ಅಪ್ರತಿಮ ವೀರ ಯೋಧ - ಕೆ.ಪಿ.ಗೋಪಾಲ ರಾವ್

ಅಪ್ರತಿಮ ವೀರ ಯೋಧ - ಕೆ.ಪಿ.ಗೋಪಾಲ ರಾವ್

ಕಾಸರಗೋಡು ಪಟ್ಟಣಶೆಟ್ಟಿ ಗೋಪಾಲ ರಾವ್ ಎಂಬ ಅಪ್ರತಿಮ ವೀರ, ನೌಕಾ ಪಡೆಯ ನಿವೃತ್ತ ಅಧಿಕಾರಿ ಇತ್ತೀಚೆಗೆ ನಮ್ಮನ್ನು ಅಗಲಿದ್ದಾರೆ. ೧೯೭೧ರಲ್ಲಿ ಪಾಕಿಸ್ತಾನ ವಿರುದ್ಧ ಯುದ್ಧದಲ್ಲಿ ಭಾರತೀಯ ಸೇನೆ ಜಯಶಾಲಿಯಾಗಲು ಸಹಕಾರ ನೀಡಿದ ಧೀರ ಕಮಡೋರ್ ಗೋಪಾಲ ರಾವ್. ಇವರು ತಮಿಳುನಾಡಿನ ಚೆನ್ನೈನಲ್ಲಿ ನೆಲೆಯಾಗಿದ್ದರೂ ಇವರು ಮೂಲತಃ ಮಂಗಳೂರಿನವರು ಎಂಬುವುದು ಕರ್ನಾಟಕದವರಿಗೆ ಹೆಮ್ಮೆಯ ಸಂಗತಿ. ಭಾರತ ಸರಕಾರ ಪ್ರಧಾನ ಮಾಡುವ ಸೇನೆಯ ಎರಡನೆಯ ಅತ್ಯುನ್ನತ ಗೌರವವಾದ ಮಹಾವೀರ ಚಕ್ರದ ಮೊದಲ ಪುರಸ್ಕೃತರು ಗೋಪಾಲ ರಾವ್ ಇವರು.

ಗೋಪಾಲ ರಾವ್ ಅವರ ಪೂರ್ವಜರು ಕಾಸರಗೋಡು ಮೂಲದವರು. ಇವರ ತಂದೆ ಕೆ.ಪಿ.ಜನಾರ್ಧನ ರಾವ್ ಅವರು ೧೯೩೭ರಲ್ಲಿ ಮದ್ರಾಸ್ ಸರಕಾರದಲ್ಲಿ ಮೊದಲ ಐಜಿಪಿ (ಪೋಲೀಸ್ ಇಲಾಖೆ) ಆಗಿದ್ದರು. ಗೋಪಾಲ ರಾವ್ ಹುಟ್ಟಿದ್ದು ೧೩ ನವೆಂಬರ್ ೧೯೨೬ರಂದು ಮಂಗಳೂರಿನಲ್ಲಿ. ಇವರು ಎಪ್ರಿಲ್ ೨೧, ೧೯೫೦ರಲ್ಲಿ ಭಾರತೀಯ ನೌಕಾ ಸೇನಾ ಪಡೆಯ ಸೇವೆಗೆ ಸೇರುತ್ತಾರೆ. ಇವರು ಬಂದೂಕು ಅಥವಾ ತುಪಾಕಿಯನ್ನು ಚಲಾಯಿಸುವುದರಲ್ಲಿ ತಾಂತ್ರಿಕವಾಗಿ ಪರಿಣತಿಯನ್ನು ಪಡೆದಿದ್ದರು. ಇವರು ಈಸ್ಟರ್ನ್ ನೇವಲ್ ಕಮಾಂಡ್ ನೌಕಾ ಪಡೆಯ ಯುದ್ಧ ನೌಕೆ ಐ ಎನ್ ಎಸ್ ಕಿಲ್ಟಾನ್ (INS Kiltan) ಇದರ ಉನ್ನತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ೧೯೭೧ರಲ್ಲಿ ಪಾಕಿಸ್ತಾನ ಸೇನೆಯು ಯುದ್ಧದ ಘೋಷಣೆ ಮಾಡದೇ ಭಾರತದ ಮೇಲೆ ಆಕ್ರಮಣ ಮಾಡಿದಾಗ ಗೋಪಾಲ ರಾವ್ ಇವರನ್ನು ಕರಾಚಿಯತ್ತ ಯುದ್ಧಕ್ಕೆ ಕಳುಹಿಸಲಾಯಿತು. 

ಆಗ ಭಾರತದ ನೌಕಾ ಪಡೆಯ ಮುಖ್ಯಸ್ಥರಾಗಿದ್ದವರು ಅಡ್ಮಿರಲ್ ಎಸ್.ಎಮ್.ನಂದಾ ಇವರು. ಇವರಿಗೆ ಗೋಪಾಲ ರಾವ್ ಅವರ ಸಾಮರ್ಥ್ಯದ ಮೇಲೆ ಪೂರ್ಣ ನಂಬಿಕೆ ಇತ್ತು. ಅವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಗೋಪಾಲ ರಾವ್ ಅವರನ್ನು ಪಾಕಿಸ್ತಾನದ ಕರಾಚಿ ಬಂದರು ಮೇಲೆ ಆಕ್ರಮಣ ಮಾಡಲು ತೆರಳುವಂತೆ ಸೂಚಿಸುತ್ತಾರೆ. ಇದನ್ನು ‘ಆಪರೇಷನ್ ಟ್ರೈಡೆಂಟ್’ ಎಂದು ಕರೆಯಲಾಯಿತು. ಭಾರತ ಸರಕಾರವೂ ಪಾಕಿಸ್ತಾನದ ಈ ಆಕ್ರಮಣಕ್ಕೆ ತಕ್ಕುದಾದ ಉತ್ತರ ನೀಡಲು ಸಜ್ಜಾಯಿತು. ಸರಕಾರವೂ ಗೋಪಾಲ ರಾವ್ ಅವರಿಗೆ ಕರಾಚಿ ಬಂದರಿನ ಮೇಲೆ ಆಕ್ರಮಣ ಮಾಡಲು ಅನುಮತಿಯನ್ನು ನೀಡಿತು. ಇದು ಸ್ವಾತಂತ್ರ್ಯಾ ನಂತರದಲ್ಲಿ ನಡೆದ ಮೊದಲ ನೌಕಾ ಪಡೆಯ ಕಾರ್ಯಾಚರಣೆ.

ಗೋಪಾಲ ರಾವ್ ಅವರು ತಲಾ ಒಂದು ಸಬ್ ಮೆರೀನ್ ಹೊಂದಿದ್ದ ಯುದ್ಧ ನೌಕೆಗಳಾದ ಐ ಎನ್ ಎಸ್ ಕಿಲ್ಟಾನ್ ಹಾಗೂ ಐ ಎನ್ ಎಸ್ ಕಚ್ಚಾಲ್ (INS Katchal) ಜೊತೆ ಕರಾಚಿ ಬಂದರಿನತ್ತ ಸಾಗಿದರು. ದಾರಿಯುದ್ಧಕ್ಕೂ ಪಾಕಿಸ್ತಾನದ ವಾಯು ಸೇನೆಯ ಹಾಗೂ ನೌಕಾ ಪಡೆಯ ದಾಳಿಗಳು ನಿರಂತರವಾಗಿ ನಡೆಯುತ್ತಿದ್ದವು. ಇವುಗಳನ್ನೆಲ್ಲಾ ಗೋಪಾಲ ರಾವ್ ಇವರು ಧೈರ್ಯ ಹಾಗೂ ಅಪ್ರತಿಮ ಸಾಹಸದಿಂದ ಹಿಮ್ಮೆಟ್ಟಿಸಿ ಕರಾಚಿ ಬಂದರು ತಲುಪಿದರು. 

ಡಿಸೆಂಬರ್ ೪ ರ ರಾತ್ರಿಯನ್ನು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ದಿನ. ಆ ದಿನ ಕಮಡೋರ್ ಗೋಪಾಲ ರಾವ್ ನೇತ್ರತ್ವದ ನೌಕಾ ಪಡೆ ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ಬಾಂಬ್ ದಾಳಿ ನಡೆಸಿ ಅಲ್ಲಿದ್ದ ಪಾಕಿಸ್ತಾನದ ಎರಡು ಯುದ್ಧ ನೌಕೆಗಳಾದ ಪಿ ಎನ್ ಎಸ್ ಖೈಬರ್ ಹಾಗೂ ಪಿ ಎನ್ ಎಸ್ ಶಾಜಹಾನ್ ಗಳನ್ನು ನಾಶ ಮಾಡಿತು. ಇದರ ಜೊತೆಗೆ ಒಂದು ತೈಲ ಸಂಗ್ರಹಾಗಾರವನ್ನೂ ನಾಶ ಮಾಡಿತು. ಇದರಿಂದಾಗಿ ಪಾಕಿಸ್ತಾನದ ಶಕ್ತಿ ಕುಂದಿತು. ನಿಜವಾಗಿ ನಾವಿಲ್ಲಿ ಗಮನಿಸಬೇಕಾದದ್ದು ಗೋಪಾಲ ರಾವ್ ಅವರ ಚಾಣಾಕ್ಷತನ. ಏಕೆಂದರೆ ಗೋಪಾಲ ರಾವ್ ಅವರ ಬಳಿ ಇದ್ದುದು ನೌಕಾ ಪಡೆಯ ಒಂದು ಸಣ್ಣ ತುಕಡಿ ಮಾತ್ರ. ಅದರೊಂದಿಗೆ ದುರಾದೃಷ್ಟವಶಾತ್ ಗೋಪಾಲ ರಾವ್ ಅವರಿದ್ದ ಯುದ್ಧ ನೌಕೆಯ ನಾಲ್ಕು ಇಂಜಿನ್ ಗಳಲ್ಲಿ ಮೂರು ಹಾಳಾಗಿತ್ತು. ಆದರೂ ಇವರು ಸರಿಯಾಗಿದ್ದ ಒಂದೇ ಒಂದು ಇಂಜಿನ್ ಸಹಾಯದಿಂದ ಯುದ್ಧವನ್ನು ಜಯಿಸಿದರು. ಇದು ಇವರ ಧೈರ್ಯ ಹಾಗೂ  ಸಾಹಸಕ್ಕೆ ಸಂದ ವಿಜಯವೆಂದೇ ಹೇಳಬಹುದು. ಆದರೆ ಅವರ ಧೈರ್ಯ ಹಾಗೂ ಸಾಹಸದ ಬಲದಿಂದ ಪಾಕಿಸ್ತಾನದ ಸೇನೆಯನ್ನು ಅವರು ಸೋಲುವಂತೆ ಮಾಡಿದರು. 

ಇವರ ಈ ಸಾಧನೆಯನ್ನು ಗಮನಿಸಿದ ಭಾರತದ ಸರಕಾರ ಇವರಿಗೆ ಮೊದಲ ಮಹಾವೀರ ಚಕ್ರ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಇದಕ್ಕೂ ಮೊದಲು ೧೯೭೧ರ ಜನವರಿಯಲ್ಲಿ ಇವರಿಗೆ ಸೇನೆಯ ‘ವಿಶಿಷ್ಟ ಸೇವಾ ಪದಕ’ವನ್ನೂ ನೀಡಿ ಗೌರವಿಸಲಾಗಿತ್ತು. ಇವರು ಹಾಗೂ ಇವರ ತಂಡ ತೋರಿದ ಅಸಾಮಾನ್ಯ ಸಾಹಸವನ್ನು ನೆನಪಿಟ್ಟುಕೊಳ್ಳಲು ಕರಾಚಿ ಬಂದರಿನ ಮೇಲೆ ದಾಳಿ ನಡೆಸಿದ ದಿನವಾದ ಡಿಸೆಂಬರ್ ೪ ಅನ್ನು ‘ಭಾರತೀಯ ನೌಕಾ ದಿನ’ವಾಗಿ ಆಚರಿಸಲು ಭಾರತ ಸರಕಾರ ನಿರ್ಧರಿಸಿತು. ಈ ಮೂಲಕ ಕಮಡೋರ್ ಕೆ.ಪಿ.ಗೋಪಾಲ ರಾವ್ ಅವರ ತಂಡ ತೋರಿದ ಸಾಧನೆಗೆ ಗೌರವ ನೀಡಲಾಗಿದೆ.

ತಮ್ಮ ತಂದೆಯ ಸಾಹಸಗಳ ಬಗ್ಗೆ ಮಗಳಾದ ತಾರಾ ರಾವ್ ‘ ನನ್ನ ತಂದೆಯ ಸಾಮರ್ಥ್ಯದ ಅರಿವು ಅಂದಿನ ನೌಕಾ ಪಡೆಯ ಮುಖ್ಯಸ್ಥರಾದ ಅಡ್ಮಿರಲ್ ಎಸ್.ಎಂ.ನಂದಾ ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು. ಅದಕ್ಕಾಗಿಯೇ ಅವರು ಭಾರತ ಸರಕಾರದ ಅನುಮತಿ ದೊರೆಯುವ ಮೊದಲೇ ತಮ್ಮ ವೈಯಕ್ತಿಕ ಅಧಿಕಾರದ ನೆಲೆಯಲ್ಲಿ ನನ್ನ ತಂದೆಯವರನ್ನು ಈಸ್ಟರ್ನ್ ನೇವಲ್ ಕಮಾಂಡ್ ನ ಮುಖ್ಯಸ್ಥರನ್ನಾಗಿ ಮಾಡಿ, ಅವರ ನೇತೃತ್ವದಲ್ಲಿ ನೌಕಾ ಪಡೆಯನ್ನು ಕರಾಚಿ ಬಂದರಿನತ್ತ ರವಾನಿಸಿದ್ದರು. ನಂತರ ಭಾರತ ಸರಕಾರವೂ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಲು ಈ ಕಾರ್ಯ ಪಡೆಯ ಅಗತ್ಯ ಇದೆ ಎಂದು ತಿಳಿದು ಅನುಮತಿಯನ್ನು ನೀಡಿದ್ದರು. ತಮ್ಮ ಮೇಲೆ ನೌಕಾ ಮುಖ್ಯಸ್ಥರು ಇರಿಸಿದ್ದ ನಂಬಿಕೆಯನ್ನು ನನ್ನ ಅಪ್ಪ ನಿಜ ಮಾಡಿದರು’ ಎಂದು ಹೆಮ್ಮೆಯಿಂದ ಸ್ಮರಿಸುತ್ತಾರೆ. 

ತಾರಾ ರಾವ್ ಅವರು ತಮ್ಮ ತಂದೆಯವರ ಹಾಗೂ ಚೀನಾ ನೌಕಾ ಅಧಿಕಾರಿಯೊಬ್ಬರ ಜೊತೆಗಿನ ಸ್ನೇಹವನ್ನೂ ನೆನಪಿಸಿಕೊಂಡಿದ್ದಾರೆ. ‘ನನ್ನ ತಂದೆಗೆ ಚೀನಾದ ಓರ್ವ ಯುವ ನೌಕಾ ಅಧಿಕಾರಿಯೊಬ್ಬರ ಪರಿಚಯ ೧೯೬೭ರಲ್ಲಿ ರಷ್ಯಾ ಭೇಟಿಯ ಸಮಯದಲ್ಲಿ ಆಗುತ್ತದೆ. ನನ್ನ ತಂದೆಯ ಸ್ನೇಹಪರ ಗುಣಗಳನ್ನು ಮೆಚ್ಚಿಕೊಂಡ ಆ ಅಧಿಕಾರಿ ನಂತರದ ದಿನಗಳಲ್ಲಿ ಚೀನಾ ನೌಕಾ ಪಡೆಯ ಮುಖ್ಯಸ್ಥರಾಗುತ್ತಾರೆ. ಆ ಸಮಯದಲ್ಲಿ ಭಾರತ ಹಾಗೂ ಚೀನಾ ನಡುವೆ ಸಣ್ಣದೊಂದು ಗಡಿ ತಕರಾರು ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಭಾರತದ ಹಿರಿಯ ಪತ್ರಕರ್ತನೊಬ್ಬ ಚೀನಾ ನೌಕಾ ಮುಖ್ಯಸ್ಥನನ್ನು ‘ಭಾರತದ ಮೇಲೆ ನೀವು ಯುದ್ಧ ಮಾಡುವ ಸಾಧ್ಯತೆ ಇದೆಯಾ?’ ಎಂದು ಕೇಳುತ್ತಾರೆ. ಅದಕ್ಕೆ ಅವರು ಹೇಳುತ್ತಾರೆ ಖಂಡಿತಾ ಇಲ್ಲ. ಏಕೆಂದರೆ ಭಾರತ ದೇಶದಲ್ಲಿ ನನ್ನ ಆತ್ಮೀಯ  ಮಿತ್ರ ಗೋಪಾಲ ರಾವ್ ಇದ್ದಾರೆ'. ಇದು ಗೋಪಾಲ ರಾವ್ ಅವರ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು. ಗೋಪಾಲ ರಾವ್ ಇವರಿಗೆ  ಮಂಗಳೂರಿನಲ್ಲಿರುವ ತಮ್ಮ ಸಂಬಂಧಿಕರಾದ ಹಿರಿಯ ನ್ಯಾಯವಾದಿ ಕೆ.ಪಿ.ವಾಸುದೇವ ರಾವ್ ಜೊತೆ ಇವರಿಗೆ ನಿರಂತರ ಸಂಪರ್ಕ ಇತ್ತು. ೨೦೧೦ರಲ್ಲಿ ಇವರು ಕೊನೆಯ ಬಾರಿಗೆ ಮಂಗಳೂರಿಗೆ ಭೇಟಿ ನೀಡಿದ್ದರೆಂದು ವಾಸುದೇವ ರಾವ್ ನೆನಪಿಕೊಳ್ಳುತ್ತಾರೆ.     

ಗೋಪಾಲ ರಾವ್ ಸೇನೆಯಲ್ಲಿ ಸೇವಾ ನಿವೃತ್ತಿಯ ಬಳಿಕ ಚೆನ್ನೈನಲ್ಲಿ ವಾಸವಿದ್ದರು. ಇವರು ತಮ್ಮ ಪತ್ನಿ ರಾಧಾ ರಾವ್, ಮಕ್ಕಳಾದ ತಾರಾ ರಾವ್, ಸವಿತಾ ಹಾಗೂ ವಿನಯ್ ರಾವ್ ಅವರನ್ನು  ಆಗಸ್ಟ್ ೯, ೨೦೨೧ ಅಗಲಿದ್ದಾರೆ. ೯೫ ವರ್ಷಗಳ ಪರಿಪೂರ್ಣ ಬದುಕು ಸವೆಸಿದ ಭಾರತ ಮಾತೆಯ ಹೆಮ್ಮೆಯ ಪುತ್ರನಿಗೆ ನಮ್ಮದೊಂದು ನಮನ.   

ಸೂಚನೆ: ಕೆ.ಪಿ.ಗೋಪಾಲ ರಾವ್ ಅವರ ಬಗೆಗಿನ ಹಲವಾರು ವಿಷಯಗಳು ಈ ಲೇಖನದಲ್ಲಿ ಮಾಹಿತಿ ಕೊರತೆಯಿಂದ ತಪ್ಪಿ ಹೋಗಿರಬಹುದು. ಅಧಿಕ ಮಾಹಿತಿ ಇದ್ದವರು ದಯವಿಟ್ಟು ಪ್ರತಿಕ್ರಿಯೆಯಲ್ಲಿ ಉಲ್ಲೇಖ ಮಾಡಬೇಕಾಗಿ ವಿನಂತಿ.

ಚಿತ್ರದಲ್ಲಿ: ಕೆ.ಪಿ.ಗೋಪಾಲ ರಾವ್ ಅವರನ್ನು ಸನ್ಮಾನಿಸಿ ಗೌರವಿಸುತ್ತಿರುವ ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಮತ್ತು ಸೇನಾ ದಿರಸಿನಲ್ಲಿ ಗೋಪಾಲ ರಾವ್

ಚಿತ್ರ ಹಾಗೂ ಮಾಹಿತಿ ಸಂಗ್ರಹ ಕೃಪೆ: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್

ಸುಳಿವು: ಕೆ.ಪಿ.ಸುದರ್ಶನ್ ರಾವ್, ಮಂಗಳೂರು