ಅಪ್ಪನ ಪತ್ರ ಮಗಳಿಗಾಗಿ…
ಪ್ರೀತಿಯ ಮಗಳೇ…
ಹೇಗಿದ್ದೀಯಾ? ನಿನ್ನೆ ಎಲ್ಲಾ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ‘ಮಗಳ ದಿನ’ದ ಬಗ್ಗೆಯೇ ವಿವಿಧ ವಿಷಯಗಳನ್ನು ಬರೆದಿದ್ದರು. ಅದನ್ನೆಲ್ಲಾ ನೋಡಿ, ಓದುವಾಗ ನಿನ್ನದೇ ನೆನಪಾಯಿತು ನನಗೆ. ಹೆಣ್ಣು ಮಕ್ಕಳು ಹೆತ್ತವರಿಗೆ ಭಾರ ಎಂದೇ ನಂಬಿದ್ದ ನನ್ನ ಭಾವನೆಗಳನ್ನು ತಪ್ಪು ಎಂದು ಪದೇ ಪದೇ ಸಾಬೀತು ಮಾಡಿದ ನಿನ್ನ ನೆನಪು ಮತ್ತೆ ಮತ್ತೆ ಆಯಿತು. ನನ್ನ ಮನಸ್ಸು ೨೫ ವರ್ಷಗಳ ಹಿಂದೆ ಓಡಿತು.
೨೫ ವರ್ಷಗಳ ಹಿಂದೆ ನಿನ್ನ ಅಮ್ಮ ಚೊಚ್ಚಲ ಹೆರಿಗೆಯ ನೋವಿನಿಂದ ಸರಕಾರಿ ಆಸ್ಪತ್ರೆಯಲ್ಲಿ ನರಳುತ್ತಿದ್ದಾಗ ಹೊರಗೆ ನಿಂತ ನನಗೆ ಗಂಡು ಮಗುವಿನದ್ದೇ ಕನವರಿಕೆ. ಗಂಡು ಮಗುವಾದರೆ ನಮ್ಮ ವಂಶಕ್ಕೊಂದು ವಾರೀಸುದಾರ ಸಿಗುತ್ತಾನೆ ಎಂಬ ನನ್ನ ಅಮ್ಮನ ಅಂದರೆ ನಿನ್ನ ಅಜ್ಜಿಯ ಮಾತುಗಳೇ ಕಿವಿ ತುಂಬಾ ರಿಂಗಣಿಸುತ್ತಿದ್ದುವು. ನರ್ಸ್ ಬಂದು ನಿಮಗೆ ಹೆಣ್ಣು ಮಗುವಾಗಿದೆ ಎಂದಾಗ ನನ್ನ ಮನದಲ್ಲಿ ಮೂಡಿದ್ದು ಗಾಬರಿಯೋ, ಜವಾಬ್ದಾರಿ ಹೊತ್ತುಕೊಳ್ಳಬೇಕಾದ ಹೆದರಿಕೆಯೋ, ಹೆಣ್ಣುಮಗುವನ್ನು ಸಾಕಿ ಬೆಳೆಸಿ, ಮದುವೆ ಮಾಡಿಕೊಡುವ ಅನಿವಾರ್ಯತೆಯೋ ಏನೋ ನನಗೇ ಗೊತ್ತಾಗಲಿಲ್ಲ. ಮಗುವನ್ನು ತಂದು ನನ್ನ ಕೈಯಲ್ಲಿ ಕೊಟ್ಟಾಗ ಮಾತ್ರ ನಾನು ನಾನಾಗಿರಲಿಲ್ಲ. ನಿನ್ನ ಆ ಗುಲಾಬಿ ಬಣ್ಣದ ಪುಟ್ಟ ಪುಟ್ಟ ಕೈಕಾಲುಗಳನ್ನು ನೋಡುವಾಗ ನನಗೆ ಮನಸ್ಸಲ್ಲಿ ಒಂಥರಾ ಸಂತಸ. ತಾಯಿ ಮಗು ಆರೋಗ್ಯವಾಗಿರುವುದನ್ನು ನೋಡಿದರೂ, ಕಿವಿಯಲ್ಲಿ ಗಂಡು ಮಗು ಬೇಕು ಎಂಬ ನನ್ನ ಅಮ್ಮನ ಮಾತುಗಳೇ ಗುಂಯ್ ಗುಡುತ್ತಿದ್ದವು.
ನಿನ್ನನ್ನು ನೋಡಿ ಮನಃಪೂರ್ವಕವಾಗಿ ಸಂತೋಷ ಪಡಲೂ ನನ್ನಿಂದ ಆಗ ಆಗಲಿಲ್ಲ. ಬಂದು ನೋಡಿದ ಸಂಬಂಧಿಕರೆಲ್ಲಾ ‘ನಿನ್ನ ಜವಾಬ್ದಾರಿ ಹೆಚ್ಚಾಯಿತಯ್ಯಾ, ಹೆಣ್ಣು ಮಗುವನ್ನು ಹೇಗೆ ಸಾಕಿದರೇನು? ಎಷ್ಟು ಕಲಿಸಿದರೇನು? ಮದುವೆ ಮಾಡಿ ಪರರ ಪಾಲಾಗುವ ಸೊತ್ತು ಅಲ್ಲವೇ?’ ಎಂದೇ ಹೆದರಿಸಿ ಹೊರಟು ಹೋದರು. ಅವರೆಲ್ಲರ ಮಾತಿನಿಂದ ನಾನೂ ಹೆದರಿ ಹೋದೆ. ನನಗಿದ್ದ ಕೆಲಸವೂ ಸಣ್ಣದ್ದೇ. ಅದರಿಂದ ಬರುತ್ತಿದ್ದ ಆದಾಯವೂ ಕಮ್ಮಿಯೇ. ನನಗೆ ಆಸ್ತಿಯೂ ಇರಲಿಲ್ಲ, ಬೇರೆ ಹಣಕಾಸಿನ ಬೆಂಬಲವೂ ಇರಲಿಲ್ಲ. ಆದರೆ ನನ್ನ ಮನದ ದುಗುಡವನ್ನು ಮರೆಮಾಚಿ ನಿನ್ನ ಅಮ್ಮನ ಮುಖ ನೋಡಿ ನಿನ್ನನ್ನು ಮನೆಗೆ ಕರೆತಂದೆ. ಬಾಗಿಲಲ್ಲೇ ನನ್ನ ಅಮ್ಮ ‘ಏನು ಹೆಣ್ಣು ಮಗುವೇ? ಗಂಡಾಗಿದ್ದರೆ ಚೆನ್ನಿತ್ತು' ಎಂದ ಮಾತು ನನಗೆ ಈಗಲೂ ಕಿವಿಯಲ್ಲಿ ಮಾರ್ದನಿಸುತ್ತಿದೆ.
ಹೆಣ್ಣು ಮಗು ಎಂಬ ಒಂದು ಕೊರಗು ಬಿಟ್ಟರೆ ನೀನು ಯಾವತ್ತೂ ನನಗೆ ಕಷ್ಟ ನೀಡಲಿಲ್ಲ. ನಮ್ಮ ಕೂಡು ಕುಟುಂಬದಲ್ಲಿ ಉಳಿದ ಎಲ್ಲಾ ಮಕ್ಕಳು ಇಂಗ್ಲೀಷ್ ಮೀಡಿಯಂ ಶಾಲೆಗೆ ಹೋಗುವಾಗ ನಿನ್ನನ್ನು ಮಾತ್ರ ನಾನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದೆ. ಹೆಣ್ಣು ಎಷ್ಟು ಕಲಿತರೇನು? ಮದುವೆ ಮಾಡಿ ಕಳಿಸುವುದೇ ಅಲ್ಲವೇ ಎನ್ನುವ ಭಾವನೆ ಆಗ ನನ್ನಲ್ಲಿತ್ತು ಎಂದು ಈಗ ಯೋಚಿಸುವಾಗ ನಾಚಿಕೆಯಾಗುತ್ತಿದೆ. ನೀನು ಕನ್ನಡ ಮೀಡಿಯಂ ಎಂಬ ಯಾವ ತಕರಾರೂ ಇಲ್ಲದೇ ಪ್ರತೀ ವರ್ಷ ಬೊಗಸೆ ತುಂಬಾ ಅಂಕಗಳನ್ನು ತೆಗೆದುಕೊಂಡು ಬರುತ್ತಿದ್ದಿ. ನಾನೂ ನೋಡುತ್ತಿದ್ದೆ. ಮನಸ್ಸಲ್ಲಿ ಖುಷಿ ಆದರೂ ನಿನ್ನ ಬಳಿ ವ್ಯಕ್ತ ಪಡಿಸಲೇ ಇಲ್ಲ. ನಿನ್ನ ನಂತರ ನನಗೆ ಮತ್ತೆ ಮಕ್ಕಳೂ ಆಗಲಿಲ್ಲ.
ನಿನ್ನ ಅಜ್ಜಿ ಈ ವಿಷಯವನ್ನು ದಿನಪ್ರಂತಿ ನೆನಪು ಮಾಡುತ್ತಲೇ ಒಂದು ದಿನ ಸತ್ತು ಹೋದರು. ನಿನಗೆ ತಮ್ಮ ಅಥವಾ ತಂಗಿ ಬರಲೇ ಇಲ್ಲ. ನಿನ್ನ ಅಮ್ಮನಿಗೂ ಅನಾರೋಗ್ಯವಾಗಿ ನೀನು ಹತ್ತನೇ ತರಗತಿಯಲ್ಲಿದ್ದಾಗ ಸತ್ತು ಹೋದಳು. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಯಾವ ತಕರಾರಿಲ್ಲದೇ ಜೊತೆಯಾದವಳು ನಿನ್ನ ಅಮ್ಮ. ನಾನು ಮಾಡಿದ ಯಾವ ಕೆಲಸಕ್ಕೂ ಅವಳು ಅಸಮ್ಮತಿ ಸೂಚಿಸಿದವಳಲ್ಲ. ನನ್ನ ಅಮ್ಮನ ಮಾತುಗಳ ಬಗ್ಗೆ ಒಂದು ದಿನವೂ ನನ್ನ ಹತ್ತಿರ ದೂರು ನೀಡಲಿಲ್ಲ. ನಿನ್ನನ್ನು ನಾನು ಮನಬಿಚ್ಚಿ ಪ್ರೀತಿಸುತ್ತಿಲ್ಲ ಎಂಬ ಒಂದು ನೋವು ಮಾತ್ರ ಅವಳ ಸಾವಿನ ತನಕ ಕಾಡಿರಬಹುದು ಎಂದು ನನಗೀಗ ಅನಿಸುತ್ತಿದೆ. ಇಂತಹ ಹೆಂಡತಿಯನ್ನು ಕಳೆದುಕೊಂಡ ನನಗೆ ನಿನ್ನನ್ನು ಸಾಕುವುದು ಹೇಗೆ? ಎಂದೇ ಚಿಂತೆಯಾಗಿತ್ತು. ಆದರೆ ನೀನು ಯಾವತ್ತೂ ನನಗೆ ಅವಳ ಕೊರತೆ ಇಲ್ಲದಂತೆ ನೋಡಿಕೊಂಡೆ, ನನ್ನನ್ನು ಅಮ್ಮನಂತೆ ನೋಡಿದೆ. ನಿನಗೆ ಅಂದು ಪ್ರಾಯ ಸಣ್ಣದಾದರೂ ಮನಸ್ಸು ದೊಡ್ದದಿತ್ತು ಎಂದು ನನಗೆ ಈಗ ಪ್ರತೀ ಬಾರಿ ಅನಿಸುತ್ತದೆ.
ನನಗೆ ಅನಾರೋಗ್ಯವಾದಾಗ ನೀನು ಮಾಡಿದ ಸೇವೆಯನ್ನು ನಾನು ಹೇಗೆ ಮರೆಯಲಿ? ಅಂದು ನನಗೆ ಏನೂ ಅನಿಸದೇ ಇದ್ದದ್ದು ಯಾಕೋ? ಗೊತ್ತಿಲ್ಲ. ನೀನು ಗಂಡು ಮಗುವಲ್ಲ ಎಂಬ ನನ್ನ ಸಂಕುಚಿತ ಮನಸ್ಸೇ ಕಾರಣವಾಗಿತ್ತಾ? ಗೊತ್ತಿಲ್ಲ. ಮನದ ಒಂದು ಮೂಲೆಯಲ್ಲಿ ನನ್ನ ಅಮ್ಮ ಹೇಳಿದ ಮಾತು ನನ್ನನ್ನು, ನಿನ್ನನ್ನು ಮನದುಂಬಿ ಪ್ರೀತಿಸುವುದಕ್ಕೆ ಹಿಂಜರಿಯುವಂತೆ ಮಾಡಿತಾ? ಹೌದು ಎಂದು ಇವತ್ತು ನನ್ನ ಮನಸ್ಸು ಹೇಳುತ್ತಿದೆ.
ನೀನು ನನ್ನ ಯಾವುದೇ ತಪ್ಪು ಅಥವಾ ದೋಷಗಳನ್ನು ಗಮನಿಸದೇ ಕೇವಲ ನಿನ್ನ ಕರ್ತವ್ಯ ಹಾಗೂ ಓದಿನ ಕಡೆಗೆ ಗಮನ ಹರಿಸಿದೆ. ಪ್ರತೀ ವರ್ಷ ಉತ್ತಮ ಅಂಕಗಳನ್ನು ಪಡೆದು ಡಿಗ್ರಿ ನಂತರ ಡಬಲ್ ಡಿಗ್ರಿ ಪಡೆದುಕೊಂಡೆ. ನನ್ನ ಮನದೊಳಗೆ ಒಂದು ರೀತಿಯ ಅವ್ಯಕ್ತ ಭಯ ಮಿಶ್ರಿತ ಸಂತೋಷ. ಇನ್ನು ನಿನಗೆ ಮದುವೆ ಮಾಡಿಸಲು ಎಲ್ಲಿಂದ ಹುಡುಗನನ್ನು ಹುಡುಕುವುದು? ಎಂಬ ಭಯವಿತ್ತು ನನಗೆ. ನೀನು ಐ ಎ ಎಸ್ ಪರೀಕ್ಷೆ ಬರೆದು ತೇರ್ಗಡೆಯಾಗಿ ಇಡೀ ದೇಶಕ್ಕೆ ಟಾಪರ್ ಆದೆ. ರಾಜ್ಯದ ಒಂದು ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ನೇಮಕವಾದಾಗಲೂ ನನ್ನ ಮನೋಭಾವ ನನಗೆ ಸಂಭ್ರಮಿಸಲು ಬಿಡಲಿಲ್ಲ. ನಮ್ಮ ಕುಟುಂಬದಲ್ಲೇ ನಿನ್ನಷ್ಟು ಎತ್ತರಕ್ಕೆ ಏರಿದವರು ಯಾರೂ ಇರಲಿಲ್ಲ. ನೀನು ನನ್ನನ್ನು ನೀನಿದ್ದ ಊರಿಗೆ ಬಂದು, ನಿನಗೆ ಸರಕಾರ ನೀಡಿದ ಮನೆಯಲ್ಲಿರಲು ಪದೇ ಪದೇ ಮನವಿ ಮಾಡಿದೆ. ನನ್ನ ಹಮ್ಮು ಆಗಲೂ ಬಿಡಲಿಲ್ಲ. ನಾನಿಲ್ಲೇ ಸುಖವಾಗಿದ್ದೇನೆ ಎಂದು ಹೇಳಿದೆ. ಸಂಬಂಧಿಕರ ನೋಟಗಳು ಈಗ ಬಹಳ ಬದಲಾಗಿವೆ ಮಗಳೇ, ಅವರು ನನ್ನನ್ನು ಈಗ ಹೆಮ್ಮೆಯಿಂದ ನೋಡುತ್ತಿದ್ದಾರೆ. ‘ನೀನು ಅವಳನ್ನು ಕಲಿಸಿ, ದೊಡ್ಡವಳಾಗಿ ಮಾಡಿದ್ದು ದೊಡ್ದ ಸಾಧನೆ’ ಎಂದು ಹೊಗಳುತ್ತಿದ್ದಾರೆ. ಆದರೆ ಸತ್ಯ ನನಗೆ ಗೊತ್ತಿದೆ. ನಿನ್ನನ್ನು ಈ ಭೂಮಿಗೆ ಮಾತ್ರ ನಾನು ತಂದೆ. ಆದರೆ ಜೀವನದ ಪ್ರತೀ ಹಂತದಲ್ಲೂ ಸಾಧನೆ ಮಾಡಿದ್ದು ನೀನೇ. ಎಲ್ಲರೂ ಇಂಗ್ಲೀಷ್ ಮೀಡಿಯಂನಲ್ಲಿ ಓದುತ್ತಿರುವಾಗ ನೀನು ನಾನು ಸೇರಿಸಿದ ಕನ್ನಡ ಮಾಧ್ಯಮ ಶಾಲೆಯಲ್ಲೇ ಓದಿದೆ. ಅಲ್ಲೇ ಬೆಳೆದೆ. ನೀನು ಬೆಳೆದಂತೆ ನನ್ನನ್ನೂ ಮಗುವಿನಂತೆ ಸಾಕಿದೆ. ನನ್ನ ತಿರಸ್ಕಾರದ ನಡುವೆಯೂ ನನಗೆ ಪುರಸ್ಕಾರ ನೀಡಿದೆ ನೀನು.
ನೀನು ಮೆಚ್ಚಿದ ನಿನ್ನ ಸಹಪಾಠಿ ಜೊತೆ ಮದುವೆಯಾಗುತ್ತೇನೆ ಎಂದು ಹೇಳಿದಾಗ ಇಲ್ಲವೆನ್ನಲು ನನಗೆ ಬಾಯಿಯಾದರೂ ಹೇಗೆ ಬಂದೀತು? ಬಾಲ್ಯದಿಂದ ನಿನಗೆ ಕನಿಷ್ಟ ತಂದೆಯ ಪ್ರೀತಿಯನ್ನೂ ನೀಡದ ನಾನು ಹೇಗೆ ನಿನ್ನ ಪ್ರೀತಿಗೆ ಇಲ್ಲವೆನ್ನಲಿ? ನೀನು ಮೆಚ್ಚಿಕೊಂಡ ಯುವಕನೂ ಐ ಎ ಎಸ್ ಅಧಿಕಾರಿಯೇ. ನಿನ್ನ ಹುಡುಗನ ಕಡೆಯವರು ನಮ್ಮ ಮನೆಗೆ ಬಂದಾಗ ನಾನು ಗಾಬರಿ ಪಟ್ಟುಕೊಂಡಿದ್ದೆ. ಅವರದ್ದು ಶ್ರೀಮಂತ, ವಿದ್ಯಾವಂತ ಕುಟುಂಬ ಎಂದು ಅವರ ಹಾವ ಭಾವದಿಂದಲೇ ತಿಳಿಯಿತು. ಆದರೆ ನೀನು ಮೆಚ್ಚಿದ ಹುಡುಗ ನನ್ನ ಮೇಲೆ ತೋರಿಸಿದ ಗೌರವಕ್ಕೆ ನಾನು ಮೂಕನಾದೆ ಮಗಳೇ, ನನ್ನಲ್ಲಿ ಈ ಮದುವೆಗೆ ನಿರಾಕರಣೆ ಮಾಡಲು ಯಾವುದೇ ಮಾತುಗಳು ಇರಲಿಲ್ಲ. ನಾನು ಮೂಕನಾಗಿದ್ದೆ. ಪ್ರೀತಿಯಿಂದ ಹಾಗೂ ಮನದಾಳದಿಂದ ನಿಮಗಿಬ್ಬರಿಗೂ ಆಶೀರ್ವಾದ ಮಾಡಿದೆ.
ನಾನಿಂದು ನಿನಗೆ ಬರೆಯುವ ಈ ಪತ್ರದ ಮುಖಾಂತರ ಎಲ್ಲರಿಗೂ ಮನಬಿಚ್ಚಿ ನನ್ನ ಮನದಾಳದ ಮಾತುಗಳನ್ನು ಹೇಳುತ್ತಿದ್ದೇನೆ. ‘ಹೆಣ್ಣು ಎಂದು ಯಾರೂ ಯಾವತ್ತೂ ಮಗುವನ್ನು ದೂರವಾಗಿಸಬೇಡಿ. ಅವಳನ್ನು ತುಂಬಾ ಪ್ರೀತಿಸಿ, ವಿದ್ಯಾಭ್ಯಾಸ ನೀಡಿ. ಅವಳ ಭಾವನೆಯನ್ನು ಗೌರವಿಸಿ. ಖಂಡಿತಾ ನಿಮ್ಮ ಮಗಳು ನಿಮ್ಮ ಹೆಸರನ್ನು ಉಳಿಸುತ್ತಾಳೆ. ಈ ಮಾತು ಯಾವತ್ತೂ ನೀವು ಮರೆಯಬೇಡಿ, ನಾನೂ ಮರೆಯಲ್ಲ.’
ನಾಳೆ ನಿನ್ನ ಮದುವೆ. ಏಕಾಂಗಿಯಾಗುತ್ತೇನೆಂದು ಯಾವ ಬೇಸರವೂ ನನಗಿಲ್ಲ. ಏಕೆಂದರೆ ಗೊತ್ತೇ ಮಗಳೇ, ನನ್ನ ಭಾವೀ ಅಳಿಯ ಮದುವೆಗೆ ಅನುಮತಿ ಕೇಳಲು ಬಂದಾಗಲೇ ನನ್ನಿಂದ ಒಂದು ಮಾತು ಪಡೆದುಕೊಂಡಿದ್ದಾರೆ. ಮದುವೆಯ ನಂತರ ನಮ್ಮ ಜೊತೆಗೇ ಬಂದು ಇರಬೇಕು ಅಂತ. ಅವನ ಮಾತನ್ನು ನಾನು ಹೇಗೆ ನಿರಾಕರಿಸಲಿ? ನಿನ್ನ ಹಾಗೂ ಅವನ ದಾಂಪತ್ಯ ಸುಖಮಯವಾಗಿರಲಿ ಎಂಬ ಆಶಯದೊಂದಿಗೆ ಈ ಕಾಗದವನ್ನು ಮುಗಿಸುತ್ತಿರುವೆ.
ನಿನ್ನ ಪ್ರೀತಿಯ
ತಂದೆ.
***
೨೦೨೧ರ ಸೆಪ್ಟೆಂಬರ್ ೨೬ ವಿಶ್ವ ಮಗಳಂದಿರ ದಿನ. ಆ ದಿನದಂದು ಹೆಣ್ಣು ಮಕ್ಕಳನ್ನು ಹೊಂದಿರುವ ಎಲ್ಲಾ ಅಪ್ಪಂದಿರ ಮನದ ತಳಮಳವನ್ನು ಬಿಂಬಿಸುವ ಒಂದು ಭಾವನಾತ್ಮಕ ಕಾಲ್ಪನಿಕ ಪತ್ರ. ಎಲ್ಲಾ ಹೆಣ್ಣು ಮಕ್ಕಳಿಗೆ ‘ಮಗಳಂದಿರ ದಿನ' ದ ಹಾರ್ದಿಕ ಶುಭಾಶಯಗಳು.
ಚಿತ್ರ ಕೃಪೆ: ಅಂತರ್ಜಾಲ ತಾಣ