ಅಪಾಯವನ್ನು ಅಪ್ಪಿಕೊಳ್ಳುತ್ತಿರುವ ಯುವಕರು...
ಅದು ಧುಮ್ಮುಕ್ಕಿ ಹರಿಯುತ್ತಿರುವ ಜಲರಾಶಿ. ರಭಸವಾಗಿ ನುಗ್ಗುತ್ತಿರುವ ಶುಭ್ರ ನೀರು. ಆಳದ ಅರಿವಿಲ್ಲ. ಎತ್ತರ ಅಳೆದಿಲ್ಲ. ಬಂಡೆಗಳಿಗೆ ಅಪ್ಪಳಿಸುವ ಭೋರ್ಗರೆಯುವ ನೀರಿನಲ್ಲಿ ಅದ್ಭುತವಾದ ಆಕರ್ಷಣೆ. ಅಕ್ಕ ಪಕ್ಕ ಎತ್ತರವಾದ ಕರಿಬಂಡೆಗಳು. ಅಪ್ಪಿ ತಪ್ಪಿ ವಸ್ತುವೊಂದು ಕೈ ಜಾರಿ ಬಿದ್ದು ಬಿಟ್ಟರೆ ಮತ್ತೆ ಕಾಣಲು ಅಸಾಧ್ಯವಾದ ಕಂದರ. ಬೈಂದೂರು ತಾಲೂಕಿನ ಕೊಲ್ಲೂರು ಸಮೀಪದ ಅರಿಶಿನಗುಂಡಿ ಜಲಪಾತದ ಕತೆಯಿದು. ದೂರದಿಂದ ನೋಡುಗರಿಗೆ ಇದೊಂದು ರಮಣೀಯ ತಾಣ.
ಭಾರವಾದ ಹೃದಯದಿಂದ ಬರೆಯುತ್ತಿದ್ದೇನೆ. ಭದ್ರಾವತಿಯ ಯುವಕ ಶರತ್ ಕುಮಾರ್. ಇಪ್ಪತ್ತಮೂರರ ಸದೃಢ ಮೈಕಟ್ಟಿನ ಯುವಕ. ತಂದೆ- ತಾಯಿಗೆ ಆಸರೆಯಾಗಿರುವ ಏಕೈಕ ಗಂಡು. ಉಳಿದಿಬ್ಬರು ಸಹೋದರಿಯರು. ಸ್ವ ಉದ್ಯೋಗ ಮಾಡುತ್ತಾ ಸ್ವಾವಲಂಬಿಯಾಗಿ ಬದುಕುತ್ತಿದ್ದ. ಅಪ್ಪ- ಅಮ್ಮನ ಪ್ರೀತಿಯ ಮಗ. ಮಳೆಗಾಲದಲ್ಲಿ ಕೆಲಸದ ಒತ್ತಡವಿರಲಿಲ್ಲ. ಸ್ನೇಹಿತರ ಒತ್ತಾಯಕ್ಕೆ ಹೊರ ಪಯಣಕ್ಕೆ ಸಿದ್ಧನಾಗಿದ್ದ ಶರತ್. ಬೆಳಿಗ್ಗೆದ್ದು ತಾನೇ ಬಿಸಿನೀರು ಕಾಯಿಸಿ, ಸ್ನಾನ ಮಾಡಿ ಮನೆಯಿಂದ ಹೊರಟಿದ್ದ. ಅರಶಿನ ಜಲಪಾತ ಕಂಡೊಡನೆ ಮನಸ್ಸಿನಲ್ಲಿದ್ದ ವಯೋಸಹಜ ಭಾವನೆಗಳು ಚಿಗುರೊಡೆಯಿತು. ಯುವಕರ ಇತ್ತೀಚಿನ ಗೀಳು ಶರತ್ ನನ್ನು ಬಿಟ್ಟಿರಲಿಲ್ಲ. ರೀಲ್ ಮಾಡಲು ಆತನೊಂದು ಸಾಹಸ ಮಾಡಬೇಕಿತ್ತು. ಅದಕ್ಕಾಗಿ ಏರಿದ್ದು ಪಕ್ಕದಲ್ಲಿದ್ದ ಬಂಡೆಯೊಂದನ್ನು. ಇಲ್ಲ ಆತ ಅಲ್ಲಿ ನಿಲ್ಲಲೇ ಬಾರದಿತ್ತು. ಅದು ಅಪಾಯ ಕೈ ಬೀಸಿ ಕರೆಯವ ಜಾಗ. ಅಷ್ಟೊಂದು ಅಪಾಯದ ರೀಲ್ ಬೇಡವಿತ್ತು. ಆತನ ಸ್ನೇಹಿತರಾದರೂ ತಡೆಯಬಹುದಿತ್ತೇನೋ?... ಜೀವನದಲ್ಲಿ ನೂರಾರು ಕನಸುಗಳನ್ನು ಹೊತ್ತಿದ್ದ ಶರತ್ ಕೆಲವೇ ಕ್ಷಣಗಳಲ್ಲಿ ಆಯ ತಪ್ಪಿದ್ದ. ಕಣ್ಣ ರೆಪ್ಪೆ ತೆರೆಯುವುದರೊಳಗೆ ನೀರೊಳಗೆ ಮಾಯವಾಗಿ ಬಿಟ್ಟ. ಅವನೆಲ್ಲಿದ್ದಾನೋ ಗೊತ್ತಿಲ್ಲ. ಹುಡುಕುವ ಪ್ರಯತ್ನ ನಡೆದಿದೆ. ಬದುಕುಳಿದರೆ ಸಂತೋಷ. ಆದರೆ ಸಾಧ್ಯತೆ ತೀರಾನೇ ಕಡಿಮೆ...
ಇಲ್ಲಿಗೆ ಒಂದು ಹಂತ ಮುಗಿಯುತ್ತದೆ. ಆದರೆ ಅಸಲಿ ಕತೆ ಇನ್ನು ಆರಂಭವಾಗುತ್ತದೆ. ಮನೆಯಲ್ಲಿ ಜನ್ಮಕೊಟ್ಟ ತಂದೆ-ತಾಯಿಗೆ ಈತನೇ ಆಸರೆಯಾಗಿದ್ದ. ಅವರು ಆಗಾಗ ತನ್ನ ಕರುಳ ಕುಡಿಯನ್ನು ನೆನೆಯುತ್ತಾ ಅರೆ ಪ್ರಜ್ಞಾವಸ್ಥೆಗೆ ಜಾರುತ್ತಿರುವ ದೃಶ್ಯವಂತೂ ಕರುಳು ಕಿತ್ತುಬರುವಂತಿದೆ. ತಂಗಿಯಂದಿರ ಗೋಳು ಹೇಳ ತೀರದು. ನಾವೆಲ್ಲಾ ಒಂದೆರಡು ದಿನದಲ್ಲಿ ಮರೆತು ಬಿಡಬಹುದು. ಆದರೆ ಮಗನ ಮೇಲೆ ಬೆಟ್ಟದಷ್ಟು ಕನಸು ಹೊತ್ತ ತಂದೆ ತಾಯಿಗೆ ಮರೆಯಲಾದೀತೇ?. ನವಮಾಸಗಳ ಕಾಲ ಅದೆಷ್ಟೋ ನೋವನ್ನು ತನ್ನೊಡಲಲ್ಲಿ ನುಂಗಿ, ಮರಣ ವೇದನೆಗೆ ಸಮನಾದ ಹೆರಿಗೆ ವೇದನೆ ಸಹಿಸಿ ಜನ್ಮ ಕೊಟ್ಟ ಅಮ್ಮನ ಕಣ್ಣೀರಿಗೆ ತಡೆಯೊಡ್ಡುವವರಾರು?. ಮಗನ ಇಪ್ಪತ್ತೆರಡು ಜನ್ಮದಿನಗಳನ್ನು ಸಂಭ್ರಮಿಸಿದ್ದ ಅಪ್ಪ ಇಂದು ಜೀವಂತ ಶವವಾಗಿ ಮಲಗಿರುವಾಗ ಸಂತೈಸುವವರಾರು. ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿ ಕೀಟಲೆ ಮಾಡುತ್ತಾ, ಅಣ್ಣನ ಮೈಮೇಲೆ ಬಿದ್ದು ಆಟವಾಡುತ್ತಿದ್ದ ತಂಗಿಯಂದಿರ ಹೃದಯಕ್ಕೆ ಸಾಂತ್ವಾನ ಹೇಳುವವರಾರು...?
ಹರೆಯದ ಯುವಕ ಯುವತಿಯರೇ... ಮೋಜು ಬೇಕು. ಮಜಾ ಬೇಕು. ಹರೆಯದಲ್ಲಿ ಕನಸುಗಳಿರಬೇಕು. ಆದರೆ ಅವುಗಳಿಗೂ ಒಂದು ಮಿತಿಯಿರಬೇಕು. ರೀಲ್ಸ್ ಮಾಡಬೇಕು. ಆದರೆ ಅದುವೇ ಜೀವನವಾಗಬಾರದು. ಸ್ನೇಹಿತರೊಂದಿಗೆ ಸುತ್ತಬೇಕು. ಆದರೆ ಸ್ವಂತ ಚಿತ್ತವಿರಬೇಕು. ಬೆಟ್ಟ - ಗುಡ್ಡಗಳು, ನೀರು- ಜಲಪಾತಗಳು ಸುಂದರ ಹೌದು. ಆದರೆ ಅವುಗಳಿಗೆ ಅಂತರವಿರಬೇಕು. ಕಳೆದು ಹೋದ ಎಲ್ಲವನ್ನೂ ಮರಳಿ ಪಡೆಯಬಹುದು. ಆದರೆ ಜೀವವನ್ನು ಹೊರತು. ನಮ್ಮ ಬೆಳವಣಿಗೆಯ ಒಂದೊಂದು ಕ್ಷಣವೂ ನೆನಪಿರಬೇಕು. ತಂದೆ ಕೈಹಿಡಿದು ನಡೆಸಿದ್ದು. ತಾಯಿ ಮಡಿಲಲ್ಲಿ ಮಲಗಿಸಿ ಮುದ್ದಿಸಿದ್ದು. ಹೊಸ ಅಂಗಿ ತೊಡಿಸಿದ್ದು. ಹೆಗಲಮೇಲೆ ಹೊತ್ತು ಆಟವಾಡಿಸಿದ್ದು. ಪುಟ್ಟ ಸೈಕಲ್ ತಂದು ನಿಮಗೆ ಕೊಟ್ಟದ್ದು. ನಿಮ್ಮೊಂದಿಗೆ ಕಣ್ಣಾ ಮುಚ್ಚಾಲೆ ಆಟವಾಡಿದ್ದು... ಇವೆಲ್ಲವೂ ನೆನಪಿರಬೇಕು. ನೀವಿಲ್ಲದ ದಿನ ಮಾಡಿದ ಪಾಯಸವನ್ನು ನಿಮಗಾಗಿ ಅಡಗಿಸಿಟ್ಟು ಅಮ್ಮ ಕೊಟ್ಟಿಲ್ಲವೇ?... ಮೊದಲ ದಿನ ಹೊಸ ಬಟ್ಟೆ ಧರಿಸಿ ಶಾಲೆಗೆ ಅಪ್ಪನೊಂದಿಗೆ ಹೊರಟಾಗ ಅಮ್ಮನ ಕಣ್ಣೀರು ಕಟ್ಟೆಯೊಡೆದದ್ದು ಮರೆಯಬಾರದಲ್ವೇ?... ತನಗೆಷ್ಟೇ ಕಷ್ಟ ಬಂದರೂ ನಿಮ್ಮ ಮೇಲೆ ವರ್ಗಾಯಿಸದೆ ನಿಮ್ಮನ್ನು ಬೆಳೆಸಿದ ರೀತಿಯನ್ನು ನೆನಪಿಸಿಕೊಳ್ಳಿ. ಮಾಡಿದ ಪದಾರ್ಥ ನಿಮಗಿಷ್ಟವಾಗದೆ ತಿನ್ನದೆ ಮಲಗಿದಾಗ, ನಿಮಗಾಗಿ ಮತ್ತೊಮ್ಮೆ ಅಡುಗೆ ಮಾಡಿ ಕೊಡುತ್ತಿದ್ದ ಅಮ್ಮನ ತ್ಯಾಗ ಮರೆಯುತ್ತೀರಾ?.... ಹೌದು ಅವರಿಗೆ ನೀವೇನೂ ಕೊಡಬೇಕಾಗಿಲ್ಲ. ಇದುವರೆಗೆ ದುಡಿದು ನಿಮ್ಮನ್ನು ಬೆಳೆಸಿದ್ದಾರೆ. ನೀವೇನೂ ಕೊಡದಿದ್ದರೂ ಅವರು ಸ್ವಾವಲಂಬಿಗಳಾಗಿ ಬದುಕುತ್ತಾರೆ. ಆದರೆ ನೀವು ಸಂತೋಷದಿಂದಿದ್ದೀರಿ ಎಂಬ ಒಂದೇ ಸುದ್ದಿ ಅವರಿಗೆ ಬೇಕಿರುವುದು. ಅವರು ನಿಮ್ಮ ಸಂಪತ್ತು ಬಯಸುವವರಲ್ಲ. ಅವರಿಗೆ ಬೇಕಿರುವುದು ನಿಮ್ಮ ಸುಖ, ನಿಮ್ಮ ಏಳಿಗೆ.
ಯುವ ಜನತೆಯಲ್ಲಿ ನನ್ನದೊಂದು ಕಳಕಳಿಯ ಬೇಡಿಕೆ. ಒಬ್ಬ ಗುರುವಾಗಿ ಮಕ್ಕಳ ಮನಸ್ಸನ್ನು ಅರಿತಿದ್ದೇನೆ. ಹೆತ್ತವರ ಗೋಳನ್ನೂ ಕೇಳಿದ್ದೇನೆ. ಅಪ್ಪನಾಗಿ ಮಕ್ಕಳ ಮೇಲಿನ ಮಮತೆಯ ಬಗ್ಗೆನೂ ಸಾಕಷ್ಟು ಅನುಭವವಿದೆ. ನನ್ನ ಅಪ್ಪ- ಅಮ್ಮ ಕೊಟ್ಟ ನೆನಪಲ್ಲಿ ಬದುಕಿದ್ದೇನೆ. ನಿಮಗೆ ನನ್ನ ಕಿವಿಮಾತು. ಬದುಕನ್ನು ಪ್ರೀತಿಸಿ. ದೇವರು ಕೊಟ್ಟ ಆಯುಷ್ಯ ಅಮೂಲ್ಯ. ದುಸ್ಸಾಹಸಕ್ಕೆ ದುಡುಕಬೇಡಿ. ಪ್ರತಿಯೊಂದು ಕ್ಷಣವೂ ತಂದೆ-ತಾಯಿ, ಅಣ್ಣ- ತಮ್ಮ, ಅಕ್ಕ- ತಂಗಿಯರ ನೆನಪು ನಿಮ್ಮಲ್ಲಿರಲಿ. ಇಂದು ಶರತ್ ಕುಮಾರ್ ಜಾರಿದ್ದರೆ, ನಾಳೆ ಅದು ನಾವಾಗಿರಬಹುದು. ಕೊನೆಗೊಂದು ಮಾತು ಶರತ್ ಕುಮಾರ್ ಜೀವಂತ ಬಂದು ಅಪ್ಪ- ಅಮ್ಮನನ್ನು ಅಪ್ಪಿಕೊಳ್ಳಲಿ.
-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ.
ಚಿತ್ರ ಕೃಪೆ: ಇಂಟರ್ನೆಟ್ ತಾಣ