'ಅಪೊಲೊ' ಯುಗದ ಬಳಿಕ ಬೃಹತ್ ಚಿತ್ರಗಳನ್ನು ಸಂಗ್ರಹಿಸಿದ 'ಚಂದ್ರಯಾನ'!

'ಅಪೊಲೊ' ಯುಗದ ಬಳಿಕ ಬೃಹತ್ ಚಿತ್ರಗಳನ್ನು ಸಂಗ್ರಹಿಸಿದ 'ಚಂದ್ರಯಾನ'!

ಭಾರತದ ಚಂದ್ರಯಾನ-3 ಉಪಗ್ರಹವು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ 250ಕ್ಕೂ ಅಧಿಕ ಚಂದ್ರನ ಮೇಲ್ಮೈಯಲ್ಲಿರುವ ನೆಲನಡುಗುಗಳ ಚಿತ್ರಗಳನ್ನು ಕ್ಲಿಕ್ಕಿಸಿದೆ; ಇದರಲ್ಲಿ 50 ವಿವರಿಸಲಾಗದವುಗಳು; ಬಹುಶಃ ಚಂದ್ರದ ಮೇಲ್ಮೈಯಲ್ಲಿ ನಡೆದಿರುವ ಪ್ರಾಕೃತಿಕ ವಿಪತ್ತುಗಳಿಗೆ ಸಂಬಂಧಿಸಿರಬಹುದು ಎಂದು ಸದ್ಯಕ್ಕೆ ಅಂದಾಜಿಸಲಾಗಿದೆ. ಅಮೆರಿಕಾದ ಅಂತರೀಕ್ಷ ಸಂಸ್ಥೆಯಾದ 'ನಾಸಾ' ನಡೆಸಿದ ಅಪೊಲೊ ಅಭಿಯಾನದ ಬಳಿಕ, ಇದು ಮೊದಲ ಬೃಹತ್ ಸಂಖ್ಯೆಯಲ್ಲಿ ಚಿತ್ರಗಳ ಸಂಗ್ರಹಣೆಯಾಗಿರುವುದರಿಂದ ಇದು ಗಮನಾರ್ಹ ಸಾಧನೆಯಾಗಿದೆ!

ಈ ಸಂಶೋಧನೆಗಳನ್ನು ISRO ಸಂಶೋಧಕರು, ವೈಜ್ಞಾನಿಕ ನಿಯತಕಾಲಿಕ 'ICARUS'ನಲ್ಲಿ ಪ್ರಕಟಿಸಿದ್ದಾರೆ. ಭಾರತದ ಚಂದ್ರಯಾನ-3 ಉಪಗ್ರಹವು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ 250ಕ್ಕೂ ಹೆಚ್ಚು ನೆಲನಡುಗುಗಳ ಸಂಭಾವನೆಗಳನ್ನು ಪತ್ತೆಹಚ್ಚಿದೆ; ಇದರಲ್ಲಿ 50 ನಡುಗುಗಳು ಸಾಮಾನ್ಯ ನಡುಗುಗಳಿಂದ ವಿಭಿನ್ನವಾಗಿವೆ. ಈ 50 ಭಿನ್ನ ನಡುಗುಗಳು ರೋವರ್ ನ (ಪ್ರಜ್ಞಾನ್) ಚಲನೆ ಅಥವಾ ಇತರ ಉಪಕರಣಗಳ ಕಾರ್ಯಾಚರಣೆಯ ಚಟುವಟಿಕೆಗಳಿಗೆ ಸಂಬಂಧಿಸಿದ್ದಲ್ಲ ಎಂದು ಇಸ್ರೋ ಧೃಢಪಟ್ಟಿದೆ.

ಇದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಿಂದ ನೆಲನಡುಗಿನ ಕುರಿತು ಸಂಗ್ರಹಿಸಲಾದ ಮೊದಲ ಸಂಗ್ರಹವೆಂದು ಗುರುತಿಸಲಾಗಿದೆ; ಹಾಗೆಯೇ, ಅಪೊಲೊ ಯುಗದ ಬಳಿಕ ಚಂದ್ರನ ಮೇಲ್ಮೈಯಿಂದ ಸಂಗ್ರಹಿಸಲಾದ ಮಾಹಿತಿಗಳಲ್ಲಿ ಇದು ಅಮೋಘ ತಿಳುವಳಿಕೆಯಾಗಿದೆ. ವಿಕ್ರಮ್ ಲ್ಯಾಂಡರ್‌ ನಲ್ಲಿರುವ ವೈಜ್ಞಾನಿಕ ಸಾಧನವಾದ ಇನ್‌ಸ್ಟ್ರುಮೆಂಟ್ ಫಾರ್ ಲೂನಾರ್ ಸೆಸ್ಮಿಕ್ ಆಕ್ಟಿವಿಟಿ (ILSA) ಮೂಲಕ ಈ ಪ್ರಯೋಗವನ್ನು 69.37 ° ದಕ್ಷಿಣ ಮತ್ತು 32.32 ° ಪೂರ್ವದ ಲ್ಯಾಂಡಿಂಗ್ ಸೈಟ್‌ ನಲ್ಲಿ ನಡೆಸಲಾಗಿತ್ತು. 2023ರ ಆಗಸ್ಟ್ 24 ಮತ್ತು ಸೆಪ್ಟೆಂಬರ್ 4ರ ನಡುವೆ 190 ಗಂಟೆಗಳ ಕಾಲ ನಿರಂತರ ಕಾರ್ಯನಿರ್ವಹಿಸಿದ ILSA, ಚಂದ್ರನ ದಕ್ಷಿಣ ಧ್ರುವ ಪ್ರದೇಶದಿಂದ ನೆಲದ ವೇಗವರ್ಧನೆಯನ್ನು ದಾಖಲಿಸುವ ಮೊದಲ ಸಾಧನವಾಗಿದೆ; ಹಾಗು ILSA ಸಿಲಿಕಾನ್ ಮೈಕ್ರೋಮ್ಯಾಚಿನಿಂಗ್ ತಂತ್ರಜ್ಞಾನದಿಂದ ತಯಾರಿಸಿದ ಸಂವೇದಕಗಳನ್ನು ಚಂದ್ರನ ಮೇಲ್ಮೈಯಲ್ಲಿ ಬಳಸಿದ  ಮೊದಲನೆಯದು ಎಂದೂ ಕೀರ್ತಿಗೆ ಪಾತ್ರವಾಗಿದೆ.

ಗ್ರಹಗಳ ವಿಜ್ಞಾನ ಕ್ಷೇತ್ರಕ್ಕೆ ಮೀಸಲಾಗಿರುವ ವೈಜ್ಞಾನಿಕ ನಿಯತಕಾಲಿಕವಾದ ICARUSನಲ್ಲಿನ ಇಸ್ರೋ ಸಂಶೋಧಕರ ತಂಡ, ಈ ಸಂಶೋಧನೆಗಳನ್ನು ವಿಶ್ಲೇಷಿಸಿ, ಪ್ರಕಟಿಸಿದೆ. ಜೆ ಜಾನ್, ವಿ ತಾಮರೈ, ಟೀನಾ ಚೌಧರಿ, ಎಂಎನ್ ಶ್ರೀನಿವಾಸ, ಅಶ್ವಿನಿ ಜಾಂಭಾಲಿಕರ್, ಎಂಎಸ್ ಗಿರಿಧರ್, ಮದನ್ ಮೋಹನ್ ಮೆಹ್ರಾ, ಮಯಾಂಕ್ ಗಾರ್ಗ್, ಕೆವಿ ಶಿಲಾ, ಕೃಷ್ಣ ಕುಮ್ಮರಿ, ಎಸ್‌ಪಿ ಕಾರಂತ, ಕಲ್ಪನಾ ಅರವಿಂದ್ ಮತ್ತು ಕೆವಿ ಶ್ರೀರಾಮ್ ಅವರು ಇಸ್ರೋದ ಪ್ರಯೋಗಾಲಯವಾದ ಲ್ಯಾಬೋರೇಟರಿ ಫಾರ್ ಎಲೆಕ್ಟ್ರೋ-ಆಪ್ಟಿಕ್ಸ್ ಸಿಸ್ಟಮ್ಸ್ [LEOS] ನಿಂದ ಪ್ರಯೋಗವನ್ನು ಸಫಲವಾಗಿ ನಡೆಸಿ, ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ.

LEOSನ ನಿರ್ದೇಶಕರಾದ ಶ್ರೀರಾಮ್ ಅವರು ಮಾಧ್ಯಮದಲ್ಲಿ ಮಾತನಾಡುತ್ತ: "ಸದ್ಯಕ್ಕೆ ದಾಖಲಾದ 250ಕ್ಕೂ ಹೆಚ್ಚು ನೆಲನಡುಗಿನ ಘಟನೆಗಳಲ್ಲಿ ಸರಿಸುಮಾರು 200 ಪ್ರಕರಣಗಳನ್ನು ನಮ್ಮ ರೋವರ್ 'ಪ್ರಗ್ಯಾನ್' ಅಥವಾ ಇತರ ವೈಜ್ಞಾನಿಕ ಉಪಕರಣಗಳ ಕಾರ್ಯಾಚರಣೆಗಳಿಂದ ತಿಳಿದು ಬಂದಿದೆ; 50 ನಡುಗುಗಳ ಕುರಿತು ಯಾವುದೇ ವಿವರಣೆಯಿಲ್ಲ. ಈ ಚಟುವಟಿಕೆಗಳಿಗೆ ಕಾರಣವೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಅಧ್ಯಯನಗಳು ಮುಂದುವರಿಯಲಿದೆ." ಎಂದು ಹೇಳಿದರು. ನಮ್ಮ ಹೆಮ್ಮೆಯ ವಿಜ್ಞಾನಿಗಳು ಹಗಲಿರುಳು ಎನ್ನದೆ ನಡೆಸುತ್ತಿರುವ ಅಮೋಘ ಸಂಶೋಧನೆಗಳು ಫಲಕಾರಿಯಾಗಲಿ ಮತ್ತು ನಮ್ಮ ದೇಶಕ್ಕೆ ಹೆಮ್ಮೆ ತರಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳಿವೆ.

ಭಾರತದ ಚಿತ್ತ, ಶುಕ್ರ ಗ್ರಹದತ್ತ!: ಭಾರತದ ಬಾಹ್ಯಾಕಾಶ ಸಂಸ್ಥೆಯು ಹಿಂದೆ ತಿಂಗಳಿನ ಬೆಳದಿಂಗಳಿಗೆ ಆಕರ್ಷಿತಗೊಂಡು ಐತಿಹಾಸಿಕ 'ಚಂದ್ರಯಾನ ಅಭಿಯಾನ'ವನ್ನು ಕೈಗೊಂಡಿತ್ತು. ನಂತರ, ಮಂಗಳನ ಅಂಗಳಕ್ಕೆ ಲಗ್ಗೆಯಿಡುವ ಇಸ್ರೋವಿನ ಆಸೆಯನ್ನು ಪೂರೈಸಲು 'ಮಂಗಳಯಾನ ಅಭಿಯಾನ'ವನ್ನೂ ಸಫಲವಾಗಿ ಕೈಗೊಂಡಿತು. ಈಗ ಎಲ್ಲರನ್ನೂ ಚಕಿತಗೊಳಿಸುತ್ತ ಇಸ್ರೋ ತನ್ನ ದೃಷ್ಟಿಯನ್ನು ಶುಕ್ರ ಗ್ರಹದತ್ತ ಮಾಡಿದೆ! ಹಾಗೆಯೇ, ಇಸ್ರೋ ಖಗೋಳಶಾಸ್ತ್ರಜ್ಞರ ಈ ಆಸೆಯನ್ನೂ ಪೂರೈಸಲು ಕೇಂದ್ರದ ಸಚಿವ ಸಂಪುಟವು ಈ ಯೋಜನೆಯನ್ನೂ ಕೈಗೊಳ್ಳಲು 1,200 ಕೋಟಿ ರೂಪಾಯಿಗಳ ಅನುದಾನ ನೀಡಲು ತೀರ್ಮಾನಿಸಿದೆ. ಇದರಲ್ಲಿ ಸರಿಸುಮಾರು 825 ಕೋಟಿ ರೂಪಾಯಿ ಕೇವಲ ನೌಕೆಯನ್ನು ತಯಾರು ಮಾಡುವುದಕ್ಕೆ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಶುಕ್ರ ಗ್ರಹವು ಭೂಮಿಗೆ ಹತ್ತಿರದ ಗ್ರಹವಾದ ಕಾರಣ ಇದರ ಅಧ್ಯಯನ ಮೂಲಕ ಗ್ರಹಗಳು ಹೇಗೆ ನಿರ್ಮಾಣಗೊಂಡವು ಎಂಬುವುದನ್ನು ಅರ್ಥೈಸಿಕೊಳ್ಳಬಹುದು ಎಂದು ಖಗೋಳ ತಜ್ಞರು ಅಭಿಪ್ರಾಯ ಪಡುತ್ತಾರೆ.

ಇದರೊಂದಿಗೆ, ಭಾರತ ತನ್ನದೇ ಆದ ಬಾಹ್ಯಾಕಾಶ ಕೇಂದ್ರವೊಂದನ್ನು ಸ್ಥಾಪಿಸಲು ಯೋಜನೆಯನ್ನು ರೂಪಿಸುತ್ತಿದೆ ಎಂದು ಇಸ್ರೋ ಮಾಧ್ಯಮಗಳಿಗೆ ತಿಳಿಸಿತು. ಈ ಯೋಜನೆಯು 2028ರ ವೇಳೆಗೆ ಪೂರ್ಣಗೊಳಿಸಲಾಗಬಹುದು. ಇಸ್ರೋವಿನ ಈ ಯೋಜನೆಗೂ ಕೇಂದ್ರ ಸಚೀವ ಸಂಪುಟ ಒಪ್ಪಿಗೆ ನೀಡಿದೆ. ಇದಕ್ಕೆ: "Indian Space Station" ಎಂದು ನಾಮಕರಣವೂ ಮಾಡಲಾಗಿದೆ. ಈ ಕೇಂದ್ರದ ಮೊದಲ ಹಂತದ ಯೋಜನೆಯನ್ನು 2028ಕ್ಕೆ ಪೂರ್ಣಗೊಳಿಸಿ, 2036ರಿಂದ ಇದರ ಕಾರ್ಯನಿರ್ವಹಣೆ ಆರಂಭಿಸಲು ನಿರ್ಧರಿಸಲಾಗಿದೆ. ಒಟ್ಟಾರೆ, ಗಗನಯಾನ ಯೋಜನೆಗಳಿಗೆ 20,193 ಕೋಟಿ ರೂಪಾಯಿಗಳನ್ನು ನೀಡಲು ಕೇಂದ್ರ ನಿರ್ಧರಿಸಿದೆ. ನಮ್ಮ ವಿಜ್ಞಾನಿಗಳ ಈ ದೂರದೃಷ್ಟಿ ನಮಗೆ ಮುಂದೊಂದು ದಿನ ವೈಜ್ಞಾನಿಕ ಕ್ಷೇತ್ರದಲ್ಲಿ ಬಹಳ ಪ್ರಯೋಜನಕಾರಿಯಾಗಲಿದೆ.

-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ