ಅಪ್ಪನ ಅಂಗಿಗಿಂತ ಅಮ್ಮನ ಸೀರೆಗಳೇ ವರ್ಣಮಯ…?

ಬಣ್ಣಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಆಬಾಲವೃದ್ಧರಾದಿಯಾಗಿ ಎಲ್ಲರೂ ತಮ್ಮ ಬದುಕು ವರ್ಣಮಯವಾಗಿರಬೇಕೆಂದು ಬಯಸುತ್ತಾರೆ. ಅದನ್ನೇ ಮೊನ್ನೆ ಬಾಯಾರು ರಮೇಶ ಮಾಸ್ಟ್ರು ಬರೆದದ್ದು. ನಿಜ ಹೇಳಬೇಕೆಂದರೆ ನಮ್ಮ ಬದುಕು ನಿಮ್ಮ ಬದುಕಿನಷ್ಟು ವರ್ಣಮಯವಾಗಿರಲಿಲ್ಲ. ಏಕೆಂದರೆ ಆಗ ನಮ್ಮ ತಂದೆ ತಾಯಿಯರ ಕೊಳ್ಳುವ ಸಾಮರ್ಥ್ಯ (purchase power) ಈಗಿನಷ್ಟಿರಲಿಲ್ಲ. ನಿಮಗೆ ಈಗ ಬಣ್ಣಗಳನ್ನು ಕೊಳ್ಳುವಾಗ ಬೇಕಾದಷ್ಟು ಆಯ್ಕೆಗಳಿವೆ. ಆದರೆ ನಮಗೆ ಪ್ರಕೃತಿಯಲ್ಲಿ ಲಭ್ಯವಿರುವ ಬಣ್ಣಗಳೇ ಬಣ್ಣದ ಮೂಲಗಳಾಗಿದ್ದವು. ಹೂವಿನ ಎಸಳುಗಳು, ಎಲೆಗಳು, ಹಣ್ಣುಗಳು, ಮೆದುವಾದ ಕಲ್ಲುಗಳು, ಮಣ್ಣು, ಬಣ್ಣದ ಕಾಗದಗಳು, ಊದುಬತ್ತಿಯ ಓಂಟೆಗೆ ಸುತ್ತಿದ ಸೆಲ್ಲೋಫೇನ್ ಹಾಳೆ ಹೀಗೆ ನಮ್ಮ ಪಟ್ಟಿ ಮುಂದುವರಿಯುತ್ತಿದ್ದವು. ಎಲೆಗಳನ್ನು, ಹೂಗಳನ್ನು ಜಜ್ಜಿ ರಸ ತೆಗೆದು, ಕಲ್ಲುಗಳನ್ನು ತೇದಿ ಗಂಧ ತೆಗೆದು ಅವುಗಳನ್ನು ಮಿಶ್ರ ಮಾಡಿದರೆ ವ್ಯಾಪಕ ಶ್ರೇಣಿಯ ವರ್ಣಪಟ್ಟಿ ಸಿದ್ದವಾದ ಹಾಗೆ. ಬಣ್ಣದ ಕಾಗದಕ್ಕೆ ನೀರು (ಸ್ಥಳದಲ್ಲಿ ಲಭ್ಯವಿಲ್ಲದೇ ಇದ್ದರೆ ಎಂಜಲು ಹಚ್ಚಿ) ಉಗುರಿಗೆ ಹಚ್ಚಿದರೆ ಬಣ್ಣದ ಉಗುರಿನ ಶೃಂಗಾರ ಸಿದ್ಧ. ಬಣ್ಣ ಬಣ್ಣದ ಸೆಲ್ಲೋಫೇನ್ ಕಾಗದಗಳನ್ನು ಕಣ್ಣಿಗೆ ಅಂಟಿಸಿಕೊಂಡರೆ ಕನ್ನಡಕವೊಂದು ರೆಡಿ. ಪ್ರಪಂಚ ತನ್ನ ಬಣ್ಣ ಕಳೆದುಕೊಂಡು ನಾವು ಹೇಳಿದ ಬಣ್ಣದಲ್ಲಿ ಅಥವಾ ಕಪ್ಪಾಗಿ ಕಾಣಿಸುವಾಗಿನ ಖುಷಿ ದಿಗ್ವಿಜಯದ ವೇಳೆ ಅಲೆಗ್ಸಾಂಡರ್ ನಿಗೂ ಸಿಕ್ಕಿರಲಿಕ್ಕಿಲ್ಲ. ಈ ಬಣ್ಣಗಳು ನಮ್ಮ ಚರ್ಮದ ಮೇಲೆ ಅಪಾರ ಕರುಣೆಯನ್ನು ಹೊಂದಿದ್ದವು. ಅಲರ್ಜಿಯಾಗಲಿ ಸೋಂಕುಂಟು ಮಾಡುವ ಕೀಟಾಣುಗಳನ್ನಾಗಲೇ ತರುತ್ತಿರಲಿಲ್ಲ. ಆಪಾಯಕಾರಿಯಾಗಿ (toxic) ಎಂದೂ ವರ್ತಿಸುತ್ತಿರಲಿಲ್ಲ. ಪಾಪ ಸೆಲ್ಲೋಫೇನ್ ಹಾಳೆಗಳು ಸಸ್ಯ ಜನ್ಯ ವಸ್ತುಗಳೇ ಆಗಿದ್ದುದರಿಂದ ಅವುಗಳು ಸುಲಭವಾಗಿ ಮಣ್ಣಿನಲ್ಲಿ ಸೇರಿ ಹೋಗಿ ಬಿಡುತ್ತಿದ್ದವು. ಆದ್ದರಿಂದ ನಮ್ಮ ಬಣ್ಣಗಳು ನಿಮ್ಮ ಬಣ್ಣಗಳ ಹಾಗೆ ಪರಿಸರ ವಿರೋಧಿಗಳಾಗಿರಲಿಲ್ಲ. ಆದ್ದರಿಂದ ನಾವು ಆ ಬಣ್ಣಗಳ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬೇಕಾಗಿತ್ತೇ ಹೊರತು ಅಡ್ಡ ಪರಿಣಾಗಳ ಬಗ್ಗೆ ಅಲ್ಲ. ಆದ್ದರಿಂದ ನಮ್ಮ ಬದುಕು ಹೆಚ್ಚು ಸರಳವಾಗಿತ್ತು.
ಮಗು ಬೆಳೆಯುವುದು ಬಣ್ಣಗಳೊಂದಿಗೆ. ನಾವು ಶಾಲೆಗೆ ಹೋಗುವಾಗ ನಮ್ಮ ಬಟ್ಟೆಗಳು ಬಣ್ಣಗಳ ಆಕರಗಳಾಗಿದ್ದವು. ಏಕೆಂದರೆ ನಮ್ಮ ಸರಕಾರಿ ಶಾಲೆಗಳಲ್ಲಿ ಎಲ್ಲರ ಕಣ್ಣಿಗೂ ಒಂದೇ ಬಣ್ಣ ಕಾಣುವಂತೆ ಮಾಡುವ ಸಮವಸ್ತ್ರಗಳ ಹೊದಿಕೆ ಇರಲಿಲ್ಲ. ಯಾರು ಯಾವ ಬಣ್ಣದ ಬಟ್ಟೆಯನ್ನು ಬೇಕಾದರೂ ಹಾಕಬಹುದಿತ್ತು. ಆದರೆ ನಿಮಗೆ ಆ ಸ್ವಾತಂತ್ರ್ಯವಿಲ್ಲ. ಆದರೆ ನಿಮ್ಮ ಪಠ್ಯ ಪುಸ್ತಕಗಳು ನಮ್ಮವುಗಳಿಗಿಂತ ಹೆಚ್ಚು ವರ್ಣಮಯವಾಗಿವೆ. ಏಕೆಂದರೆ ನಮ್ಮ ಕಾಲದಲ್ಲಿ ಈಗಿನ ಹಾಗೆ ಮೂರು ಬಣ್ಣಗಳ (ನಾಲ್ಕು ಬಣ್ಣಗಳ) (tricolour printing) ಮುದ್ರಣ ಪಠ್ಯ ಪುಸ್ತಕ ಪ್ರಪಂಚವನ್ನು ಪ್ರವೇಶಿಸಿರಲಿಲ್ಲ.
ಮಗುವಿನ ಬದುಕಿನಲ್ಲಿ ಆರಂಭದ ಹಂತದಲ್ಲಿಯೇ ನಾವು ಬಣ್ಣಗಳ ಪರಿಕಲ್ಪನೆ ಮೂಡಿಸಬೇಕು. ಮಗು ಹುಟ್ಟಿದ ಒಂದು ವರ್ಷದ ಒಳಗೆ ಮೂರು ಮೂಲ ಬಣ್ಣಗಳನ್ನು ಹಾಗೂ ಒಂದೂವರೆ ವರ್ಷದ ಒಳಗೆ ಉಳಿದ ನಾಲ್ಕು ಬಣ್ಣಗಳನ್ನು ಕಲಿಸಬೇಕು. ಇಲ್ಲವಾದಲ್ಲಿ ಮುಂದೆ ಗಣಿತದ ಪರಿಕಲ್ಪನೆಯಾದ ಆಚೆ ಈಚೆ ಮಧ್ಯೆ ಎಂದರೆ 27, 28 ಮತ್ತು 29 ಅನ್ನು ಸರಿಯಾದ ಅನುಕ್ರಮಗಳಲ್ಲಿ ಗುರುತಿಸಲು ಕಷ್ಟಪಡಬೇಕಾಗುತ್ತದೆ.
ಒಂದು ವಸ್ತು ಆ ಬಣ್ಣದಲ್ಲಿ ಏಕೆ ಗೋಚರಿಸುತ್ತದೆ ಎಂಬುದು ನಿಮಗೆ ತಿಳಿದಿದೆ. ಏಕೆಂದರೆ ಶಾಲೆಯ ಆರಂಭದ ದಿನವೇ ನಮಗೆ ನಮ್ಮ ಭೌತ ವಿಜ್ಞಾನದ ಸರ್ ಹೇಳಿದ್ದು ನಿಮಗೆ ನೆನಪಿದೆಯಲ್ಲವೇ? ಒಂದು ಅಪಾರದರ್ಶಕ ವಸ್ತುವು ಬೆಳಕಿನ ಯಾವ ತರಂಗಾಂತರವನ್ನು ಪ್ರತಿಫಲಿಸುತ್ತದೆಯೋ ಅದು ಆ ವಸ್ತುವಿನ ಬಣ್ಣ. ಆ ವಸ್ತು ಉಳಿದೆಲ್ಲಾ ತರಂಗಾಂತರವನ್ನು ಹೀರಿಕೊಳ್ಳುತ್ತವೆ. ಬಿಳಿಯ ವಸ್ತುಗಳು ಎಲ್ಲಾ ಬಣ್ಣಗಳನ್ನ್ನೂ ಪ್ರತಿಫಲಿಸಿದರೆ ಎಲ್ಲಾ ಬಣ್ಣಗಳನ್ನೂ ಹೀರಿಕೊಳ್ಳುವ ವಸ್ತುಗಳು ಕಪ್ಪಾಗಿರುತ್ತವೆ. ಒಂದು ವಸ್ತು ನಿಮಗೆ ಕೆಂಪಾಗಿ ಕಾಣುತ್ತದೆಂದರೆ ಅದು ಕೆಂಪು ಬಣ್ಣವನ್ನು ಪ್ರತಿಫಲಿಸುತ್ತದೆ ಮತ್ತು ನೀಲಿ ವಸ್ತು ನೀಲಿ ಬಣ್ಣವನ್ನು ಪ್ರತಿಫಲಿಸುತ್ತದೆ ಎಂದು ಅರ್ಥ. ಖಗೋಳದಲ್ಲಿ ಕಪ್ಪು ರಂಧ್ರಗಳ (black holes) ಬಗ್ಗೆ ಕೇಳಿದ್ದೀರಲ್ಲವೇ? ಇವುಗಳ ಗುರುತ್ವ ಬಲ ಎಷ್ಟು ಅಪಾರವಾಗಿರುತ್ತವೆ ಎಂದರೆ ಇವುಗಳು ತಮ್ಮ ಸುತ್ತ ಮುತ್ತ ಇರುವ ವಸ್ತುಗಳನ್ನು ಮಾತ್ರ ನುಂಗುವುದಲ್ಲ ಸೆಕುಂಡಿಗೆ 3 ಲಕ್ಷ ಕಿಲೋಮೀಟರ್ ವೇಗದಲ್ಲಿ ಓಡುವ ಬೆಳಕನ್ನೂ ಹಿಡಿದು ನುಂಗುತ್ತಲೇ ಇರುತ್ತದೆ. ಆದ್ದರಿಂದ ನಕ್ಷತ್ರಗಳ ಹಾಗೆ ಕಪ್ಪು ರಂಧ್ರಗಳನ್ನು ನೋಡಲು ಸಾಧ್ಯವಿಲ್ಲ. ಅದನ್ನು ತಿಳಿಯ ಬಹುದಷ್ಟೇ. ವೈವಿಧ್ಯಮಯ ಬಣ್ಣಗಳನ್ನು ಹೊಂದಿರುವ ವಸ್ತುಗಳು ಬೇರೆ ಬೇರೆ ಬಣ್ಣಗಳನ್ನು ಬೇರೆ ಬೇರೆ ಅನುಪಾತದಲ್ಲಿ ಅಂದರೆ ವಿವಿಧ ತಂರಂಗಾಂತರದ ಬೆಳಕನ್ನು ಪ್ರತಿಫಲಿಸುತ್ತವೆ. ಈಗ ಗೊತ್ತಾಯಿತೇ ಅಪ್ಪನ ಅಂಗಿಗಿಂತ ಅಮ್ಮನ ಸೀರೆಗಳು ಹೆಚ್ಚು ವರ್ಣಮಯವಾಗಿರುವುದು ಏಕೆ ಎಂದು?
ಇನ್ನು ಈ ಪಾರದರ್ಶಕ ವಸ್ತುಗಳು ತಮ್ಮ ಮೂಲಕ ಬೆಳಕನ್ನು ಹಾದು ಹೋಗಲು ಬಿಡುತ್ತವೆ. ಕೆಂಪು ಗಾಜು ಎಲ್ಲಾ ಬಣ್ಣಗಳನ್ನು ಹೀರಿಕೊಂಡು ಕೆಂಪು ತರಂಗಾಂತರವನ್ನು ತನ್ನ ಮೂಲಕ ಹಾದು ಹೋಗಲು ಬಿಡುತ್ತದೆ. ಹಳದಿ ಸೆಲ್ಲೋಫೇನ್ ಹಾಳೆ ಎಲ್ಲಾ ಬಣ್ಣಗಳನ್ನೂ ಹೀರಿಕೊಂಡು ಹಳದಿ ತರಂಗಾಂತರವನ್ನು ಮಾತ್ರ ತನ್ನ ಮೂಲಕ ಹಾದು ಹೋಗಲು ಬಿಡುತ್ತವೆ. ಅದ್ದರಿಂದ ಈ ಬಣ್ಣದ ಕನ್ನಡಕ ಎಂಬ ಪರಿಕಲ್ಪನೆ ಇದೆಯಲ್ಲ ಅದು ಪಕ್ಷಪಾತಿ ಧೋರಣೆ ಎಂದರ್ಥ. ಬಣ್ಣದ ಕನ್ನಡಕದಲ್ಲಿ ಪ್ರಪಂಚವನ್ನು ನೋಡಬೇಡ ಎನ್ನಲು ಕಾರಣ ಇದೇ. ನೀವು ಕೆಂಪು ಕನ್ನಡಕದ ಮೂಲಕ ಹಸಿರು ಎಲೆಯನ್ನು ನೋಡಿದರೆ ಅದು ಯಾವ ಬಣ್ಣದ್ದಿರುತ್ತದೆ ನೋಡೋಣ. ಎಲೆ ಹಸಿರಾಗಿದೆ ಎಂದರೆ ಅದರಿಂದ ಪ್ರತಿಫಲಿಸಿ ಬರುವ ಬೆಳಕಿನಲ್ಲಿ ಹಸಿರು ಬಣ್ಣವನ್ನು ಬಿಟ್ಟು ಬೇರೆ ಯಾವುದೇ ಬಣ್ಣ ಇರುವುದಿಲ್ಲ. ಏಕೆಂದರೆ ಅದು ಉಳಿದ ಬಣ್ಣಗಳನ್ನು ಅದು ಹೀರಿಕೊಂಡಿರುತ್ತದೆ. ಕೆಂಪು ಕನ್ನಡಕ ಈ ಹಸಿರು ಬಣ್ಣವನ್ನು ಹೀರಿಕೊಳ್ಳುತ್ತವೆ. ಅಂದೇ ಎರಡೂ ಒಟ್ಟಾಗಿ ಎಲ್ಲಾ ಬಣ್ಣಗಳನ್ನೂ ಹೀರಿಕೊಂಡ ಹಾಗಾಯಿತು ಅಂದರೆ ಕೆಂಪು ಕನ್ನಡಕದ ಮೂಲಕ ನೋಡುವ ಹಸಿರು ಎಲೆ ಕಪ್ಪಾಗಿ ಕಾಣಿಸುತ್ತವೆ. ಹಿಂದಿನ ಸಂಚಿಕೆಯಲ್ಲಿ ಸೋಡಿಯಂ ಆವಿ ದೀಪದ ಬಗ್ಗೆ ಮಾತನಾಡುವಾಗ ವಸ್ತುವಿನ ಬಣ್ಣ ವ್ಯತ್ಯಾಸವಾಗುವ ಬಗ್ಗೆ ಹೇಳಿದ್ದೆ. ಈಗ ಹೇಳಿ ಸೋಡಿಯಂ ಆವಿ ದೀಪದಲ್ಲಿ ರಾತ್ರಿ ಹೊತ್ತು ಗಿಡಗಳ ಬಣ್ಣ ಏನು ಮತ್ತು ಏಕೆ?
-ದಿವಾಕರ ಶೆಟ್ಟಿ ಎಚ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ