ಅಬ್ಬೆಯ ಉಳಿಸಿ...

ಅಬ್ಬೆಯ ಉಳಿಸಿ...

ಕವನ

ಅಬ್ಬೆಯ ನುಡಿಗಿಂದು ಬಂದೆರಗಿದೆ ಕಂಟಕ

ಬೊಬ್ಬೆಯ ಹೊಡೆದರೂ ನಿಲ್ಲದು ನಯವಂಚಕ

ಅಂಬುದಿತೆರದಿ ಯವನಭಾಷೆ ಪಡೆಯಿತಿದೆ ಚುಂಬಕ

ಹಬ್ಬುಗೆಯನ್ನಿರಿದು ಬಿಸುಟಿ ನಾವಾಗಬೇಕಿದೆ ಸಂಚಾಲಕ

 

ಉಗ್ಗಡಿಸಿರೆಲ್ಲರೂ ಕನ್ನಡ ಕನ್ನಡ ಎಂದು

ಅಗ್ಗವಲ್ಲದು  ನಮ್ಮ ಶಾಸ್ತ್ರೀಯ ಭಾಷೆ

ಸಗ್ಗಕ್ಕೂ ಮಿಗಿಲಿರುವ  ಕರುನಾಡು ಕನವರಿಸೆ

ಒಗ್ಗಟ್ಟಲಟ್ಟಬಹುದು ಬೇರೆಲ್ಲಾ ಭಾಷೆ

 

ಪರಕುಟೀರದೊಳಗೆ ಜೀಕುತಾ ಆಂಗ್ಲದ

ಉರುಳೊಳಗಿಳಿದು ವಿಲವಿಲಿಸುವ ಭಾಷೆಗೆ

ಒರೆಹಿಡಿವರಾರು ಒರಲಿಡಿದ ಮಾತಿಗೆ

ಕರುನಾಡಲೇಕೆ ಆದರವು ತುರುಕರಿಗೆ

 

ಪುರಾತನದ  ಭಾಷೆಗಿರಲಿ ಪುರಸ್ಕಾರ

ಪುರಸ್ಕೃತವು ಕರುನಾಡು ಭಾರತದ ಪುರ

ಪುರುಡಿಸಬೇಕು ಕಂಡೆಲ್ಲ ನಮ್ಮ ಪುರ

ಸುರರ ಭಾಷೆಯುಳಿಸೋಣ ಕೂಡಿ ಪರಸ್ಪರ.

***

ಓದುಗರಿಗಾಗಿ:

ಅಬ್ಬೆ -ತಾಯಿ

ಅಂಬುದಿ - ಸಮುದ್ರ

ಹಬ್ಬುಗೆ - ವಿಸ್ತಾರಿಸಿದ ಬಳ್ಳಿ

ಉಗ್ಗಡ - ಘೋಷಣೆ

ಒರೆಹಿಡಿ -ಗುಣತೂಗು

ಒರಲು - ಗೆದ್ದಲಿಡಿದ

ಪುರುಡಿಸು- ಅಸೂಯೆ 

-ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್