ಅಪ್ಪ ಕಾಣೆಯಾಗಿದ್ದಾನೆ

ಅಪ್ಪ ಕಾಣೆಯಾಗಿದ್ದಾನೆ

ಪುಸ್ತಕದ ಲೇಖಕ/ಕವಿಯ ಹೆಸರು
ಬೇಲೂರು ರಘುನಂದನ್
ಪ್ರಕಾಶಕರು
ಅಮೂಲ್ಯ ಪುಸ್ತಕ, ವಿಜಯನಗರ, ಬೆಂಗಳೂರು-೫೬೦೦೪೦
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೨

“ಅಪ್ಪ ಕಾಣೆಯಾಗಿದ್ದಾನೆ” ಕಥಾ ಸಂಕಲನವು ಒಟ್ಟು ಹತ್ತು ಕಥೆಗಳನ್ನು ಒಳಗೊಂಡಿದೆ. ಬಹು ಪಾಲು ಈ ಕಥೆಗಳಲ್ಲಿ ಅಪ್ಪನಂತಹ ಗಂಡಸು ಪ್ರಾಣಿಗಳು ಕಾಣೆಯಾಗಿಯೇ ಹೋಗಿದ್ದಾರೆ, ಅಪ್ಪ ಇಲ್ಲಿ ಪ್ರತಿಮೆ ಮಾತ್ರ ಆಗಿದ್ದಾನೆ ಎನ್ನುವುದು ನನ್ನ ಅಭಿಮತ. ಲೇಖಕರಾದ ಬೇಲೂರು ರಘುನಂದನ್ ಅವರ ಈ ಕಥಾ ಸಂಕಲನ ಓದಿದ ಬಳಿಕ ನನಗನಿಸಿದ್ದು...

“ಕವಿಯೊಬ್ಬ ಸಾಮಾನ್ಯರಿಗಿಂತ ಭಿನ್ನವಾಗುವುದು ಹೇಗೆ? ಇದು ಮಿಲಿಯನ್ ಡಾಲರ್ ಪ್ರಶ್ನೆ.ಬಹುಶಃ ಕವಿ ತನ್ನ ಅನುಭವಗಳನ್ನು ಪದಗಳಲ್ಲಿ ಕಟ್ಟಿಕೊಡುವ ಪ್ರತಿಭೆ ಹೊಂದಿರುತ್ತಾನೆ. ಯಾರು ಅದನ್ನು ಮತ್ತೆ-ಮತ್ತೆ ದುಡಿಸಿಕೊಳ್ಳುತ್ತಾರೊ ಆತ ಅದ್ಭುತ ಕವಿಯಾಗುತ್ತಾನೆ. ಪದಗಳು ಸಂತೆಯಲ್ಲಿ ಸಿಗುವುದಿಲ್ಲ ಓದಿನಲ್ಲಿ ಸಿಗುತ್ತವೆ. ಜನರ ಮಧ್ಯದ ಒಡನಾಟದಲ್ಲಿ ಸಿಗುತ್ತವೆ.ಮನುಷ್ಯ ಸದಾ ತಾನು ಕಂಡದ್ದನ್ನು ಹೊರ ಹಾಕುವ ಪ್ರಯತ್ನದಲ್ಲಿರುತ್ತಾನೆ. ಆದರೆ ಕವಿಯಾದವನು ಮಾತ್ರ ಅದನ್ನು ಸಾಹಿತ್ಯದ ಮೂಲಕ ಆಚೆ ಹಾಕುತ್ತಾನೆ. ಕವಿಯೊಬ್ಬ ನಿರಾಳನಾಗುವುದು ಬರೆದು ಕೂತ ಮೇಲೆಯೇ!.ಹೀಗೆ ಬರೆಯುತ್ತಾ ಹೋಗುತ್ತಾರೆ ಕವಿ ಸದಾಶಿವ ಸೊರಟೂರ್ ರವರು “ಬರವಣಿಗೆಯ ಹೊತ್ತು-ಗೊತ್ತುಗಳು” ಎಂಬ ಲೇಖನದಲ್ಲಿ.

ಅಂದರೆ ಒಬ್ಬ ಕವಿಯು ತನ್ನ ಜೀವನಾನುಭವದ ಮೂಲಕ ಮತ್ತು ಓದಿನಿಂದಲೇ ಸಾಕಷ್ಟು ಅಲ್ಲದಿದ್ದರೂ, ಒಂದಿಷ್ಟು ಸ್ಫೂರ್ತಿಯನ್ನು,ಸಾಹಿತ್ಯಕ್ಕೆ ಬೇಕಾದ ವಸ್ತುಗಳನ್ನು ದಕ್ಕಿಸಿಕೊಳ್ಳುತ್ತಾನೆ ಎಂದರ್ಥ. ಅದಕ್ಕೆ ಜೊತೆಯಾಗಿ ಸಮೃದ್ಧ ಬಾಲ್ಯವೂ ಸಿಕ್ಕಿದ್ದರೆ ಇನ್ನೇನು ಬೇಕು?. ಅದಕ್ಕೆ ಯಾರಾದರೂ ಹೊಸ ಲೇಖಕರಗಳನ್ನು ಪ್ರೋತ್ಸಾಹಿಸುವಾಗ,” ಮೊದಲು ಚೆನ್ನಾಗಿ ಓದಿ, ಆಮೇಲೆ ಖುಷಿ ಖಷಿಯಾಗಿ ಬರೆಯಿರಿ, ಆದರೆ ಯಾವ ಕಾರಣಕ್ಕೂ ಓದುವುದನ್ನು ಬರೆಯುವುದನ್ನು ನಿಲ್ಲಸಬೇಡಿ” ಎಂಬ ಕಿವಿಮಾತುಗಳನ್ನು ಹೇಳುವುದಾಗಿದೆ.

“ಕಥೆ ಬರೆಯಲು ಶುರು ಮಾಡಿದ್ದು ಯಾವಾಗ ಎಂದು ಕೇಳಿದರೆ, ತಟ್ಟನೆ ನೆನಪಾಗುವುದು ಬಾಲ್ಯ ದಿನಗಳು. ಆಟ ಆಡಿ, ಓದಿ ಬರೆಯುವ ಹೊತ್ತಿನಲ್ಲಿ ನಾನು ಕೆರೆಗೆ, ಗಿಡ-ಮರಕ್ಕೆ, ಮಣ್ಣಿಗೆ, ಹುಳು-ಹುಪ್ಪಟೆಗೆ ಕಥೆ ಹೇಳುತ್ತಿದ್ದೆ. ಸುಮಾರು ಮೂರು ದಶಕಗಳ ಹಿಂದಿನಿಂದ ನನ್ನ ಒಳಗಿನ ಒಬ್ಬ ಕಥೆಗಾರ ತನ್ನ ಅಭಿವ್ಯಕ್ತಿಯನ್ನು ಮಾಡುವಂತೆ ಮಾಡಿದ್ದು ಬೇಲೂರಿನ ಪರಿಸರ. ಬಾಲ್ಯದಲ್ಲಿ ಹೀಗೆ ಕಥೆ ಹೇಳುವಾಗ ಒಂದು ಬಗೆಯ ಸಾಂತ್ವನ ಸಿಗುತ್ತಿತ್ತು. ಅಳುತ್ತಾ, ನಗುತ್ತಾ, ಕುಣಿದು-ಕುಪ್ಪಳಿಸುತ್ತಾ ಕಥೆ ಹೇಳುವ ಬಾಳ್ಯ ನನ್ನ ಒಳಗಿನ ಕಥೆಗಾರನನ್ನು ಪೊರೆದಿರುವುದು ನಿಜ. ಕಥೆಗೆ ವಸ್ತು ಮತ್ತು ಅದರ ಅಭಿವ್ಯಕ್ತಿಗೆ ಪೂರಕವಾಗುವ ಎಲ್ಲ ಸಾಮಾಗ್ರಿಗಳನ್ನು ನನ್ನ ಬಾಲ್ಯವೇ ಒದಗಿಸಿಕೊಟ್ಟಿದೆ ಎಂಬುದರಲ್ಲಿ ಎರಡು ಮಾತಿಲ್ಲ”, ಎಂದು ಬರೆದುಕೊಂಡಿದ್ದಾರೆ ಬೇಲೂರು ರಘುನಂದನ್ ರವರು ತಮ್ಮ ‘ಅಪ್ಪ ಕಾಣೆಯಾಗಿದ್ದಾನೆ’ ಕಥಾ ಸಂಕಲನದ ಮುನ್ನುಡಿಯಲ್ಲಿ.

ಅಪ್ಪ ಇಲ್ಲಿ ಪ್ರತಿಮೆ ಮಾತ್ರ ಆಗಿದ್ದಾನೆ. ಅಂದರೆ ಪುರುಷ ಪಾತ್ರಗಳು ಇಲ್ಲವೇ ಇಲ್ಲ ಎಂದು ನಿರ್ಧರಿಸಲು ಆಗದು, ಇರುವವರ ಪಾತ್ರಗಳು ಕೇವಲ ತೆರೆಯ ಹಿಂದೆಯೆ,ಹೊರತು ತೆರೆಯ ಮೇಲಿಲ್ಲ. ಬಹುತೇಕ ಕಥೆಗಳನ್ನು ರಘುನಂದನ್ ರವರು ಮಲೆನಾಡಿನ ಪರಿಸರದಲ್ಲಿ ಕಟ್ಟಲು ಪ್ರಯತ್ನಿಸಿದ್ದರು ಸಹ, ಕೆಲವೊಂದು ನುಸುಳಿಕೊಂಡು ಬೆಂಗಳೂರು, ಉತ್ತರ ಕರ್ನಾಟಕದ ಕಡೆಯೂ ಚದುರಿ ಹೋಗಿವೆ. ಅನೇಕ ಕಥೆಗಳ ಮುಖ್ಯ ಪಾತ್ರಗಳು ಸ್ತ್ರೀಯರೆ ಆಗಿದ್ದಾರೆ. ಆದ್ದರಿಂದ ಈ ಕಥಾ ಸಂಕಲನದ ಕಥೆಗಳನ್ನು ಸ್ತ್ರೀ ಸಂವೇದನೆಯ ಕಥೆಗಳು ಎಂದು ಹೇಳಲು ಯಾವುದೇ ಅಡ್ಡಿಯಿಲ್ಲ.

ಕಥಾ ಸಂಕಲನದ ಮೊದಲ ಕಥೆಯೆ, ''ಅಪ್ಪ ಕಾಣೆಯಾಗಿದ್ದಾನೆ”. ಸೂರಾಪುರದ ನಾಲ್ಕು ಹಟ್ಟಿಯ ಮನೆಗಳಲ್ಲಿ ಸೀತಕ್ಕನದು ಒಂದು. ಮನೆಯಲ್ಲಿ ಸೀತಕ್ಕ, ಅವಳ ಗಂಡ, ಮಕ್ಕಳು ಪುಟ್ಟ, ಗೌರ ಹಾಗೂ ಸೀತಕ್ಕನ ಪಾಲಿಗೆ ಧಾರಾಳವಾಗಿ ಬಂದಿದ್ದ ಸಿಲ್ವಾರದ ನೀರು ಕಾಯಿಸುವ ಹಂಡೆ. ''ನಾವು ಮನುಷ್ಯರೇ ಇಷ್ಟು,ಇಲ್ಲದ್ದನ್ನ ಬೇಕು ಅಂತೀವಿ, ಇರೋದನ್ನ ಬೇಡ ಅಂತೀವಿ. ಬೇಕೋ ಬೇಡವೋ ಅನ್ನೋದನ್ನ ಯೋಚ್ನೆ ಮಾಡೋ ಅಷ್ಟೊತ್ತಿಗೆ ಜೀವನ ಓಡ್ಹೋಗಿರುತ್ತೆ, ಕೆಲ್ಸಾ ಮಾಡ್ದೇ, ಬದುಕನ್ನು ನೋಡ್ದೆ ಕೈ ಚೆಲ್ಲಿ ಕುತ್ಕೊಂಡುಬಿಡ್ತೀವಿ” ಅಂತ ತನ್ನಷ್ಟಕ್ಕೆ ತಾನೇ ನೀರು ಕಾಯಿಸೋ ಹಂಡೆ ಜೊತೆ ಮಾತಾಡೋ ಸೀತಕ್ಕ,ಮನೆ ಬಿಟ್ಟು ನಾಲ್ಕು ದಿನಗಳ ಹಿಂದೆ ಓಡಿ ಹೋದ ಗಂಡ, ಹೊಟ್ಟೆ ತುಂಬ ಊಟಕ್ಕಾಗಿ ಬಾಯಿ ಬಾಯಿ ಬಿಡೋ ಎರಡು ಮಕ್ಕಳು, ಪುರಿ ಬರಗಾಪಿಲೇ ಎಷ್ಟು ದಿನ ಅಂತ ಹೊಟ್ಟೆ ತುಂಬಿಸಿಕೊಳ್ಳುವ ಪ್ರಯತ್ನ ಮಾಡುವುದು? ಅದಕ್ಕೆ ಅಜ್ಜಿ ಜಯಮ್ಮರ ಮನೆಗೆ ಪುಟ್ಟ ಹೋದಾಗ ನಡೆಯುವ ಹೈಡ್ರಾಮ, ಬಡತನದ ಬೇಗೆಯಲ್ಲಿ ಬೇಯುತ್ತಿರುವ ಪ್ರತಿ ಕುಟುಂಬದ ಭಾವ ಪ್ರಾಪ್ತಿಯಂತಿದೆ, ಈ ಕಥೆ.

ಮುಂದಿನ ಕಥೆ ಕೆಳಗಣೆಯ “ಏಡಿ ಅಮ್ಮಯ್ಯ”ಳದು. ಅಮ್ಮಯ್ಯ ಒಂದಿಪ್ಪತ್ತು ಗುಡಿಸ್ಲು ಇರೋ ಹೊಲ್ಗೇರಿಯ ಹೆಂಗ್ಸು. ಅವಳ ಜೊತೆಗಿದ್ದವನು ಅವಳ ಮಗ ನಾಕನೇ ಕ್ಲಾಸ್ ಓದುತ್ತಿರೋ ಗಿಡ್ಡ. ಬಸ್ಕಲ್ಲಿನಲ್ಲಿರೋ ಉಪ್ಪಿಟ್ಟಿನ ಶಾಲೆಗೆ ಹೋಗ್ತಾ ಇರುತ್ತಾನೆ. ಅಮ್ಮಯ್ಯನ ಗಂಡ ಈರ ಘಟ್ಟದ ಮೇಲಿಂದ ವಲ್ಸೆ ಬಂದಿದ್ದ, ರತ್ನಿ ಮಗಳ ಜೊತೆ ಓಡಿ ಹೋಗಿ ಆರು ವರ್ಷ ಆಗಿರುತ್ತೆ. ಮುರುಕ್ಲು ಗುಡಿಸಲಿನ ಅಮ್ಮಯ್ಯ ಪಾಕೀಟು ಶರಾಬಿನ ದಾಸಿ. ಅಮ್ಮಯ್ಯ ಏಡಿ ಇಡಿಯುವುದರಲ್ಲಿ ಪ್ರವೀಣೆಯಾಗಿದ್ದರಿಂದ ‘ಏಡಿ ಅಮ್ಮಯ್ಯ’ ಅಂತಲೇ ಫೇಮಸ್ಸು. ಇಂತಿಪ್ಪ ಅಮ್ಮಯ್ಯನ ಜೀವನವನ್ನು ಗುಡಿಸಿ, ಗುಂಡಾಂತರ ಮಾಡುವುದು ಮಾತ್ರ ಮಳೆ.”

-ಜ್ಯೋತಿ ಕುಮಾರ್ ಎಂ ಜೆ ಕೆ, ದಾವಣಗೆರೆ