ಅಪ್ಪಿಗೌಡನ ಶಂಖಪುಷ್ಪ

ಅಪ್ಪಿಗೌಡನ ಶಂಖಪುಷ್ಪ

ಪುಸ್ತಕದ ಲೇಖಕ/ಕವಿಯ ಹೆಸರು
ಅಂಜನಾ ಹೆಗಡೆ
ಪ್ರಕಾಶಕರು
ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ರಸ್ತೆ, ನ್ಯೂ ಹುಬ್ಬಳ್ಳಿ - 580020
ಪುಸ್ತಕದ ಬೆಲೆ
ರೂ. 150.00, ಮುದ್ರಣ : 2023

ಹದಿನೈದು ಸಣ್ಣ ಕತೆಗಳ ಪುಟ್ಟ ಪುಸ್ತಕ. ಎಲ್ಲ ಕತೆಗಳನ್ನು ಓದಿ ಮುಗಿಸಿದ ಬಳಿಕ ಪ್ರತಿ ಕಥೆಯ ಪಾತ್ರಗಳೂ ಕಾಡುತ್ತವೆ. ಕಾರಣ ಕತೆಗಾರ್ತಿ ಕಟ್ಟಿಕೊಟ್ಟ ಬಗೆಯೇ ಹಾಗಿದೆ. ಬಹುಶಃ ಉತ್ತರ ಕನ್ನಡ ಜಿಲ್ಲೆಯ ಓದುಗರಿಗೆ ಹೆಚ್ಚು ಆಪ್ತವಾಗುವ ಸಂಕಲನ ಇದು. ಇಲ್ಲಿಯ ಭಾಷೆ, ಜನ, ಕಥೆಯ ಜಗತ್ತು ಮತ್ತು ಅಲ್ಲಿಂದಲೇ ಹೆಕ್ಕಿ ತಂದಂತಿರುವ ಪಾತ್ರಗಳು ನಮ್ಮ ಊರಲ್ಲೇ ಇದ್ದವರು ಅನ್ನಿಸುವಂತಿದೆ. ಹಾಗೆ ನೋಡಿದರೆ ಪ್ರತಿ ಮನೆಯಲ್ಲೂ ಕತೆಗೊಂದು ಪಾತ್ರ ದೊರೆಯುತ್ತದೆ. ಎಷ್ಟೋ ಮನೆಯ ಕತೆ ಒಂದಕ್ಕೊಂದು ತೀರಾ ಭಿನ್ನವೇನಲ್ಲ. ಹಾಗಾಗಿ ಈ ಕಥೆಗಳು ಇಲ್ಲಿ ಬಳಸಿದ ಭಾಷೆಯನ್ನು ಹೊರತು ಪಡಿಸಿ ಭಾವವಾಗಿ ಎಲ್ಲರ ಮನಸ್ಸನ್ನು ತಟ್ಟುತ್ತವೆ.

ಕಥೆಗಳು ಸರಳ ಇದ್ದಷ್ಟು ಇಡಿಯಾಗಿ ಓದುಗರನ್ನು ತಲುಪುತ್ತದೆ ಮತ್ತು ಕಥೆಯ ಒಳಗೆ ಎಳೆದುಕೊಳ್ಳುತ್ತವೆ ಎಂಬುದು ನನ್ನ ನಂಬಿಕೆ. ಇದೇ ಕಾರಣಕ್ಕೆ ಅಂಜನಾ ಹೆಗಡೆ ಅವರ ಕಥೆಗಳು ಓದುತ್ತಾ ಓದುತ್ತಾ ದೃಶ್ಯವಾಗಿ ಕಥೆಯೊಳಗಿನ ಮನೆಯನ್ನೋ ಪಾತ್ರವನ್ನೋ ಕಣ್ಣೆದುರು ಬಂದು ಬಿಡುತ್ತವೆ. ಅಪ್ಪಿಗೌಡನಾಗಲೀ ಸರಸಿಯಾಗಲೀ ಸುಬ್ಬಣ್ಣನಾಗಲೀ ಸೀಟಿ ಸೀನಣ್ಣನಾಗಲೀ ಎಲ್ಲಿಯವರೋ ಅನ್ನಿಸದೇ ನಮಗೂ ಪರಿಚಯ ಇದ್ದವರೇ ಅನ್ನಿಸಿಬಿಡುತ್ತದೆ. ಈ ಶ್ರೇಯಸ್ಸು ಕತೆಗಾರರಿಗೆ.

ಸಂಕಲನ ಓದಿ ಮುಗಿದ ಮೇಲೆ ನಮ್ಮ ಊರನ್ನು ಕೆಲವು ವರ್ಷ ಹಿಂದಕ್ಕೆ ಹೋಗಿ ಸುತ್ತಿ ಬಂದಂತೆ ಅನ್ನಿಸಿತು. ಕಥೆಗಳನ್ನು ಅಲ್ಲಲ್ಲಿಗೆ ನಿಲ್ಲಿಸಿದ್ದಾರೆಯೇ ಹೊರತು ಕಥೆಗಳು ಮುಗಿದಿಲ್ಲ. ಅವೇ ಪಾತ್ರಗಳು ಇನ್ನೊಂದು ಕಥೆಯಾಗುವುದಕ್ಕೆ ಹೊರಟ ಹಾಗಿವೆ. ಮುದ ನೀಡುವ ಕಥೆಗಳಿಗೆ ಚಂದದ ಮುಖಪಟ, ಅಂದದ ಮುದ್ರಣ. ಇತ್ತೀಚಿನ ನನ್ನ ಓದಿನಲ್ಲಿ 116 ಪುಟಗಳ ಈ ಸಂಕಲನ ಹೆಚ್ಚು ಇಷ್ಟವಾಯಿತು.

-ವಿಷ್ಣು ಭಟ್ ಹೊಸ್ಮನೆ