ಅಪ್ಪೆಮಿಡಿ, ಜಾಮೂನ್ ಮಾವಿನ ಗುಂಗಿನಲ್ಲಿ
"ಬಾಯಿಗೆ ಹಾಕ್ಕೊಂಡು, ರಸ ಹೀರಿ, ಉಳಿದ ಗೊರಟು ಉಗುಳಿ ಬಿಡಿ” ಎನ್ನುತ್ತಾ ಮೂರು ಅಡಿಕೆ ಗಾತ್ರದ ಹಣ್ಣುಗಳಿದ್ದ ಸಣ್ಣ ತಟ್ಟೆಯೊಂದನ್ನು ಕೈಗಿತ್ತರು ಬೇಳೂರಿನ ಹೆಗಡೆ ಸುಬ್ಬಣ್ಣ.
ಒಂದು ಹಣ್ಣು ಬಾಯಿಗೆ ಹಾಕ್ಕೊಂಡು ಚೀಪಿದೆ. ಜೇನಿನಂತೆ ಸವಿಯಾದ ರಸ ಹೀರಿದೆ. ಬಾಯಲ್ಲಿ ಉಳಿದ ಪುಟ್ಟ ಗೊರಟನ್ನು ಉಗುಳಿದೆ. “ಬಹಳ ಸವಿಯಾಗಿದೆ. ಮಾವಿನ ಹಣ್ಣು ಇದ್ದಂಗಿದೆ. ಏನಿದು?” ಎಂದು ಕೇಳಿದೆ. “ಅದು ಅಡಿಕೆ ಮಾವು. ಈ ವೆರೈಟಿಗೆ ಜಾಮೂನ್ ಮಾವು ಅಂತೀವಿ. ಇಲ್ಲೊಬ್ಬರ ತೋಟದಲ್ಲಿ ಇದರ ಮರವಿದೆ. ಪ್ರತಿ ವರುಷ ಹೋಗಿ, ಹಣ್ಣು ತಗೊಂಡು ಬರ್ತೀನಿ. ಆ ಮೇಲೆ ಸಕ್ರೆಪಾಕದಲ್ಲಿ ಹಾಕಿ ಇಡ್ತೀನಿ. ಹೀಗೆ ದೂರದಿಂದ ಬಂದವ್ರಿಗೆ ಕೊಡ್ಲಿಕ್ಕೆ” ಎನ್ನುತ್ತಾ ಜಾಮೂನ್ ಮಾವುಗಳಿದ್ದ ಪ್ಲಾಸ್ಟಿಕ್ ಕನ್ಟೈನರಿನ ಮುಚ್ಚಳ ಮುಚ್ಚಿದರು ಹೆಗ್ಡೆ ಸುಬ್ಬಣ್ಣ.
2007ರಲ್ಲಿ ಬಹಳ ಸುದ್ದಿ ಮಾಡಿದ “ಅಪ್ಪೆಮಿಡಿ ಉತ್ಸವ"ದಲ್ಲಿ ತನ್ನ ಅಪ್ಪೆಮಿಡಿ ಸಂಗ್ರಹವನ್ನು ಲೋಕಕ್ಕೆ ತೆರೆದಿಟ್ಟವರು ಇವರೇ. ಅಪ್ಪೆಮಿಡಿಯ 108 ತಳಿಗಳನ್ನು ಸಂಗ್ರಹಿಸಿದ್ದಾರೆ. ತನ್ನ ಮನೆಯ ಹಿಂಬದಿಯ ಬ್ಯಾಣದಲ್ಲಿ ಹಲವು ತಳಿಗಳನ್ನು ಬೆಳೆಯುತ್ತಿದ್ದಾರೆ. ಆ ತಳಿಗಳ ಮಿಡಿಗಳನ್ನು ಪ್ಲಾಸ್ಟಿಕ್ ಕನ್ಟೈನರುಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ. ನನ್ನನ್ನು ಒಳಗಿನ ಕೋಣೆಗೆ ಕರೆದೊಯ್ದು ಆ ಸಂಗ್ರಹ ತೋರಿಸಿದರು.
ಒಂದು ಕನ್ಟೈನರಿನ ಮುಚ್ಚಳ ತೆಗೆದು, ಅದರಿಂದ ಒಂದು ತೊಟ್ಟು ಸೊನೆಯನ್ನು ಕಡ್ಡಿಯಲ್ಲೆತ್ತಿ ನನ್ನ ಎಡಹಿಂಗೈಗೆ ಹಾಕಿದರು. “ನೋಡಿ, ಅದರ ಘಮ, ಹ್ಯಾಗಿದೆ?” ಎಂದು ಕೇಳಿದರು ಹೆಗ್ಡೆ ಸುಬ್ಬಣ್ಣ. ಎಡಗೈ ಎತ್ತಿ ಮೂಗಿನ ಹತ್ತಿರ ತರುತ್ತಿದ್ದಂತೆ, ಅದರ ಘಮ ಮೂಗಿನ ಹೊಳ್ಳೆಗಳನ್ನು ಹಾದು ಹೋಗಿ ಮೆದುಳನ್ನು ಚುರುಕಾಗಿಸಿತು. “ಇದು ಅಸಲಿ ಅಪ್ಪೆಮಿಡಿ. ಇಂಥ ಘಮ ಇರೋವು ಬೇಕು. ಎರಡು ವರ್ಷ ಇಂಥ ಘಮ ಉಳಿಸಿಕೊಳ್ಳೋ ತಳಿಗಳನ್ನ, ಹಾಳಾಗದೆ ಇರೋ ಮಿಡಿಗಳ ತಳಿಗಳನ್ನ ಸೆಲೆಕ್ಟ್ ಮಾಡ್ತೀನಿ. ಎರಡು ವರ್ಷದೊಳಗೆ ಹಾಳಾಗೋ ಮಿಡಿಗಳ ತಳಿಗಳನ್ನ ರಿಜೆಕ್ಟ್ ಮಾಡ್ತೀನಿ” ಎಂದರು ಹೆಗ್ಡೆ ಸುಬ್ಬಣ್ಣ.
ಅಪ್ಪೆಮಿಡಿಗಳ ಉತ್ತಮ ತಳಿಗಳ ಆಯ್ಕೆಗೆ ಸುಬ್ಬಣ್ಣ ಅನುಸರಿಸುವ ಈ ವಿಧಾನ ವೈಜ್ನಾನಿಕ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಆಗಬೇಕಾದ ಕೆಲಸವನ್ನು ಸಾಗರ ತಾಲೂಕಿನ ಬೇಳೂರಿನ ಸುಬ್ಬಣ್ಣ (ಬಿ.ವಿ. ಸುಬ್ಬರಾವ್) ಕೈಗೆತ್ತಿಕೊಂಡದ್ದು ವಿಶೇಷ. ಏನಾದರೂ ಸಾರ್ಥಕ ಕೆಲಸ ಮಾಡಬೇಕೆಂಬ ಅವರ ಹಂಬಲದ ಫಲ ಇದು. ಇಲ್ಲವಾದರೆ, ಅಪ್ಪೆಮಿಡಿ ಮಾವಿನ ಮರಗಳನ್ನು ಹುಡುಕಾಡುತ್ತಾ ಊರೂರಿಗೆ ಹೋಗಲು, ಆ ಮರಗಳ ಪತ್ತೆಗಾಗಿ ದಿನಗಟ್ಟಲೆ ಅಲೆದಾಡಲು, ಒಂದೆರಡು ಅಪ್ಪೆಮಿಡಿ ಕೊಯ್ದು ತರಲಿಕ್ಕಾಗಿ ಮತ್ತೆಮತ್ತೆ ಹೋಗಲು ಯಾರಿಗಾದರೂ ಮನಸ್ಸು ಬಂದೀತೇ? (ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ 85 ಅಪ್ಪೆಮಿಡಿ ತಳಿಗಳನ್ನು ಸಂರಕ್ಷಿಸಿದೆ; ಅಪ್ಪೆಮಿಡಿ ಮಾಹಿತಿಪತ್ರ ಪ್ರಕಟಿಸಿದೆ.)
ಅವತ್ತು ಹೆಗ್ಡೆ ಸುಬ್ಬಣ್ಣರ ಅಪ್ಪೆಮಿಡಿ ಸಂಗ್ರಹ ನೋಡಲಿಕ್ಕಾಗಿಯೇ ಬೇಳೂರಿಗೆ ಹೋಗಿದ್ದೆ. ಗೆಳೆಯ ಪೂರ್ಣಪ್ರಜ್ನ ಬೇಳೂರು ಅವರ ಜೊತೆ ಸುಬ್ಬಣ್ಣರ ಮನೆಯೊಳಗೆ ಹೊಕ್ಕಾಗ ಸಂಜೆಯ ಹೊತ್ತು. “ಅಪ್ಪೆಮಿಡಿ ಗಿಡಗಳನ್ನ ನೋಡ್ಕೊಂಡು ಬರೋಣ ಬನ್ನಿ, ಆ ಮೇಲೆ ಕತ್ತಲಾಗ್ತದೆ” ಎನ್ನುತ್ತಾ ಮನೆಯ ಹಿಂಬದಿಯ ಬ್ಯಾಣಕ್ಕೆ ಕರೆದೊಯ್ದರು.
ಬ್ಯಾಣ ಹತ್ತುತ್ತಿದ್ದಂತೆ, ಎಡಪಕ್ಕದಲ್ಲಿ ಹೊಸದಾಗಿ ಮಣ್ಣು ಮೆತ್ತಿದ್ದು ಕಾಣಿಸಿತು. ಅದೇನೆಂಬ ನನ್ನ ಪ್ರಶ್ನೆಗೆ ಹೆಗ್ಡೆ ಸುಬ್ಬಣ್ಣರ ಉತ್ತರ, “ಅದು ಜೇನುಗೂಡು.” ನನ್ನ ಗೊಂದಲದ ನೋಟ ಗಮನಿಸಿ, ಅವರು ವಿವರಿಸಿದರು, “ಅಲ್ಲಿ ಜೇನ್ನೊಣಗಳು ಹುಟ್ಟು ಕಟ್ತಾವೆ. ಕಳೆದ ವರುಷ ಕಟ್ಟಿತ್ತು. ಆದ್ರೆ ಜೇನು ತೆಗೀವಾಗ ಅದ್ರ ಹುಟ್ಟು ಹಾಳಾಗ್ತದೆ.” ಅಲ್ಲೇ ಮಣ್ಣಲ್ಲಿ ಬಿದ್ದಿದ್ದ ಹಳೆಹುಟ್ಟು ತೋರಿಸಿದರು. ನಮ್ಮ ಎದೆಯೆತ್ತರದಲ್ಲಿ ಮಣ್ಣಿನೊಳಗೊಂದು ಗೂಡು. ಅದರ ಮುಂಭಾಗ ಕಿರಿದು. ಅಲ್ಲಿಗೆ ಹಸಿಮಣ್ಣು ಮೆತ್ತಿ, ಒಂದು ಬೆರಳು ಗಾತ್ರದ ತೂತು ಮಾಡಿದ್ದಾರೆ. ಹಳೆಗೂಡಿನ ವಾಸನೆ ಹಿಡಿದು ಈ ವರುಷವೂ ಜೇನ್ನೊಣಗಳು ಅಲ್ಲಿಗೆ ಬಂದು ಗೂಡು ಕಟ್ಟುತ್ತವೆ ಎಂಬ ವಿಶ್ವಾಸ ಹೆಗ್ಡೆ ಸುಬ್ಬಣ್ಣರಿಗೆ.
ಬ್ಯಾಣದಲ್ಲಿ ಮಳೆನೀರ ಕೊಯ್ಲಿಗಾಗಿ ಮೂರಡಿ ಅಂತರದಲ್ಲಿ ಬದುಗಳು. ಎಲ್ಲೆಡೆಯೂ ಹಸುರುಹಾಸು. ಅಲ್ಲಲ್ಲಿ ಅಪ್ಪೆಮಿಡಿ ಮಾವಿನ ಸಸಿಗಳು. ಬದುಗಳಲ್ಲಿ ದಾಲ್ಚಿನ್ನಿ ಸಸಿಗಳು. ಅದ್ಯಾಕೆಂದು ಕೇಳಿದೆ. "ನಮಗಿಲ್ಲಿ ಮಂಗಗಳ ಕಾಟ, ಜಾನುವಾರುಗಳ ಕಾಟ ಮತ್ತು ಕಳ್ಳರ ಕಾಟ. ಇವರ್ಯಾರೂ ಮುಟ್ಟದಿರೋ ಸಸಿ ಇದೊಂದೇ” ಎಂಬ ಸುಬ್ಬಣ್ಣರ ಉತ್ತರ, ಅವರ ಮಾಗಿದ ಅನುಭವದ ಸೂಚಕ.
ಮಂಗಗಳ ಉಪಟಳದ ಬಗ್ಗೆ, ಅಪ್ಪೆಮಿಡಿ ಮಾವಿನ ಮರಗಳ ಹುಡುಕಾಟದ ಬಗ್ಗೆ ಸುಬ್ಬಣ್ಣರ ಅನುಭವಗಳನ್ನು ಕೇಳುತ್ತಿದ್ದಂತೆ ಕತ್ತಲಾಯಿತು. ಅವರ ಮನೆಯ ಅಂಗಳದಲ್ಲಿ ಹುಲುಸಾಗಿ ಬೆಳೆದಿದ್ದ ಬಳ್ಳಿಯಿಂದ ಕೊಯ್ದು ತಂದ ತಾಜಾ ಸೌತೆಕಾಯಿಯ ತುಂಡುಗಳನ್ನು ತಿಂದು ಹೊಟ್ಟೆ ತುಂಬಿತ್ತು. ಅವರ ಮನೆಯಿಂದ ಹೊರಟಾಗ ಅಪ್ಪೆಮಿಡಿಯ ಸೊನೆಯ ಘಮ ಎಡಹಿಂಗೈಯಲ್ಲಿ, ಸಕ್ಕರೆಪಾಕದಲ್ಲಿ ಹಾಕಿಟ್ಟಿದ್ದ ಜಾಮೂನ್ ಮಾವಿನ ಸವಿ ಬಾಯಿಯಲ್ಲಿ ಇನ್ನೂ ಉಳಿದಿತ್ತು.
ಫೋಟೋ 1: ಅಪ್ಪೆಮಿಡಿ ಮಾವಿನಕಾಯಿಗಳು …. ಕೃಪೆ: ಡೆಕ್ಕನ್ ಹೆರಾಲ್ಡ್.ಕೋಮ್
ಫೋಟೋ 2: ಅಪ್ಪೆಮಿಡಿ ಮತ್ತು ಅದರ ಉಪ್ಪಿನಕಾಯಿ …. ಕೃಪೆ: ವನಶ್ರೀ.ಇನ್
ಫೋಟೋ 3: ಅಪ್ಪೆಮಿಡಿ ಮಾವಿನ ಮರ …. ಕೃಪೆ: ರೀಸರ್ಚ್ ಗೇಟ್.ನೆಟ್