ಅಪ್ಪನೆಡೆಗೆ ಒಂದು ಯಾತ್ರೆ...

ಅಪ್ಪನೆಡೆಗೆ ಒಂದು ಯಾತ್ರೆ...

ಅಪ್ಪನ ಮಾತು ಹಿಡಿಸಲಿಲ್ಲ, ಅಪ್ಪನ ಹಠ ಇಷ್ಟ ಇಲ್ಲ,  ಅವರ ನೋಟ ಇಷ್ಟ ಇಲ್ಲ, ಉಪದೇಶವೂ ಇಷ್ಟ ಇಲ್ಲ. ಅವರ ಸಹಭಾಗಿತ್ವವೂ ಬೇಕಿಲ್ಲ. ಅಪ್ಪ ಸದಾ ಅನಗತ್ಯ ಪ್ರಶ್ನೆ ಕೇಳುವ ಅಧಿಕ ಪ್ರಸಂಗಿ. ಹೌದು..ನಾವು ಬೆಳೆದಂತೆ  ಅಪ್ಪನ ಬಗೆಗಿನ ನಕಾರಾತ್ಮಕ ಪಟ್ಟಿಯೂ ಬೆಳೆಯತೊಡಗುತ್ತದೆ. 

ಮದುವೆಯ ಬಳಿಕ ಅಮ್ಮನ, ಮನೆಯವರ ಜವಾಬ್ದಾರಿಯನ್ನು ಹೆಗಲ ಮೇಲಿರಿಸಿಕೊಂಡವನೇ ಅಪ್ಪ. ಲೌಕಿಕ ಸುಖಲೋಲುಪತೆಗಳಿಗೆ ಐಹಿಕ ಸುಖಾಡರಂಬಗಳಿಗೆ ಕುಟುಂಬಕ್ಕಾಗಿ ತಿಲಾಂಜಲಿ ಇಟ್ಟ ಅಪ್ಪ. ಬದುಕಿನಲ್ಲಿ ತಾಯಿ, ಪತ್ನಿ, ಸಹೋದರ, ಸಹೋದರಿ, ಅತ್ತೆ, ಮಾವ ಇವರೆಲ್ಲರ ಮಧ್ಯೆ ಸಣ್ಣಪುಟ್ಟ ಕಲಹಗಳನ್ನು ಮೆಟ್ಟಿ ನಿಂತು ಸಮದೂಗಿಸಿ ನ್ಯಾಯದ ತಕ್ಕಡಿಯಾಗಿ ಜೀವಿಸುತ್ತಿದ್ದ ಅಪ್ಪ. ಅತ್ತ ವಾಲಬಾರದು,ಇತ್ತವೂ ವಾಲಬಾರದು. ಎಲ್ಲರಿಂದಲೂ ಮಾತುಗಳ ಕೇಳುವ ಸಹನಾಮಯಿ ಅಪ್ಪ.

ಕುಟುಂಬದ ಭದ್ರತೆಗಾಗಿ, ಪ್ರತಿಷ್ಠೆಗಾಗಿ, ಐಕ್ಯತೆಗಾಗಿ,  ಸಮಾಧಾನಕ್ಕಾಗಿ ಸಂಕಷ್ಟಗಳನ್ನು ಪ್ರಕಟಿಸದೆ ಹೃದಯದೊಳಗೆ ಅದುಮಿಟ್ಟ ಅಪ್ಪ. ಬೇರೆಬೇರೆ ಉದ್ಯೋಗ, ವಿಧ ವಿಧದ  ವೇಷ, ಬೇರೆ ಬೇರೆ ಊರು. ವಿವಾಹವಾಗಿ ಕುಟುಂಬಕ್ಕಾಗಿ ಹಲವಾರು ಸಮಸ್ಯೆಗಳನ್ನು ಸ್ವೀಕರಿಸಿ ಸಣ್ಣದಾದರೂ ಸುಂದರ ಮನೆ ಕಟ್ಟಿಸಿದ ಅಪ್ಪ.

ಮಕ್ಕಳು LKG ಯಿಂದ ಉನ್ನತ ವಿದ್ಯಾಭ್ಯಾಸ, ಟ್ಯೂಷನ್ ಹೀಗೆ ಮಕ್ಕಳ ಬಗ್ಗೆ ತುಂಬಾ ಆಸೆ ಆಕಾಂಕ್ಷೆಗಳನ್ನು, ಕನಸುಗಳನ್ನು ಕಟ್ಟಿಕೊಂಡೇ ಅಪ್ಪನ ಜೀವನ ಸವೆದು ಹೋಯಿತು. ತಾನು ಹರಿದ ಬನಿಯನ್, ಹವಾಯಿ ಚಪ್ಪಲಿ ಧರಿಸಿದರೂ ಮಕ್ಕಳಿಗೆ ಬ್ರಾಂಡೆಡ್ ಐಟಮ್ ಕೊಡಿಸಿದವನು ಅಪ್ಪ.

ವಯಸ್ಸಾದಂತೆ, ಅನಾರೋಗ್ಯ ಪೀಡಿತರಾದಾಗ ಕ್ಷೀಣರಾಗುತ್ತಾರೆ. ಮಕ್ಕಳಿಗೆ ಭಾರ ಎಂದು ಅನಿಸತೊಡಗುತ್ತದೆ. ಮಕ್ಕಳು ಕೂಡ ಅಮ್ಮನೊಂದಿಗೆ ಮಾತ್ರ ವ್ಯವಹರಿಸುತ್ತಾರೆ. ತನ್ನ ಇಷ್ಟಾರ್ಥಗಳನ್ನೆಲ್ಲ ಬದಿಗಿಟ್ಟು,  ಕನಸ್ಸೆಲ್ಲ ನುಚ್ಚುನೂರು ಮಾಡಿ ತನ್ನನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂಬ ವಿಷಾದ. ಇದು ಕೇವಲ ಒಂದು ಅಪ್ಪನ ಸಮಸ್ಯೆಯಲ್ಲ. ಸುತ್ತಮುತ್ತಲ ಲಕ್ಷಾಂತರ ಅಪ್ಪಂದಿರ ದುಃಖ. 

ಅಮ್ಮನ ಮಹತ್ವವನ್ನು ಎಲ್ಲರೂ ಕೊಂಡಾಡುತ್ತಾರೆ, ಕಣ್ಣೀರಿಡುವ ಅಮ್ಮನನ್ನು  ಮಕ್ಕಳು ನೋಡುತ್ತಾರೆ. ಆದರೆ ಕಣ್ಣೀರಿಡುವ ಅಪ್ಪನನ್ನು ಕಾಣುವುದಿಲ್ಲ. ಅಪ್ಪ ಅವರೆದುರೂ ಕಣ್ಣೀರು ಇಡುವುದೂ ಇಲ್ಲ. 9 ತಿಂಗಳು ಹೊತ್ತ ಅಮ್ಮನ ಕಥೆಯನ್ನು ಮಕ್ಕಳು ಕೇಳುತ್ತಾರೆ. ಹೆರಿಗೆಯ ನೋವು, ಬೆಳೆಸಿದ ಕಷ್ಟ ಇವುಗಳ ಬಗ್ಗೆ ಕತೆ, ಕವನ, ನಾಟಕ, ಬರಹ ಸಾಕಷ್ಟಿದೆ.

ಪತ್ನಿಯ ಗರ್ಭ ಕಾಲದಲ್ಲಿ ಹುಟ್ಟುವ ಮಗುವಿನ ಆರೋಗ್ಯಕ್ಕಾಗಿ ಪೋಷಕಾಂಶ ಆಹಾರ, ಹಣ್ಣುಹಂಪಲು, ವೈದ್ಯರ ಶುಶ್ರೂಷೆ, ಮಕ್ಕಳ ತಜ್ಞರ ಬಳಿ ಓಡಾಡಿದ ಅಪ್ಪನ ಬಗ್ಗೆ ಯಾರೂ ಕೇಳಿರುವುದಿಲ್ಲ. ಆಕೆಯ ಹೆರಿಗೆಯ ಸಮಯದಲ್ಲಿ ಗಾಳಿ ಮಳೆಯನ್ನು ಲೆಕ್ಕಿಸದೆ ಆಸ್ಪತ್ರೆಯ ವರಾಂಡದಲ್ಲಿ  ಸೊಳ್ಳೆಯ ಕಾಟವನ್ನು ಸಹಿಸಿ ಆಕೆಗೋಸ್ಕರ ಕಾವಲು ನಿಂತು, ನೋವನ್ನು ಅನುಭವಿಸಿದ ಪ್ರೀತಿಯ ಕತೆಯನ್ನು ಕೇಳಿರುವುದಿಲ್ಲ. ಹೇಳಿಯೂ ಇರುವುದಿಲ್ಲ. ರಾತ್ರಿಯನ್ನು ಹಗಲಾಗಿ ಪರಿವರ್ತಿಸಿ ದುಡಿದ ಕಾವಲುಗಾರನ ಕತೆಯನ್ನು ಕೇಳಿರುವುದಿಲ್ಲ.

ಇಷ್ಟೆಲ್ಲಾ ಸಂಕಷ್ಟಗಳನ್ನು ಮನೆ ಮಂದಿಗೆ ಹಂಚಿ ಮನಸ್ಸು ಹಗುರ ಮಾಡೋಣವೆಂದರೆ 'ನಿಮ್ಮ ಪುರಾಣ ಸಾಕು' ಎಂಬ ಪ್ರತ್ಯುತ್ತರ. ಅಪ್ಪನ ಪ್ರೀತಿಯ ಅಳೆಯುವುದು ಅಸಾಧ್ಯದ ಮಾತು. ಪ್ರೀತಿ ಪ್ರಕಟಿಸಲು ತಿಳಿಯದ ಅಪ್ಪ. ಮಕ್ಕಳನ್ನು ತಿದ್ದಲು ಹೊರಟರೆ 'ನಿಮ್ಮ ಹಳೆಯ ಕಾಲವಲ್ಲ' ಎಂದು ಹೇಳುವ ಅಮ್ಮಂದಿರು. ಇದೇ ಕಾರಣದಿಂದ ಅಪ್ಪ ಮನೆಯಲ್ಲಿ ಅನ್ಯನಾಗುತ್ತಾನೆ. ಮನೆಯೊಳಗಡೆ ಪಬ್ಜಿ, ಟಿಕ್‌ಟಾಕ್, ಗೇಮ್ಸ್, ಟಿ.ವಿ.ಸೀರಿಯಲ್‌ಗಳು ನೋಡುವಾಗ ನ್ಯೂಸ್ ನೋಡಲಾಗದ ಸ್ಥಿತಿಯಲ್ಲಿ ಅಪ್ಪ ಮೂಲೆಯಲ್ಲಿ ಯಾವುದೋ ಹಳೆಯ ಪೇಪರ್ ಓದುವಂತೆ ನಟಿಸುತ್ತಾನೆ. ಮಕ್ಕಳು ಅಪ್ಪನಿಗೆ ಮರುತ್ತರ ಕೊಡುವಾಗ ಅವರ ಕಣ್ಣುಗಳನ್ನೊಮ್ಮೆ ನೋಡಿ.

ಸಾಗರದಷ್ಟು ದುಃಖವನ್ನು ಮನಸ್ಸಿನೊಳಗಿಟ್ಟು ಅಭಿಮಾನದಿಂದ ತಲೆ ಎತ್ತಿ ನಡೆಯುವ ಅಪ್ಪನ ಗೌರವ ಮತ್ತು ಸಹನೆಯನ್ನು ತಿಳಿಯಬೇಕಾದರೆ ಪ್ರತೀ ಮಗನೂ ತಂದೆಯಾಗಬೇಕು. ಇದೆಲ್ಲವನ್ನೂ ನೆನೆದು ಪಶ್ಚಾತ್ತಾಪ ಪಡುವ ಹೊತ್ತಿನಲ್ಲಿ ಅಪ್ಪ ಕಾಣದ ಲೋಕಕ್ಕೆ ಯಾತ್ರೆ ಹೊರಟಿರುತ್ತಾನೆ. ಅಪ್ಪಾ, ಅಪ್ಪಾ ಎಂದು ಬೊಬ್ಬಿಟ್ಟು ಕರೆದರೂ ಮರಳಿ ಬಾರದ ಲೋಕಕ್ಕೆ. ಆದರೂ ಅಪ್ಪ ಕೊನೆಯವರೆಗೂ ಮಕ್ಕಳ ಯಶಸ್ವಿಗಾಗಿಯೇ ಪ್ರಾರ್ಥಿಸುತ್ತಾನೆ. ಕೋಪ ತೋರಿಸುವ ಪ್ರೀತಿಗಾಗಿ ಅದನ್ನೆಲ್ಲಾ ನುಂಗುವ ಹೇಡಿಯಾಗಿದ್ದಾನೆ..

***

ಈ ವರ್ಷ ಜೂನ್ ೨೦ ವಿಶ್ವ ಅಪ್ಪಂದಿರ ದಿನ. ೧೯೧೦ರ ಜೂನ್ ಮೂರನೇ ರವಿವಾರದಂದು ತನ್ನ ತಂದೆಗೆ ಗೌರವ ಅರ್ಪಿಸಲು ಸನೋರಾ ಸ್ಮಾರ್ಟ್ ಡಾಡ್ ಎಂಬಾಕೆ ಪ್ರಾರಂಭಿಸಿದ ಆಚರಣೆ ಇದು. ಇದು ಅಮೇರಿಕಾದ ವಾಷಿಂಗ್ಟನ್ ಎಂಬ ನಗರದಲ್ಲಿ ಮೊದಲಿಗೆ ಆಚರಣೆಗೆ ಬಂತು. ವಿದೇಶದಲ್ಲಿ ಪ್ರಾರಂಭವಾದ ಆಚರಣೆ ಕ್ರಮೇಣ ಭಾರತಕ್ಕೂ ಹಬ್ಬಿತು. ಮನೆ, ಮಡದಿ ಮತ್ತು ಮಕ್ಕಳಿಗಾಗಿ ತನ್ನ ಜೀವವನ್ನೇ ಸವೆಸುವ ಜೀವಕ್ಕಾಗಿ ಒಂದು ದಿನ ಬೇಕೇ? ಎಂಬ ಜಿಜ್ಞಾಸೆಯ ನಡುವೆ ಇಂದು ವಿಶ್ವ ಅಪ್ಪನ ದಿನದ ಆಚರಣೆ ನಡೆಯುತ್ತಿದೆ. ನೀವು ಬೆಳೆದು ದೊಡ್ಡವರಾಗಿ ಉದ್ಯೋಗಸ್ಥರಾಗಿದ್ದರೆ, ನಿಮ್ಮನ್ನು ಈ ಸ್ಥಿತಿಗೆ ತಂದ ಅಪ್ಪನಿಗೊಂದು ಧನ್ಯವಾದ ಹೇಳಿ. ನೀವಿನ್ನೂ ಕಲಿಯುತ್ತಿದ್ದರೆ, ನಿಮ್ಮ ಭವ್ಯ ಭವಿಷ್ಯಕ್ಕಾಗಿ ಶ್ರಮ ಪಡುತ್ತಿರುವ ಅಪ್ಪನಿಗೊಂದು ಕೃತಜ್ಞತೆ ಹೇಳಿ. ಅಪ್ಪಾ ಐ ಲವ್ ಯೂ... !

-ಸಿದ್ದೀಕ್ ಕಲ್ಲಡ್ಕ

(ಮೂಲ ಮಲಯಾಳಂ)