂಡು ಆಕೆಯನ್ನು ಬಲಾತ್ಕಾರ ಮಾಡಿ ನಂತರ ತನ್ನ ಸೇವೆಗಾಗಿ ಆಕೆಯನ್ನು ಇಟ್ಟುಕೊಳ್ಳುತ್ತಾನೆಂದು. ಜೀವನ ಪೂರ್ತಿ ಆಕೆ ಅವನ ಸೇವಕಳು. "ಅದು ಇಲ್ಲಿನ ಸಂಸ್ಕೃತಿ" ಆದರೆ ಖಂಡಿತ ಅವಳ ಸಂಸ್ಕೃತಿಯಾಗಿರಲಿಲ್ಲ. ಬೇರೆಲ್ಲಾ ಹುಡಗಿಯರ ಹಾಗೆ ಆಕೆಗೂ ಅದು ಇಷ್ಟವಿರಲಿಲ್ಲ. ಬಂದವರಿಂದ ತಪ್ಪಿಸಿಕೊಳ್ಳಲು ಅರಚುತ್ತಾ ಗುಡಿಸಿಲಿನಿಂದ ಹೊರಗೋಡಿ ಮರದ ಹಿಂದೆ ಅವಿತುಕೊಂಡಳು. ಆದರೂ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ತನ್ನನ್ನು ನೋಡಿಬಿಟ್ಟ.


ಆಕೆಯನ್ನು ಎಳೆದು ಕೊಂಡು ತನ್ನ ಮನೆಗೊಯ್ದ ಆ ವ್ಯಕ್ತಿ ಅವನ ಕುಟುಂಬದವರ ಮುಂದೆಯೇ ಆಕೆಯನ್ನು ಬಲಾತ್ಕಾರ ಮಾಡಿ ಮರು ದಿನ ಮದುವೆಗೆಂದು ಕರೆದೊಯ್ದು ದಿಗ್ಭ್ರಮೆಗೊಂಡ ಅವಳಿಂದ ಕೆಲವೊಂದು ಕಾಗದಗಳಿಗೆ ಸಹಿಯನ್ನು ಹಾಕಿಸಿ ಕೊಳ್ಳುತ್ತಾನೆ. ಸಹಿ ಮಾಡುತ್ತಾ ಆಕೆ ಅಲ್ಲಿಂದ ಹೇಗೆ ಪಾರಾಗುವುದರ ಬಗ್ಗೆ ಯೋಚಿಸುತ್ತಾಳೆ.  


ಮೂರು ದಿನಗಳ ನಂತರ ತನ್ನನ್ನು ಆತ ತನ್ನನ್ನು ಒಂಟಿಯಾಗಿ ಬಿಟ್ಟ ಕೂಡಲೇ ಬರಿಗಾಲಿನಲ್ಲಿ ಆಕೆ ಓಡುತ್ತಾಳೆ ತನ್ನ ಗುಡಿಸಿಲಿಗೆ, ತನ್ನ ಬದುಕಿಗೆ, ತನ್ನ ಬಾಲ್ಯದ ದಿನಗಳಿಗೆ. ಸಂತಸದ ಕಣ್ಣೀರಿಡುತ್ತಾ ಗುಡಿಸಿನೊಳಗೆ ಬಂದ ಆಕೆಗೆ ತಂದೆಯ ಉಪದೇಶ ಆಕೆಯನ್ನು ಧೃತಿಗೆಡಿಸುತ್ತದೆ. ಆತನೊಂದಿಗೆ ನಾನು ಲೈಂಗಿಕ ಸಂಬಂಧ ಹೊಂದಿದ ಕಾರಣ ನಾನು ಯಾರಿಗೂ ಬೇಡ, ಒಳ್ಳೆಯ ಪತ್ನಿಯಾಗಿ ಅವನೊಡನೆ ಬದುಕಬೇಕು ಎಂದು ಅಪ್ಪನ ಉಪದೇಶ. ಅಪ್ಪನ ಮಾತಿಗೆ ಅಮ್ಮ ದುಃಖಿತಳಾದರೂ ಹೂಂಗುಟ್ಟು  ತ್ತಾಳೆ. ಇವರ ಮಾತನ್ನು ನಾನು ಕೇಳಲೇ ಬೇಕು, ಬೇರೆ ದಾರಿಯೇ ಇಲ್ಲ, ದೇವರೇ ನನಗೆ ದಾರಿ ತೋರಿಸು ಎನ್ನುತ್ತಾ ಆಕೆ ಗಂಡನ ಮನೆಗೆ ಮರಳುತ್ತಾಳೆ.


ಕೆಲವರ್ಷಗಳಲ್ಲೇ ಆರು ಮಕ್ಕಳನ್ನು ಹೆತ್ತ ಆಕೆ ಹೇಳುತ್ತಾಳೆ ಹೆಣ್ಣಿನ ಬದುಕು ದುಸ್ತರ ಎಂದು.


ನುರಮೆ ಗೆ ಬೇರೆಯೇ ರೀತಿ ಬದುಕುವ ಆಸೆಯಿತ್ತು. ಚೆನ್ನಾಗಿ ಕಲಿತು ನನ್ನ ಬದುಕನ್ನು ನಾನೇ ಆರಿಸಿಕೊಳ್ಳಲು ಸಾಧ್ಯವಿತ್ತು. ಆದರೆ ಆ ಅವಕಾಶ ಈಗ ಆಕೆಗಿಲ್ಲ. ನನಗೀಗ ವಯಸ್ಸಾಯಿತು, ನಾನು ಸಂತುಷ್ಟಳಾಗೇ ಇರಬೇಕು. ನನಗೆ ಮಕ್ಕಳಿದ್ದಾರೆ ಮತ್ತು ಅವರನ್ನು ನಾನು ಪ್ರೀತಿಸುತ್ತೇನೆ ಎಂದು ಕೈಚೆಲ್ಲಿ ಹೇಳುವ ಆಕೆ ಕೂಡಲೇ ಈ ಮಾತನ್ನೂ ಸೇರಿಸುತ್ತಾಳೆ, ನನ್ನ ಗಂಡನೂ ಒಳ್ಳೆಯವನೇ, ಅವನು ನನ್ನನ್ನು ಹೊಡೆಯುವುದಿಲ್ಲ, ನಾನವನನ್ನು ಪ್ರೀತಿಸುತ್ತೇನೆ, ಆತ ಬಹಳ ಒಳ್ಳೆಯವನು.   


ನಾನು ಭೇಟಿ ಮಾಡಿದ ಮಹಿಳೆಯರೆಲ್ಲರ ಅತ್ಯಾಚಾರದ ಕಥೆಯೂ ಇದೇ ಆದರೂ ಆಶಾವಾದಿಗಳಾಗಿ "ನುರಾಮೆ" ರಂತೆಯೇ  ಮಾತನಾಡುತ್ತಾರೆ. ಎಲ್ಲರೂ ಹೇಳುವುದು ಮೊದಲ ಐದು ವರ್ಷಗಳು ಮಾತ್ರ ಕಷ್ಟ ಎಂದು. ಆದರೆ ನುರಾಮೆ ಈ ತೆರನಾದ ವ್ಯವಸ್ಥೆಗೆ ತನ್ನ ಮಗಳನ್ನು ಮಾತ್ರ ನೂಕುವುದಿಲ್ಲ ಎಂದು ದೃಢತೆಯಿಂದ ಹೇಳುತ್ತಾಳೆ. 


ಇಥಿಯೋಪಿಯ ದಲ್ಲಿ ನುರಾಮೆ ತೆರನಾದ ಘಟನೆಗಳು ದಿನವೂ ನಡೆಯುತ್ತವೆ. ಒಂದು ಅಂಕಿ ಅಂಶಗಳ ಪ್ರಕಾರ ಶೇಕಡಾ ೬೯ ವಿವಾಹಗಳು ಆರಂಭವಾಗುವುದು ಅಪಹರಣ ಮತ್ತು ಅತ್ಯಾಚಾರಗಳಿಂದ. ಕ್ರೈಸ್ತ ಮತ್ತು ಮುಸ್ಲಿಮರಿರುವ ಈ ನಾಡಿನಲ್ಲಿ ಎಲ್ಲರೂ ಇದೇ ರೀತಿಯ ವ್ಯವಸ್ಥೆಗೆ ತಮ್ಮನು ಒಡ್ಡಿ ಕೊಂಡಿದ್ದಾರೆ. ಶತಮಾನಗಳಿಂದ ಈ ವ್ಯವಸ್ಥೆ ಇದ್ದರೂ ಕಳೆದ ದಶಕದಿಂದೀಚೆಗೆ ಇದರ ವಿರುದ್ಧ ಧ್ವನಿಗಳು ಕೇಳಿಬರುತ್ತಿವೆ. 


ಹೌದು ನನ್ನ ಹಲವು ಪತ್ನಿಯರು ಇದೇ ರೀತಿ ಅಪಹರಣದ ಮೂಲಕ ಬಂದವರು ಎಂದು ಮತ್ತೊಬ್ಬ ನುಡಿಯುತ್ತಾನೆ. ಕುಂಬಾರನಾದ ಈತನಿಗೆ ಏಳು ಹೆಂಡಿರು ಮತ್ತು ಅವರೆಲ್ಲರೂ ಮಣ್ಣಿನ ಪಾತ್ರೆಗಳನ್ನು ತಯಾರಿಸುತ್ತಾರೆ. ಇವನಿಗೆ ಮಹಿಳೆಯರ ಅಪಹರಣ "ಪ್ರೇಮದ ಕುರುಹು". ಹೆಣ್ಣಿಗೆ ಗಂಡನಾದವನು ಜೇನು ತುಪ್ಪದಂತೆ, ಜೇನು ಸಿಕ್ಕಿದ ಕೂಡಲೇ ಆಕೆ ಸಂತುಷ್ಟಳು ಎಂದು ಹೇಳುವಾಗ ಅವನಲ್ಲಿ ತುಂಟತನ  ಎದ್ದು ಕಾಣುತ್ತದೆ.  ಅವನ ಪ್ರಕಾರ ಮಹಿಳೆಯರು ಕಾರ್ಖಾನೆಗಳಿದ್ದಂತೆ. ಗಂಡನ ಆಜ್ಞೆಗಳನ್ನು ಪಾಲಿಸುತ್ತಾ ಇರುವುದೇ ಮಹಿಳೆಯರಿಗೂ ಇಷ್ಟ ಎಂದು ಅವನ ಅಭಿಪ್ರಾಯ.  


ಇಥಿಯೋಪಿಯಾ ಇನ್ನೂ ಕಗ್ಗತ್ತಲಿನಲ್ಲಿದೆ ಎಂದು ಮೇಲಿನ ಘಟನೆಗಳೇ ಸಾಕ್ಷಿ.


Abducted. Raped. Married. Can Ethiopia's wives ever break free? ಶೀರ್ಷಿಕೆಯಡಿ ಇಂಗ್ಲೆಂಡಿನ independent ಪತ್ರಿಕೆಯಲ್ಲಿ ಇಂದು ಪ್ರಕಟವಾದ "ಜೊಹಾನ್ ಹರಿ" ಯವರ ಲೇಖನದ ಒಂದು ಭಾಗವನ್ನು ನನಗೆ ತಿಳಿದ ಮಟ್ಟಿಗೆ ಭಾಷಾಂತರಿಸಿದ್ದೇನೆ. ಹರಿ, ರೋಬರ್ಟ್ ಫಿಸ್ಕ್ ರಂತೆಯೇ ಜನಪ್ರಿಯ ಅಂಕಣಕಾರ. ಕಳೆದ ವಾರ ಪಲೆಸ್ತಿನ್ ಸಮಸ್ಯೆ ಬಗ್ಗೆ ಮನೋಜ್ಞವಾಗಿ ಹರಿ ಬರೆದಿದ್ದರು. ಮೇಲಿನ ಲೇಖನವನ್ನು ಪೂರ್ತಿಯಾಗಿ ಓದಲು ಕೆಳಗಿನ ಕೊಂಡಿ ಕ್ಲಿಕ್ಕಿಸಿ.