ಅಪ್ಪನು ಕೊಡಿಸಿದ ಬಣ್ಣದ ಕೊಡೆ
ಕವನ
ಅಪ್ಪನು ಕೊಡಿಸಿದ ಬಣ್ಣದ ಕೊಡೆಯನು
ರಪ್ಪನೆ ಬಿಡಿಸಿ ಓಡುತ ಬಂದೆನು
ದೊಪ್ಪನೆ ಕಲ್ಲನು ಎಡವುತ ಬಿದ್ದೆನು
ಬೆಪ್ಪನ ಹಾಗೆ ಅಳುತಲಿ ನಿಂತೆನು
ಅಮ್ಮನು ಬಂದು ಮುತ್ತನು ಕೊಟ್ಟಳು
ಸುಮ್ಮನೆ ನಿಲ್ಲು ಅಳದಿರು ಎಂದಳು
ಸಣ್ಣವ ನೀನು ಬೆಣ್ಣೆಯ ಕೊಡುವೆ
ಕಣ್ಣನು ಮಿಟುಕಿಸಿ ಆಡುತ ನಗಿಸುವೆ
ಪಿರಿಪಿರಿ ಮಳೆಯು ಬರಲು ಸೊಗಸು
ಕಿರಿಕಿರಿ ಎನಿಸದೆ ಕೊಡೆಯನು ಬಿಡಿಸುವೆ
ಕುರುಕುರು ಚಕ್ಕುಲಿ ಮೆಲ್ಲುತ ಕುಣಿಯುವೆ
ಸರಸರ ನಡೆಯುತ ಶಾಲೆಗೆ ಹೋಗುವೆ
ಕೊಡೆಯ ಕಾಲು ಅಜ್ಜನ ಕೋಲು
ಬಿಡಿಸುತ ಮಡಿಸುತ ಸಂತಸ ಸಾಲು
ತಡಮಾಡದೆಲೆ ಗರಗರ ತಿರುಗುವೆ
ಕೇಕೆಯ ಹಾಕಿ ಥೈತಕ ಕುಣಿಯುವೆ
ಕೊಡೆಯನು ಬಿಡಿಸುತ ನೀರಲಿ ಆಡುವೆ
ಮನದಲಿ ಖುಷಿಯ ಪಡುತ ನಲಿಯುವೆ
ತಂಗಿಯ ಜೊತೆಗೆ ಶಾಲೆಗೆ ಒಯ್ಯುವೆ
ಗೆಳೆಯರ ಕೂಡಿ ಹರುಷದಿ ಬೀಗುವೆ
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
