ಅಪ್ಪನ ದಿನ ಮುಗಿಯಿತು, ಬಕ್ರೀದ್ ಹಬ್ಬ ಬಂದಿತು…!
ಒಳ್ಳೆಯ ಅಪ್ಪ, ಪ್ರೀತಿಯ ಅಪ್ಪ, ತ್ಯಾಗದ ಅಪ್ಪ, ಸಾಹಸಿ ಅಪ್ಪ, ಬುದ್ದಿವಂತ ಅಪ್ಪ, ಜವಾಬ್ದಾರಿಯುತ ಅಪ್ಪ, ತಾಳ್ಮೆಯ ಅಪ್ಪ, ಪರೋಪಕಾರಿ ಅಪ್ಪ, ಶ್ರೀಮಂತ ಅಪ್ಪ, ದೊಡ್ಡ ಹುದ್ದೆಯ ಅಪ್ಪ, ವಂಚಕ ಅಪ್ಪ, ದಡ್ಡ ಅಪ್ಪ, ಸಿಡುಕ ಅಪ್ಪ, ಬಡವ ಅಪ್ಪ, ಮದ್ಯ ವ್ಯಸನಿ ಅಪ್ಪ, ಲಫಂಗ ಅಪ್ಪ, ಭ್ರಷ್ಟಾಚಾರಿ ಅಪ್ಪ, ಸ್ತ್ರೀಲೋಲ ಅಪ್ಪ, ಜೂಜುಕೋರ ಅಪ್ಪ, ಸೋಮಾರಿ ಅಪ್ಪ, ಸ್ವಾರ್ಥಿ ಅಪ್ಪ,
ಹೀಗೆ ಮುಗಿಯದ ಶತಾವತಾರದ ಅನೇಕ ಅಪ್ಪಂದಿರ ಉಗಮ ಸ್ಥಾನ ನಮ್ಮ ಸಮಾಜ. ಹಾಗೆಯೇ ಬಾಲ್ಯದಿಂದ ಮುಪ್ಪಿನವರೆಗೆ ಅಪ್ಪನ ಮೇಲಿನ ನಮ್ಮ ಅಭಿಪ್ರಾಯ ರೂಪಾಂತರ ಹೊಂದುತ್ತಲೇ ಇರುತ್ತದೆ. ಕೆಟ್ಟ ಅಪ್ಪ ಒಳ್ಳೆಯವನಾಗಿ, ಒಳ್ಳೆಯ ಅಪ್ಪ ಕೆಟ್ಟವನಾಗಿ, ಶ್ರೀಮಂತ ಅಪ್ಪ ಬಡವನಾಗಿ, ಬಡವ ಅಪ್ಪ ಶ್ರೀಮಂತನಾಗಿ ಸರ್ವಗುಣಗಳು ನಮ್ಮ ಗ್ರಹಿಕೆಗುನುಗುಣವಾಗಿ ಬದಲಾಗುತ್ತಲೇ ಇರುತ್ತದೆ. ಕೆಲವೊಮ್ಮೆ ಮಾತ್ರ ಅದು ಸ್ಥಿರವಾಗಿರುತ್ತದೆ.
ಸಮಾಜದ ಹಿತದೃಷ್ಟಿಯಿಂದ ಅಪ್ಪನನ್ನು ನನ್ನಪ್ಪ ಎಂದು ನೋಡುವುದರ ಜೊತೆಗೆ ಸಾಮಾಜಿಕ ಮನುಷ್ಯ - ದೇಶದ ಪ್ರಜೆ ಎಂದೂ ಸಹ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು. ಏಕೆಂದರೆ ಅಪ್ಪನ ಪಾತ್ರ ಸೀಮಿತವಲ್ಲ. ಅದು ಬಹು ಆಯಾಮಗಳನ್ನು ಹೊಂದಿದೆ. ಆ ಎಲ್ಲಾ ಜವಾಬ್ದಾರಿಗಳನ್ನು - ಕರ್ತವ್ಯಗಳನ್ನು ಆತ ನಿರ್ವಹಿಸಿದಾಗ ಮಾತ್ರ ಒಂದು ಸಮಾಜ ಉತ್ತಮವಾಗಿರಲು ಸಾಧ್ಯ. ಇಲ್ಲದಿದ್ದರೆ ಭ್ರಷ್ಟ ಅಪ್ಪ, ಮೋಸಗಾರ ಅಪ್ಪ ನಮಗೆ ಒಳ್ಳೆಯವನಾಗಿ ಕಂಡರೂ ಸಾಮಾಜಿಕವಾಗಿ ವ್ಯವಸ್ಥೆ ಹದಗೆಡಲು ಕಾರಣವಾಗಿ ಭವಿಷ್ಯದಲ್ಲಿ ನಮ್ಮ ಮಕ್ಕಳ ಪಾಲಿಗೆ ಕೆಟ್ಟ ಸಮಾಜ ನಿರ್ಮಾಣವಾಗಲು ಕಾರಣವಾಗುತ್ತದೆ.
ಬಹುಶಃ ಇತ್ತೀಚಿನ ದಿನಗಳಲ್ಲಿ ಅದರ ಪರಿಣಾಮಗಳನ್ನು ಗುರುತಿಸಬಹುದಾಗಿದೆ. ನಮ್ಮ ಚಿಂತನೆಗಳು, ನಡವಳಿಕೆಗಳು ವಿಶಾಲತೆ ಪಡೆದಷ್ಟೂ ಒಳ್ಳೆಯ ನಾಗರಿಕ ಸಮಾಜ ನಿರ್ಮಾಣವಾಗುತ್ತದೆ. ಅಪ್ಪನನ್ನು ನಮಗೆ ಮಾತ್ರ ಸೀಮಿತವಾಗಿ ಅರ್ಥೈಸಿದರೆ ಕುಟುಂಬ ವ್ಯವಸ್ಥೆ ಚೆನ್ನಾಗಿರಬಹುದು. ಆದರೆ ಅದರ ಒಟ್ಟು ಪರಿಣಾಮ ಸಮಾಜದ ಆಗುಹೋಗುಗಳ ನಿರ್ಲಕ್ಷ್ಯದಿಂದ ನಮ್ಮ ಪಾಡಿಗೆ ನಾವು ವಾಸಿಸಲು ಅಯೋಗ್ಯವಾದ ಸಮಾಜ ಸೃಷ್ಟಿಯಾಗುತ್ತದೆ. ಆದ್ದರಿಂದ ಅಪ್ಪನ ದಿನ ಒಬ್ಬ ಒಳ್ಳೆಯ ಜವಾಬ್ದಾರಿಯುತ ನಾಗರಿಕ ದಿನ ಸಹ ಹೌದು ಮತ್ತು ಅದು ಹೆಚ್ಚು ಅರ್ಥಪೂರ್ಣ ಎಂದು ಭಾವಿಸುತ್ತಾ.. ಎಲ್ಲರಿಗೂ ಸ್ವಲ್ಪ ತಡವಾಗಿ ಅಪ್ಪನ ದಿನದ ಶುಭಾಶಯಗಳು.
ಬಕ್ರೀದ್ ಹಬ್ಬದ ಶುಭಾಶಯಗಳೊಂದಿಗೆ… ಬನ್ನಿ ನನ್ನ ಸಹಧರ್ಮೀಯ ಬಾಂಧವರೆ..ಒಗ್ಗಟ್ಟಾಗೋಣ ನಾವು ನೀವು, ಬನ್ನಿ ನನ್ನ ಮುಸ್ಲಿಂ ಸಹೋದರ ಸಹೋದರಿಯರೆ, ಬದಲಾಗೋಣ, ಅಭಿವೃದ್ಧಿಯತ್ತ ಮುನ್ನಡೆಯೋಣ, ಬನ್ನಿ ನನ್ನ ಇಸ್ಲಾಂ ಗೆಳೆಯ ಗೆಳತಿಯರೆ, ಕಟ್ಟೋಣ ಬಲಿಷ್ಠ ಭಾರತವನ್ನು, ನೀವೂ ನಮ್ಮಂತೆ, ನಾವೂ ನಿಮ್ಮಂತೆ, ಅದೇ ರಕ್ತ ಮೂಳೆ ಮಾಂಸ ಚರ್ಮಗಳ ಹೊದಿಕೆ, ಅದೇ ಭಯ ಭಕ್ತಿ ನೋವು ನಲಿವು ಸುಖ ದುಃಖ ಪ್ರೀತಿ ದ್ವೇಷ, ಅದೇ ಗಾಳಿ ಬೆಳಕು, ಅನ್ನ ನೀರು, ನೆಲ, ನಿಮ್ಮಲ್ಲೂ ನಮ್ಮಂತೆ ಮೌಢ್ಯವಿದೆ, ಅಂಧ ಭಕ್ತಿಯಿದೆ, ನಿಮ್ಮಲ್ಲೂ ದಡ್ಡತನ, ಬಡತನ, ಅಸಮಾನತೆಯಿದೆ, ಬದಲಾಗಬೇಕಿದೆ ನೀವು ಆಧುನಿಕತೆಯ ಹೊಸ ಮನ್ವಂತರಕೆ, ಸ್ತ್ರೀ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿ ಹಿಡಿಯಬೇಕಿದೆ, ನಿಮ್ಮದೇ ಅನುಭವದ ಬೆಳಕಿನಲ್ಲಿ ಕತ್ತಲೆಯನ್ನು ಒದ್ದೋಡಿಸಿ, ಭಕ್ತಿಯಿದ್ದರೆ ಇರಲಿ, ನಂಬಿಕೆಯಿದ್ದರೆ ಇರಲಿ, ನಿಮ್ಮ ಆಚಾರ ವಿಚಾರ ಸಂಪ್ರದಾಯಗಳಲ್ಲಿ, ಆದರೆ ಅದನ್ನು ಮೀರಿದ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಿ, ಯೋಚಿಸುವ, ಪ್ರಶ್ನಿಸುವ ಚರ್ಚಿಸುವ ವಿಶಾಲ ಮನೋಭಾವ ನಿಮ್ಮದಾಗಲಿ, ಭಕ್ತಿಯಿಂದ ಪೂಜಿಸುವುದಕ್ಕಿಂತ ಅದೇ ಅಂಶಗಳನ್ನು, ಜೀವನದಲ್ಲಿ ಅಳವಡಿಸಿಕೊಳ್ಳುವುದು ಅದಕ್ಕೆ ನೀವು ಸಲ್ಲಿಸುವ ಗೌರವ, ಹರಿದು ಬರಲು ಬಿಡಿ ಒಳ್ಳೆಯ ವಿಷಯಗಳನ್ನು ಎಲ್ಲಾ ಕಡೆಯಿಂದಲೂ, ತಿರಸ್ಕರಿಸಿ ಕೆಟ್ಟ ಅಂಶಗಳನ್ನು ಅದು ಎಷ್ಟೇ ಪವಿತ್ರವಾಗಿದ್ದರೂ , ಸಮಾನತೆ, ಸ್ವಾತಂತ್ರ್ಯ, ಮಾನವೀಯತೆಗೆ ನಾವಿದ್ದೇವೆ ನಿಮ್ಮೊಂದಿಗೆ ಎಂದೆಂದಿಗೂ, ಈ ನೆಲ ನಮ್ಮೆಲ್ಲರದು.
ನಿಮ್ಮಲ್ಲೂ, ನಮ್ಮಲ್ಲೂ ಹಿಂಸೆ ದ್ವೇಷಗಳು ಮರೆಯಾಗಲಿ, ಪ್ರೀತಿ ಸ್ನೇಹ ವಿಶ್ವಾಸ ಭ್ರಾತೃತ್ವಗಳು ಬೆಸೆಯಲಿ, ನಿಮ್ಮನ್ನು ಅನುಮಾನಿಸುವವರಿಗೆ ನಾವು ಉತ್ತರಿಸುತ್ತೇವೆ, ಇರಲಿ ನಿಮ್ಮ ನಂಬಿಕೆ ನಿಯತ್ತು ಭಾರತೀಯತೆಯೆಡೆಗೆ, ಹಿಂದಿನಂತೆ, ಇಂದಿನಂತೆ ಮುಂದೆಯೂ, ಮುಂದೊಂದು ದಿನ ನಮ್ಮ ನಡುವಿನ ಭಿನ್ನತೆಯ ಗುರುತು ಸಿಗದಿರಲಿ, ಆ ದಿನಗಳ ನಿರೀಕ್ಷೆಯಲ್ಲಿ...
-ವಿವೇಕಾನಂದ. ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ