ಅಪ್ಪಾ..‘ಟೊಮೆಟೋ’ ಅಂದರೇನಪ್ಪಾ?

ಅಪ್ಪಾ..‘ಟೊಮೆಟೋ’ ಅಂದರೇನಪ್ಪಾ?

ಬರಹ

ಅಪ್ಪಾ..ಟೊಮೆಟೋ ಅಂದರೇನಪ್ಪಾ?

ಛೇ..ಇದೆಂಥಾ ಮಾಮೂಲಿ ಪ್ರಶ್ನೆ?.. ಟೊಮೆಟೋ ಅಂದರೆ ಏನು ಅಂತ ಗೊತ್ತಿಲ್ವಾ! ಇದೇನಪ್ಪಾ? ಅಂತ ನೀವು ಆಶ್ಚರ್ಯ ಪಡಬೇಡಿ. ಈ ಪ್ರಶ್ನೆ ೨೦೦೮ನೇ ಇಸ್ವಿಯದ್ದಲ್ಲ. ೨೦೨೦ರದ್ದು! ಅಂದು ನಮ್ಮ ಮೊಮ್ಮಕ್ಕಳು ಕೇಳುವ ಪ್ರಶ್ನೆ ಇದು.
ಚಿತ್ರ ತೋರಿಸಿ..ಇಲ್ಲವೇ ಅಂಕಲಿಪಿ ತೋರಿಸಿ ‘ಮಗಳೇ ಟೊಮೆಟೋ ಕೆಂಪಗಿರುತ್ತಮ್ಮ!’ ಅನ್ನಬೇಕಾದೀತು. ಆ ಚೂಟಿ ಥಟ್ಟನೇ ಅಂದಾಳು. ‘ಹಣ್ಣಾದ ಮೇಲಲ್ವೆ? ಅದಕ್ಕೂ ಮೊದಲು?’ ಇನ್ನು ಟೊಮೆಟೋ ಹಸಿರಾಗಿದ್ದಾಗ ಯಾವ ಅಂಕಲಿಪಿಯವರು ಅಚ್ಚು ಹಾಕಿಸಿದ್ದರು? ಎಂದು ನಾವೆಲ್ಲ ತಲೆ ಕೆಡಿಸಿಕೊಳ್ಳಬೇಕಾಗಬಹುದು.

ಈಗಂತೂ ಭೂಮಿಯ ಮೇಲೆ ಬಳಸಲು ಯೋಗ್ಯವಾದ ಯಾವ ತುಂಡು ಭೂಮಿಯನ್ನು ನಾವು ಬಿಟ್ಟಿಲ್ಲ. ತಲೆಗೊಂದು ಕಾರು, ಮನೆಗೊಂದು ವ್ಯಾನು. ಮಕ್ಕಳಿಗೆಲ್ಲ ಬೈಕ್. ಇದೆಲ್ಲ ಸರಿ. ಆದರೆ ಓಡಿಸೋದು ಎಲ್ಲಿ? ನೋಡಿ.. ನನಗೆ ಬಿದ್ದ ಕನಸು (ರಾತ್ರಿ ಕನಸು!) ಈ ಸಮಸ್ಯೆಯನ್ನು ಹೇಗೆ ತರ್ಕಿಸಿತು.

೨೦೨೦ನೇ ಇಸ್ವಿಯ ವೇಳೆಗೆ ೬೦೦ ಮಹಡಿಯ ಒಂದು ಬೃಹತ್ ದೊಡ್ಡಂತಸ್ತಿನ ಕಟ್ಟಡ; ಧಾರವಾಡದ ಎಲ್ಲರೂ ಅಲ್ಲಿಯೇ ವಾಸ್ತವ್ಯ. ಅದು ಅನಿವಾರ್ಯ. ಪಕ್ಕದ ಕಟ್ಟಡ ೮೦೦ ಅಂತಸ್ತಿನದು. ಅದು ನಮ್ಮ ಪಕ್ಕದ ವಾಣಿಜ್ಜಿಕ ರಾಜಧಾನಿ ಹೂಬಳ್ಳಿಯ ಹುಬ್ಬಳ್ಳಿಯವರದ್ದು!
ಕನಸಿನ ಸ್ವಾರಸ್ಯವೆಂದರೆ.. ನಮ್ಮ ಮನೆ ಇರುವುದು ಅ ಬಹುಅಂತಸ್ತಿನ ೫೧ನೇ ಮಹಡಿಯಲ್ಲಿ. ನನ್ನ ಮಗಳು ಹುಟ್ಟಿದ್ದು ಅದೇ ಕಟ್ಟಡದ ೨೩ನೇ ಮಹಡಿಯ ಫ್ಯಾಮಿಲಿ ಡಾಕ್ಟರ್ ಸಂತಾನಲಕ್ಷ್ಮಿ ಅವರ ನರ್ಸಿಂಗ್ ಹೋಂ ನಲ್ಲಿ. ಅವಳು ಶಾಲೆಗೆ ಹೋಗಿದ್ದು ೧೦೩ನೇ ಮಹಡಿಗೆ. ಶಾಲೆಗೆ ಕ್ರೀಡಾಂಗಣ ಎಂದರೆ ವಿಶಾಲವಾದ ಟೆರೆಸ್! ನಮ್ಮ ಮರಿಗಳ ಚೆಂಡು ಟೆರೆಸ್ ಬಿಟ್ಟು ಮತ್ತು ನಮ್ಮ ಉಡಾಳ ಮಕ್ಕಳು ಟೆರೆಸ್ ಮೇಲಿಂದ ಕೇಳಗೆ ಬೀಳದಿರಲಿ ಎಂದು ದೊಡ್ಡದಾದ ಸೊಳ್ಳೆ ಪರದೆಯಂತಹ ನೆಟ್! ಕಾಲೇಜು ಇರುವುದು ೧೪೫ನೇ ಮಹಡಿಯಲ್ಲಿ. ಕಲಿಯೋದು ಮುಗಿಸಿ ನೌಕರಿಗಿಟ್ಟಿಸಿದ್ದು ೨೧೦ನೆ ಮಹಡಿಯಲ್ಲಿ. ಅಲ್ಲಿ ಹತ್ತಾರು ಎಂ.ಏನ್.ಸಿ. ಕಂಪೆನಿಗಳು ತಮ್ಮ ‘ಔಟ್ ಲೆಟ್’ ತೆರೆದಿಟ್ಟಿವೆ.

ನನ್ನ ಅಳಿಯ ದೇವರು ೩೧೧ನೇ ಅಂತಸ್ತಿನಲ್ಲಿ ಮನೆ ಮಾಡಿರುವ ಸಾಫ್ಟ್ ವೇರ್ ಇಂಜಿನೀಯರ್. ಅವರು ಇಂಜಿನೀಯರಿಂಗ್ ಮುಗಿಸಿದ್ದು ೩೪೫ನೇ ಮಹಡಿಯಲ್ಲಿರುವ ರೂರಲ್ ಕಾಲೇಜಿನಲ್ಲಿ. ಇನ್ನು ತಿನ್ನಲು ತರಕಾರಿ, ಹಾಲು, ಹಣ್ಣು, ಬ್ರೇಡ್, ಇವುಗಳ ಜಂಜಾಟವಿಲ್ಲ. ಪಾಪ ಬಿತ್ತಿ ಬೆಳೆಯಲು ರೈತರಾರು ಉಳಿದಿಲ್ಲ. ಎಲ್ಲವೂ ಪೆಸ್ಟ್ ನಲ್ಲಿ. ಪೇಸ್ಟ್ ತರಹ ಪ್ಯಾಕ್ಡ್! ‘ಎ’ ವಿಟ್ಯಾಮಿನ್ ಪೇಸ್ಟ್, ‘ಬಿ’ ವಿಟ್ಯಾಮಿನ್ ಪೇಸ್ಟ್, ‘ಸಿ’ ವಿಟ್ಯಾಮಿನ್ ಪೇಸ್ಟ್ ಹೀಗೆ ‘ಝೆಡ್’ ವರಗೆ ನಾನಾ ನಮೂನೆಯ, ನಾನಾ ತರಹದ ನೂರೆಂಟು ತಿನ್ನಲು ಯೋಗ್ಯವಾದ ಪೇಸ್ಟ್ಗಗಳು ಮೊದಲನೇಯ ೨೦ ಮಹಡಿಯಲ್ಲಿ ಸಲೀಸಾಗಿ ದೊರೆಯುತ್ತವೆ. ಕುಡಿಯುವ, ಜಳಕದ ನೀರಿನ ಗುಳಿಗೆಗಳು ಸಹ ಬಂದಿವೆ. ತಾಟಿನಲ್ಲಿ ಪೇಸ್ಟ್ ಒರೆಸಿಕೊಂಡು ಉಪ್ಪಿನಕಾಯಿ ರುಚಿ ನೋಡಿದಂತೆ ಚಪ್ಪರಿಸುವುದು!

೨೫೦ನೇ ಮಹಡಿ ರಾಜ್ಯದ ಹೆದ್ದಾರಿ. ೨೭೫ನೇ ಮಹಡಿ ರಾಷ್ಟ್ರೀಯ ಹೆದ್ದಾರಿ. ಎಲ್ಲ ವಾಹನಗಳು ಈಗ ತಲೆಯ ಮೇಲೆ. ಆಗ ವಿಮಾನವೊಂದೇ ಆಗಿತ್ತು. ಇನ್ನು ಉದ್ಯಾನವನ, ಸಾರ್ವಜನಿಕ ಗ್ರಂಥಾಲಯ ಇವೆಲ್ಲ ೪೫೦ನೇ ಮಹಡಿಯಲ್ಲಿ. ಅದು ರಿ‘ಟಾಯರ್ಡ್’ ಮಂದಿಯ ಫ್ಲೋರ್. ಅವರ ಪಕ್ಕಕ್ಕೆ ೪೫೧ನೇ ಮಹಡಿ ಪೊಲೀಸ್ ಸ್ಟೇಶನ್. ೪೫೨ ಬಹು ದೊಡ್ಡ ಆಸ್ಪತ್ರೆ..ಜಾಗತಿಕ ಮಟ್ಟದ್ದು. ೪೬೦ನೇ ಮಹಡಿ ವಿಮಾನ ನಿಲ್ದಾಣ. ದೇಶಿ ಹಾಗು ವಿದೇಶಿ ಎರಡೂ ಇಲ್ಲೆ!

ಇನ್ನು ಉಸಿರಾಡಲು ಗಾಳಿ ಎಲ್ಲಿಂದ ಬರಬೇಕು? ಎಲ್ಲರಿಗೂ ಆಮ್ಲಜನಕದ ಸಿಲಿಂಡರಗಳು ರೇಷನ್ ಕಾರ್ಡ್ ಅಧಾರದ ಮೇಲೆ. ಈಗ ಗ್ಯಾಸ್ ಸಿಲಿಂಡರ್ ತಂದು ಕೊಡುವುದಿಲ್ಲವೇ? ಹಾಗೆ. ಆದರೆ ‘ಕ್ಯೂ’ ಹಚ್ಚಬೇಕು. ಆ ಸಿಲಿಂಡರ್ ನವನು ತಡಮಾಡಿದರೆ ನಡೆದೀತು. ಈತ ತಡಮಾಡಿದರೆ- ಕೈಲಾಸ! ೧೫೦೦ ರುಪಾಯಿಗೆ ಒಂದು ಸಿಲಿಂಡರ್. ತಲಾ ಒಂದೊಂದು ಶಕ್ತಿವರ್ಧಕ ಜನರೇಟರ್ ಉಚಿತ. ಏಕೆಂದರೆ ಕುಡಿಯಲು ನೀರಿಲ್ಲ. ಆದರೆ ಗ್ಲೂಕೋಸ್ ಸಲೈನ್ ಲಭ್ಯ! ಶಾಲೆಗೆ ಹೋಗುವ ಮಕ್ಕಳ ಹೆಗಲಿಗೆ ಸ್ಕೂಲ್ ಬ್ಯಾಗ್ ಒಂದೇ ಅಲ್ಲ. ಮಿ.ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲ ಪಾದರ್ಪಣೆ ಮಾಡಿದಾಗಲೂ ಇಷ್ಟೊಂದು ತಯ್ಯಾರಿ ಮಾಡಿಕೊಂಡಿದ್ದನೋ ಇಲ್ಲವೋ? ಅಂಥಾ ಸರಂಜಾಮುಗಳೊಂದಿಗೆ ಶಾಲೆಗೆ. ಹೊತ್ತೊಯ್ಯಲು ರಿಕ್ಷಾ ಅಸಮರ್ಥ. ಹಾಗಾಗಿ ‘ರೊಬೊಟ್’ ಕ್ಯಾರಿಯರ್ ಬಂದಿವೆ!

ಇನ್ನು ಗ್ಯಾಸ್ ಸಿಲಿಂಡರ್ ಒಂದಕ್ಕೆ ೧೦೦೦ ರುಪಾಯಿ ಕೇವಲ. ೧ ಲೀಟರ್ ಪೆಟ್ರೋಲ್ ೧೫೦೦/-. ಕಾರ್ ಫ್ರೀ! ೨೦೦೨ನೆ ಇಸ್ವಿಯ ಕೊನೆಗೆ ನಾನು ಓಡಿಸಿದ್ದು. ಈಗ ಸದ್ಯ ಅದು ನಿಂತಲ್ಲೆ ಕುಂತಿದೆ!ಹೂಗಲಿ ಬಿಡಿ. ೪೭೯ನೇ ಮಹಡಿಯ ಆಚೆಗೆ ಎಲ್.ಆಯ್.ಸಿ., ಬ್ಯಾಂಕಿಂಗ್, ಹಣಕಾಸೇತರ, ಪಿಕ್ನಿಕ್, ವೃದ್ಧಾಶ್ರಮ ಇತ್ಯಾದಿ. ಪರವಾಗಿಲ್ಲ ಸ್ಥಿತಿಯಲ್ಲಿ.

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಾನು ಕಳೆದ ೫೦ ವರ್ಷದಿಂದ ನನ್ನ ಮಗಳು ೨೮ ವರ್ಷದಿಂದ ಅಪಾರ್ಟಮೆಂಟ್ ಬಿಟ್ಟು ಹೊರಗಡೆಯೇ ಹೋಗಿಲ್ಲ. ಎಲ್ಲ ಅಲ್ಲಿಯೇ! ಸದ್ಯ ನಮ್ಮ ಅಪಾರ್ಟಮೆಂಟ್ ಒಂದು ನಡುಗಡ್ಡೆಯಾಗಿ ಪರಿಣಮಿಸಿದೆ. ಸುತ್ತಲೂ ದೊಡ್ಡ ಮರಭೂಮಿ. ಎಲ್ಲ ಪ್ಲಾಸ್ಟಿಕ್, ಇ-ವೇಸ್ಟ್ ಗಬ್ಬುನಾತ. ಒಮ್ಮೆ ಯಾರಾದರೂ ನಮ್ಮ ೨೦ನೇಯ ಮಹಡಿಯ ನರ್ಸಿಂಗ್ ಹೋಂನಲ್ಲಿ ಜನ್ಮವೆತ್ತಿದರೆ ತೀರಿತು! ಕೊನೆಗೆ ಅವರನ್ನು ಸಾಗಿಸುವ ೬೦೦ನೇ ಮಹಡಿ- ಸ್ಮಶಾನದ ವರೆಗೂ ಸುಮಾರು ೬೫ ವರ್ಷ ಅಂದಾಜು ಅದೇ ಮಹಡಿಯಲ್ಲಿ. ೬೦೦ನೇ ಮಹಡಿ ಸ್ಮಶಾನವೆಂದೆ..ಇಲ್ಲಿ ಅಂತ್ಯಸಂಸ್ಕಾರದ ಸಂಪ್ರದಾಯಗಳೆಲ್ಲ ಉಳಿದಿಲ್ಲ. ಕರೆಂಟ್ ಇದ್ದರೆ ಶವ ದಹನ. ಇಲ್ಲದಿದ್ದರೆ ಟ್ಯಾಂಕ್ ನಲ್ಲಿಯೇ ಬೃಂದಾವನ. ಇತಿ ಸಮಾರಾಧನೆ.

೫೯೯ನೇ ಮಹಡಿ ಪ್ರಸಿಧ್ಧ ದೇವಾಲಯಗಳಿರುವ ತಾಣ. ಎಲ್ಲರ ‘ದೇವಾಲಯಗಳು’ ಆಜು-ಬಾಜು ಇವೆ. ಇನ್ನೂವರೆಗೂ ದೇವರು ಹಾಗು ಅವರ ಭಕ್ತರು ಕಚ್ಚಾಡಿಲ್ಲ! ಧರ್ಮದ ಹೆಸರಿನಲ್ಲಿ. ಅಷ್ಟರಮಟ್ಟಿಗೆ ಸರ್ವಧರ್ಮ ಸಮಭಾವ, ಸಹಿಷ್ಣುತೆ ಬಂದಿದೆ. ಸಂತೋಷ!

ದಿನದಲ್ಲಿ ೧೮ ತಾಸು ವಿದ್ಯುತ್ ನಿಲುಗಡೆ. ಸೌರ ವಿದ್ಯುತ್ ಗತಿ. ಆದರೆ ಆಗಾಗ ಅಕಾಲಿಕವಾಗಿ ಹೊಡೆಯುವ ಆಮ್ಲೀಯ ಮಳೆ, ಹಸಿರುಮನೆಗಳ ಪರಿಣಾಮವಾಗಿ ಸೂರ್ಯ ಸಹ ಕ್ವಚಿತ್ತಾಗಿ ನೌಕರಿಗೆ ಹಾಜರಾಗುತ್ತಿದ್ದಾನೆ. ಮನೆಯಲ್ಲಿ ಕಂಪ್ಯುಟರ್ ಎಲ್ಲವನ್ನು ಮಾಡುತ್ತದೆ. ಬಟ್ಟೆ ಒಗೆಯುತ್ತದೆ. ಡ್ರಾಯ್ ವಾಷ್ ಮಾಡುತ್ತದೆ. ಮನೆ ಗುಡಿಸುತ್ತದೆ. ಶಾಲೆಯಿಂದ ಬಂದ ಮಕ್ಕಳಿಗೆ ಉಣಿಸುತ್ತೆ..‘ರೊಬೊಟ್ ಮಾಮ್ ಮೇಡ್ ರೆಸಿಪಿ’ ಎವೆರೆಡಿ! ಪಾತ್ರೆ-ಪಗಡ ನೋಡಲು ಸಿಗಲಾರವು. ಎಲ್ಲ ಪ್ಲಾಸ್ಟಿಕ್ ಮಯ. ಎಲ್ಲವನ್ನೂ ಎತ್ತಿ-ಬಿಸಾಕಿ-ಕಸಗುಡಿಸಿ ಮನೆಯನ್ನು ಒಪ್ಪಓರಣಗೊಳಿಸುತ್ತದೆ ಈ ಯಂತ್ರ.

ಹೀಗೆಯೇ ಇನ್ನೂ ಎನೇನೋ ಕನಸು ಬೀಳುವುದರಲ್ಲಿತ್ತು. ಆಗಲೇ ಬೆಳಗಿನ ೬ ಗಂಟೆ. ಏಳೋ..ಕಾಲೇಜಿಗೆ ಹೋಗೊಲ್ವೇನೋ? ಅಂದಳು. ತಂಗಿ ಗಾಡಿ ಮೇಲೆ ಕಾಲೇಜಿಗೆ ಬಿಡುವಂತೆ ಹೊದ್ದು ಮಲಗಿದ್ದ ಬ್ಲ್ಯಾಂಕೇಟ್ ಕಿತ್ತಾಕಿದಳು. ಪತ್ನಿ ಮಹಾಲಕ್ಷ್ಮಿ ‘ನೀರು ಕಾಯ್ದಿದೆ’ ಎಂದು ಕೊಂಚ ಖಾರವಾಗಿಯೇ ಹೇಳಿದಳು. ಥಟ್ಟನೇ ಗರಬಡಿದವನಂತೆ ಎದ್ದು ಕುಳಿತೆ. ಹೊರಗಡೆ ಮುಂಗಾರು ಮಳೆ ಹುಯ್ಯುತ್ತಲಿತ್ತು. ಬಿಸಿ ಕಾಫಿಯ ಸುವಾಸನೆ ಮೂಗಿಗೆ ಹೊಡಿಯುತ್ತಲಿತ್ತು.

ಶಿವಾ! ಇದು ಕೇವಲ ಕನಸೇ? ಬದುಕಿದೆ ಎಂದಂದೆ. ಇದು ೨೦೦೮ಲ್ವೇ? ಈ ಕನಸು ನನಸಾಗದಿರಲಿ. ಇದಕ್ಕೆ ನಾನು-ನೀವು ಒಟ್ಟಾರೆ ನಾವೆಲ್ಲ ಏನೇನು ಮಾಡಬೇಕು? ಚಿಂತೆ/ ಚಿಂತನೆಗಳು ಶುರುವಾಗಲಿ. ಇದು ಸಕಾಲ.