ಅಬ್ದುಲ್ ಕಲಾಂ ಅವರು ನಿಮಗೆ ಗೊತ್ತೇ?
ಭಾರತದ ರಾಷ್ಟಪತಿಗಳಾಗಿದ್ದ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಬಗ್ಗೆ ಹಲವಾರು ಪುಸ್ತಕಗಳು ಬಂದಿವೆ. ‘ಅಬ್ದುಲ್ ಕಲಾಂ ಅವರು ನಿಮಗೆ ಗೊತ್ತೇ?’ ಎಂಬ ಕೃತಿಯು ಮಕ್ಕಳಿಗೆ ಅತ್ಯಂತ ಉಪಯುಕ್ತವಾಗಿದೆ. ದೊಡ್ಡ ದೊಡ್ಡ ಆಕಾರದ ಅಕ್ಷರಗಳನ್ನು ಬಳಸಿಕೊಂಡು, ಸರಳವಾದ ಭಾಷೆಯಲ್ಲಿ ಮಾಹಿತಿಯನ್ನು ನೀಡಿರುವುದರಿಂದ ಮಕ್ಕಳಿಗೆ ಓದಿ ಮನನ ಮಾಡಲು ಅನುಕೂಲ. ಈ ಕೃತಿಯು ‘ಅಬ್ದುಲ್ ಕಲಾಂ ಯಾರು?’ ಎನ್ನುವ ಅಧ್ಯಾಯದಿಂದ ಪ್ರಾರಂಭವಾಗುತ್ತದೆ. ಈ ಅಧ್ಯಾಯದಲ್ಲಿ ಕಲಾಂ ಅವರ ಹುಟ್ಟು, ಬಾಲ್ಯ, ಊರು, ಅವರ ವೃತ್ತಿ ಅವರಿಗೆ ಸಂದ ಗೌರವಗಳು, ಉಪಗ್ರಹ ಉಡಾವಣಾ ವಾಹನ ತಂತ್ರಜ್ಞಾನ ಮೊದಲಾದುವುಗಳ ಬಗ್ಗೆ ವಿವರಿಸಲಾಗಿದೆ.
ನಂತರದ ಅಧ್ಯಾಯವಾದ ‘ಆರಂಭಿಕ ಬದುಕು’ ನಲ್ಲಿ ಕಲಾಂ ಅವರ ಬಾಲ್ಯದ ದಿನಗಳ ಬಗ್ಗೆ ವಿವರಿಸಲಾಗಿದೆ. ಅದರಲ್ಲಿ ಒಂದೆಡೆ “ಕಲಾಂ ಅವರ ತಂದೆ ಜೈನುಲಾಬ್ದೀನ್ ದೋಣಿ ನಿರ್ಮಿಸುತ್ತಿದ್ದವರು. ಅವರ ತಾಯಿ ಆಶಿಯಮ್ಮ ಒಬ್ಬ ಸದ್ಗೃಹಿಣಿ. ಅವರದು ಬಡ ಕುಟುಂಬ. ಮನೆಗೆ ಆದಾಯ ತರಲು ಪೂರಕವಾಗುವಂತೆ ಅಬ್ದುಲ್ ಕಲಾಂ ಎಳೆ ವಯಸ್ಸಿನಲ್ಲೇ ಕೆಲಸದಲ್ಲಿ ತೊಡಗಿದ್ದ. ಹುಡುಗ ಪತ್ರಿಕೆಗಳನ್ನು ವಿತರಿಸುತ್ತಿದ್ದ. ‘ನನ್ನ ಪಯಣ’ ಎಂಬ ಪುಸ್ತಕದಲ್ಲಿ ಕಲಾಂ ಅವರು ಆ ದಿನಗಳ ಬದುಕಿನ ಕಾಲಘಟ್ಟ ಕುರಿತು ಬರೆದಿದ್ದಾರೆ. ‘ನನ್ನ ಉತ್ಸಾಹಕ್ಕೆ ಮೇರೆ ಎಂಬುದೇ ಇರಲಿಲ್ಲ. ಆಗ ನನಗೆ ಎಂಟು ವಯಸ್ಸು. ಆದರೆ ನಾನು, ನನ್ನ ಕುಟುಂಬದ ಆದಾಯಕ್ಕೆ ಅರ್ಥಪೂರ್ಣವಾಗಿ ನನ್ನ ಕಾಣಿಕೆ ಕೊಟ್ಟೆ… ಅದಾಗ್ಯೂ ನಾನು ನಿತ್ಯ ಮಾಡುತ್ತಿದ್ದ ಕೆಲಸಕ್ಕೆ ವೇಳೆಯನ್ನು ಹೊಂದಿಸಬೇಕಾಗಿತ್ತು. ನನ್ನ ಅಧ್ಯಯನ ಮತ್ತು ಶಾಲೆ ಎಂದಿನಂತೆ ಮುಂದುವರಿಯಬೇಕಾಗಿತ್ತು.” ಎಂದು ಬರೆದಿದ್ದಾರೆ.
‘ಕಲಾಂ ಅವರ ಶಿಕ್ಷಣ’ ಎಂಬ ಅಧ್ಯಾಯದಲ್ಲಿ ಅವರ ಶಾಲಾ, ಕಾಲೇಜಿನ ದಿನಗಳು, ಆ ಸಂದರ್ಭದಲ್ಲಿ ಅವರು ಅನುಭವಿಸಿದ ಕಷ್ಟಗಳು, ಫೀಸ್ ಕಟ್ಟಲಾಗದೇ ಇದ್ದ ಸಂದರ್ಭದಲ್ಲಿ ಅವರ ಸಹೋದರಿ ಅವರಿಗಾಗಿ ತನ್ನ ಚಿನ್ನದ ಬಳೆಯನ್ನೇ ಮಾರಿದ ಘಟನೆಗಳ ಬಗ್ಗೆ ಬರೆದಿದ್ದಾರೆ. ನಂತರದ ಅಧ್ಯಾಯದಲ್ಲಿ ಕಲಿಕೆಯ ಬಳಿಕ ‘ಡಿ ಆರ್ ಡಿ ಓ ದಲ್ಲಿ ಕಲಾಂ ಅವರ ಸೇವಾವಧಿ’ ಬಗ್ಗೆ ಮಾಹಿತಿ ಇದೆ. ‘ಕ್ಷಿಪಣಿ ಮನುಷ್ಯ’ ಅಧ್ಯಾಯದಲ್ಲಿ ಕಲಾಂ ಅವರನ್ನು ಆ ಹೆಸರಿನಿಂದ ಏಕಾಗಿ ಕರೆಯುತ್ತಾರೆ ಎನ್ನುವ ಬಗ್ಗೆ ಸವಿವರವಾದ ಮಾಹಿತಿ ಇದೆ. ಇಲ್ಲಿ ಕಲಾಂ ಅವರ ಬದುಕಿನ ಒಂದು ಪುಟ್ಟ ಘಟನೆಯನ್ನು ನೀಡಲಾಗಿದೆ. ಅದರಲ್ಲಿ “ ಅಬ್ದುಲ್ ಕಲಾಂ ಅವರ ಮನಸ್ಸು ಬಂಗಾರದಂತಹದ್ದು. ಇದನ್ನು ಒಂದು ಪುಟ್ಟ ಪ್ರಸಂಗದ ಮೂಲಕ ಪುಷ್ಟೀಕರಿಸಬಹುದು. ಡಿ ಆರ್ ಡಿ ಓ ದ ಪ್ರಮುಖ ಯೋಜನೆಯೊಂದರಲ್ಲಿ ಕೆಲಸದ ಒತ್ತಡ ಅತಿಯಾಗಿತ್ತು. ಒಬ್ಬ ವಿಜ್ಞಾನಿ ಮೇಲಧಿಕಾರಿಯಾಗಿದ್ದ ಕಲಾಂ ಅವರನ್ನು ಕಂಡು ‘ತಾವು ಮನೆಗೆ ಬೇಗ ಹೋಗಿ ಮಕ್ಕಳನ್ನು ವಸ್ತುಪ್ರದರ್ಶನವೊಂದಕ್ಕೆ ಕರೆದುಕೊಂಡು ಹೋಗುವುದಾಗಿ ಮಾತುಕೊಟ್ಟಿದ್ದೇನೆ’ ಎಂದು ತಿಳಿಸಿದರು. ಕಲಾಂ ಉದಾರವಾಗಿ ಅನುಮತಿ ಕೊಟ್ಟರು. ಆನಂತರ ಆ ವಿಜ್ಞಾನಿ ತಮ್ಮ ಕೆಲಸಕ್ಕೆ ಮರಳಿದರು. ಅವರು ತಮ್ಮ ಕೆಲಸದಲ್ಲಿ ತನ್ಮಯರಾಗಿ ಮನೆಗೆ ಹೋಗಬೇಕೆಂಬುದನ್ನೇ ಮರೆತಿದ್ದರು. ಮನೆಗೆ ತಡವಾಗಿ ಹೋದಾಗ ತಪ್ಪಿತಸ್ಥ ಭಾವನೆ ಬಂತು. ಆದರೆ ಮಕ್ಕಳು ಮನೆಯಲ್ಲಿ ಇರಲಿಲ್ಲ. ಹೆಂಡತಿ ಮನೆಯಲ್ಲಿದ್ದರು. ಆಕೆಯನ್ನು ಮಕ್ಕಳು ಎಲ್ಲಿಗೆ ಹೋಗಿದ್ದಾರೆಂದು ಕೇಳಿದಾಗ ‘ನಿಮ್ಮ ಮ್ಯಾನೇಜರ್ ಸುಮಾರು ೫.೧೫ಕ್ಕೆ ಇಲ್ಲಿದ್ದರು. ಅವರು ಮಕ್ಕಳನ್ನು ವಸ್ತುಪ್ರದರ್ಶನಕ್ಕೆ ಕರೆದುಕೊಂಡು ಹೋಗಿದ್ದಾರೆ.’ ಎಂದರು. ಏನಾಗಿತ್ತೆಂದರೆ ಅಬ್ದುಲ್ ಕಲಾಂ, ಆ ವಿಜ್ಞಾನಿ ಕೆಲಸದಲ್ಲಿ ಮಗ್ನರಾಗಿರುವುದನ್ನು ಗಮನಿಸಿ, ಈ ಮನುಷ್ಯ ಮನೆಗೆ ಹೋಗುವುದಿಲ್ಲ ಎನಿಸಿ, ಮಕ್ಕಳಿಗೇಕೆ ನಿರಾಶೆ ಮಾಡಬೇಕೆಂದು ತಾವೇ ಅವರ ಮನೆಗೆ ಹೋಗಿ ಮಕ್ಕಳನ್ನು ವಸ್ತುಪ್ರದರ್ಶನಕ್ಕೆ ಕರೆದೊಯ್ದರು.” ಇದು ಕಲಾಂ ಅವರ ಮನಸ್ಸು.
‘ಅಧ್ಯಕ್ಷರಾಗಿ ಕಲಾಂ’ ಅಧ್ಯಾಯದಲ್ಲಿ ಅವರು ರಾಷ್ಟ್ರಪತಿಗಳಾಗಿದ್ದ ಸಂದರ್ಭ ಮತ್ತು ನಂತರದ ದಿನಗಳ ಬಗ್ಗೆ ತಿಳಿಸಲಾಗಿದೆ. ರಾಷ್ಟ್ರಪತಿ ಭವನದ ಬಗ್ಗೆ ಚುಟುಕಾದ ವಿವರವನ್ನೂ ನೀಡಲಾಗಿದೆ. ಕೊನೆಯ ಅಧ್ಯಾಯದಲ್ಲಿ ಕಲಾಂ ಅವರಿಗೆ ದೊರೆತ ‘ಪ್ರಶಸ್ತಿಗಳು ಮತ್ತು ಸಾಧನೆಗಳು’ ಬಗ್ಗೆ ವಿವರಗಳಿವೆ. ಕೊನೆಯಲ್ಲಿ ಕಲಾಂ ಜೀವನದ ಬಗ್ಗೆ ರಸಪ್ರಶ್ನೆ, ಚುಟುಕಾದ ಮಾಹಿತಿ ನೀಡಲಾಗಿದೆ. ಪ್ರತೀ ಅಧ್ಯಾಯಕ್ಕೆ ಮೊದಲು ಕಲಾಂ ಅವರ ನುಡಿಮುತ್ತುಗಳಿವೆ.
೧೨೦ ಪುಟಗಳ ಈ ಪುಸ್ತಕದಲ್ಲಿ ಸೂಕ್ತವಾದ ರೇಖಾ ಚಿತ್ರಗಳನ್ನು ಮುದ್ರಿಸುವುದರ ಮೂಲಕ ಮಕ್ಕಳಿಗೆ ಓದಲು ಇನ್ನಷ್ಟು ಹಿತವಾಗುವಂತೆ ಮಾಡಲಾಗಿದೆ. ‘ನಿಮ್ಮ ಕನಸು ನನಸಾಗುವ ಮುನ್ನ, ಮೊದಲು ನೀವು ಕನಸು ಕಾಣಬೇಕು’ ಎಂಬ ಮಾತು ಕಲಾಂ ಅವರ ಜೀವನವನ್ನೇ ನಮ್ಮ ಮುಂದೆ ತೆರೆದಿಡುತ್ತದೆ.