ಅಪ್ಪೆಗ್ ಬಾಲೆದ ಓಲೆ
*ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಸಂಪಾದಿತ ಸಂಕಲನ "ಅಪ್ಪೆಗ್ ಬಾಲೆದ ಓಲೆ"*
# 1993ರಲ್ಲಿ ವಿಟ್ಲದಲ್ಲಿ ಅಸ್ತಿತ್ವಕ್ಕೆ ಬಂದ " ತುಳುಕೂಟೊ ಇಟ್ಟೆಲ್"ಎಂಬ ಸಂಸ್ಥೆಯು 1997ರಲ್ಲಿ "ಬಂಟ್ವಾಳ ತಾಲೂಕು ತುಳು ಸಾಹಿತ್ಯ ಪರಿಷತ್" ಎಂಬ ಹೊಸನಾಮಧೇಯ ಪಡೆದುಕೊಂಡು ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ಸಕ್ರಿಯವಾಗಿ ಕೆಲಸ ಮಾಡುತ್ತಿತ್ತು. ಈ ಸಂಸ್ಥೆಯು ತನ್ನ ಹತ್ತನೇ ವರ್ಷದ ಸದವಸರದಲ್ಲಿ ನಡೆಸಿದ ಸ್ಪರ್ಧೆಯಾಗಿತ್ತು "ಅಪ್ಪೆಗ್ ಬಾಲೆದ ಓಲೆ".
ಸ್ಪರ್ಧೆಯಲ್ಲಿ ಬಹುಮಾನ ಪಡೆದ, ಮೆಚ್ಚುಗೆ ಗಳಿಸಿದ ಮತ್ತು ಕೆಲವು ಆಯ್ದ ಓಲೆಗಳ ಸಹಿತ ಒಟ್ಟು 102 ಓಲೆಗಳನ್ನು ಸೇರಿಸಿ ಸಂಕಲನವಾಗಿ ಸಂಪಾದಿಸಿದವರು ಪರಿಷತ್ ನ ಅಧ್ಯಕ್ಷರಾಗಿದ್ದ ವಿಜಯಕುಮಾರ್ ಭಂಡಾರಿಯವರು.2002ರಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾದ "ಅಪ್ಪೆಗ್ ಬಾಲೆದ ಓಲೆ" 96 ಪುಟಗಳ ಕೃತಿಯಾಗಿದ್ದು, ಬೆಲೆ 50 ರೂಪಾಯಿ.
ಪ್ರೊ. ಅಮೃತ ಸೋಮೇಶ್ವರ ಅವರ "ಮೆಚ್ಚೋಲೆ" ಮತ್ತು ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ರವರ ಬೆನ್ನುಡಿ ಇರುವ ಕೃತಿಯಲ್ಲಿ , ಗಣೇಶ ಪ್ರಸಾದ ಪಾಂಡೇಲು ಅವರು ಮಂಗಳೂರು ಆಕಾಶವಾಣಿಯ ತುಳು ಕಾರ್ಯಕ್ರಮದಲ್ಲಿ ಮಾಡಿದ ಭಾಷಣ "ಓಲೆಲೆ ಮೇಲ್ತೂಕೆ" ಮತ್ತು ಸಂಪಾದಕ ವಿಜಯಕುಮಾರ್ ಭಂಡಾರಿಯವರ "ಸಂಪೊಲ್ತಿನಾರೆ ಓಲೆ"ಯೂ ಇದೆ.
ಒಂದೊಂದು ಓಲೆಯಲ್ಲಿಯೂ ಒಂದೊಂದು ವಿಚಾರ, ವೈವಿಧ್ಯಮಯ ವಿಷಯ. ತುಳುನಾಡಿನ ಹಿಂದಿನ, ಇಂದಿನ ಜನಜೀವನದ ಪರಿಚಯ, ಸ್ಥಿತ್ಯಂತರ, ಪಲ್ಲಟಗಳ ವಾಸ್ತವದ ಕತೆ ಅನಾವರಣಗೊಂಡಿದೆ. ಹೆತ್ತವರ, ಮಕ್ಕಳ, ಮನೆ ಮಂದಿಯ, ಊರವರ ನಡುವಿನ ಕರುಳ ಬಳ್ಳಿ ಸಂಬಂಧಗಳ ಬಗ್ಗೆ ಅಪ್ಯಾಯಮಾನವಾದ ಮತ್ತು ಕರುಣಾಜನಕವಾದ ನೋವು ನಲಿವಿನ ಕಥೆಯಿದೆ, ವ್ಯಥೆಯಿದೆ. ಕೆಲವು ಓಲೆಗಳನ್ನು ಓದುವಾಗಲಂತೂ ಕಣ್ಣಮುಂದೆ ಹಲವು ಮನೆಗಳ ಚಿತ್ರ, ಚಿತ್ರಣಗಳೇ ಸರಣಿ ದೃಶ್ಯ ಕಾವ್ಯಗಳಾಗಿ ಮೂಡದೇ ಇರುವುದಿಲ್ಲ.
ಅಬುದಾಬಿಯಿಂದ ರೂಪಾ ಸುಭಾಷ್ ಆಳ್ವ ಬರೆದ ಓಲೆ: ಹಿಂದೆ ಊರಿನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಾ, ಒಂದೇ ಬಟ್ಟಲಲ್ಲಿ ಉಣ್ಣುತ್ತಿದ್ದ ರಾಮಣ್ಣ - ಖಾದ್ರಿ ಬ್ಯಾರಿ, ಶಾಮಣ್ಣ - ಆಂತೋಣಿಯರು ಇದೀಗ ಪ್ರೀತಿ ಮರೆತು ಪರಸ್ಪರ ಧ್ವೇಷದಲ್ಲಿ ರಕ್ತದೋಕುಳಿ ಹರಿಸುವಷ್ಟು ಬದಲಾದುದನ್ನು ತಿಳಿದು ದುಃಖಿಸುತ್ತದೆ. ಊರಿಗೆ ಒಳ್ಳೆಯದು ಮಾಡುವುದಾಗಿ ಹೇಳಿ ರಾಜಕೀಯ ಸೇರಿದ ದೊಡ್ಡಣ್ಣ, ಅನ್ಯಾಯದ ಹಾದಿ ಹಿಡಿದು ಹಣ ಸಂಪಾದನೆಯ ಮಾರ್ಗ ತುಳಿದುದರ ಪರಿಣಾಮ ಹಿಂದೆ ಎಲ್ಲರ ಹೊಗಳಿಕೆಗೆ ಪಾತ್ರವಾಗಿದ್ದ ಮನೆ ಇಂದು ತೆಗಳಿಕೆಗೆ ಹೇಗೆ ಬಲಿಯಾಗಿದೆ ಎಂಬುದನ್ನು ಚಿತ್ರಿಸುತ್ತದೆ. ಊರಿನಲ್ಲಿದ್ದ ಕಾಡನ್ನು ಕಡಿದು ಹಣದಾಸೆಗಾಗಿ ಕಟ್ಟಡ ಕಟ್ಟಿದ ಜನರ ನಡುವೆಯೂ, ಸಣ್ಣಣ್ಣನೊಬ್ಬನಾದರೂ ಸತ್ಯ ಧರ್ಮದಲ್ಲಿ ನಡೆಯುತ್ತಿದ್ದಾನಲ್ಲಾ ಎಂಬ ಆಶಾವಾದದೊಂದಿಗೆ, ಮತ್ತೆ ಮುಂದಿನ ವರ್ಷ ತಾನು ಊರಿಗೆ ಬರುವಾಗಲಾದರೂ ಊರು ಹಿಂದಿನಂತಾಗಲೆಂದು ಕಲ್ಲುರ್ಟಿಯಲ್ಲಿ ಪ್ರಾರ್ಥಿಸುತ್ತದೆ. ಒಂದು ಮನೆ ಮತ್ತು ಒಂದೂರನ್ನು ಮುಂದಿಟ್ಟುಕೊಂಡು ಈ ಓಲೆ ಬರೆಯಲಾಗಿದೆಯಾದರೂ, ಇದು ಹಿಂದಿನ ಮತ್ತು ಇಂದಿನ ನಮ್ಮ ದೇಶದ ನಿಜ ಚಿತ್ರಣವನ್ನು ಅನಾವರಣಗೊಳಿಸುವಲ್ಲಿ ರೂಪಾ ಆಳ್ವರವರ ಓಲೆ ಸಮರ್ಥವಾಗಿದೆ.
ಮನೆ ಮಗಳು ಸೊಸೆಯಾಗಿ ಬೇರೊಂದು ಮನೆಯಲ್ಲಿದ್ದು, ಅಲ್ಲಿಂದ ತನ್ನಮ್ಮ ಮನೆಗೆ ಬಂದ ಸೊಸೆಯೊಂದಿಗೆ ಕೋಪ ಮಾಡದೆ, ಜಗಳವಾಡದೆ ಒಳ್ಳೆಯ ರೀತಿಯಲ್ಲಿದ್ದುಕೊಂಡು ಆದರ್ಶ ಅತ್ತೆಯಾಗಬೇಕೆಂದು ಬಯಸಿದ ಮನದ ಭಾವನೆಗಳು, ಆಪ್ತ ಸಲಹೆ ಉಜಿರೆಯ ಜಯಮಾಲಾ ಎನ್. ಅವರು ಬರೆದ ಓಲೆಯಲ್ಲಿ ಅಪ್ಯಾಯಮಾನವಾಗಿ ವ್ಯಕ್ತವಾಗಿದೆ.
ಹಳ್ಳಿಯ ಕೃಷಿ ಕುಟುಂಬವೊಂದರ ಸಹಜವಾದ ಕಷ್ಟ ಸುಖಗಳನ್ನು ಕಾರ್ಕಳ ಕುಕ್ಕುಂದೂರಿನ ಕೆ. ಶಾಬುಲಾಲ್ ರವರು ಮುಂಬೈನಿಂದ ಬರೆದ ಓಲೆ ಚೆನ್ನಾಗಿ ಕಟ್ಟಿಕೊಡುತ್ತದೆ. ಸವಣೂರಿನ ಕುಶಾಲ್ ದೇರ್ಲರವರ ಓಲೆಯಲ್ಲಿ, ಕಡು ಬಡತನದ ಕುಟುಂಬದ ತಾಯಿಯೊಬ್ಬಳು ಮಕ್ಕಳನ್ನು ಸಾಕಲು ಪಟ್ಟ ಬವಣೆ ಅನುರಣನಗೊಂಡಿದೆ, ಓದುತ್ತಿದ್ದಂತೆ ಕಣ್ಣು ತೇವಗೊಳ್ಳುತ್ತದೆ.
ಮನೆಯವರ ಮಾತು ಕೇಳದೆ, ಹೆತ್ತವರನ್ನು, ಒಡ ಹುಟ್ಟಿದವರನ್ನು ಬಿಟ್ಟು ಪ್ರೀತಿಸಿದ ಹುಡುಗನ ಜೊತೆ ಮದುವೆಯಾಗಿ, ಎರಡು ಮಕ್ಕಳ ತಾಯಿಯಾಗಿ ಗಂಡನಿಂದ ಪರಿತ್ಯಕ್ತಳಾಗಿ ಕೊನೆಗೆ ಸ್ವ ಉದ್ಯೋಗದೊಂದಿಗೆ ಸ್ವಾವಲಂಬನೆಯ ಬದುಕು ಸಾಗಿಸುತ್ತಾ ಮನೆಯವರ ಮಾತು ಕೇಳದಿದ್ದುದಕ್ಕೆ ಪಶ್ಚಾತ್ತಾಪ ಪಡುತ್ತಲೇ ತಾಯಿಯ ಪ್ರೀತಿಯನ್ನು ಬಯಸುವ ಸ್ವಾಭಿಮಾನಿ ಹೆಣ್ಣೊಬ್ಬಳ ಬದುಕನ್ನು ಸುಳ್ಯದ ಕು. ಪುಷ್ಪಾ ಎ. ಆರ್. ಅಡ್ಪಂಗಾಯ ಇವರ ಓಲೆ ಚಿತ್ರಿಸುತ್ತದೆ.
ದೂರದೂರಿನ ಜಾತ್ರೆಯಲ್ಲಿ ತಾಯಿಯಿಂದ ಪರಿತ್ಯಜಿಸಲ್ಪಟ್ಟ ಹೆಣ್ಣು ಮಗು; ದೊಡ್ಡವಳಾಗಿ ಆಶ್ರಮವೊಂದರಲ್ಲಿದ್ದು ತಾಯಿಗೆ ಬರೆದ ಓಲೆ, ಪರ್ಕಳದ ಸುಮಿತ್ರಾ ಎಸ್. ನಾಯಕ್ ರವರದ್ದಾದರೆ, ಮಮ್ಮಿ - ಡ್ಯಾಡಿಗಿಂತ ಅಪ್ಪೆ - ಅಮ್ಮೆ ಎಂಬೆರಡು ಶಬ್ದಗಳ ದೈವಿಕ ಶಕ್ತಿಯ ಬಗ್ಗೆ ವಿಟ್ಲದ ಕೆಲಿಂಜ ಸೀತಾರಾಮ ಆಳ್ವರ ಓಲೆ ವಿವರಿಸುತ್ತದೆ.
ಸೊಸೆ ಹೆಣ್ಣು ಮಗುವನ್ನು ಹೆತ್ತದ್ದಕ್ಕೆ ಮರುಗುವ ತಾಯಿಗೆ ಆಪ್ತ ಸಲಹೆಯ ಓಲೆಯನ್ನು ಪಿ. ಚೆನ್ನಪ್ಪ ಅಳಿಕೆ ಬರೆದಿದ್ದರೆ, ದೂರದಲ್ಲಿರುವ ಮಗನ ಮೇಲೆ ಮತ್ತು ಮಗಳು - ಅಳಿಯನ ಮೇಲೆ ತೋರಿಸುವ ಪ್ರೀತಿಯನ್ನು ಮನೆಯಲ್ಲಿರುವ ಮಗನ ಮೇಲೆ ತೋರಿಸದೆ ಪಕ್ಷಪಾತವೆಸಗಿದ ಕಾರಣಕ್ಕೆ ಮನೆ ತೊರೆದು ಹೋದ ಮಗ ತಾಯಿಯ ಬಗ್ಗೆ ನೊಂದು ಬರೆದ ಓಲೆ ಅಡ್ಯನಡ್ಕದ ರಮೇಶ್ ಉಳಯ ಅವರದ್ದು. ಗಾಂಧೀಜಿಯವರು ಕಂಡ ಕನಸಿನ ಸಾಮಾಜಿಕ ಸಾಮರಸ್ಯದ ಹಂಬಲದಲ್ಲಿ ಬರೆದ ಓಲೆ ಅರುಣಾ ಎಚ್. ಹೆಬ್ರಿ ಅವರದು.
ಅಮ್ಟಾರುವಿನ ಬಾಲಕೃಷ್ಣ ಎಸ್. ಪೂಜಾರಿ, ಕೊಡ್ಲಮೊಗರುವಿನ ಭಾಸ್ಕರ ಕೆ. ಕುಂಟಪದವು, ತುಮಕೂರಿನ ಶರೋಲ್ ಸಂಹಿತ, ಮಡಿಕೇರಿಯ ಪಿ. ಎಂ. ಸುಂದರ ಮದೆನಾಡು, ಬಿದ್ಕಲ್ ಕಟ್ಟೆಯ ಕೆ. ಎಂ. ಹೊಸೇರಿ, ಕೋಟೆಕಾರು ಸೋಮೇಶ್ವರದ ಸ್ಟೆಲ್ಲಾ ಮಾರೀಷ್ ಹಿ. ಪ್ರಾ. ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ ಅನುಷಾ ಪೂಂಜಾ, ವಿಷ್ಣುಗುಪ್ತ ಪುಣಚ, ಡಿ. ಜಯರಾಮ ಪಡ್ರೆ, ಸದಾಶಿವ ಶೆಟ್ಟಿ ಎಸ್. ಪೆರುವಾಯಿ, ರತ್ನಾ ಟಿ. ಕೆ. ಭಟ್ ಅಡ್ಯನಡ್ಕ, ಡಿ. ಎನ್. ಕೆ. ಉಕ್ಕುಡ, ಶಶಿಕಾಂತ್ ಬಾಳೆಕೋಡಿ ಕನ್ಯಾನ, ಆನಂದ ರೈ ಅಡ್ಕಸ್ಥಳ, ಡಾ. ಕೆ. ಎಂ. ಶೆಟ್ಟಿ ಮಚ್ಚಿನ, ಗಾಯತ್ರಿ ವಿ. ಭಂಡಾರಿ ಹೆಬ್ಬಾರಬೈಲು, ಸತೀಶ್ ಕುಲಾಲ್ ಪಾಣಾಜೆ, ಹಾ. ಮ. ಸತೀಶ್ ದಾಸಕೋಡಿ, ವಿಜಯಲಕ್ಷ್ಮಿ (ಸುಮನ) ಮಜೂರು, ಚಂದ್ರಾವತಿ ರೈ ಗೋಳಿತ್ತೊಟ್ಟು ನೈಲ್ಯಾಡಿ, ಮಹೇಶ್ ಕೆ. ಸವಣೂರು, ಕೆ. ಶಶಿಕಲಾ ಸಾಲ್ಯಾನ್ ಪುಣಚ, ಬಿ. ಕೆ. ಶ್ರೀಮತಿ ರಾವ್ ಮಂಗಳೂರು, ಸುಂದರ ಕೆ. ಪಾಣಾಜೆ, ವಿಶ್ವನಾಥ ಸಿ. ಎಚ್. ಬಾಯಾರು, ಬ್ರಿಜೇಶ್ ಅಂಚನ ಪುದು, ಸುಲೋಚನಾ ಪಚ್ಚಿನಡ್ಕ, ಟಿ. ಪದ್ಮನಾಭ ರಾವ್ ಬೈರಂಪಳ್ಳಿ, ಗಣೇಶ್ ಚಿಟ್ಪಾಡಿ, ಸಂತೋಷ್ ಕೋಟೆಕಾರ್ ಕಾಟಿಪಳ್ಳ, ಗೀತಾ ಬೇರ್ಪಡ್ಕ ಸುಳ್ಯ, ಸಮೀಮ್ ಮಲ್ಲೂರು, ವಿಶ್ವನಾಥ ನಾಯ್ಕ ಎನ್. ಬಲ್ಮಠ, ಎಂ. ಎಸ್. ಶ್ವೇತಾ ಭಂಡಾರಿ ಮಣಿಪಾಲ, ಧರ್ಮಶ್ರೀ ಮೊಂಟೆಪದವು, ರಾಮ ಭಂಡಾರಿ ಚಾರ್ಮಾಡಿ, ಯಾದವ ಕೆ. ಕೋಟ್ಯಾನ್ ಮಂಗಳೂರು, ದಾಮೋದರ ಧರ್ಮಸ್ಥಳ, ನಿಟ್ಟೆ ಗಣೇಶ್ ಶೆಣೈ, ಮುಹಮ್ಮದ್ ಅಲಿಯ್ಸ್ ಮುಕ್ಕ, ವಿನೋದ ಅಶೋಕ್ ಭಂಡಾರಿ ಬಂಟ್ವಾಳ, ವಿಮಲಾ ಟಿ. ಎನ್. ಶೆಟ್ಟಿ ಮೈಸೂರು, ಲಾರೆನ್ಸ್ ಪಾಯಸ್ ಪುತ್ತೂರು, ಕಾವೇರಿ ಉಡುಪಿ, ಸುನೀತಾ ನಿವಾಸ ಕುಂಜಿಬೆಟ್ಟು, ಎಚ್ಕೆ ನಯನಾಡು ಸಿದ್ದಕಟ್ಟೆ, ರೇಖಾ ಉಪಾಧ್ಯಾಯ ಕುಕ್ಕಿಕಟ್ಟೆ, ಪುತ್ತಿಗೆ ಪದ್ಮನಾಭ ರೈ ಕುಂಬಳೆ, ಭವಾನಿ ಶಂಕರ ರೈ ತೊಕ್ಕೊಟ್ಟು, ವೀಣಾಲತಾ ಮಂಗಳೂರು, ಪೂರ್ಣಿಮಾ ಎ. ಬಂಗೇರ ಲಾಡಿ, ಜಯಶ್ರೀ ಶ್ರೀಯಾನ್ ಬೊಳುವಾರು, ರಮೇಶ್ ಅಮ್ಮುಂಜೆ, ಮಮತಾ ಭಂಡಾರಿ ಅರ್ಕುಳ, ಶ್ರೀಧರ ತೊಟ್ಟೆತ್ತೋಡಿ ಮೀಯಪದವು, ವಿಜೇತಾ ಶೆಟ್ಟಿ ನೆಲ್ಲೂರು, ರೂಪಾ ಪ್ರಭಾಕರ್, ಚಿಟ್ಪಾಡಿ, ಗಣೇಶ್ ಕುಮಾರ್ ಕಲ್ಲಬೆಟ್ಟು, ಅಕ್ಷತಾ ಶೆಟ್ಟಿ ಬೊಳ್ಯಾರ್, ಸುಮನ ಮಲ್ಲೂರು, ಶಶಿಕಲಾ ರಾಜಶೇಖರ್ ಪಾಂಡೇಶ್ವರ, ಭಾರತಿ ಎಂ. ಮಣಿಮಜಲು ಕಳಂಜ, ಸುರೇಶ್ ಕೆ.ಕೆಂಜಾರು, ಜಿ. ಕೆ. ಶ್ರೀನಿವಾಸ ಸಾಲಿಯಾನ್ ಕುಂಜತ್ತಬೈಲು, ಯು. ರಾಮಚಂದ್ರ ಚಿಟ್ಪಾಡಿ, ಭಾಸ್ಕರ ಬಂಗೇರ ಕೋಟೆಕಾರ್, ಬಿ. ಸಿ. ಮೋಹನ್ ಎಚ್. ಪಣಂಬೂರು, ಉಷಾ ಎಂ. ಸಿಡಿಂಬಿರಿ ಕೈರಂಗಳ, ಶ್ರೀಮತಿ ವಿದ್ಯಾ ಪಡುಪಣಂಬೂರು, ಅಮಿತಾ ಶೆಟ್ಟಿ ನಿಡ್ಡೋಡಿ, ಶ್ರೀಮತಿ ಪಿ. ಸರ್ವೆ, ಶ್ರುತಿ ಜಿ. ಭಂಡಾರಿ ಕುಂಟಲ್ಪಾಡಿ, ಆದಪ್ಪ ಬಂಗೇರ ಕೆ. ಪಾಣಾಜೆ, ಶ್ರೀಮತಿ ಪ್ರೇಮಲತಾ ಅಂಬಲಪಾಡಿ, ಶ್ರೀನಿವಾಸ ಆಳ್ವ ಕೆ. ಕಳತ್ತೂರು, ಸುಲತ ಜಿ. ನಾಯ್ಕ ಮೊಗೇರು, ಜಿ. ಕಾರ್ತಿಕ್ ಕಿಣಿ ಸಾಲ್ಮರ, ಎಂ. ರಾಮಚಂದ್ರ ನಂಜನಗೂಡು, ಸಿ. ಶೇಷಪ್ಪ ಕಜೆಮಾರ್ ತಿಂಗಳಾಡಿ, ಗಣೇಶ್ ಪ್ರಸಾದ್ ಅಂಬಲಪಾಡಿ, ದಯಾಮಣಿ ಎಸ್. ಉಳಪಾಡಿ, ನಾಗರಾಜ ಕೆಮ್ಮಣ್ಣು, ಗೋಪಾಲ ಟಿ. ವಾಮಂಜೂರು, ಜನಾರ್ದನ ಗಂಗಾವತಿ, ಪೂರ್ಣಿಮಾ ಶೆಟ್ಟಿ ತೆಳ್ಳಾರ್, ವಿಚಿತ್ರ ವೆಲೆನ್ಸಿಯಾ, ಸಂಜೀವ ಪಿ. ಮೂಡಂಬೈಲು, ಎಚ್. ಜಗನ್ನಾಥ ಪಡುಪಣಂಬೂರು, ಕೆ. ಎನ್. ಸಾಲಿಯಾನ್ ಬೆಂಗಳೂರು, ಸುಶೀಲಾ ದಾಸರಹಳ್ಳಿ, ವಿ. ಬಿ. ಬಾರೆಟ್ಟೊ ವಾಮಂಜೂರು, ಇಮಿಲಿಯನ್ ಸಾಲ್ದಾನ ಉಡುಪಿ ಹಾಗೂ ಕೆ. ವಿ. ಶೆಟ್ಟಿ ಆರೂರು ಇವರು ತುಳು ಭಾಷೆಯ ಮೇಲೆ ಅಭಿಮಾನವಿರಿಸಿ ಬರೆದ ಓಲೆಗಳು "ಅಪ್ಪೆಗ್ ಬಾಲೆದ ಓಲೆ" ಯಲ್ಲಿದೆ.
ಇಲ್ಲಿರುವ ಒಂದೊಂದು ಓಲೆಯೂ ಒಂದೊಂದು ಕಥೆ ಹೇಳುತ್ತದೆ. ವೈವಿಧ್ಯಮಯ ಜನಜೀವನವನ್ನು ಪರಿಚಯಿಸುತ್ತದೆ. ಓದುವ ಕುತೂಹಲ ಮೂಡಿಸುತ್ತದೆ. ಓದಿಸಿಕೊಂಡು ಹೋಗುತ್ತದೆ. ಈ ಹೊತ್ತಗೆ, ತುಳು ಭಾಷಾ ಸಾಹಿತ್ಯಕ್ಕೆ ಉತ್ತಮ ಕೊಡುಗೆಯಾಗಿದೆ. ಬಂಟ್ಬಾಳ ತಾಲೂಕು ತುಳು ಸಾಹಿತ್ಯ ಪರಿಷತ್ ಮತ್ತು ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಇವರಿಗೆ ಅಭಿನಂದನೆಗಳು ಸಲ್ಲಬೇಕಾಗಿದೆ.
~ ಶ್ರೀರಾಮ ದಿವಾಣ, ಉಡುಪಿ