ಅಬೋಟ್ಟಾಬಾದ್

ಅಬೋಟ್ಟಾಬಾದ್

ಪುಸ್ತಕದ ಲೇಖಕ/ಕವಿಯ ಹೆಸರು
ಸಂತೋಷಕುಮಾರ ಮೆಹೆಂದಳೆ
ಪ್ರಕಾಶಕರು
ಸ್ನೇಹ ಬುಕ್ ಹೌಸ್, ಶ್ರೀನಗರ, ಬೆಂಗಳೂರು - ೫೬೦೦೫೦
ಪುಸ್ತಕದ ಬೆಲೆ
ರೂ. ೩೦೦.೦೦, ಮುದ್ರಣ: ೨೦೨೧

ಸಂತೋಷಕುಮಾರ ಮೆಹೆಂದಳೆ ಅವರ ಕೃತಿಗಳಲ್ಲಿ ಒಂದು ವಿಶೇಷತೆ ಸದಾ ಇರುತ್ತದೆ. ಅವರು ಆಯ್ದುಕೊಳ್ಳುವ ವಿಷಯ ಮತ್ತು ಅದನ್ನು ಪ್ರಸ್ತುತ ಪಡಿಸುವ ರೀತಿ ಎರಡೂ ಅದ್ಭುತ. ಅವರು ಯಾವ ವಿಷಯ ಆಯ್ದುಕೊಂಡರೂ ಅದರ ಬಗ್ಗೆ ಆಳವಾದ ಅಧ್ಯಯನ ಮಾಡುತ್ತಾರೆ. ಅದು ಕಾಶ್ಮೀರದ ಉಗ್ರವಾದವಾಗಲೀ, ಅಘೋರಿಗಳ ವಿಸ್ಮಯ ಲೋಕವಾಗಲೀ, ವೈಜಯಂತಿಪುರದ ರಾಜಮನೆತನವಾಗಲಿ ಅದರ ವಿಷಯ ಸಂಗ್ರಹಣೆಯ ಹಿಂದಿನ ಶ್ರಮ ಮೆಹೆಂದಳೆ ಅವರಿಗೇ ಗೊತ್ತು. ಈ ಕಾರಣದಿಂದಲೇ ಅವರ ಕೃತಿಗಳನ್ನು ಓದುವಾಗ ನಮಗೆ ಖುದ್ದು ಆ ಜಾಗಗಳಲ್ಲಿ ಓಡಾಡಿದ ಅನುಭವವಾಗುತ್ತದೆ. ಘಟನೆಗಳು ನಮ್ಮ ನಡುವೆಯೇ ನಡೆದಂತಾಗುತ್ತದೆ. ಇದು ಮೆಹೆಂದಳೆ ಅವರ ಬರವಣಿಗೆಯ ಶಕ್ತಿ.

ಉಗ್ರಗಾಮಿಗಳ ಬಗ್ಗೆ, ಉಗ್ರವಾದದ ಬಗ್ಗೆ ಮೆಹೆಂದಳೆಯವರು ‘ಅಬೋಟ್ಟಾಬಾದ್' ಎನ್ನುವ ಕೃತಿಯನ್ನು ಕೆಲವು ವರ್ಷಗಳ ಹಿಂದೆ ಹೊರತಂದಿದ್ದಾರೆ. ಕೃತಿಯನ್ನು ಓದುವ ಮುನ್ನ ಮೆಹೆಂದಳೆಯವರು ಬರೆದ ಮುನ್ನುಡಿ ಓದುವುದು ಅವಶ್ಯಕ. ಅದರಲ್ಲಿ ಅವರು “ಇದು ಯಾವುದೇ ನ್ಯಾಯಾನ್ಯಾಯಿಕ ವಿಶ್ಲೇಷಣೆ ಮಾಡಲು ಬರೆದ ಕಾದಂಬರಿಯಲ್ಲ. ಆದರೆ ಸತತ ಮೂರ್ನಾಲ್ಕು ದಶಕಗಳ ಕಾಲ ಜಾಗತಿಕ ಉಗ್ರ ಪ್ರಪಂಚದಲ್ಲಿ ಧಾರ್ಮಿಕ ನೇತಾರನ ಸೋಗಿನಲ್ಲಿ ಎಲ್ಲವನ್ನು ಆಳಿದ, ಧರ್ಮದ ಹೆಸರಿನಲ್ಲಿ ಉಗ್ರತನವನ್ನು ಮೆರೆದ ಭಯೋತ್ಪಾದಕನೊಬ್ಬನ ಒಳಕೋವೆಗಳು ಹೇಗೆಲ್ಲ ಎಲ್ಲೆಲ್ಲಿ ಚಾಚಿದ್ದವು ಎನ್ನುವ ಸಂಪೂರ್ಣ ಉಗ್ರ ಚಟುವಟಿಕೆಗಳನ್ನು ಕಾದಂಬರಿ ರೂಪದಲ್ಲಿ ವಿಷದೀಕರಿಸುವ ಯತ್ನ ಅಷ್ಟೆ. 

ಇದೇ ಸರಿ, ಇದೇ ತಪ್ಪು, ಇವನು ಮುಸಲ್ಮಾನ ಅದಕ್ಕಾಗಿ ಅವನು ಭಯೋತ್ಪಾದಕ, ಇವನು ಕ್ರಿಶ್ಚಿಯನ್ನು ಅದಕ್ಕಾಗಿ ಅವನು ಮತಾಂತರಿ, ಇವನು ಹಿಂದೂ ಅದಕ್ಕಾಗಿ ಆತ ಮೂಲಭೂತವಾದಿ ಎನ್ನುವ ಯಾವ ಅಂಶವೂ ನನ್ನದಲ್ಲ. ಆದರೆ ಒಂದು ದೇಶದ ಉಪ್ಪು, ನೀರು, ಗಾಳಿ ಮತ್ತು ಸ್ವಚ್ಛಂದ ಸ್ವಾತಂತ್ರ್ಯ ಅನುಭವಿಸಿ ತಿಂದು, ತೇಗಿದ ಮೇಲೆ ಆ ದೇಶದ ಆತ್ಮಕ್ಕೆ ಘಾತುಕತನ ಮಾಡುವವರನ್ನು ನಾನು ನಾಯಿ ನರಿಗಳಿಗಿಂತ ಕಡೆಯಾಗಿ ನೋಡುತ್ತೇನೆ. ಕಾರಣ, ಯಾವನಾದರೂ ಸರಿ ತನ್ನದಲ್ಲದ ಧರ್ಮದ ಕಾರಣಕ್ಕೆ ಮನುಷ್ಯನನ್ನು ಕೊಲ್ಲು ಅಥವಾ ಹೆಂಗಸರನ್ನು ನೆತ್ತಿ ಅದುರುವಂತೆ, ಬುಡ ದಪ್ಪಗಾಗುವಂತೆ ಬೆತ್ತದಿಂದ ಬಹಿರಂಗವಾಗಿ ಬಡಿ ಎನ್ನುವ ಹೇಡಿತನವನ್ನು ನಾನು ವಿರೋಧಿಸುತ್ತೇನೆ. ಅವನು ಸ್ವಂತದವನಾದರೂ ಸರಿ, ಹೆಂಗಸೊಬ್ಬಳನ್ನು ಅಮಾನವೀಯವಾಗಿ ಕೂಡಿ ಹಾಕುತ್ತಾ, ಹಗಲು ರಾತ್ರಿ ಕಾಮಕ್ಕೆ, ತೆವಲಿಗೆ ಬಳಸಿಕೊಳ್ಳುತ್ತ, ತನ್ನ ನಿಯಂತ್ರಣಕ್ಕೆ ದಕ್ಕದಿದ್ದಾಗ ತನ್ನ ಮೂಗಿನ ನೇರಕ್ಕೆ ಕಾನೂನಿನ ನೆಪದಲ್ಲಿ ಆಕೆಯನ್ನು ಬಡಿಯುತ್ತೇನೆ ಎಂದರೆ ಅದಕ್ಕಿಂತ ನಿರ್ಲಜ್ಜತನ ಬೇರೆ ಇದೆಯಾ...?

‘ಅಲ್ಲ ಜಗತ್ತಿನಲ್ಲಿ ಇಷ್ಟೊಂದು ಮುಸ್ಲಿಂ, ಅರಬ್ಬರ ರಾಷ್ಟ್ರಗಳಿವೆಯಲ್ಲ, ಅದರಲ್ಲೂ ಸೌದಿ ಇತರ ಪ್ರಮುಖ ನಾಡಿನಲ್ಲಿ ನಿಮ್ಮದೇ ಮುಸ್ಲಿಂ ಪ್ರಾಬಲ್ಯ ಇದೆಯಲ್ಲ. ಅಲ್ಲೆಲ್ಲ ಇಲ್ಲದ ರಾಜಕೀಯ ಅರಾಜಕತೆ ಮತ್ತು ಧಾರ್ಮಿಕ ಕಟ್ಟಳೆಗಳ ಮನಸ್ಥಿತಿ ಮತ್ತು ಧರ್ಮ ಬಾಹುಳ್ಯದ ದಬಾವು ನಿಮ್ಮ ಅಫಘಾನಿಸ್ತಾನಲ್ಲಿ ಮಾತ್ರ ಯಾಕೆ' ಎಂದಿದ್ದೆ.

ಸುಮ್ಮನೆ ನಕ್ಕು ಬಿಟ್ಟಿದ್ದ ಅವನು. ‘ಏನಿದ್ದರೂ ನಾವು ಮಾತ್ರ ಈ ನೆಲದ ಅಸ್ಮಿತತೆಯ ನೇತಾರರು. ಹಾಗಿದ್ದಾಗ ಮುಜಾಹಿದ್ದಿನೋ, ತಾಲಿಬಾನ್, ಫಿದಾಯಿನ್ ಅಥವಾ ಅಲ್ ಖೈದಾ ಹೀಗೆ ಏನೇ ಇದ್ದರೂ, ನೈಜವಾದ ಇಸ್ಲಾಮ್ ಪಶ್ತೂನಿಗಳ ಮೂಲಕ ಮಾತ್ರ ಇಲ್ಲಿ ಸ್ಥಾಪನೆಯಾಗಬೇಕೇ ಹೊರತಾಗಿ ಹೊರಗಿನರಿಂದಲ್ಲ. ನಮ್ಮ ನಮ್ಮ ನಂಬಿಕೆಗಳು ನಮ್ಮವು. ಆದರೆ ಅಂತರಾಷ್ಟ್ರೀಯ ರಾಜಕೀಯದಲ್ಲಿ ನಾವು ಪದೆ ಪದೆ ಹಣಿಸಿಕೊಳ್ಳುತ್ತಿದ್ದೇವೆ. ನಮ್ಮವರೇ ನಮ್ಮನ್ನು ಹಣಿಯುತ್ತಿದ್ದಾರೆ. ಅದರಲ್ಲೂ ಪಾಕ್ ಆಟ ಆಡುತ್ತಿದೆ. ಕಾರಣ ಅದಕ್ಕೆ ಇತಿಹಾಸವೇ ಇಲ್ಲ. ಸುಮ್ಮನೆ ಹಿಂದೂಸ್ತಾನದಿಂದ ಹೊರಬಿದ್ದ ಜಾಗ ಅದು. ಇತಿಹಾಸ ಇರುವ ನಮ್ಮನ್ನು ಹಣಿದು ದೊಡ್ಡವರಾಗುವ ಹುನ್ನಾರ ಎಲ್ಲರದ್ದು’ ಎಂದಿದ್ದ. 

ಹಾಗೆ ಮಾತನಾಡಿದ ಹಿರಿಯ ಕಂದಹಾರ್ ಸಮೀಪದ ಜಿಲ್ಲೋಹಾಲ್ ಹಳ್ಳಿಯವ. ಅವನ ಮೇಲೆ ಇತರೆ ಮುಜಾಹಿದ್ದಿನ್ ನಾಯಕರ ದಾದಾಗಿರಿಗೆ ಸಿಕ್ಕಿ ನರಳುತ್ತಿರುವ ಊರವರನ್ನು ರಕ್ಷಿಸುವ ಜಿಮ್ಮೇದಾರಿ ಇತ್ತು. ಅಮೇರಿಕೆಗೆ ಕೊಟ್ಟ ಮಾತು ಮುರಿಯಲಿಲ್ಲ. ತನ್ನವನೆಂಬ ಕಾರಣಕ್ಕೆ ಓಮರ್ ನಿಗೆ ಬೆಂಬಲಿಸಿ ನಿಲ್ಲಲಿಲ್ಲ. ಕಾರಣ ಅವನು ಪಶ್ತೂನಿ. ಮಾತು ಕೊಟ್ಟ ಮೇಲೆ ಜೀವ ಬೇಕಾದರೂ ಕೊಡುತ್ತಾನೆ..’ ಎನ್ನುತ್ತಾ ಮಾತು ಮುಗಿಸಿದ್ದ ಅಮೇರಿಕೆಯ ಮೇಜರ್."  ಎಂದು ಪುಸ್ತಕದಲ್ಲಿರುವ ವಿವರಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಧರ್ಮಕ್ಕಾಗಿ ನಡೆಯುವ ಈ ಯುದ್ಧದ ಅಸಲಿ ಕಥೆ ನೀವು ಈ ಕಾದಂಬರಿಯನ್ನು ಓದುವಾಗ ಮಾತ್ರ ಸಿಗುತ್ತದೆ. 

ಕೃತಿಯ ಬೆನ್ನುಡಿಯಲ್ಲಿ ಬರೆದ ನಾಲ್ಕು ಸಾಲುಗಳು ಪುಸ್ತಕ ಓದಿ ಮುಗಿಸಿದ ಬಳಿಕವೂ ಬಹು ಸಮಯ ನಮ್ಮನ್ನು ಕಾಡುತ್ತದೆ. “ಡಿಸ್ ಕನೆಕ್ಟಡ್ ಕನೆಕ್ಷನ್ ಅದರ ಮೂಲ ಮಂತ್ರ. ಜಗತ್ತಿಗೇ ಉಗ್ರ ಮಂತ್ರ ಕಲಿಸಿದ. ಸಾವಿರಾರು ಕೋಟ್ಯಾಂತರ ಆಸ್ತಿ. ರಾಜ ಮರ್ಯಾದೆ. ಪ್ರಾಣ ಕೊಡಲು ರೆಡಿ ಇದ್ದ ಸಾವಿರಾರು ಜನ ಧರ್ಮಯೋಧರು. ಇಷ್ಟೆಲ್ಲಾ ಇದ್ದೂ ದಿನಕ್ಕೆ ಎರಡು ರೊಟ್ಟಿ ಮತ್ತು ಒಂದು ಪಿಚಿಡೆ ಅನ್ನ ತಿನ್ನುತ್ತಾ ಒಂದೇ ಒಂದು ಚಾಪೆಯ ಮೇಲೆ ಕಲಾಶ್ನಿಕೋವ್ ತಬ್ಬಿ ಮಲಗುತ್ತಾ ಧರ್ಮವನ್ನೆ ಅವನು ಉಸಿರಾಡದಿದ್ದರೆ ಇದೆಲ್ಲ ಇಷ್ಟು ಬೆಳೆಯುತ್ತಲೇ ಇರಲಿಲ್ಲ.

ಮುಜಾಹಿದ್ದಿನ್, ತಾಲಿಬಾನ್, ಭಯೋತ್ಪಾದಕರು, ಉಗ್ರರು, ಅಲ್ ಖೈದಾ, ಜೈಶ್ ಮೊಹಮ್ಮದ್ ಕಂದಹಾರ್ ಅಪಹರಣ... ಹೀಗೆ ಹಲವು ದಿಶೆಯ ಚರ್ಚಿತ ವಿಷಯ ಇದೆಲ್ಲ ತಾವಾಗೇ ಬೆಳೆಯಲಿಲ್ಲ. ಇದನ್ನೆಲ್ಲ ಸರಿಯಾಗಿ ಒಂದು ಬಂಧದಲ್ಲಿ ಚದುರಿ ಹೋಗದಂತೆ ಜೋಡಿಸಿಟ್ಟು ಹೋದವನು ಒಬ್ಬನೇ ಒಬ್ಬ. ಅವನೇ ಉಗ್ರರ ಪಾಲಿಗೆ ಯುಗಪುರುಷ.” ಸುಮಾರು ೨೯೦ ಪುಟಗಳ ಈ ಕಾದಂಬರಿಯಲ್ಲಿ ಸೂಕ್ತ ಛಾಯಾಚಿತ್ರಗಳನ್ನು ನೀಡಲಾಗಿದೆ.