'ಅಪ್ಪ' ಎಂಬ ಸೂಪರ್ ಮ್ಯಾನ್!
ಸಣ್ಣವರಿರುವಾಗ ಮಕ್ಕಳಿಗೆ ಅಪ್ಪ ಎಂದರೆ ಸೂಪರ್ ಮ್ಯಾನ್, ಏಕೆಂದರೆ ಆತ ತನ್ನ ಮಕ್ಕಳಿಗಾಗಿ ಯಾವುದೇ ಸಾಹಸ ಮಾಡಲು ತಯಾರು. ಮಕ್ಕಳಿಗೆ ಯಾವಾಗಲೂ ಅಪ್ಪನೆಂದರೆ ಭಯ ಮಿಶ್ರಿತ ಪ್ರೀತಿ. ಅಪ್ಪನ ಬಳಿ ಯಾವುದೇ ವಿಷಯ ಹೇಳಬೇಕಾದರೆ ಅಮ್ಮನೆಂಬ ಗುರಾಣಿಯನ್ನು ಅಡ್ಡ ಹಿಡಿದೇ ಮಾತುಕತೆ. ಅದಕ್ಕೇ ಅಪ್ಪನೆಂದರೆ ಆಕಾಶ ಎಂದು ಹೇಳಿದ್ದು. ನೋಡಲು ಸಿಗುತ್ತದೆ ಆದರೆ, ಮುಟ್ಟಲು ಕಷ್ಟ. ಬಾಲ್ಯದಲ್ಲಿ ಸೂಪರ್ ಮ್ಯಾನ್ ಆಗಿದ್ದ ಅಪ್ಪ ಬೆಳೆಯುತ್ತಾ ಬೆಳೆಯುತ್ತಾ ನಮ್ಮಷ್ಟೇ ಸಾಮಾನ್ಯ ಮನುಷ್ಯ ಎಂದು ತಿಳಿದುಕೊಳ್ಳುವ ಹೊತ್ತಿಗೆ ನಾವೂ 'ಅಪ್ಪ' ಆಗಿರುತ್ತೇವೆ.
ನಮ್ಮ ಮಕ್ಕಳ ಪಾಲಿಗೆ ನಾವೂ ಸೂಪರ್ ಮ್ಯಾನ್ ಆಗಿ ಬಿಡುತ್ತೇವೆ. ನಮ್ಮ ಅಪ್ಪನ ಬಲಹೀನತೆಗಳನ್ನು ತಿಳಿದುಕೊಂಡಿದ್ದ ನಮಗೆ ಅವರಿಗಿಂತ ಒಳ್ಳೆಯ ಅಪ್ಪ ಆಗುವ ಹುಮ್ಮಸ್ಸು ಇರುತ್ತದೆ. ಆದರೆ ನಮ್ಮನ್ನು ಬೆಳೆಸಲು, ವಿದ್ಯಾಭ್ಯಾಸ ಕೊಡಿಸಲು ಆತ ಮಾಡಿದ ಸಾಲ, ಅದನ್ನು ತೀರಿಸಲು ಆತ ಪಟ್ಟ ಕಷ್ಟ ಯಾವುದೂ ನಮ್ಮ ಕಣ್ಣ ಮುಂದೆ ಬರುವುದೇ ಇಲ್ಲ. ಏಕೆಂದರೆ ಆತ ಅವುಗಳನ್ನು ನಮಗೆ ಹೇಳುವುದೇ ಇಲ್ಲ. ಕೆಲವೊಮ್ಮೆ ಆತ ಭಾವನೆಗಳೇ ಇಲ್ಲದ ನಿರ್ಭಾವುಕ ವ್ಯಕ್ತಿಯಂತೆ ಗೋಚರಿಸಿದರೂ, ಮರೆಯಲ್ಲಿ ನಿಂತು ಆತ ಸುರಿಸಿದ ಕಣ್ಣೀರು ನಮಗೆ ಕಾಣಿಸುವುದೇ ಇಲ್ಲ.
ಪ್ರತಿ ವರ್ಷ ಜೂನ್ ತಿಂಗಳಲ್ಲಿ ಬರುವ 3ನೇ ಭಾನುವಾರದ ದಿನ (ಈ ವರ್ಷ ಜೂನ್ ೧೯) ದಂದು ನಾವು ''ವಿಶ್ವ ತಂದೆಯರ ದಿನ'' ವನ್ನಾಗಿ ಆಚರಿಸುತ್ತೇವೆ. ಅದಕ್ಕಾಗಿ ನಾಡಿನ ಎಲ್ಲಾ ಬಂಧುಗಳಿಗೆ "ವಿಶ್ವ ತಂದೆ"ಯರ (world Fathers day) ದಿನದ ಹಾರ್ದಿಕ ಶುಭಾಶಯಗಳು.
ಇಂದಿನ ಆಧುನಿಕ ಯುಗದಲ್ಲಿ ಎಷ್ಟೋ ಜನ ತಂದೆ-ತಾಯಿಯವರನ್ನೇ ಮರೆತಂತಿದೆ. ಅದಕ್ಕಾಗಿಯೇ ವರ್ಷದಲ್ಲಿ ಒಮ್ಮೆಯಾದರೂ ಪಾಲಕರನ್ನು ಸ್ಮರಿಸಲಿ ಅಂತ, ಈ ಆಚರಣೆಗಳು ರೂಢಿಯಲ್ಲಿ ಬಂದಿರಬಹುದು. ಅದೇನೆ ಇರಲಿ ನಮ್ಮ ಜೀವನ ಇರುವವರೆಗೂ 'ತಂದೆ-ತಾಯಿ'ಯವರನ್ನು ಪೂಜಿಸುತ್ತಾ ಅವರೊಂದಿಗೆ ಕಾಲ ಕಳೆಯೋಣ.
ವಿಶ್ವ ತಂದೆಯರ ದಿನ
ಅಮ್ಮ ನೆಲ ಅಪ್ಪ ಆಲ
ಅಮ್ಮ ಛಲ ಅಪ್ಪ ಬಲ
ಅಮ್ಮ ಒಡಲು ಅಪ್ಪ ಕಡಲು
ಅಮ್ಮ ಸರಳ ಅಪ್ಪ ಬಹಳ
ಅಮ್ಮ ಭಕ್ತಿ ಅಪ್ಪ ಶಕ್ತಿ
ಅಮ್ಮ ಜೀವ ಅಪ್ಪ ಜೀವನ
ಅಮ್ಮ ನಿರ್ಮಾತೃ ಅಪ್ಪ ಕರ್ತೃ
ಅಮ್ಮ ಮೂರ್ತಿ ಅಪ್ಪ ಕೀರ್ತಿ
ಅಮ್ಮ ಕಣ್ಣು ಅಪ್ಪ ರೆಪ್ಪೆ
ಅಮ್ಮ ಅಂದ ಅಪ್ಪ ಆನಂದ
ಅಮ್ಮ ಜಗದಗಲ ಅಪ್ಪ ಮುಗಿಲಗಲ
ತಾಯಿ ತಂದೆ ಇಬ್ಬರೂ ಕಣ್ಣಿಗೆ ಕಾಣೋ ದೇವರೂ...
(ಆಧಾರ) - ಅರುಣ್ ಡಿ'ಸೋಜ, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ