ಅಪ್ಪನೆಂದರೆ...

ಅಪ್ಪನೆಂದರೆ...

ಕವನ

ಅಪ್ಪನೆಂದರೆ ಏನನ್ನಲಿ ? ನನ್ನೊಳಗಿನ ವ್ಯಕ್ತಿ

ಅವನೇ ಶಕ್ತಿ ಅವನೇ ಯುಕ್ತಿ ಅವನೇ ಭಕ್ತಿ

ಕೊನೆ ಕೊನೆಗೆ ಅವನ ನೆನಪಿನೊಂದಿಗೇ ಮುಕ್ತಿ ! 

ಎನ್ನ ಹೇಲ ಉಚ್ಛನ್ನೂ ಬಾಚಿ ತೊಳೆಸಿದ ಕೈಗಳವು

ಆಗವನಿಗೆ ಅನಿಸಲೇ ಇಲ್ಲ ವಾಸನೆ ಗಲೀಜೆಂದು

ಹುಷಾರಿ ಇಲ್ಲದಿದ್ದಾಗ ನನ್ನ ಹೆಗಲಲ್ಲಿ ಹೊತ್ತು

ಮೈಲುಗಳಾಚೆ ಇರುವ ಆಸ್ಪತ್ರೆಗೆ ಕರೆದೊಯ್ದು

ಕೂಗುತ್ತಿದ್ದ ನನ್ನ ಕೈಗೆ ಇಂಜೆಕ್ಷನ್ ಕೊಡಿಸಿ ನನ್ನ

ನೋವಿಗೆ ಅವನು ಅತ್ತಿದ್ದನ್ನು ಕಂಡು ನಾನಳುವುದ

ನಿಲ್ಲಿಸಿ ಅವನ ಬಾಚಿ ತಬ್ಬಿ ಹಿಡಿದ ನೆನಪು ಇಂದಿಗೂ

ಹಸಿರು, ನನಗಾಗ ಆ ಹಸಿರು ಹುಲ್ಲಲಿ ನಡೆದ ಅನುಭವ ! 

 

ಜೀವ ಜೀವನವನು ಒತ್ತೆ ಇಟ್ಟು ಹಗಲಿರುಳು ದುಡಿದು

ನನ್ನ ಏಳಿಗೆಗಾಗಿ ಎಲ್ಲೆಲ್ಲೋ ತಿರುಗಿ ಕಾಳು ಕಡ್ಡಿಯ

ಸಂಗ್ರಹಿಸಿ ಬದುಕ ಕೊಟ್ಟಿರುವ ಮಹಾತ್ಮನವನು

ಹೊತ್ತು ಹೊತ್ತಿಗೆ ಊಟ ತಿಂಡಿಯ ಕೊಟ್ಟು ಆರಡಿ

ದೇಹದವರೆಗೆ ಅವನಿಗಿಂತಲೂ ಒಂದಡಿಯೆತ್ತರ 

ನನ್ನನ್ನು ಬೆಳೆಯಿಸಿ, ತಾನು ಮಾತ್ರ, ಮಗ ನನ್ನಂತಾಗದಿರಲೆಂದು

ಸದಾ ದೇವರಲ್ಲಿ ಒಳಗೊಳಗೆ ಬೇಡುತ್ತಾ ; ನನಗಾಗಿ

ಇದ್ದವರೆಲ್ಲರ ಹತ್ತಿರ ಬಾಗಿ ಬಾಗುತ್ತ ನಡೆದವನು ನನ್ನಪ್ಪ

 

ನಾನು ಶಿಕ್ಷಣದಲ್ಲಿ ಉನ್ನತಿಗೇರಿದಂತೆ ಒಳಗೊಳಗೆ ಖುಷಿಯ

ಪಟ್ಟು, ಆನಂದದ ಕಣ್ಣೀರ ಸುರಿಸುತ್ತಾ ಆಪ್ತ ಗೆಳೆಯನಾದವನು

ನನ್ನ ಕಲಿಯುವಿಕೆಯ  ಏಳಿಗೆಗಾಗಿ ಮೈ ತುಂಬಾ ಸಾಲವ ಮಾಡಿ

ಪರಚಿಕೊಳ್ಳುತ್ತಿದ್ದರೂ ; ಯಾರ ಬಳಿಯಲ್ಲೂ ಹೇಳದೆ ಎಂದಿಗೂ

ನೋವ ನುಂಗಿ , ದೊರೆಯಂತೆ ಮೆರೆದವನು ಧೀರ ಭೂಪನವನು

ಯಾರಿಗೂ ತಲೆ ಬಗ್ಗಿಸದೇ ತಲೆಯೆತ್ತಿ ನಡೆಯುತ್ತಿದ್ದ ನನ್ನಪ್ಪ

ಬಾಗಿದ ದೇಹದೊಡನೆ, ನಸು ನಗುತ್ತಲೇ ಇಹಲೋಕ ತ್ಯಜಿಸಿದ ! 

 

ನನ್ನಪ್ಪ ಮರೆಯಾಗಿರಬಹುದು ! ಆದರೆ ಇಂದಿಗೂ ನನ್ನದೆಯಲ್ಲಿದ್ದಾನೆ

ಶಾಶ್ವತವಾಗಿ ಹೀಗೆ ಎಂದಿಗೂ ಅವನ ಆದರ್ಶ ತತ್ವಗಳೊಂದಿಗೆ 

ನಾ ಬಯಸುವುದೇ ಇಷ್ಟು, ನನ್ನಪ್ಪನ ಬಯಕೆಯ ಜೊತೆಗೆ 

ನಾ ಸಾಗುತಲಿರಲಿ ಅವನ ಸಾಮಾನತೆಯು ನನ್ನಲೆಂದೂ ಇರಲಿ

ಅವನ ಸಾಧನೆಯ ಗುರಿ ನನ್ನದಾಗಿರಲಿ ಸದಾ , ಅವನ ತತ್ವಗಳ

ಜೊತೆಯೇ ಸಾಗುತ್ತಾ ; ಸೇರುವೆ ಅವನನ್ನು ಎಂದಿಗೂ ಎಂದೆಂದಿಗೂ !

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್