ಅಬಿಂದಾ - ಸಯೀದ್ (ವಿಶ್ವಕಥಾಕೋಶ -೨೦)

ಅಬಿಂದಾ - ಸಯೀದ್ (ವಿಶ್ವಕಥಾಕೋಶ -೨೦)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೬೫.೦೦, ಮುದ್ರಣ: ೨೦೧೧

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಮುದ್ರಣ ಮಾಡಲಾಯಿತು. ಆ ಸಮಯದಲ್ಲಿ ಪ್ರಕಾಶಕರ ನುಡಿ ಹೀಗಿದೆ. 

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಇಪ್ಪತ್ತನೆಯ ಸಂಪುಟ ‘ಅಬಿಂದಾ-ಸಯೀದ್'. ವಿಶ್ವಕಥಾಕೋಶದ ಈ ಸಂಪುಟದಲ್ಲಿ ಇಂಡೋನೇಷ್ಯ, ಫಿಲಿಫೈನ್ಸ್, ಮಲಯ, ಸಿಂಗಾಪುರ, ಥಾಯಿಲ್ಯಾಂಡ್ ದೇಶದ ಕಥೆಗಳಿವೆ. ಈ ಸಂಪುಟ ಪ್ರತೂಮ್ರಥ ಜೆಂಗ್ ಬರೆದಿರುವ ‘ನನ್ನ ಥಾಯ್ ಬೆಕ್ಕು' ಎಂಬ ಕಥೆಯೊಂದಿಗೆ ಮುಕ್ತಾಯವಾಗುತ್ತದೆ. ಈ ಸಂಪುಟದಲ್ಲಿರುವ ಹತ್ತು ಕಥೆಗಳಲ್ಲಿ ಆ ದೇಶಗಳಲ್ಲಿ ಅಲ್ಲಲ್ಲಿನ ಜನ ಪಟ್ಟ ಪಾಡನ್ನು, ಅವರ ಹಾಡನ್ನು, ಏಳು -ಬೀಳುಗಳನ್ನು, ಆರ್ಥಿಕ, ರಾಜಕೀಯ ನೆಲೆಗಟ್ಟಿನ ಮೇಲೆ ನಿಂತಿರುವ ಭಾಷೆ ಕಲೆ ಸಾಹಿತ್ಯಗಳ ಮಂಟಪವನ್ನು ಗಮನಿಸಬಹುದು. ಈ ನೆಲೆಗಟ್ಟು ಮತ್ತು ಮಂಟಪಗಳ ದರ್ಶನದಿಂದ ಸಂಪುಟದ ಕಥೆಗಳು ರಸಪುಷ್ಟವಾಗಿ ಕಾಣಿಸುವುವೆಂಬ ವಿಶ್ವಾಸವನ್ನು ಸಂಪಾದಕರು ವ್ಯಕ್ತ ಪಡಿಸುತ್ತಾರೆ.

ಈ ಪುಸ್ತಕದಲ್ಲಿ ಇರುವ ೧೦ ಕಥೆಗಳೆಂದರೆ, ಅಬಿಂದಾ - ಸಯೀದ್ (ಎಡ್ವರ್ಡ್ ಡವ್ಸ್ ಡೆಕರ್ ‘ಮುಲ್ತಾತುಲಿ'), ತೆಂಗಿನ ಮರದ ತುದಿಯಲ್ಲಿ (ಅಷ್ದಿಯಾತ್ ಕೆ.ಮಿಹರ್ ಜಾ), ಸಮರ ಸಮಯದಲ್ಲಿ ಜನ (ಗಿಲ್ಡಾ ಕಾರ್ಡೆರೊ-ಫರ್ನಾಂಡೊ), ಪಂಜರದ ಪಕ್ಷಿ ( ಇಬ್ರಾಹಿಂ ಎ.ಚುಬೇಯ್ ರಾ), ಮಾಟಗಾತಿಯರ ಕನ್ನಡಿ (ನಿಕ್ ಜೋಕಿನ್), ಹದ್ದುಗಳು (ಕೆ.ಎಸ್. ಮಣಿಯನ್), ಹುಲಿ (ಎಸ್. ರಾಜರತ್ನಂ), ಅಭ್ಯಾಸ ಬಲ (ಚಂದ್ರನ್ ನಾಯರ್), ಗಾಜಿನ ಪಂಜರ (ಓಂಗ್ ಛೂ ಸ್ವಾಟ್), ನನ್ನ ಥಾಯ್ ಬೆಕ್ಕು (ಪ್ರತೂಮ್ರಥ ಚೆಂಗ್).

ಇಲ್ಲಿರುವ ಎಲ್ಲಾ ಕಥೆಗಳ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಅಪರಿಚಿತರಾಗಿರುವ ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಲ್ಲಿರುವ ಕಥೆಗಳನ್ನು ‘ಎಸ್ಸಾರ್ಕೆ' (ಎಸ್. ಆರ್. ಕೃಷ್ಣಮೂರ್ತಿ) ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ದ್ವಿತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ಸುಮಾರು ೧೫೦ ಪುಟಗಳನ್ನು ಹೊಂದಿದೆ. ಇಂಡೋನೇಷ್ಯ, ಫಿಲಿಫೈನ್ಸ್, ಮಲಯ, ಸಿಂಗಾಪುರ, ಥಾಯಿಲ್ಯಾಂಡ್  ದೇಶಗಳ ಕಥೆಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.