ಅಭಿಜ್ಞಾ ಗೌಡರ ಕವನಗಳ ಸೊಬಗು
ಕನ್ನಡಿಯ ಬಿಂಬ
ನನ್ನೊಲವ ಕಣ್ಣ ಕೊಳದಲಿ
ಅವನದೆ ಪ್ರತಿಬಿಂಬ
ಮಿಂಚುತಲಿ ಕರೆಯುತಿದೆ
ಅವನೊಲ ಎದೆಯ ತುಂಬ...
ಅನುರಾಗದ ಮಹಾಮೇಳ
ಅನುಕ್ಷಣವು ನಡೆಯುತಿದೆ
ಅನವರತದ ಬಾಳ ಬಂಡಿಯದು
ಅನನ್ಯತೆಯಲಿ ಜೀಕುತಿದೆ...
ಹರಿವ ಸಲಿಲವದು ನೈಜತೆಯ
ಬಿತ್ತರಿಸಿ ಗೋಚರಿಸುತ
ಜೀವನದ ಮಜಲುಗಳ ಮೇಳ
ಒಂದನೊಂದನು ಬಂಧಸುತ...
ಬದುಕು ಏಳುಬೀಳುಗಳ ಸಂತೆ
ಕಂಡರಿಯದೆ ಜೋತಾಡಿವೆ
ಬಾಳ ಪಯಣದ ಹಾದಿಯಲಿ
ಒಂದುಗೂಡುತ ಮಾತಾಡಿವೆ....
ಬದುಕ ಬವಣೆಯ ಈ ಸಂಗಮ
ದಣಿವರಿಯದ ಬಾಳ ಪಯಣ
ಮನದ ಕನ್ನಡಿಯಲಿ ಕಂಡಿವೆ
ತಣಿವಿಲ್ಲದ ಮನದ ನೋವ ಕ್ಷಣ...
ಗೊಂದಲದ ಗೂಡಲಲ್ಲಿ
ಹಕ್ಕೀಕತ್ತುಗಳ ಮೆರೆದಾಟ
ಸುತ್ತುವರಿದಿವೆ ಎತ್ತ ಅಲ್ಲಾಡದೆ
ಗಹಗಹಿಸುತಲಿ ಬಡಿದಾಟ...
ಬಾಳ ಸಂಗಾತಿಯ ಸಂಪ್ರೀತಿ
ಬಯಸಿದೆ ನನ್ನೆದೆಯ ಮೋಡಿ
ಬಿಂಬ ಪ್ರತಿಬಿಂಬದೊಳಗಿನ ಭಾವ
ಲಾಲೈಸಿ ಚುಂಬಿಸಿದೆ ನೋಡಿ...
ಬಾಳ ಪರದೆಯು ಬಿಂಬಿಸಿದೆ
ಎನ್ನೆದೆಯ ಮನಃಪಟಲದಿ
ನನ್ನೊಲವ ಮಧುರ ನೆನಪನು
ಬಿಂಬಿಸುತಲಿ ದಿವ್ಯ ಫಲವು....
*****
ಬಣ್ಣದ ಚಿಟ್ಟೆ
ಹಾರಿ ಬಂತು ನೋಡೆ ಚಿಟ್ಟೆ
ನಿನಗು ತಗೋ ಕೊಟ್ಟೆ ಬಿಟ್ಟೆ
ಹಾರಿ ಹಾರಿ ಮುಗಿಲ ಮುಟ್ಟೆ
ತೂರಿ ಝಳಪು ತಂದ ಕೊಟ್ಟೆ||
ಬಾನ ಬಣ್ಣ ಕಂಡು ಸೋನು
ನೀಲ ಮೇಘನಾದೆ ನಾನು
ಬೆಟ್ಟ ಕಣಿವೆ ಇಳಿದು ತಾನು
ಬಿಡದೆ ನಡೆದೆ ಗೊತ್ತೆ ಏನು||
ಅಲ್ಲೂ ನೀನೆ ಇಲ್ಲು ನೀನೆ
ಎಲ್ಲೂ ನಿನ್ನ ರೂಪ ತಾನೆ
ಬಾರೆ ನೀನು ತೋರೆ ಏನೆ
ಅಂದ ಚಂದ ಒನಪು ನಾನೆ||
ಹಾರಿ ಏರಿ ನಡೆದು ಬಂದು
ಬಾನ ತುಂಬ ಬಿರಿದು ತಂದು
ಚಿಟ್ಟೆ ಯಾನ ಬಹಳ ಮಿಂದು
ಬರುವೆ ನೋಡು ನಾನು ಇಂದು||
ಮೇಲೆ ಕೆಳಗೆ ನೋಡೆ ಸೋನೆ
ಬಾನು ಭುವಿಯ ನಡುವೆ ಮೇನೆ
ನಾನು ನೀನು ಎಂದು ಕೊನೆ
ನಲಿದು ಕುಣಿದು ನೋಡು ಬಾನೆ||
-ಅಭಿಜ್ಞಾ ಪಿ ಎಮ್ ಗೌಡ
