ಅಪೂರ್ಣತೆಯೆಡೆಗೆ
ಕವನ
ಕ್ಯೂಗಳಲ್ಲಿ ಮಂದಿ ಆವಸರಿಸುತ್ತಾ
ಸೆಳೆಯುತ್ತಿದ್ದಾರೆ ಹಣ ಎಟಿಎಂಗಳಲ್ಲಿ
ದಾಹ ತೀರುತ್ತಿಲ್ಲ
ಅಡಿಗಡಿಗೆ ಅಂಟಿರುವ ಅಂಗಡಿಗಳಲ್ಲಿ
ಬಟ್ಟೆ ಥಾನು ಥಾನು ಎಳೆಯುತ್ತಿದ್ದಾರೆ
ದೇಹ ಮುಚ್ಚಲಾಗುತ್ತಿಲ್ಲ
ಗಿಜಿಗುಡುವ ಹೋಟೆಲು ದರ್ಶಿನಿಗಳಲ್ಲಿ
ಕಬಳಿಸುತ್ತಿದ್ದಾರೆ ಬಣ್ಣ ಬಣ್ಣದ ಅಗುಳನ್ನ
ಹಸಿವು ತೀರುತ್ತಿಲ್ಲ
ನೇತಾಡಿಸಿ ಕಡಿದು ತೂಕಿಸಿ ಕೊಡುತ್ತಿದ್ದಾರೆ
ಹಿಂಬಾಗಿಲಲ್ಲಿ ಗೋಣ ಕಟಾಯಿಸುತ್ತ
ದೇಹ ಧೃಢವಾಗುತ್ತಿಲ್ಲ
ಅಮಲು ತೀಟೆಗೆ ಮಧುಶೀಶೆಗಳೊಂದಿಗೆ
ತೇಲಾಡುತ್ತಿದ್ದಾರೆ ಶೋಕದವರು
ಶೋಕಿ ತೀರುತ್ತಿಲ್ಲ
ಸ್ಥಿತಪ್ರಜ್ನತೆಯ ಪ್ರವಚನಕ್ಕೆ ಕುಳಿತ ಶೋತೃಗಣ
ಒನೆಯುತ್ತಿದ್ದಾರೆ ದೇಹ ಕುಳಿತಲ್ಲಿ
ನೋವು ಮೊಣಕಾಲ ಬಿಡುತ್ತಿಲ್ಲ
ಕುಳಿತರೆ ಮೆಗಾ ಸೀರಿಯಲ್ಲುಗಳು
ಮುಗಿಯದ ವಾರ್ತಾಲಾಪ ಟೀವಿಗಳೊಳಗೆ
ನಮ್ಮದೇ ಕತೆಗೆ ನೋಡುಗರಿಲ್ಲ
ಒತ್ತೊತ್ತು ಮನೆಗಳಲ್ಲಿ ಅಂಟಂಟಿದಂಥ
ಜನ ವಾಸದಲ್ಲಿದ್ದಾರೆ
ಒಂದೂ ಹೃದಯ ಮತ್ತೊಂದಿಗಿಲ್ಲ
- ಅನಂತ ರಮೇಶ್
Comments
ಉ: ಅಪೂರ್ಣತೆಯೆಡೆಗೆ
ಅನಂತ ರಮೇಶರಿಗೆ ನಮಸ್ತೆ,,,,,, ಸಂಪದಕ್ಕೆ ಸ್ವಾಗತ,,,,, ಬ್ಲಾಗ್ ಲೋಕದಲ್ಲಿ ವಿಭಿನ್ನ ಬರಹಗಳ ಮಳೆ ಸುರಿಸಿದ ನೀವು ಸಂಪದಕ್ಕೆ ಬಂದದ್ದು ಖುಷಿ ಕೊಟ್ಟಿದೆ,,,,,
ಮೇಲಿನ ಕವನದ ಸಾಲುಗಳು, ಭಾವವೇಶಗೊಂಡ ಮನದ ಭಾವದ ಕನ್ನಡಿ,,,,, ಎತ್ತ ಸಾಗುತ್ತಿದೆ ಜನಾಂಗ, ಎನ್ನುವ ಖೇದ ಕಾಣುತ್ತಿದೆ,,,, "ನಮ್ಮದೇ ಕತೆಗೆ ನೋಡುಗರಿಲ್ಲ" ಎಂತಹಾ ಅದ್ಭುತ ಮಾತಿದು,,,,,,,ಮನಸೆಳೆಯುತ್ತವೆ ಸಾಲುಗಳು,,,,,,
ಮುಂದುವರೆಯಲಿ ಪಯಣ,,,,
ಧನ್ಯವಾದಗಳೊಂದಿಗೆ
ಜೀ ಕೇ ನವೀನ್
(ಮುಗ್ಧಸಿಂಚನ)
In reply to ಉ: ಅಪೂರ್ಣತೆಯೆಡೆಗೆ by naveengkn
ಉ: ಅಪೂರ್ಣತೆಯೆಡೆಗೆ
ಜೀಕೆನ.. ಕವಿತೆಯ ಬಗ್ಗೆ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಸಂಪದದಲ್ಲಿ ನಿಮ್ಮನ್ನು ಮತ್ತು ನಿಮ್ಮ ಕೃತಿಗಳನ್ನು ಓದಿ ತುಂಬಾ ಖುಷಿಯಾಯಿತು