ಅಪ್ಪ ಮಾತನಾಡಲಿಲ್ಲ !
ಮುದ್ದಾದ ಮಕ್ಕಳ ತೊದಲು ನುಡಿ ಕೇಳಿ ಮೌನದಿ ಹಿಗ್ಗುತ್ತಾ ವಿಸ್ಮಯ ಗೊಂಡು ಒಳಗೊಳಗೆ ಖುಷಿ ಪಟ್ಟ ಅಪ್ಪ ಮಾತಾಡಲಿಲ್ಲ
ಎದೆಯ ಮೇಲೆ ಆಡುವ ಮಗುವು ತನ್ನ ನವಿರಾದ ಪಾದದಿಂದ ಎದೆಗೆ ಒದ್ದಾಗ, ಕೋಮಲ ಕೈಗಳಿಂದ ಕೆನ್ನೆಗೆ ಹೊಡೆದಾಗ ಸಂತೋಷದಿ ಅಪ್ಪ ಮಾತಾಡಲಿಲ್ಲ
ಖರ್ಚಿಗಾಗಿ ತನ್ನ ಕಿಸೆಯಿಂದ ಮಕ್ಕಳು ಹಣ ಕದ್ದಾಗ ವಿಷಯ ತಿಳಿದರೂ ಮಕ್ಕಳ ವರ್ತನೆ ಕಂಡು ಅಪ್ಪ ಮಾತಾಡಲಿಲ್ಲ
ವಯಸ್ಸಿಗೆ ಬಂದ ಹುಡುಗರಿಗೆ ಕಷ್ಟಪಟ್ಟು ಮದುವೆ ಮಾಡಲು ಸಾಲ ಬೆಟ್ಟದಷ್ಟು ಆದಾಗಲೂ ಮನಬಿಚ್ಚಿ ಅಪ್ಪ ಮಾತಾಡಲಿಲ್ಲ
ಸೋಗಿನ ಸೊಸೆಯರ ಕುತಂತ್ರದಿಂದ ಮಕ್ಕಳು ಆಸ್ತಿಗಾಗಿ ಕಿತ್ತಾಡುತ್ತಾ ಬಳಿಬಂದು ಆಸ್ತಿಯಲ್ಲಿ ಪಾಲು ಕೇಳಿದಾಗಲೂ ಒಳಗೇ ನೊಂದ ಅಪ್ಪ ಮಾತಾಡಲಿಲ್ಲ
ಆಸ್ತಿಗಾಗಿ ಕಿತ್ತಾಡೊ ಮಕ್ಕಳು ಅಪ್ಪ ಅಮ್ಮನನ್ನು ಜೋಪಾನ ಮಾಡಲು ಹಿಂದೇಟು ಹಾಕಿ ದೂರ ಹೋದಾಗ
ಅನಾರೋಗ್ಯದಿಂದ ಬಳಲುತ್ತಾ ಪಿಳಿಪಿಳಿ ಕಣ್ಣು ಬಿಟ್ಟ ಮಲಗಿದ ಅಪ್ಪ ಮಾತಾಡಲಿಲ್ಲ.
ಸಮಾಜದ ಟೀಕೆಗೊಳಾಗಿ ದೂರದೂರಿಂದ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು
ಮನೆಗೆ ಬಂದು ಅಪ್ಪನನ್ನು ತಬ್ಬಿ ಕೊಂಡು ಅಳುತ್ತ ಮಾತಾಡಿಸಲು ಚಿರನಿದ್ರೆಗೆ ಜಾರಿದ ಅಪ್ಪ ಮಾತನಾಡಲಿಲ್ಲ.
ಇದ್ದಾಗ ಜರಿದು ದೂರಿಟ್ಟು ಈಗ ಭೂಮಿ ಬಗೆದು ಬಗೆದು
ಮಕ್ಕಳು ಗೋಳಾಡಿದರೂ ಭೂತಾಯಿ ಮಡಿಲಲಿ ನೆಮ್ಮದಿಯಾಗಿ ಮಲಗಿದ್ದಾನೆ ಅಪ್ಪ ಮಾತಾನಾಡಲಿಲ್ಲ..!!!
-*ಶ್ರೀ ಈರಪ್ಪ ಬಿಜಲಿ*