ಅಪ್ಪಾಜಿ.

ಅಪ್ಪಾಜಿ.

ಬರಹ

ಜಗತ್ತಿನಲ್ಲಿ ಯಾವ ವಿಷಯದಮೇಲೆ ಲೇಖಕರು,ಕವಿಗಳು,ಚಿತ್ರಕಾರರು ಬರೆದಿರುತ್ತಾರೆ ಎಂದು ಕೇಳಿದರೆ,ಅಲ್ಲಿ ಹೆಚ್ಚಾಗಿ ಬರುವುದು ಎರಡೇ ಉತ್ತರ ಒಂದು ತಾಯಿ ಹಾಗು ಪ್ರೀತಿ..ತಾಯಿಯಷ್ಟೇ ಮತ್ತೊಂದು ಜೀವ ನಿಸ್ವಾರ್ಥದಿಂದ ತನ್ನ ಮಕ್ಕಳಿಗೋಸ್ಕರ,ಮನೆಯವರಿಗೋಸ್ಕರ ಹಗಲಿರುಳು ಶ್ರಮ ಪಡುತ್ತಿದೆ ಎಂದರೆ ಅದು ನಮ್ಮೆಲ್ಲರ ತಂದೆಯವರು,ಅಪ್ಪಾಜಿ.


ಲಾಲಯೇತ್ ಪಂಚವರ್ಷಾಣಿ ದಶವರ್ಶಾಣಿ ತಾಡಯೇತ್ I


ಪ್ರಾಪ್ತೇತು ಷೋಡಶೇ ವರ್ಷೇ ಪುತ್ರಂ ಮಿತ್ರ ವದಾಚರೆತ್ II


ಮೊದಲೈದು  ವರ್ಷಗಳನ್ನು ಲಾಲಿಸಬೇಕು ,ಮುಂದಿನ ಹತ್ತು ವರ್ಷಗಳನ್ನು ತಪ್ಪಿದ್ದಲ್ಲಿ ತಿದ್ದಿ ,ಅಗತ್ಯವಿದ್ದರೆ ಹೊಡೆದು ಹೇಳಬೇಕು,ಹದಿನಾರನೇ ವರ್ಷಕ್ಕೆ ಬರುತ್ತಲೇ ಮಗನನ್ನು ಮಿತ್ರನಂತೆ ಕಾಣಬೇಕು.ಎಂದು ಒಂದು ಸುಭಾಷಿತವು ಹೇಳುತ್ತದೆ ..


ಈ ಮಾತನ್ನು ಅಕ್ಷರಸಹ ತಂದೆಯು ಪಾಲಿಸುತ್ತಾನೆ ಎಂದರೆ ಉತ್ಪ್ರೇಕ್ಷೆಯೇನಲ್ಲ ..

ನಮಗೆ ತಿಳುವಳಿಕೆ ಬರುವವರೆಗೆ ಮುದ್ದಿಸಿ,ಮಕ್ಕಳು ಕೆಟ್ಟ ದಾರಿ ಹಿಡಿಯಬಾರದೆಂದು ಬುಧ್ಧಿ ಹೇಳುತ್ತಾ ಮಂಡತನ ಮಾಡಿದರೆ ತನ್ನ ಹೃದಯ ಕಲ್ಲಾಗಿಸಿ,ತನ್ನದೇ ಅಂಶವನ್ನು ಹೊಡೆದು ತಿದ್ದಲು ಪ್ರಯತ್ನಿಸುವ ತಂದೆ,ಬೆಳೆಯುತ್ತಿರುವ ನಮಗೆ ವೈರಿಯ ಹಾಗೆ ಕಾಣುತ್ತಾನೆ..ತಾನು ವೈರಿ ಆಗುತ್ತಿರುವೆ ಎಂದು ಅವನಿಗೆ ಅರಿವಿದ್ದರೂ ತನ್ನ ಕರ್ತವ್ಯ ವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾನೆ,ಮಕ್ಕಳ ವ್ಯಕ್ತಿತ್ವ ರೂಪಿಸಲು ಕೆಲವೊಮ್ಮೆ ತನ್ನ ವ್ಯಕ್ತಿತ್ವದ ವ್ಯತಿರೇಕನೂ ಹೋಗುತ್ತಾನೆ..

ತನ್ನ ಮಕ್ಕಳ ವಿದ್ಯಾಭ್ಯಾಸ,ಉತ್ತಮ ಬೆಳವಣಿಗೆಗೆ,ಕುಟುಂಬದ ಸರ್ವತೋಮುಖ ಶ್ರೇಯಸ್ಸಿಗೆ ಯಾವುದೇ ರೀತಿಯ ಅಡಚಣೆ ಆಗದಿರಲೆಂದು ಎಲ್ಲಾ ರೀತಿಯ ಕಷ್ಟ ಪಟ್ಟು ತನ್ನೆಲ್ಲ ಸುಖಗಳನ್ನು ಬದಿಗಿಟ್ಟು ಶ್ರಮಿಸುವವನು ತಂದೆ.


ಪರ ಊರಿಗೆ ಹೋಗುವ ಸಂದರ್ಭದಲ್ಲಿ ಬಸ್ಸಿನ ಕಿಟಕಿಯಲಿ ಬಂದು ...ಇನ್ನೂ ನೂರು ರೂಪಾಯಿ ಇಟ್ಟುಕೊ ಬೇಕಾಗುತ್ತೆ  ”ಎಂದು ಕೊಡುವುದು ನಮಗೆ ಆ ಸಮಯದಲ್ಲಿ ತುಂಬಾ ಅಸಹ್ಯ,ಮುಜುಗರ ತಂದರೂ ಪರಊರಿನಲ್ಲಿ ಆಗಬಹುದಾದ ಕಷ್ಟಗಳು ಅವನಿಗೆ  ಮಾತ್ರ ಗೊತ್ತು .ಆ ಕಷ್ಟಗಳ ಅನುಭವ ಮಕ್ಕಳಿಗೆ ಆಗದಿರಲಿ ಎಂಬ ಕಳಕಳಿ.


ಅಂತಹ ಆ ಪುಣ್ಯಾತ್ಮನನ್ನೇ ಎಷ್ಟೋ ಬಾರಿ,ಅವನಿಗೆ  ವ್ಯವಹಾರ ಜ್ಞ್ಯಾನ ಇಲ್ಲ,ಬುಧ್ಧಿ ಇಲ್ಲಾ,ಜನರ ಜೊತೆ ಹೇಗಿರಬೇಕೆಂಬುದೇ ಗೊತ್ತಿಲ್ಲ ಎಂದೆಲ್ಲ ಇತರರ ಮುಂದೆ,ಕೆಲಬಾರಿ ಅವನ ಮುಂದೆಯೇ ಮೊದಲಿಸುತ್ತಿರುತ್ತೇವೆ.ತನ್ನ ವ್ಯವಹಾರ ಜ್ಞ್ಯಾನ,ಬುಧ್ಧಿ ಉಪಯೋಗಿಯಿಸಿಯೇ ಅಲ್ಲವೇ ನಮ್ಮನ್ನು ಈ ಎತ್ತರಕ್ಕೆ ತಂದಿದ್ದು ಎಂಬ ಸತ್ಯವನ್ನೇ ಮರೆತಿರುತ್ತೇವೆ.


ಈಗಿನ youth ತಾವು ಧರಿಸುವ ಶರ್ಟ್ ಗಳ ಮೇಲೆ my dad is an ATM ಅಂತಾನೊ, ಅಥವಾ ‘DAD’banker by nature ಎಂಬ ಉಡಾಫೆ  punch line ಇರುವುದನ್ನೋ ಸರ್ವೇಸಾಮಾನ್ಯವಾಗಿ ಕಾಣುತ್ತೇವೆ.ಆದರೆ ಆ ರೀತಿಯ banker ಆಗಲು ಆತ ಪಟ್ಟ ಕಷ್ಟ,ಮಾಡಿದ ತ್ಯಾಗಗಳ ಕನಿಶ್ಠ ಪರಿಜ್ನ್ಯಾನ ಇಲ್ಲದೇ ವರ್ತಿಸುವುದು ನಿಜಕ್ಕೂ ಆಘಾತಕಾರಿ..


ಅಪ್ಪಾಜಿ ಎಂದರೆ ಥಳಿಸುವ,ಗದರಿಸುವ ವ್ಯಕ್ತಿತ್ವ,ಅವನೊಬ್ಬ ನಿಷ್ಕರುಣಿ ಎಂಬ ಒಂದು ಸಾಮಾನ್ಯ ಮನೋಭಾವ ಮಕ್ಕಳಿಗೆ.ಆದರೆ ಅ ತಂದೆಯದು ವ್ಯಾಘ್ರಪ್ರೀತಿ,ಒಂದು ತ್ಯಾಗಮಯಿ ವ್ಯಕ್ತಿತ್ವ,ಹೃದಯದಲ್ಲಿ ದು:ಖ,ನೋವುಗಳಿದ್ದರೂ ತೋರ್ಪಡಿಸದೆ ಮುಗುಳ್ನಗುತ್ತ ನಮ್ಮಲ್ಲಿ ಧೈರ್ಯ,ಸ್ಪೂರ್ತಿ ಕೊಡುವವನು ಎಂದು ನಮ್ಮ ಮನ:ಪಟಲದಲ್ಲಿ ಬಂದರೆ ಸಾಕು.

ತಂದೆಯ ತ್ಯಾಗಮಯಿ ವ್ಯಕ್ತಿತ್ವಕ್ಕೆ ಬೆಲೆ ಕಟ್ಟಲಾಗದು.ತಂದೆ ಎಂದಿಗೂ ಮಹಾತ್ಮನೇ..


ಎಲ್ಲ ಪಿತೃಗಳಿಗೆ ಹಾಗು ಅವರ ನಿಸ್ವಾರ್ಥ ಜೀವನಕ್ಕೆ ಒಂದು ನಮನ ಹಾಗೂ ಈ ಚಿಕ್ಕ ಲೇಖನ ಅರ್ಪಣೆ.

 


*ಈ ಲೇಖನದ ಶೇಕಡಾ ೮೦ ಭಾಗ ಬರೆದ ಶ್ರೇಯ ನನ್ನ ತಮ್ಮ ಚಿIಹರೀಶನಿಗೆ ಸಲ್ಲುತ್ತದೆ.