ಅಪೂರ್ಣನಾದ ಪೂರ್ಣಚಂದ್ರ !

ಅಪೂರ್ಣನಾದ ಪೂರ್ಣಚಂದ್ರ !

ಬರಹ
ಅಪೂರ್ಣನಾದ ಪೂರ್ಣಚಂದ್ರ !
ಸುಮಾರು ಹದಿನೈದು ವರ್ಷಗಳ ಹಿಂದೆ ನೆಡೆದ ಘಟನೆಯಿದು.
ಒಂದು ಶುಕ್ರವಾರ ಸಂಜೆ ಹೀಗೇ ಕಾಫೀ ಹೀರುತ್ತ ಸೋಫಾದ ಮೇಲೆ ಕುಳಿತಿದ್ದಾಗ ಮನೆ ಫೋನು ಟ್ರಿನ್’ಗುಟ್ಟಿತು. 
ನನ್ನ ಕಸಿನ್ ಕರೆ ಮಾಡಿದ್ದ. "ಏನೋ ಡುಮ್ಮ. ಭಾನುವಾರ ಎಡಮುರಿ’ಗೆ ಹೋಗೋಣ ಅಂತ ಪ್ಲಾನ್ ಮಾಡ್ತಾ ಇದ್ದೀವಿ .. ಬರ್ತೀಯಾ ತಾನೇ?" ಅಂತ. ಜಂಜಟ್ಟಿಲ್ಲದ ಜೀವನದ ದಿನಗಳು. ಸರಿ ಅಂದೆ.
ಯಾರು ಯಾರು ಬರುತ್ತಾರೆ, ಊಟ ತಿಂಡಿ ವ್ಯವಸ್ತೆ ಏನು, ಯಾರ ಮನೆಯಿಂದ ಹೊರಡುವುದು ಇತ್ಯಾದಿ ಮಾತುಕಥೆಗಳು ನೆಡೆದವು. 
ಒಟ್ಟು ಹತ್ತು ಜನ ಒಂಟೀ ಜೀವಿಗಳ ಗುಂಪು ಭಾನುವಾರ ಬೆಳಿಗ್ಗೆ ಚಿಕ್ಕಪ್ಪನ ಮನೆ ಮುಂದೆ ಸೇರಿದೆವು. ನಮ್ಮಿಷ್ಟು ಜನರ ಮಧ್ಯೆ ಒಬ್ಬರು ಮಾತ್ರ ಬೇರೆ ಯಾರೋ ಇದ್ದರು. ಪರಿಚಯ ಮಾಡಿಕೊಂಡೆ. ಅವರು ನನ್ನ ಕಸಿನ್’ನ ಸ್ನೇಹಿತರು. ಇವನ ಮನೆಯಿಂದ ನಾಲ್ಕು ಮನೆ ದಾಟಿದರೆ ಅವರ ಮನೆ. ವಯಸ್ಸಿನಲ್ಲಿ ನಮಗಿಂತ ಸ್ವಲ್ಪ ದೊಡ್ಡವರು. ಬರೀ ಹುಡುಗು ಪಾಳ್ಯ ಹೊರಟಿದ್ದಾರೆ, ದೊಡ್ಡವ್ರು ಅಂತ ನೀವೂ ಇದ್ದರೆ ಚೆನ್ನಾಗಿರುತ್ತೆ ಅಂತ ಯಾರೋ ಊದಿದರಂತೆ. ಹಾಗಾಗಿ ಅವರೂ ನಮ್ಮೊಂದಿಗೆ! 
’ರಾಮೇಗೌಡ’ರು ನಮಗಿಂತ ವಯಸ್ಸಿನಲ್ಲಿ ಐದಾರು ವರ್ಷ ಹಿರಿಯರಿರಬಹುದು ಅಷ್ಟೇ! 
ಎಲ್ಲ ಸಿದ್ದತೆ ಆಯಿತು. ಹೊರಡುವ ಮುನ್ನ ಗಾಡಿಗೆ ದೃಷ್ಟಿ ನೀವಾಳಿಸಿ ಹೊರಟೆವು. ಹೊರಡುವ ಮುನ್ನ ಮೀಟರ್ ಮೇಲೆ ನಂಬರ್ ಬರೆದುಕೊಳ್ಳಲು ಮರೆಯಲಿಲ್ಲ ಅನ್ನಿ! 
ಇನ್ನೇನು ವ್ಯಾನ್ ಹೊರಡಬೇಕೂ ... ಆಗ ಒಬ್ಬ ಕೂಗಿದ "ಲೋ, ಪೂರ್ಣಿ ಹತ್ತಿದನೇನೋ?" "ಯಾಕೋ ಗಾಂಪಾ, ಕಣ್ ಕಾಣಲ್ವಾ? ಇಲ್ಲೇ ಇದ್ದಾನಲ್ಲೋ" "ಇನ್ನೂ ದೇವರ ಮುಂದೆ ಮೂಗು ಹಿಡಿದುಕೊಂಡು ಕೂತಿದ್ದೀಯೇನೋ ಅಂತ ಕೇಳ್ದೆ ಅಷ್ಟೇ" "ಲೋ! ಪೂರ್ಣಿ. ಬರೋದು ರಾತ್ರಿ ಆಗುತ್ತೆ. ನದೀ ತೀರದಲ್ಲಿ ಸಾಯಂ ಸಂಧ್ಯಾವಂದನೆಗೆ ಪಾತ್ರೆ ತಂದಿದ್ದೀಯಾ ತಾನೇ?" "ಲೋ ಬಿಡ್ರೋ ... ಅದೇನು ಗೋಳು ಹೊಯ್ದುಕೊಳ್ತೀರಾ ಪಾಪ ಅವನನ್ನ?"
ಪೂರ್ಣಿ ... ಅಂದರೆ  ಪೂರ್ಣಚಂದ್ರ. ನನ್ನ ಸಂಬಂಧಿ. ಹೇಗೆ ಎಂದು ಹೇಳಲು ಹೊರಟರೆ, ಸುಮ್ಮನೆ ತಲೆ ಕೆರೆದುಕೊಳ್ತೀರ ... ಬೇಡ ಬಿಡಿ.
ಇಷ್ಟೆಲ್ಲ ಅವನ ಬಗ್ಗೆ ಮಾತನಾಡುತ್ತಿದ್ದರೂ ಅವನು ಮಾತ್ರ ಏನೂ ಹೇಳಲಿಲ್ಲ. ಅವನಿಗೆ ಇದು ಮಾಮೂಲು.
ನಿಮ್ಮ ಗಲಾಟೆ ನಿಮ್ಮದು ಆದರೆ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂಬಂತೆ ಯಾವುದೋ ದೇವರ ಪುಸ್ತಕ ಕೈಯಲ್ಲಿ ಹಿಡಿದುಕೊಂಡು ಓದುತ್ತಿದ್ದ. ಮೊದಲಿಂದಲೂ ಅವನು ಹಾಗೇ ! ಎಲ್ಲರೊಂದಿಗೆ ಇರುತ್ತಾನೆ. ಎಲ್ಲರಿಗೂ ಸಹಾಯ ಮಾಡುತ್ತಾನೆ. ಆದರೂ ಒಂದು ರೀತಿ ವಿಮುಖನಾಗೇ ಇರುತ್ತಾನೆ. ಪೂಜೆ, ಪುನಸ್ಕಾರ, ಏಕಾದಶಿ ಉಪವಾಸ ಇತ್ಯಾದಿಗಳು ದೇಹದಲ್ಲಿ ಒಂದು ಭಾಗವಿದ್ದಂತೆ. ಹೊರಗಡೆ ತಿನ್ನೋಲ್ಲ. ಮಹಾ ಮಡಿವಂತ. 
ವ್ಯಾನಿನ ತುಂಬ ಕಲ ಕಲ ಅಂತ ಗಲಭೆಯೋ ಗಲಭೆ. ಕೆಟ್ಟ ದನಿಯಲ್ಲಿ ನಮ್ಮ ಹಾಡುಗಳು, ಎಲ್ಲ ರೀತಿ ಜೋಕುಗಳು, ಹಳೆಯ ನೆನಪುಗಳು ಹೀಗೆ .. ಯಾವುದಕ್ಕೂ ಕಡಿಮೆ ಇರಲಿಲ್ಲ. ಹೆಚ್ಚಿನ ಸಮಯ ಬರೀ ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದರಲ್ಲೇ ಕಳೆಯಿತು. ಅದೇ ಮಜಾ ನೋಡಿ. 
ಮಾರ್ಗ ಮಧ್ಯೆ ಒಂದೆಡೆ ನರಸಿಂಹದೇವರ ಗುಡಿಯ ಬಳಿ ನಿಂತೆವು. ಯಾವ ಸ್ಥಳ ಎಂದು ಈಗ ನೆನಪಿಲ್ಲ. ಮನೆಯ ದೇವರು ನರಸಿಂಹ. ಪೂಜೆ ಮಾಡಿಸಿಕೊಂಡೇ ಹೋಗಬೇಕೆಂದು ಮನೆಯಲ್ಲಿ ಹೇಳಿದ್ದರು. ಗುಡಿಯ ಬಳಿ ಗಾಡಿ ನಿಲ್ಲಿಸಿ, ಕೈ-ಕಾಲು ತೊಳೆದು ಒಳಗೆ ಹೊರಟೆವು.
ತನ್ನ ಸುಶ್ರಾವ್ಯ ಕಂಠದಿಂದ ಸೊಗಸಾದ ದೇವರನಾಮ ಹಾಡಿದ ಪೂರ್ಣಿ. ನಾವೆಲ್ಲ ಹೊರಗೆ ಬಂದು ಅಲ್ಲೇ ಸ್ವಲ್ಪ ದೂರದ ಒಂದು ಸಣ್ಣ ತೋಪಿನಲ್ಲಿ ಬೆಡ್-ಶೀಟ್ ಹಾಸಿ ಕುಳಿತು ಜೊತೆಗೆ ತಂದಿದ್ದ ತಿಂಡಿ, ಕಾಫೀ ಮುಗಿಸಿದೆವು.
ಹೊರಡುವ ಹೊತ್ತಾದರೂ ದೇವರನ್ನು ಬಿಟ್ಟು ಬಂದಿರಲಿಲ್ಲ ಈ ಪುಣ್ಯಾತ್ಮ. 
ಅಂತೂ ಇಂತೂ ಅವನೂ ಬಂದ. "ಉಪ್ಪಿಟ್ಟು ಕೊಡಲೇನೋ" ಅಂತ ಯಾರೋ ಕೇಳಿದರು. "ಬೇಡ ಕಣೋ. ಬೆಳಿಗ್ಗೆ ಆಯ್ತು. ಬಾಳೆಹಣ್ಣು ತಿಂತೀನಿ" ಅಂದ. ಎಲ್ಲರೂ ಹೊಟ್ಟೆ ಭರ್ತಿ ಮಾಡಿಕೊಂಡ ಮೇಲೆ ಹೊರಟೆವು.
ಟ್ರಾಫಿಕ್ ಜ್ಯಾಮ್ ಅದೂ ಇದೂ ಅಂತ ಅಲ್ಲಿ ಸೇರೋ ಹೊತ್ತಿಗೆ ಮಧ್ಯಾನ್ನ ಹನ್ನೆರಡೂವರೆ. ಮೊದಲೇ ಮೆಟಡೊರ್ ವ್ಯಾನು ... ಕುಲುಕಿದ್ದೇ ಕುಲುಕಿದ್ದು. ಮೈ-ಕೈ ಎಲ್ಲ ನೋವು ಬಂದಿತ್ತು. 
ಎಲ್ಲರೂ ಕೆಳಗೆ ಇಳಿದೆವು. ಬಿಸಿಲು ಜೋರಾಗಿತ್ತು. ಆ ಬಿಸಿಲಿನ ಬೇಗೆಗೆ, ಮೊದಲು ನೀರಿಗೆ ಹೋದರೆ ಸಾಕು ಎನಿಸುತ್ತಿತ್ತು. ಅಲ್ಲೇ ನಿಂತಿದ್ದರೆ ನಾವೇ ಒಣಗಿ ಹೋಗುತ್ತೇವೆ ಇನ್ನು ಬಟ್ಟೆಯೇನು ಮಹಾ ಎಂದು ಬಟ್ಟೆ ಬದಲಿಸೋ ಗೋಜಿಗೇ ಹೋಗಲಿಲ್ಲ. ಪ್ಯಾಂಟನ್ನು ಮಂಡಿಯವರೆಗೂ ಮಡಿಸಿಕೊಂಡು, ಶರಟನು ಕಳಚಿ ನೀರಿಗೆ ಧಾವಿಸಿದೆವು.
ನನಗೆ ಈಜು ಬರುತ್ತಿರಲಿಲ್ಲ. ಹಾಗಾಗಿ ನೀರಿನಲ್ಲಿ ಇಳಿದರೂ ತುಂಬಾ ಒಳಗೆ ಹೋಗುವುದಿಲ್ಲ ಎಂದು ನಿರ್ಧರಿಸಿದ್ದೆ. ಸ್ವಲ್ಪ ಹೊತ್ತು ದಂಡೆಯ ಬಂಡೆಯ ಮೇಲೆ ಕುಳಿತು ಆಮೇಲೆ ನೀರಿಗೆ ಇಳಿಯೋಣ ಎಂದು ಕುಳಿತೆ. ’ಪ್ಲಾಸ್ಟಿಕ್ ತಂಬಿಗೆ ಕೊಡ್ಲೇನೋ. ಸ್ನಾನಾ ಮಾಡ್ತೀಯಾ?’ ಅಂತ ಒಬ್ಬ ರೇಗಿಸಿದ. "ನೀರು ಸ್ವಲ್ಪ ಬೆಚ್ಚಗೆ ಆಗಲಿ ಅಂತ ಕಾದಿದ್ದಾನೆ ಕಣೋ" ಅಂತ ಇನ್ನೊಬ್ಬ.
ದೂರದಲ್ಲಿ ಪೂರ್ಣಿ ಬರುವುದನ್ನು ಕಂಡೆ. ಕಚ್ಚೆ ಪಂಚೆ ಧರಿಸಿ ಬರುತ್ತಿದ್ದ !! ಮಿಕ್ಕವರು ಅಷ್ಟು ಹೊತ್ತಿಗಾಗಲೇ ಕೆಲವರು ನೀರಿನಲ್ಲಿ ಆಟ ಆಡುತ್ತಿದ್ದರು.
ಪೂರ್ಣಿ, ನೀರಿನಲ್ಲಿ ಇಳಿದು, ಬೊಗಸೆಯಲ್ಲಿ ನೀರು ತುಂಬಿಕೊಂಡು ಕಣ್ಣು ಮುಚ್ಚಿ ನಿಂತ. ಕಣ್ಣು ಬಿಟ್ಟ ಮೇಲೆ ನನ್ನನ್ನು ನೋಡಿ ಹೇಳಿದ "ನೀರಿನಲ್ಲಿ ಇಳಿಯುವ ಮುನ್ನ ಪ್ರಾರ್ಥನೆ ಮಾಡಿ ಇಳಿಯಬೇಕು" ಅಂತ. 
ಇನ್ನೂ ಏನೇನು ಮಾಡುತ್ತಾನೆ ಎಂದು ಕುತೂಹಲದಿಂದ ನೋಡುತ್ತಲೇ ಕುಳಿತಿದ್ದೆ.
ಹಾಗೇ ಸ್ವಲ್ಪ ಮುಂದೆ ನೆಡೆದು ಹೋದ ... 
ಮೂಗು ಹಿಡಿದು ಒಮ್ಮೆ ಮುಳುಗಿ ಮೇಲೆದ್ದ .... 
ಎರಡನೇ ಬಾರಿ ಮುಳುಗಿ ಮೇಲೆದ್ದ ...
ಮೂರನೇ ಬಾರಿ ಮುಳುಗುತ್ತಿದ್ದ .... ಮುಳುಗಿದ ... ಮುಳುಗಿದ್ದ !!
ಈಗ ಏಳುತ್ತಾನೆ ... ಆಗಾ ಏಳುತ್ತಾನೆ ಎಂದೇ ಕಾದಿದ್ದೆ .... 
ನಿಮಿಷವಾಯ್ತು ... ನಿಮಿಷ ಎರಡಾಯ್ತು ...
ಪೂರ್ಣಿ, ಮೇಲೆ ಬರಲೇ ಇಲ್ಲ !!! 
ಅಲ್ಲಲ್ಲೇ ಹಲವಾರು ಜನ ನೀರಿನಲ್ಲಿ ನಿಂತು ಆಡುತ್ತಿದ್ದರು. ಅಂದರೆ ಆಳ ಇಲ್ಲ ಅಂತ ತಾನೇ?
ಮೊದಲು ಅನುಮಾನ ಬಂತು ... ಅನುಮಾನ ಬಲವಾಯ್ತು ...
ಧಡಕ್ಕನೆ ಮೇಲೆದ್ದು ಆ ಕಡೆ ಈ ಕಡೆ ಕಣ್ಣು ಹಾಯುವಷ್ಟು ದೂರಕ್ಕೂ ನೋಡಿದೆ. ಮೇಲೆದ್ದ ಸುಳಿವೇ ಇಲ್ಲ !!
ನೀರಿನಲ್ಲಿ ಆಡುತ್ತಿದ್ದ ನನ್ನವರಿಗೆ ಕೂಗಿ ಹೇಳಿದೆ. "ನೀನು ಸುಮ್ಮನೆ ಟೆನ್ಶನ್ ಮಾಡ್ಕೋಬೇಡ್ವೊ, ಅವನಿಗೆ ಈಜು ಬರುತ್ತೆ" ಅಂದ ಒಬ್ಬ.
ಪೂರ್ಣಿಗೆ ಈಜು ಗೊತ್ತಿತ್ತು ಎಂದು ಕೇಳಿದ್ದೆ ಆದರೆ ಖಚಿತವಾಗಿ ಗೊತ್ತಿರಲಿಲ್ಲ. ಮೊದಲಿಗೆ ಯಾರೂ ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳದೇ ಇದ್ದರೂ ಮುಂದಿನ ಕೆಲವೇ ನಿಮಿಷದಲ್ಲಿ ಪರಿಸ್ಠಿತಿ ಅರಿವಾಯ್ತು. ಇದ್ದಲ್ಲೇ ನೀರಲ್ಲಿ ಮುಳುಗಿ ನೋಡಿದರು.  
ಅಲ್ಲೇ ಇದ್ದವರಾರೋ ’ಸೆಕ್ಯೂರಿಟಿಯವರನ್ನು ಕರೀರಿ. ಬೋಟಿನಲ್ಲಿ ಬಂದು ಹುಡುಕುತ್ತಾರೆ’ ಅಂತ ಸಲಹೆ ಕೊಟ್ಟರು. ವಿಷಯ ತಿಳಿದ್ದೇ ತಡ ನಾನೂ ಮತ್ತಿಬ್ಬರು ಸೆಕ್ಯೂರಿಟಿ ಎಲ್ಲಿರುತ್ತಾರೆ ಎಂದು ಹುಡುಕುತ್ತ ಹೋದೆವು. ನಾವು ಅವರನ್ನು ಹುಡುಕಿ, ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಅರ್ಧ ಘಂಟೆಯಾಯಿತು.
ಬಂದವರು ಬೋಟಿನಲ್ಲಿ ಕೂಡುತ್ತಿದ್ದವರಿಂದ "ಎಷ್ಟು ಹೊತ್ತಾಯ್ತು ಮುಳುಗಿ" ಎಂಬ ಧೋರಣೆ ಪ್ರಶ್ನೆ ತೂರಿ ಬಂತು. ಎಷ್ಟು ಹೊತ್ತು ಕಳೆದಿತ್ತು ಎಂಬ ಅರಿವೂ ಇಲ್ಲದೆ ’ಹತ್ತು ನಿಮಿಷ’ ಎಂದೆವು. "ಇಷ್ಟು ಬೇಗ ಬಾಡಿ ಹೊರಗೆ ಬರಲ್ಲ. ಇನ್ನೆರಡು ಘಂಟೆ ತಡೆದುಕೊಳ್ಳಿ" ಎಂದ !!
ಈ ಮಾತುಗಳನ್ನು ಕೇಳಿದ ಒಬ್ಬನಿಗೆ ಫ಼ಿಟ್ಸ್ ಶುರುವಾಯ್ತು. 
ನಾವು ಪೂರ್ಣಿಯನ್ನು ಹುಡುಕಿ ಕೊಡಿ ಎಂದರೆ, ಈತ ’ಬಾಡಿ’ ಇಷ್ಟು ಬೇಗ ಸಿಗೊಲ್ಲ ಅನ್ನೋದೇ ?  "ಹಾಗೆಲ್ಲ ಅನ್ನಬೇಡ್ರೀ ಸ್ವಲ್ಪ ಹುಡುಕಿ" ಎಂದದ್ದಕ್ಕೆ ಅತ್ತ "ಇಷ್ಟು ಹೊತ್ತಾದ್ರೂ ಇನ್ನೂ ಬದುಕಿರ್ತಾರೇನ್ರೀ? ಸುಮ್ಮನೆ ಕುಡ್ಕೊಂಡ್ ಬಂದು ನೀರಲ್ಲಿ ಬಿದ್ದು ಸಾಯ್ತಾರೆ. ನಂ ತಲೆ ತಿಂತಾರೆ" ಎಂದು ಕೆಟ್ಟದಾಗಿ ನುಡಿದು ಬೋಟು ತಳ್ಳಿಕೊಂಡು ಹೋದರಿಬ್ಬರು.
ನಾವೆಲ್ಲ ದಂಡೆಯ ಬಳಿ ಕುಳಿತಿದ್ದೆವು. ದೂರದಿಂದ ಬೋಟು ವಾಪಸ್ಸು ಬರುವುದು ಕಂಡಿತು. ಎಲ್ಲರಿಗೂ ವಾಸ್ತವದ ಅರಿವಿದ್ದರೂ ಒಪ್ಪಿಕೊಳ್ಳಲು ಯಾರೂ ಸಿದ್ದರಿರಲಿಲ್ಲ ! ಬೋಟು ದಡಲ್ಲಿ ನಿಲ್ಲಿಸಿದರು, ಐದೂ ಮುಕ್ಕಾಲಡಿ ದೇಹದ ಒಳ್ಳೆಯ ದೇಹ ಗಾತ್ರದ ಪೂರ್ಣಿಯನ್ನು, ಒಬ್ಬ ತಲೆಯ ಬಳಿ ಮತ್ತೊಬ್ಬ ಕಾಲುಗಳನ್ನು ಹಿಡಿದು ನೆಲದ ಮೇಲೆ ಮಲಗಿಸಿದರು !
ಮುಖದಲ್ಲಿ ನೋವೇನೂ ಕಾಣಲಿಲ್ಲ. ಮಡಿ ಪಂಚೆಯುಟ್ಟು ಶುಚಿರ್ಭೂತನಾಗಿ ನಮ್ಮೆಲ್ಲರನ್ನೂ ಅಗಲಿದ್ದ ಪೂರ್ಣಿ.
ಒಬ್ಬ ವ್ಯಕ್ತಿ ನನ್ನ ಕಣ್ಣ ಮುಂದೆ ನೀರಿನಲ್ಲಿ ಮುಳುಗಿ ಸತ್ತಿದ್ದನು ನಾನು ಕಂಡಿದ್ದೆ !!! 
ತನ್ನೆದುರಿಗೆ ಮಲಗಿದ್ದ ಹೆಣವನ್ನು ಕಂಡು ಆಘಾತಕ್ಕೊಳಗಾದ ರಾಮೇಗೌಡರು ಧರೆಗುರುಳಿದರು ! ಅವರನ್ನು ಆರೈಕೆ ಮಾಡಲು ಒಬ್ಬ ಮುಂದಾದ. ಪೂರ್ಣಿಯ ಅಣ್ಣನಿಗೆ ಮಾತೇ ಹೊರಡುತ್ತಿಲ್ಲ. ಕೈಕಾಲೆಲ್ಲ ನಡುಗುತ್ತಿತ್ತು, ಪಾಪ. ಹೀಗೇ .. ಒಬ್ಬೊಬ್ಬರದು ಒಂದೊಂದು ಕಥೆ. ಪೋಲೀಸ್ ಕೇಸ್ ಆಯ್ತು. ವ್ಯಾನಿನಲ್ಲಿ ಬಂದವರೆಲ್ಲರೂ ಪೋಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದೆವು. 
ವ್ಯಾನಿನ ತಪಾಸಣೆ ಆಯ್ತು. ಯಾವ ಬಾಟ್ಲಿಯೂ ಸಿಗಲಿಲ್ಲ. ತರಹಾವರಿ ಪ್ರಶ್ನಾವಳಿ ಶುರುವಾಯ್ತು "ಸತ್ತವನು ಕುಡುಕನೇ? ದಾರಿಯಲ್ಲೇನಾದರೂ ಕುಡ್ಕೊಂಡ್ ಬಂದ್ರಾ? ನೀರಿನಲ್ಲಿ ಇಳಿದ ಮೇಲೆ ಕುಡಿದಿನಾ?". ಪೂರ್ಣಿಯ ಬಗ್ಗೆ ಒಂದಿಷ್ಟು ಹೇಳಿದ ಮೇಲೆ, ನಮ್ಮ ಮುಖಗಳನ್ನು ನೋಡಿದ ಮೇಲೆ ಅವರಿಗೂ ನಮ್ಮ ಮೇಲೆ ನಂಬಿಕೆ ಬಂತು ಎಂಬುದು ಖಚಿತವಾಯ್ತು ’ನಾವು ಕೊಲೆಗಾರರಲ್ಲ’ ಎಂದು !!!
ನಾವು ಮುಕ್ತರಾದೆವು ಆದರೆ ಪೋಲೀಸರು ದೇಹವನ್ನು ಬಿಟ್ಟು ಕೊಡಲಿಲ್ಲ. ಇನ್ನೂ ಕಾಗದ ಪತ್ರ ಆಗಬೇಕು ಎಂದೂ, ಮೃತನ ಮನೆ ಹಿರಿಯರನ್ನು ಕರೆಸಿ ಎಂದೂ ತಿಳಿಸಿದರು.
ಅದು ಮೊಬೈಲ್ ಫೋನಿನ ಯುಗವಲ್ಲ. ... ಇನ್ನೂ ಕಾಯಿನ್ ಬೂತಿನ ಕಾಲ. ಅದೂ ಬೀದಿಗೆ ನಾಲ್ಕು ಅಂಗಡಿಗಳಲ್ಲಿ ಬೂತ್ ಇರುವ ದಿನಗಳಲ್ಲ!! ಕೆಲವು ವರ್ಷಗಳ ಹಿಂದಿನಂತೆ ಎಲ್ಲೆಡೆ ಬೂತ್’ಗಳೂ ಇರಲಿಲ್ಲ. ನಾನೂ ಮತ್ತಿಬ್ಬರು ಅಲ್ಲಿ, ಇಲ್ಲಿ ಎಂದು ಎಲ್ಲೆಲ್ಲೋ ಹುಡುಕಿಕೊಂಡು ಹೊರಟೆವು. ಅಂತೂ ಇಂತೂ ಒಂದು ಅಂಗಡಿಯಲ್ಲಿ ಫೋನು ಮಾಡುವ ಅವಕಾಶ ಸಿಕ್ಕಿತು.
ಇನ್ನಿಬ್ಬರು ಫೋನು ಮಾಡಲು ಸಿದ್ದವಿಲ್ಲ ! ಆ ಕೆಲಸ ನನಗೇ ಬಿಟ್ಟರು. ಪೂರ್ಣಿಯ ಮನೆಯಲ್ಲಿ ಫೋನ್ ಇರಲಿಲ್ಲ. ಹಾಗಾಗಿ ಅವನ ಎದುರು ಮನೆಯವರ ಫೋನು ನಂಬರ್’ಗೆ ಕರೆ ಮಾಡಿದೆ. ಅವನ ತಂದೆಯನ್ನು ಬಿಟ್ಟು ಮನೆಯಲ್ಲಿ ಯಾರಾದರೂ ದೊಡ್ಡವರು ಇದ್ದರೆ ಕರೆಯಿರಿ ಎಂದು ಸ್ಪಷ್ಟವಾಗಿ ತಿಳಿಸಿದೆ.
ಆದರೆ ಫೋನಿನಲ್ಲಿ ಬಂದವರು ಪೂರ್ಣಿಯ ತಂದೆಯೇ ಆಗಿತ್ತು. ವಿಷಯವನ್ನು ಹೇಳುವಾಗಲೂ ಸರಿಯಾಗಿ ಹೇಳಬೇಕು ಏಕೆಂದರೆ ಪೂರ್ಣಿಯ ತಂದೆಗೆ ವಯಸ್ಸಾಗಿತ್ತು ! ಸಾವಧಾನವಾಗಿ ವಿಷಯವನ್ನು ಅರುಹಿದೆ. ಆದರೆ ನನಗೆ ಕೇಳಿಸಿದ್ದು ಆ ಕಡೆಯಲ್ಲಿ ಅವರು ಕುಸಿದು ಬಿದ್ದ ಸದ್ದು !!
ಮತ್ತೆ ಇನ್ನೊಬ್ಬರು ಫೋನಿನ ಬಳಿ ಬಂದರು. ಅವರಿಗೆ ವಿಷಯವನ್ನು ತಿಳಿಸಿ ಸಾಧ್ಯವಾದಷ್ಟು ಬೇಗ ಪೋಲೀಸ್ ಸ್ಟೇಶನ್ ಬಳಿ ಬರುವಂತೆ ತಿಳಿಸಿದೆವು.
ಆಗಲೇ ಮುಸ್ಸಂಜೆಯಾಗುತಿತ್ತು. ಸಂಜೆಯ ಮೇಲೆ ದೇಹವನ್ನು ರಿಲೀಸ್ ಮಾಡುವುದಿಲ್ಲವಂತೆ. ಹಾಗಾಗಿ ದೇಹವನ್ನು ಸಮೀಪದ ಮಾರ್ಚುರಿಗೆ ಸಾಗಿಸಿ ಬೆಳಗಿನವರೆಗೂ ದೇಹವನ್ನು ಅಲ್ಲೇ ಇಡಬೇಕು. ನಮ್ಮೊಂದಿಗೆ ಬಂದ ಪೋಲೀಸಿನವನ ಜೊತೆ ನಾವು ಒಂದಿದ್ದರು ಹೋದೆವು. ಇಷ್ಟೆಲ್ಲ ಆಗುವ ಹೊತ್ತಿಗೆ ಸಂಪೂರ್ಣ ಕತ್ತಲಾಗಿತ್ತು.
ಗಾಡಿ ಮಾರ್ಚುರಿ ಬಳಿ ನಿಂತಿತು. ಪೋಲೀಸಿನವನು ತಲೆಯ ಬಳಿ ನಾನು ಹಿಡಿದುಕೊಳ್ಳುತ್ತೇನೆ ನೀವುಗಳು ಕಾಲುಗಳನ್ನು ಹಿಡಿಯಿರಿ ಅಂದ. ಮಿಕ್ಕಿಬ್ಬರಿಗೂ ಅಲ್ಲಿ ಒಳಗೆ ಬರಲು ಭಯ. ನಾನು ಕಾಲುಗಳನ್ನು ಹಿಡಿದೆ. ಹೆಣಭಾರ ಎಂದರೇನು ಅಂದು ಅರ್ಥವಾಯಿತು !
ಒಳಗೆ ಒಂದು ಕಲ್ಲಿನ ಬೆಂಚಿನ ಮೇಲೆ ಮಲಗಿಸಿದೆವು. ನಾನು ಹಾಗೇ ಆ ಕಡೆ ಈ ಕಡೆ ನೋಡಿದೆ. ಬೋಗಿಯ ಕಂಪಾರ್ಟ್ಮೆಂಟ್’ಗಳ ಹಾಗೆ ಮೂರು ಕಂಪಾರ್ಟ್ಮೆಂಟ್’ಗಳು ಇದ್ದವು. ಅಲ್ಲಲ್ಲೇ ಹೆಣಗಳು. ಒಂದರ ಕೈ ಮೇಲೆತ್ತಿದ್ದರೆ, ಮತ್ತೊಂದರ ಕಾಲು ಹೊರಗೆ ಬಂದಿತ್ತು. ಕತ್ತಲಾದ್ದರಿಂದ ಮುಖ ಕಾಣಲಿಲ್ಲ !!
ಅಷ್ಟು ಹೊತ್ತಿಗೆ ಊರಿನಿಂದ ಮೂರೋ ನಾಲ್ಕೋ ಹಿರಿಯರು ಬಂದಿದ್ದರು. ಎಲ್ಲರೂ ಅಲ್ಲಿರುವ ಅವಶ್ಯಕತೆ ಇಲ್ಲ ಎಂದು ಹಿರಿಯರು ನಿರ್ಧರಿಸಿ, ವ್ಯಾನಿನಲ್ಲಿ ಬಂದವರನ್ನೆಲ್ಲ ವಾಪಸ್ಸು ಕಳಿಸಿದರು.
ಜೀವನದಲ್ಲಿ ಎಂದೂ ಆಗಿರದ ಅನುಭವಗಳು ಅಂದು ಆಗಿತ್ತು. 
ಪೂರ್ಣಿ’ಯೊಡನೆ ಬಂದಿದ್ದ ನಾವು, ಪೂರ್ಣಿ ಇಲ್ಲದೆ ಅಪೂರ್ಣರಾಗಿ ಹಿಂದಿರುಗಿದೆವು.

ನೀರಿನಲ್ಲಿ ಆಡುತ್ತಿದ್ದ ನನ್ನವರಿಗೆ ಕೂಗಿ ಹೇಳಿದೆ.... "ನೀನು ಸುಮ್ಮನೆ ಟೆನ್ಶನ್ ಮಾಡ್ಕೋಬೇಡ್ವೊ, ಅವನಿಗೆ ಈಜು ಬರುತ್ತೆ" ಅಂದ ಒಬ್ಬ.