ಅಪ್ಪ ಎಂಬ ಅಮಾಯಕ…!

ಅಪ್ಪ ಎಂಬ ಅಮಾಯಕ…!

ಅಪ್ಪನೆಂಬ ಅಮಾಯಕ ಕಣ್ಣಿಗೆ ಕಾಣಲೇ ಇಲ್ಲ. ಸದಾ ಸಂಸಾರಕೆ ಗಾಣೆತ್ತಿನಂತೆ ದುಡಿದು ಆಗಂತುಕನಾಗಿ ಬಿಟ್ಟ. ಮನೆಯಲ್ಲಿ ಅಮ್ಮನ ಪ್ರೀತಿ‌ ಮಮತೆ ಕಂಡಿತು, ಅಪ್ಪನ‌ ಕಾಳಜಿ ಕಾಣಲೇ ಇಲ್ಲ. ಸದಾ ವಜ್ರಮುನಿಯಂತೆ ಕಂಡ ಅವನ ಹೃದಯದ ನೋವು ಅರ್ಥವಾಗಲೇ ಇಲ್ಲ. ತುತ್ತು ಕೊಡುವ ಅಮ್ಮ ನೆನಪಾದಳು ತುತ್ತಿಗೆ ದುಡಿದ ಅಪ್ಪ ನೆನಪಾಗಲಿಲ್ಲ. ಹಗಲು ರಾತ್ರಿ ಎನ್ನದೆ ಎಷ್ಟೇ ದುಡಿದರೂ ಯಾರಿಗೇಕೆ ಸ್ವತಃ ಮನೆಯಲ್ಲೂ ಚುಚ್ಚುಮಾತಿನಲೇ ನೊಂದ. ಹೌದು, ಅಪ್ಪ ಹತ್ತು ರುಪಾಯಿ ಉಳಿಸಿ ಒಂದು ಮೊಳ ಮಲ್ಲಿಗೆ ತಂದ. ಆದರೆ ಆಗಿದ್ದೇನು ಸಿಡುಕು ಮುಖದ ಮಡದಿ ಅಂದಳು ‘ನೀವು ಏನೋ ತಂದೆ ಎಂದು ನೋಡಿದ್ರೆ ಒಂದು ಮೊಳ ಮಲ್ಲಿಗೆ, ನಾನೆಲ್ಲೋ ಮೈಸೂರ್ ಸಿಲ್ಕ್ ಸೀರೆಯನ್ನು ತಂದಿರಿ ಅನ್ನೊಂಡೆ. ಅಪ್ಪ ಊಟವನ್ನೂ ಮಾಡದೆ ಅರೆ ಬರೆ ಊಟ ಮಾಡಿ‌ ಇನ್ನಷ್ಟು ದುಡಿದು ಮಗನಿಗೆ ಸೈಕಲ್ ತಂದು ಕೊಟ್ಟ ಮಗ ಕೊಂಕುಮಾತಿನಿಂದ ಅಂದ ಅಯ್ಯೋ ನೀನು ಇವತ್ತೇನೋ ದೊಡ್ಡ ಉಡುಗೊರೆ ಕೊಡುತ್ತೀನೆಂದು ಹೇಳಿದ್ದು ನೋಡಿ‌ ಬೈಕ್ ತಂದಿರ ಬಹುದೆಂದು ತಿಳಿದಿದ್ದೆ. ಅಪ್ಪನ ಪ್ರತಿ ಕ್ಷಣ ಮನಸ್ಸು ಸಾಯುತಿತ್ತು. ಹೆಂಡತಿ ಮಾತು ಮಾತಿಗೂ ಕೊಂಕು ನುಡಿ “ನಮ್ಮಪ್ಪ ತನ್ನ ಜವಾಬ್ದಾರಿ ಕಳೆದು ಕೊಳ್ಳಲು ನಿಮಗೆ ಕಟ್ಟಿದ. ಕಾರು ಬಂಗಲೆಯೆಂದು ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದೆ. ನಿಮ್ಮಂತವರನ್ನು ಕಟ್ಟಿಕೊಂಡು ಯಾವ ಸುಖವಿದೆ?” ಮಕ್ಕಳು ಅದೆಷ್ಟೂ ಬಾರಿ ನಾನು ಬೇರೆಯವರ ಮನೆಯಲ್ಲಾದರೂ ಹುಟ್ಟಬಾರದಿತ್ತ ಅನ್ನುತ್ತಿದ್ದರು. ಅಪ್ಪ ಕೆಲವು ಸಲ‌ ಒಂಟಿಯಾಗಿ ಕೂರುತ್ತಿದ್ದ ಮೌನಿಯಾಗಿರುತ್ತಿದ್ದ. ಕಣ್ಣೀರು ಬತ್ತಿತ್ತು ಅವನ ಹೆಗಲ ಮೇಲೆ ಅದೆಷ್ಟು ಬಾರಿ ಕುಳಿತಿದ್ದೆ. ಅಪ್ಪಾ ತಾನು ಯಾವತ್ತು ತನಗಾಗಿ ಬಟ್ಟೆ ತಂದು ಕೊಂಡೊದ್ದು ನೆನಪಿಲ್ಲ. ಹೆಂಡತಿ ಮಕ್ಕಳಿಗೆ ಪ್ರತಿ ಹಬ್ಬಕ್ಕೂ ಬಟ್ಟೆ ತರುವುದು ಮರೆತಿರಲಿಲ್ಲ. ಅಪ್ಪಾ ಯಾವತ್ತೂ ತನ್ನ ನೋವು ಯಾರಿಗೂ ಹೇಳಿಕೊಂಡಿಲ್ಲ ಪ್ರಾಮಾಣಿಕವಾಗಿ ದುಡಿದ ಹೆಂಡತಿ ಮಕ್ಕಳನ್ನು ಬೀದಿಗೆ ಬಿಡದೆ ಒಂದು ಪುಟ್ಟಮನೆ ಕಟ್ಟಿದ, ಸಾಕಷ್ಟು ವಿದ್ಯೆ ಕಲಿಸಿದ. ನಮಗೆ ಅದು ತಿಳಿಯಲೇ ಇಲ್ಲ. ಬಾರದ ಲೋಕಕ್ಕೆ ಹೋದ. ಅವನ ಮನಸಿನಲ್ಲಿ ಆಡದೆ ಉಳಿದ ಅದೆಷ್ಟೋ ಮಾತಿತ್ತು, ಅವು ಹಾಗೆ ಉಳಿಯಿತು. ಅವನ ಪೋಟೋದಲ್ಲಿ ಅದೇ ನಗು ಜೋಕರಂತೆ, ಚಾರ್ಲೀ ಚಾಪ್ಲೀಲಿನಿನಂತೆ. ಶ್ರೀಗಂಧದಂತೆ ಕರ್ಪೂರದಂತೆ ಕೊನೆಯವರೆಗೂ ಬೇರೆಯವರಿಗಾಗಿ ಬದುಕಿದ. ಯಾವ ಕವಿಗಳೂ ಅಪ್ಪನ ಬಗ್ಗೆ ಬರೆಯಲಿಲ್ಲ. ಯಾರಿಗೂ ನಿಲುಕದ ನಕ್ಷತ್ರವಾಗಿ ಉಳಿದ. ಏಕೋ ಸತ್ಯ ಅನಿಸಿತು, ಬರೆದೆ...

-ಜಿ ಕೆ ಭಟ್ಟ, ಹೆದ್ದೆಸೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ