ಅಬ್ಬಬ್ಬ, ಮಂಡರಗಪ್ಪೆ ಕೈಲಿ ಕಡಿಸಿಕೊಂಡಿದ್ದೆ !

ಅಬ್ಬಬ್ಬ, ಮಂಡರಗಪ್ಪೆ ಕೈಲಿ ಕಡಿಸಿಕೊಂಡಿದ್ದೆ !

* ಆಗ ನಾನು ಹೀಗಿದ್ದೆ. 
 
ಹೊಳಲ್ಕೆರೆಯಲ್ಲಿ ಯಾರಿಗಾದರೂ ಒಮ್ಮೆಯಾದರೂ ಚೇಳು ಕಚ್ಚಿಲ್ಲವೆಂದರೆ, ಆಶ್ಚರ್ಯದಿಂದ  ತಲೆಯೆತ್ತಿ ನೋಡ್ತಿದೃ, ಆಗ. ಅಲ್ಲಿನ ವಾತಾವರಣದಲ್ಲಿ ಚೇಳು, ಹಾವು ಮಂಡರಗಪ್ಪೆ, ಹಲ್ಲಿಗಳು, ಓತಿಕ್ಯಾತ, ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಕಾಣಿಸುವ ಸಂಗತಿಗಳಾಗಿದ್ದವು. ಮನೆಗಳ ಗೋಡೆಗಳು ಅತಿ ದಪ್ಪ, ಹಾಗು ಚಿಕ್ಕ ವರಸೆ ಕಲ್ಲುಗಳಿಂದ ಮಾಡಲ್ಪಟ್ಟಿದ್ದು. ಅವಕ್ಕೇನು ಸಿಮೆಂಟ್ ಗಿಲಾವಾಗಲಿ,  ಗಾರೆಯ ಕವಚವಾಗಲಿ ಇರುತ್ತಿರಲಿಲ್ಲ. ಜನ ಹಾವನ್ನು ನಾಗದೇವತೆ ಎಂದು ಪೂಜಿಸುತ್ತಿದ್ದರು. ಅಪ್ಪಿ ತಪ್ಪಿ ಅವನ್ನು ಕೊಲ್ಲಲು ಯಾರು ಮುಂದೆ ಬರುತ್ತಿರಲಿಲ್ಲ. ಒಂದು ವೇಳೆ ಕೊಲ್ಲಲೇ ಬೇಕಾದ ಪ್ರಸಂಗ ಬಂದರೆ, ಅಕ್ಕ ಪಕ್ಕದ ಜನರನ್ನು ಕರೆದು ಅವರ ಸಹಾಯದಿಂದ ಅವನ್ನು ಕೊಂದು, ನಾಗರಹಾವಾದರೆ ಅದರ ಬಾಯಿಗೆ ಒಂದು ರುಪಾಯಿ ಬಿಲ್ಲೆಯನ್ನು ಇಟ್ಟು ಸುಡುತ್ತಿದ್ದರು. ಅದರಲ್ಲೂ ಅಪ್ಪ-ಅಮ್ಮ, ನಾಗರ ಪ್ರತಿಷ್ಠೆ ಮಾಡಿಸಿದ ನಂತರವೇ ನಾವು ೪ ಮಕ್ಕಳು ಉಳಿದುಕೊಂಡೆವು. ಉಳಿದ ನಾಲ್ವರು ಹುಟ್ಟಿದ ಕೆಲವೇ ತಿಂಗಳುಗಳಲ್ಲೇ ತೀರಿಕೊಂಡರಂತೆ  ! ಚೇಳುಗಳು ಎರಡನೇ ಪ್ರಾಮುಖ್ಯತೆಯ ಹುಳುಗಳಾಗಿದ್ದವು.
 
ಬೇಸಿಗೆಯ ಬಿಸಿಲಿನ ಝಳಕ್ಕೆ ಹಾವುಗಳು, ಚೇಳುಗಳು, ಮಂಡರಗಪ್ಪೆಗಳು, ಮನೆಯೊಳಗೆ ಬರುತ್ತಿದ್ದವು. ಅವು ಗೋಡೆಯ ಬದಿಯಲ್ಲೇ ನಿಧಾನವಾಗಿ ಬರುತ್ತವೆ. ನಾವು ಅದಕ್ಕೇ ಮಲಗುವಾಗ ನಮ್ಮ ಹಾಸಿಗೆಗಳನ್ನು ಗೋಡೆಗೆ ಹತ್ತಹಾಕಿಕೊಂಡು ಮಲಗುವುದು ಕ್ಷೇಮಕರವಲ್ಲವೆಂದು ತಿಳಿದವರು ಎಚ್ಚರಿಕೆ ಕೊಡುತ್ತಿದ್ದರು.  ದೊಡ್ಡ ದೇಗುಲದಂತಹ ಮನೆಗಳು, ಸಾವಿರಾರು ಮರಮುಟ್ಟುಗಳು, ಗಳುಗಳು,  ದಬ್ಬೆ, ಮತ್ತು ಬಳ್ಳಿಗಳ ನಡುವೆ ಬೇಕಾದಷ್ಟು ಸಂದು ಬಿಟ್ಟಿರುತ್ತಿದ್ದದ್ದ ರಿಂದ ಇಲಿಗಳು ಒಂದರಹಿಂದೆ ಅಟ್ಟಿಸಿಕೊಂಡು ಓಡಾಡುವ ದೃಷ,  ನಮಗೆ ಅಭ್ಯಾಸವಾಗಿ ಹೋಗಿತ್ತು. ಅದಕ್ಕೆ ಅಮ್ಮ, ಎಲ್ಲ ಪಾತ್ರೆಗಳ ಮೇಲೂ ಒಂದು ತಟ್ಟೆಯನ್ನಾದರೂ ಮುಚ್ಚಿರಬೇಕೆಂದು,  ಯಾವಾಗಲೂ ಹೇಳುತ್ತಿದ್ದರು.
 
ಮನೆಯ ತುಂಬಾ  ಕಪ್ಪಿರುವೆಗಳು, (ಗೊದ್ದಗಳು) ಕೆಂಪಿರಿವೆಗಳು, ಮತ್ತು ಝರಿಗಳನ್ನು ನೆನೆಸಿಕೊಂಡರೆ ನಗರಗಳ  pesticides  ತಜ್ಞರು ಒಂದುವೇಳೆ ನಮ್ಮೂರಿಗೆ ಬಂದು ನೆಲೆಸಿದರೆ ಅವರ  ಕಥೆಯೇನು ಅನ್ನಿಸುತ್ತದೆ. ಸಾಯಂಕಾಲ  ೭ ಗಂಟೆಗೇ ಕಗ್ಗತ್ತಲು. ಕೆಲವುವೇಳೆ ಚಂದ್ರನ ಬೆಳಕಿರುವಾಗ, ಅಲ್ಲಿ ಲಗೋರಿ ಆಟವಾಡುತ್ತಿದ್ದ ಹಳ್ಳಿ ರೈತರ ಮಕ್ಕಳು. ಎಲ್ಲೆಲ್ಲೂ ಪ್ರಶಾಂತವಾದ ವಾತಾವರಣ. ಬೆಳಿಗ್ಯೆ,  ನಸುಕಿನಿಂದ ಆರಂಭವಾದ ಕೋಳಿಗಳ "ಕೊಕ್ಕೋಕೊ," ಕೂಗುವಿಕೆ, ೭ ಗಂಟೆಯ ತನಕವಿರುತ್ತಿತ್ತು. ದೂರದಲ್ಲಿ ಮರಕುಟಕಗಳು, ಇಲ್ಲವೇ ಕೋಗಿಲೆಗಳ ’ಕೂ ಸಂಗೀತ’. ಕಾಗೆಗಳು, ಪಾರಿವಾಳಗಳು, ಗಿಣಿಗಳು ಅಳಿಲುಗಳು, ಹಸುವಿನ-ಕರುಗಳು, ಕತ್ತೆಗಳು, ನೇಗಿಲಿನ ಮತ್ತು ಎತ್ತುಗಳ ಕೊಂಬಿಗೆ ಹಾಕಿದ ಗೆಜ್ಜೆಗಳ ಮತ್ತು ಅವು ಎಳೆಯುತ್ತಿರುವ ಬಂಡಿಯ ಶಬ್ದಗಳು ಆವರಿಸಿದ ಹಳ್ಳಿಯ ಬದುಕು.. ಹಳ್ಳಿಯ ಮುಗ್ಧ ಕುರುಡು ಭಿಕ್ಷುಕ ಬಾಶಿಂಗ,’ ದಾರಿಯಲ್ಲಿ ಹಾಡುತ್ತಾ ಭಿಕ್ಷೆಬೇಡುವ ಸನ್ನಿವೇಶ. ಅದೂ ನಮ್ಮ ಊರಿನ ರಸಿಕರಿಗೆ ಮನರಂಜನೆಯನ್ನು  ಒದಗಿಸುತ್ತಿತ್ತು.
 
ರಾತ್ರಿ ಯಾವುದೋ ಮದುವೆಯ ದಿಬ್ಬಣ ನಮ್ಮ-ಮನೆಯಮುಂದೆ ಬರುವುದೆಂದು ಕಾದಿದ್ದೆವು. ಆದರೆ ಅದು ಯಾಕೊ ಗಾಣಿಗರ ಕೆಂಚಪ್ಪನವರ ಅಂಗಡಿಯನ್ನು ಹಾದುಹೋದನಂತರ, ನೇರವಾಗಿ ಪೇಟೆಕಡೆ ಹೊಯಿತಂತೆ. ಬೆಳಿಗ್ಯೆ, ಅದರ ಬಗ್ಗೆ ಹಳ್ಳಿಯ ಜನವೆಲ್ಲಾ ಮಾತಾಡಿಕೊಳ್ಳುತ್ತಿದ್ದರು. ಹೀಗೆ ನಮ್ಮ ಮನೆಯ ರಸ್ತೆಯನ್ನು ಕಡೆಗಣಿಸಿದರೆ ಗತಿಯೇನು ಎನ್ನುವ ಕಾತುರ ಎಲ್ಲರ ಮುಖದಮೇಲೂ ಕಾಣಿಸುತ್ತಿತ್ತು.  ನಾನು ನಮ್ಮ ಮನೆಯ ಒಳಗಡೆಯಿಂದ,  ಹೊರಗಡೆ ಓಡಿಬಂದು ವಠಾರದ ಪ್ರಮುಖದ್ವಾರದ  ಮೆಟ್ಟಲಿನಮೇಲೆ ನಿಲ್ಲಲು ಅನುವುಮಾಡಿಕೊಳ್ಳುತ್ತಿದ್ದೆ. ಆಗ ಏನೋ ಕಾಲಿನ ಬೆರಳಿಗೆ ಕಚ್ಚಿದಂತೆ ಅನ್ನಿಸಿತು. ಸೊಳ್ಳೆಯಿರಬಹುದೆಂದು ಸುಮ್ಮನಾದೆ. ’ಅಮ್ಮ, ಏನೊ ಕಾಲಿಗೆ ಕಚ್ತು’, ಅಂದಾಗ,  ಯಾರು ನನ್ನ ಮಾತಿನಕಡೆ ಗಮನವೀಯಲಿಲ್ಲ. ಅವರಿಗೆಲ್ಲಾ ಯಾಕೆ ಮದುವೆ ದಿಬ್ಬಣ ನಮ್ಮ ರಸ್ತೆಯಲ್ಲಿ ಬರಲಿಲ್ಲ ಅನ್ನುವುದ ಬಗ್ಗೆ ವಿಚಾರವಿನಿಮಯ ನಡೆಸಿದ್ದರು. ಚಂದ್ರ, ಮನೆಯೊಳಗೆ ಹೋಗಿ, ಲಾಟೀನು ಹಿಡಿದು ಬರಲು ವೇಳೆ ತಗುಲಿತ್ತು. ನೋಡಿದಾಗ ಕರಿ-ಮಂಡರಗಪ್ಪೆ, ನಿಧಾನವಾಗಿ ಕಲ್ಲಿನ ಪೊಟರೆಯೊಳಗೆ ಸಾಗಲು ಹವಣಿಸುತ್ತಿತ್ತು. ಆದರೆ ಅವಿತುಕೊಳ್ಳಲು ಆಗದೆ ಬೇರೆ ಜಾಗ ಹುಡುಕುತ್ತಿತ್ತು. ನನ್ನ ತಮ್ಮ, ಚಂದ್ರ, ಒಂದು ಕಟ್ಟಿಗೆ ತೊಗೊಂಡು ಚೆನ್ನಾಗಿ ಚಚ್ಚಿ ಚೇಳನ್ನು ಸಾಯಿಸಿದನು. ಅದೆಷ್ಟು ದೊಡ್ಡ ಕೊಂಡಿಗಳು ’ಸುರ್’ ಎಂದು, ಶಬ್ದಬೇರೆ ಮಾಡೋದದು.
 
ನಾನು  ಕುಂಟುತ್ತಾ ಮನೆಯೊಳಗೆ ಹೊಗಿ ಚಾಪೆಯಮೇಲೆ ಕುಳಿತೆ. ಯಾಕೋ ಆಯಾಸವಾದಂತೆ ಭಾಸವಾಯಿತು. ಮೈಯೆಲ್ಲಾ ಬಿಸಿ-ಬಿಸಿ, ಉರಿಯುತ್ತೇನೊ ಅನ್ನಿಸತೊಡಗಿತು. ನಿಧಾನವಾಗಿ ಮೈಯೆಲ್ಲಾ ಬೆವರಲು ಪ್ರಾರಂಭವಾಯಿತು. ಆಗ ಅಮ್ಮ, ’ಯಾಕೊ ಏನಾಯ್ತು. ಇನ್ನೂ ಸರಿಹೋಗ್ಲಿಲ್ವ’ ಎಂದು ಕೇಳಿದರು. ನನ್ನ ಕಣ್ಣುಗಳು ನಿಧಾನವಾಗಿ ತೇಲುಗುಡ್ಡೆ-ಮೇಲುಗುಡ್ಡೆಯ ಸ್ಥಿತಿಗೆ ಬಂದಿದ್ದವು. ನಿದ್ರಾದೇವಿಯ ಆಸರೆಯಲ್ಲಿದ್ದಂತೆ ಅನ್ನಿಸಿತು. ಅಮ್ಮ ಬಂದು ಮನೆಯಲ್ಲಿದ ಯಾವುದೋ ಮುಲಾಮನ್ನು ಬಳಿದು, ’ಊಟಮಾಡಿ ಮಲಿಕ್ಕೊ’; ’ರಾತ್ರಿ ನಿದ್ದೆ ಮಾಡಿದ್ ಮೇಲೆ ಅದೆ ಸರಿಹೋಗುತ್ತೆ’ ಅಂದಳು. ಕಾಲು ಊದಿಕೊಂಡಿತ್ತು. ಕೆಂಪಗಾಗಿತ್ತು. ಅಪ್ಪ ದಿಕ್ಕುಗಾಣದೆ. ಮಂಡರಗಪ್ಪೆಯಾದರೆ ಪರವಾಗಿಲ್ಲ. ಒಂದುವೇಳೆ ಕೆಟ್ಟಹುಳು ಕಚ್ಚಿದ್ದರೆ  ಮಾಡೋದೇನು ಅನ್ನೋ ಭಯದಲ್ಲಿ ತತ್ತರಿಸಿದರು. ನಾಟಿ ವೈದ್ಯರೇ ಇವನ್ನೂ ವಾಸಿಮಾದಬೇಕು. ಇಂಗ್ಲಿಷ್ ವೈದ್ಯರು ಸಿಕ್ಕುತ್ತಿರಲಿಲ್ಲ. ಜನರಿಗೆ ಅವರಲ್ಲಿ ನಂಬಿಕೆಯೂ ಇರಲಿಲ್ಲ.
 
ಬೆವರಿನ ನೀರು ಹರಿದುಹೋಗುತ್ತಿತ್ತು.ಆಗ,  ಅಂಗಿ ಬಿಚ್ಚಿ ಹಾಸಿಗೆಯಮೇಲೆ ಮಲಗಿಸಿದರು. ’ಬೆಳಿಗ್ಯೆ ಡಾಕ್ಟರ್ ಹತ್ರ ಕರ್ಕೊಂಡ್ ಹೋಗ್ತೀನಿ ಮಲಕ್ಕೊ’. ನಾನು ಉರಿಯ ತಾಪದಿಂದ, ತಕ-ತಕ ಕುಣಿಯಕ್ಕೆ ಶುರುಮಾಡಿದೆ. ನನ್ನ ಅಳು ತಾರಕಕ್ಕೆ ಏರಿತು. ಕಿಟ್ಟಣ್ಣ ಬಂದು ನೋಡಿ, ’ದೊಡ್ಡಮ್ಮ, ಇದ್ಯಾವುದೊ ಕೆಟ್ಟ ಹುಳ ಕಡ್ದಿರೊದು, ಖಂಡಿತ’. ’ಇಲ್ದಿದ್ರೆ ಇಷ್ಟು ಬೆವರು ಬರಲ್ಲ’.’ ಅಲ್ ನೋಡಿ ಕಾಲು ಅದೆಷ್ಟ್ ಕೆಂಪಾಗಿದೆ’. ಬೆಳಿಗ್ಯೆವರೆಗೆ ಮನೆಯಲ್ಲಿ ಯಾರಿಗೂ ನಿದ್ದೆಯಿಲ್ಲ. ನನ್ನ ಗೋಳಾಟ ನೋಡೋದೇ ಕಷ್ಟವಾಗಿತ್ತು. ಮನೆಯಲ್ಲಿದ್ದ ಗ್ರಾಮಾಫೋನ್ ರೆಕಾರ್ಡನ್ನು ತೇದು, ಅದರ ಲೇಪವನ್ನು ಜಾಗಕ್ಕೆ ಹಚ್ಚಿರೆಂದುಹೇಳಿದ್ದನೂ ಮಾಡಿದರು. ಆದರೆ ಉರಿ ಹೆಚ್ಚಾಯಿತೇ ವಿನಃ ಕಡಿಮೆಯಾಗಲಿಲ್ಲ. ಸದ್ಯ, ಕಚ್ಚಿದ್ದು ಚೇಳು. ಏನಾದೃ, ಹಾವು ಅಂತ ಗೊತ್ತಾಗಿದ್ರೆ ಬಹಳ ಕಷ್ಟ ಆಗ್ತಿತ್ತು. ಹಾವು ಕಚ್ಚಿದರೆ, ಅದರ ಆರೈಕೆ ಬಹಳ ಕಷ್ಟ. ಅದು ವಿಷದ ಹಾವಿನ ಮೇಲೆ ಅವಲಂಬಿಸಿರುತ್ತದೆ. ಹಲವಾರು ಜನ ಹಾವು ಕಚ್ಚಿ ಮರಣಿಸಿದ್ದಾರೆ. ಅದಕ್ಕೆ ಹೇಳಿಮಾಡಿಸಿದ ಔಷಧಗಳಿಲ್ಲ.  ಅದಲ್ಲದೆ,  ಔಷಧಿ ನಾಟುವುದು ಕಷ್ಟ. ಅದಲ್ಲೆ ನಿದ್ರೆ ಬರದಂತೆ ತಡೆಹಿಡಿಯಬೇಕು. ಆಗ ವಿಷ ಮೈಯೊಳಗೆ ಬೇಗ ಏರುವುದಿಲ್ಲ. ಆಗ ಶೆಂಕರಶೆಟ್ಟಿ ಡಾಕ್ಟರ್ ನಮ್ಮ ಊರಿಗೆ ಬಂದಿರಲಿಲ್ಲ. ಮೊದಲು ಡಾಕ್ಟರ್ ಯಾವ ಹುಳ ಕಚ್ಚಿದೆಯೆಂದು ಕಚ್ಚಿದಾಗ, ಪತ್ತೆಹಚ್ಚಿದಿರ ಎಂದು  ವಿಚಾರಿಸಿದ ಪ್ರಶ್ನೆಗೆ ಸೂಕ್ತ ಉತ್ತರಕೊಟ್ಟನಂತರ, ಖಚಿತಪಡಿಸಿಕೊಂಡಾದ ಮೇಲೆ, ಡಾಕ್ಟರ್ ಚೂಪಾದ ಬ್ಲೇಡ್ ನಲ್ಲಿ ಕಚ್ಚಿದ ಜಾಗವನ್ನು ಹೆರೆದು, 'ಟಿಂಚರ್' ನಿಂದ ಶುದ್ಧಿಗೊಳಿಸಿ, ಒಂದು ವಿಶೇಷ ಮುಲಾಮನ್ನು ಹಚ್ಚಿ, 'ಬ್ಯಾಂಡೇಜ್ ಬಟ್ಟೆ'ಯನ್ನು ಗಟ್ಟಿಯಾಗಿ ಕಟ್ಟಿದರು.
 
ಕಾಲನ್ನು  ಮೇಲಕ್ಕೆತ್ತಿ ಹಿಡಿದು,  ದಿಂಬುಹಾಕಿಕೊಂಡು ಮಲಗಲು ಹೇಳಿದರು. ವಿಷಮೇಲೆ ಏರದಂತೆ, ಸಾಧ್ಯವಾದಷ್ಟು ಗದ್ದಲ, ಶಬ್ದಮಾಡಿ ರೋಗಿಯನ್ನು ನಿದ್ರೆಮಾಡದಂತೆ ತಡೆಯುವುದು ಉತ್ತಮವೆಂದು ಡಾಕ್ಟರ್ ಹೇಳಿದರು. ಆದರೆ, ನನಗೋ ಕಣ್ಣು  ಎಳೆದುಕೊಂಡು ಹೋಗುತ್ತಿತ್ತು. ನಿದ್ದೆಮಾಡುವುದರಲ್ಲಿ ಮೊದಲೇ ನಾನು ನಿಸ್ಸೀಮ ಬೇರೆ ! ಸುಮಾರು ಎರಡು ದಿನರಾತ್ರಿ, ಯಮಯಾತನೆಯನ್ನು ಅನುಭವಿಸಿದಮೇಲೆ ನಿಧಾನವಾಗಿ 'ಭೋಳೆ ' ಬಂದು ನಿದ್ದೆಹೋಗಿದ್ದೆ. ೮-೧೦  ತಾಸು ಮೈಮರೆತು ನಿದ್ದೆಯಲ್ಲಿದ್ದೆ. ಒಟ್ಟಿನಲ್ಲಿ ಮಂಡರಗಪ್ಪೆಯ ವಿಷದ ಮುಷ್ಟಿಯಿಂದ ಮುಕ್ತಿಪಡೆದಿದ್ದೆ.
 
ಹಿಂದೆ, ಅಮ್ಮ ಏನೋ ಕೆಲಸಮಾಡುವಾಗ, ಅಲ್ಲಿದ್ದ ಕಡಗೋಲಿನಮೇಲೆ ಒಂದು 'ಕೆಂಜೇಳು' ಕುಳಿತಿದ್ದಿದ್ದನ್ನು ಗಮನಿಸಲಿಲ್ಲ. ಕೆಲಸಮಾಡುತ್ತಿರುವಾಗ,  ಕಡಗೋಲಿನ ಹತ್ತಿರ ಅವಳ ಕಿವಿ ಬಂತು, ಗೊತ್ತಲ್ಲ ; ಚೇಳಿನ ಕೆಲಸ, ಕುಟುಕುವುದು ! ಅಮ್ಮ ಅದೇನು ಒದ್ದಾಡಿದರಪ್ಪ. ನಮಗೆಲ್ಲಾ ಅವರ ಒದ್ದಾಟ ನೋಡಿ, ಕಣ್ಣೀರನ್ನು ತಡೆಯಲಾಗಲಿಲ್ಲ. ಒಂದು ದಿನ ಪೂರ್ತಿ ಅವರು ಪಟ್ಟ ಕಷ್ಟ ನಮ್ಮ ಶತೃಗಳಿಗೂ ಬೇಡ ಸದ್ಯ !
 
ಜ್ಞಾನ ತಪ್ಪಲಿಲ್ಲ. 'ಅದು ಬಹುಶಃ, ಕಚ್ಚಿರುವ ಕೀಟ ಹಾವಲ್ಲ ಅನ್ನುವುದನ್ನು ಖಾತ್ರಿಗೂಳಿಸಿತ್ತು'. 'ಆದರೆ ಯಾರಿಗೂ ನಂಬುವಂತ್ತಿಲ್ಲ'. 'ಇಲ್ಲವೇ ನಂಬದೆ ಬಿಡಲು ಸಿದ್ಧರಿಲ್ಲ' ಎನ್ನುವ ಪರಿಸ್ಥಿತಿಯನ್ನು ನಿರ್ಮಾಣಮಾಡಿತ್ತು !
 
ಒಟ್ಟಿನಲ್ಲಿ ಅದೊಂದು ಮರೆಯಲಾರದ ಮುಜುಗರದ ಅನುಭವವಾಗಿತ್ತು ! ಇಂದಿಗೂ ನನಗೆ ಅದು ಯಾವಾಗಲಾದರೂ ಕನಸಿನಲ್ಲಿ ಬರುತ್ತದೆ ! ಸನ್. ೧೯೯೫ ರಲ್ಲಿ, ಮಹಾರಾಷ್ಟ್ದದ,  ಮುಂಬೈಗೆ ಕೇವಲ ೧೯೦ ಮೈಲಿ ಹತ್ತಿರದ 'ಲೋನೇರಿ,' ಎಂಬ ಹಳ್ಳಿಗೆ ಹೋಗಿದ್ದೆ. ಅಲ್ಲಿನ ಹಳೆಯ ಹಂಚಿನ ಮನೆಯಲ್ಲಿ ಮಲಗುವ ಪ್ರಸಂಗ ಬಂತು. ರಾತ್ರಿ ಇದ್ದಕ್ಕಿದ್ದಂತೆ ಸೂರಿನಿಂದ 'ತಪ ತಪ' ಎಂದು ಶಬ್ದವಾಗಿ 'ಮುಳಮುಳು',ಅನ್ನುವ ಅನುಭವವಾಯಿತು. ಟಾರ್ಚ್ ಹಾಕಿ ನೋಡಿದಾಗ 'ಕಪ್ಪು ಮಂಡರಗಪ್ಪೆಯ ಮರಿಗಳು' ಮೇಲಿನಿಂದ ಸೆಖೆ ಸಹಿಸಲಾರದೆ ಓಡುತ್ತಿರುವಾಗ ಆಯತಪ್ಪಿ ನಮ್ಮ ಹಾಸಿಗೆಯ ಮೇಲೆ ಬಿದ್ದಿದ್ದವು. ಅವು ಇನ್ನು ಪ್ರವೃದ್ಧಮಾನಕ್ಕೆ ಬರದ ಹಸುಗೂಸುಗಳು ! ನಾನು ನನ್ನ ಗೆಳೆಯರು ಅವನ್ನೆಲ್ಲ ಒಂದೊಂದಾಗಿ  ಹಿಡಿದು ಕೊಂದೆವು. 
 

 

Comments