ಅಪ್ಪಂದಿರ ದಿನದ ಕವನಗಳು…

ಅಪ್ಪಂದಿರ ದಿನದ ಕವನಗಳು…

ಕವನ

ಅಪ್ಪ...

ಅಮ್ಮ ಕನಸ ಕಾಣುವುದ 

ಕಲಿಸಿದರೆ..........

ಅಪ್ಪ ಕನಸ ನನಸಾಗಿಸುವ

ರೀತಿ ಕಲಿಸುವನು

 

ಅಮ್ಮ ತಾ ಕಂಡುಂಡ 

ಬದುಕ ತಿಳಿಸಿದರೆ

ಅಪ್ಪ ತಾ ಕಾಣದೇ ಇರುವ

ಭವ್ಯ ಭವಿತವ್ಯವ ತಿಳಿಸುವನು

 

ಅಮ್ಮ ನೋವಿನ ಭಾರ

ಕಣ್ಣೀರಲಿ ತೊಳೆದರೆ

ಅಪ್ಪ ಕಣ್ಣೀರ ಕೊಳದಲ್ಲೇ ಕಮಲವರಳಿಸುವುದ ಕಲಿಸುವನು

 

ಅಮ್ಮ ಕಷ್ಟ ಸಹಿಷ್ಣುತೆಯ 

ಸಹನೆ ತೋರಿದರೆ

ಅಪ್ಪ ಕಷ್ಟ ಕೋಟಲೆಯ 

ದಾಟುವ ಮಾರ್ಗ ತೋರುವನು

 

ಅಮ್ಮ ಜೀವನದ ಪಾಠವ

ಮೃದು ಮಾತಲಿ ಕಲಿಸಿದರೆ

ಅಪ್ಪ ಅವೆಲ್ಲ ಕಠಿಣ ಮುಖಮುದ್ರೆಯಲಿ

ಮೌನ ಭಾವದಲಿ ಕಲಿಸುವನು

 

ಅಮ್ಮ ಮಕ್ಕಳ ಪಾಲಿನ

ಧೃವ ತಾರೆಯಾದರೆ 

ಅಪ್ಪ ನಕ್ಷತ್ರ ಪುಂಜವನು

ಹೊತ್ತ ನೀಲಾಕಾಶ

 

-ಜಯಶ್ರೀ ರಾಜು, ಬೆಂಗಳೂರು

***

ನಮ್ಮಪ್ಪ

ನಮ್ಮಪ್ಪ ಬಹಳ ಓದಿದವನಲ್ಲ

ಆದರೂ ಎಲ್ಲ ತಿಳಿದವನು

ಗೂನು ಬೆನ್ನಾದರೂ

ಪೋಲೀಸ್, ಹವಾಲ್ದಾರ್  ಎ.ಎಸ್.ಐ ಆಗಿ ಸೇವೆ

ಸಲ್ಲಿಸಿದವನು

ಬಾಳ ಕಷ್ಟಗಳ ಮೆಟ್ಟಿದವನು

ನಮ್ಮ ಮನ ಮುಟ್ಟಿದವನು !

 

ಐದು ಮಕ್ಕಳ ತಂದೆಯಾದರೂ

ಯಾವ ಕೊರತೆ ಇಲ್ಲದಂತೆ

ಪ್ರೀತಿಯಿಂದ ನಮ್ಮ ಪೊರೆದವನು

ನೀತಿಯಿಂದ ಬೆಳೆಸಿದವನು

ನಮಗಾಗಿ ಆಸ್ತಿ ಮಾಡಲಿಲ್ಲ 

ನಮ್ಮನ್ನೇ ಆಸ್ತಿಯನ್ನಾಗಿ ಮಾಡಿದ

ಯಾರೂ ಕಸಿಯಲಾರದ ಕದಿಯಲಾರದ ವಿದ್ಯೆಯ 

ಧಾರೆ ಎರೆದವನು !

 

ವಿದ್ಯೆ ಕೊಡಿಸಿ ಎಂದೂ

ನಮಗೆ ವೈರಿಯಾಗದವನು

ಹೊಡೆದರೂ ಬಡಿದರೂ

ಬುದ್ದಿ ಹೇಳಿ ನಮ್ಮನು

ತಿದ್ದಿದವನು ತೀಡಿದವನು

ಅಗಲಿ ಹೋದರೂ

ನಿತ್ಯ ಜೀವಂತವಿರುವವನು!

-ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

***

ಹುಡುಕಿದೆ ಹುಡುಕಿದೆ...

ಮುಖದಲ್ಲಿ ದಣಿದ ನೋವಿದ್ದರೂ

ಮೈ ಮರೆತು ಧನಿವಾರಿಸಿ ದಿನಗಳೆಯಲಿಲ್ಲ

ಬೆವರು ತುಂಬಿದ ಮೈಗೆ ಚರ್ಮದಂತೆ ಅಂಟಿದ ಅಂಗಿ

ತನ್ನ ಬಣ್ಣವ ಮರೆತು ದಣಿದ ಬಣ್ಣಕೆ ತಿರುಗಿ

ನಾ ಹುಟ್ಟಿದ ದಿನದಂದು  ಹೊಸ ದಿನವಾಗಿ ಸಂಬ್ರಮಿಸಿ

ಹರಿದ ಚಪ್ಪಲಿ ಹಾಕಿದ ಕಾಲು ಬಿಸಿಲಿಗೆ ಸುಟ್ಟರೂ

ನನಗಾಗಿ ನಗು ಮರೆಯಲಿಲ್ಲ

 

ಒರಟು ಕೈಯಿಂದ ಮೈ ಸವರಲಿಲ್ಲ

ಮೃದುವಾದ ಮನಸಿಂದ ಮಾತನಾಡಲಿಲ್ಲ

ನೀ ತೋರಿದ ದಾರಿಯಲಿ

ಭಯವಿಲ್ಲದೆ ನಡೆಯುವಾಗ

ತಂಗಾಳಿಯ ನೆರಳಂತೆ ಬಂದು

ಬಿಸಿಲ ಧಗೆ ಸರಿಸಿದೆ

ಆದರೂ ನೀ ಕಾಣಲಿಲ್ಲ

 

ನೀನಿರದ ನೋವು

ಎಲ್ಲೇ ಮೀರಿದೆ

ಹುಡಕಾಡಲು ಬಯಸಿದೆ

ದುಃಖ ತುಂಬಿದ ಮನಸಲಿ

ನೀನಿರದ ಜಗ ಕತ್ತಲಾಗಿದೆ

ಆಗೋಮೇ ಈಗೊಮ್ಮೆ ನೆನಪಾದಾಗಲೆಲ್ಲ

ಕೈ ಮುಟ್ಟಿ ಆಸೆ ತೀರಿಸುವ ಬಯಕೆ

ಅಸೆಯಾಗಿಯೆ ಉಳಿದಿದೆ

ನೀನಿರದ ಜಗದಲ್ಲಿ ನನ್ನುಳಿಸಿದೆ.

-ಹನಮಂತಪ್ಪ ವಿ.ಎಸ್.

 

ಚಿತ್ರ್