ಅಭಯಳಿಗೆ ಸಿಗುವುದೇ ನ್ಯಾಯ?

ಅಭಯಳಿಗೆ ಸಿಗುವುದೇ ನ್ಯಾಯ?

ಕೋಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯರೊಬ್ಬರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ನಿಜಕ್ಕೂ ನ್ಯಾಯ ಸಿಗುವುದೇ ಎಂಬ ಅಪನಂಬಿಕೆ ಶುರುವಾಗುವಷ್ಟರ ಮಟ್ಟಿಗೆ ಬೆಳವಣಿಗೆಗಳು ಸಂಭವಿಸಿರುವುದು ಆಘಾತಕಾರಿ. ಘಟನೆ ಖಂಡಿಸಿ, ಬುಧವಾರ ಮಧ್ಯರಾತ್ರಿ ಮಹಿಳಾ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ೧೦೦೦ಕ್ಕೂ ಹೆಚ್ಚು ದುಷ್ಕರ್ಮಿಗಳು, ದೊಂಬಿಕೋರರು ನುಗ್ಗಿ ಹೋರಾಟ ನಿರತ ವೈದ್ಯರನ್ನೂ ಥಳಿಸಿದ್ದೂ ಅಲ್ಲದೆ, ಆಸ್ಪತ್ರೆಯೊಳಗೆ ನುಗ್ಗಿ ಸಾಕ್ಷ್ಯ ನಾಶಕ್ಕೂ ಯತ್ನ ಮಾಡಿರುವುದು ಒಂದು ಗಂಭೀರ ಘಟನೆ. ಅಲ್ಲಿ ಪೋಲೀಸರಿದ್ದಾಗ್ಯೂ, ಇಷ್ಟೆಲ್ಲಾ ಘಟನೆಗಳು ಆಗಿದ್ದು ಹೇಗೆ? ಈ ಪ್ರಮಾಣದಲ್ಲಿ ಗುಂಪುಗೂಡಿ ಆಸ್ಪತ್ರೆಯತ್ತ ನುಗ್ಗಿದ್ದು ಪೋಲೀಸರಿಗೆ ಗೊತ್ತಾಗಲೇ ಇಲ್ಲವೇ? ಅಥವಾ ಯೋಜಿತವಾಗಿ ಈ ಘಟನೆಗಳು ನಡೆದಿದೆಯೇ ಎಂಬ ಅನುಮಾನಗಳೂ ಉದ್ಭವವಾಗಿವೆ.

ಬುಧವಾರ ರಾತ್ರಿಯ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿರುವುದನ್ನು ನೋಡಬಹುದಾಗಿದೆ. ಪ್ರಭಾವಿಯೊಬ್ಬನನ್ನು ರಕ್ಷಿಸುವ ಸಲುವಾಗಿಯೇ ದೊಂಬಿಕೋರರು ಈ ರೀತಿ ದಾಳಿ ನಡೆಸಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ವಿಚಿತ್ರವೆಂದರೆ, ದುಷ್ಕರ್ಮಿಗಳ ದಾಳಿ ಬಗ್ಗೆ ಖಂಡನೆ ವ್ಯಕ್ತಪಡಿಸುವುದನ್ನು ಅಥವಾ ಅವರನ್ನು ಹಿಡಿದು ಒಳಗೆ ಹಾಕುವುದನ್ನು ಬಿಟ್ಟು, ಪಶ್ಚಿಮ ಬಂಗಾಳದ ಪೋಲೀಸರು ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿರುವುದು ಖಂಡನೀಯ. ಅಷ್ಟೇ ಅಲ್ಲ, ಈ ರೀತಿ ದುಷ್ಕರ್ಮಿಗಳು ನುಗ್ಗಿದ್ದೇಕೆ? ಪ್ರತಿಭಟನಾನಿರತರ ಮೇಲೆ ದಾಳಿ ಮಾಡಿದ್ದೇಕೆ? ಯಾರನ್ನು ಉಳಿಸುವ ಸಲುವಾಗಿ ಸಾಕ್ಷ್ಯ ನಾಶಕ್ಕೆ ಯತ್ನ ಮಾಡಲಾಗಿದೆ ಎಂಬುದನ್ನು ಕಂಡು ಹಿಡಿಯಬೇಕಾಗಿದೆ. ಇದನ್ನು ಬಿಟ್ಟು ಬೇರೆಯವರ ಮೇಲೆ ಗೂಬೆ ಕೂರಿಸುವ ಯತ್ನ ಮಾಡಬಾರದು.

ಆ.೯ರ ರಾತ್ರಿ ೩೧ ವರ್ಷದ ತರಬೇತಿ ನಿರತ ವೈದ್ಯೆಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ. ಮೊದಲಿನಿಂದಲೂ ಈ ಘಟನೆ ಬಗ್ಗೆ ಅನುಮಾನ ಬರುವಂತೆಯೇ ಪಶ್ಚಿಮ ಬಂಗಾಳ ಪೋಲೀಸರು ನಡೆದುಕೊಂಡಿದ್ದಾರೆ. ಮೊದಲಿಗೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಬಿಂಬಿಸಲು ಹೋಗಿ ಬಳಿಕ ಕೊಲೆ ಹತ್ಯೆ ದಾಖಲಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ, ಆಸ್ಪತ್ರೆ ಕಡೆಯಿಂದಲೂ ದೂರು ನೀಡುವ ವಿಚಾರದಲ್ಲಿ ಸಾಕಷ್ಟು ಲೋಪಗಳಾಗಿರುವುದು ಬಹಿರಂಗವಾಗಿದೆ.

ಇದಾದ ಮೇಲೆ ಕೊಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐಗೆ ಈ ಪ್ರಕರಣ ವರ್ಗಾವಣೆಯಾಗಿದ್ದು, ಈ ಆದೇಶದ ರಾತ್ರಿಯೇ ದುಷ್ಕರ್ಮಿಗಳು ಸಾಕ್ಷ್ಯ ನಾಶಕ್ಕೆ ಯತ್ನಿಸಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಈ ಮಧ್ಯೆ, ಬುಧವಾರ ತರಬೇತಿ ನಿರತ ವೈದ್ಯೆಯ ಮರಣೋತ್ತರ ವರದಿ ಬಂದಿದ್ದು, ಇಡೀ ಘಟನೆಯ ಕ್ರೂರತೆಯನ್ನು ಬಿಚ್ಚಿ ಇಟ್ಟಿದೆ. ಅಷ್ಟೇ ಅಲ್ಲ, ಆಕೆಯೊಳಗೆ ೧೫೦ ಮಿಲಿ ಗ್ರಾಂ ವೀರ್ಯ ಸಿಕ್ಕಿದ್ದು, ಒಬ್ಬನಿಂದ ಅತ್ಯಾಚಾರ ನಡೆದಿಲ್ಲ, ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಪೋಲೀಸರು ಮಾತ್ರ ಇದುವರೆಗೆ ಒಬ್ಬನನ್ನು ಬಂಧಿಸಿದ್ದು, ಉಳಿದವರ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಇದು ವೈದ್ಯ ಸಮುದಾಯಕ್ಕೆ ಸಿಟ್ಟು ತರಿಸಿದ್ದು, ಕೋಲ್ಕತ್ತಾ, ದೆಹಲಿ ಸೇರಿದಂತೆ ದೇಶದ ವಿವಿದೆಡೆ ನ್ಯಾಯಕ್ಕಾಗಿ ಪ್ರತಿಭಟನೆ ನಡೆಯುತ್ತಿದೆ. ಜತೆಗೆ ವೈದ್ಯ ಸಮುದಾಯ ಪ್ರತಿಭಟನೆಯನ್ನು ಇನ್ನಷ್ಟು ಜೋರು ಮಾಡಲು ನಿರ್ಧರಿಸಿದೆ. ಪ್ರಕರಣ ಈಗಾಗಲೇ ಸಿಬಿಐಗೆ ಹೋಗಿದ್ದು, ತ್ರರಿತಗತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಂಡು ಹಿಡಿಯಬೇಕಾಗಿದೆ. ಈ ಮೂಲಕ ನ್ಯಾಯ ಸಿಗುವ ಭರವಸೆ ನೀಡಬೇಕಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೬-೦೮-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ