ಅಭಿಜ್ಞಾ ಗೌಡ ಇವರ ಕಂದಪದ್ಯಗಳು

Submitted by Shreerama Diwana on Sat, 08/08/2020 - 09:29
ಬರಹ

ವಸುಧೆಯೊಳಗೆ ನುಗ್ಗಿದೆ ಮಾರಿ

ವಸುಧೆಯ ಮಡಿಲಲಿ ನಡೆದಿದೆ

ವಿಷಧರ ರೋಗಾಣು ಪರಿಷೆ ನಿಮಿಷದಿ ಚದುರೈ

ವಿಷಮಿಸುವಾಗುತ ಭೀಕರ

ವಿಷಮದಿ ವಿಶ್ವದೊಳು ರೌದ್ರ ರೂಪವ ನೋಡೈ||

 

ವಿಸ್ತೀರ್ಣದೊಳಗೆ ವಿಲವಿಲ

ವಿಸ್ತೃತ ವಿಸರ್ಪಣವಾಗಿ ದೇಹವ ಹೊಕ್ಕಂ

ಹಸ್ತದಿ ಮುಟ್ಟುತ ಕಾಡಿದೆ

ಸುಸ್ತಲಿ ಗುಂದುತಿಹೆ ಶಕ್ತಿ ನಿತ್ಯವು ಬಿಡದಂ||

 

ಭೀಭತ್ಸತೆಯಲಿ ಲೋಕವು

ಲೋಭಿಲಿ ಪಸರಿಸಿದ ರೋಗ ಕಾಣದೆ ನಿತ್ಯಂ

ವೈಭವ ಮೆರೆದರು ಮೋಜಲಿ

ಛೂಬಿಡುತಿದ್ದಂತೆ ಭಾರಿ ಹರಡಿದೆ ತಥ್ಯಂ||

 

ಪರಿಸರ ನಾಶವ ಮಾಡುತ

ಪರಿಪರಿ ಬೇಡಿದರು ಕರುಣೆ ಬರದೆಯು ದಿಟವಂ

ಸರಸರ ನಿಗ್ಗಿದೆ ದಿನವದು

ಭರಭರ ನಿಲ್ಲದೆಯೆ ಸಾಗಿ ಹೊರಟಿದೆ ನಿಜವಂ!!

 

ಬುದ್ದಿಯಿಲ್ಲದೆ ತಿರುಗುತ

ಸದ್ದೇ ಮಾಡದೆಯೆ ಗುದ್ದು ನೀಡಿದೆ ರೋಗಂ

ಬದ್ದರು ಹೇಳಿದ ಕೇಳದೆ

ಪೆದ್ದರು ನೋಡುತಿರಿ ಸುತ್ತ ಹರಡಿದೆ ಸೊಂಕಂ!!

*******

ವನಜ

ವನಜವು ಕೆಸರಲಿ ಹುಟ್ಟರು

ವನನಿಧಿ ಶುದ್ಧತೆಯು ದಿಟವು ಕಂಡೆವು ನೋಡೈ

ಮನಜನ ಮನಸದು ಚಂಚಲ

ವನಿತೆಯ ಮೆಚ್ಚಿಸುತ ಕಮಲ ಸುಂದರ ಕಾಣೈ||

 

ಕೆಸರಿನ ನೀರದು ರಾಡಿಯು

ಕುಸುಮವು ನಳನಳಿಸಿ ಮಿಂಚಿ ನಿಂತಿದೆ ನಿತ್ಯಂ

ಯಶದಲಿ ಬೀಗುತ ಸುಮವದು

ನಶಿಸದೆ ವನಜಜನು ಹುಟ್ಟಿ ಮೆರೆದಿಹ ದೇವಾ||

 

ಕಮಲಳ ಮಿತ್ರನು ಸೂರ್ಯನು

ಸಮತೆಯ ಬೀರುತಲಿ ಬಿಟ್ಟ ಬಾನಿಂದಿಳೆಗೇ

ನಮಪಿಸಿ ನಸುಕಿನ ರವಿಯನು

ಕಮಚಲಿ ಬೀಳುತಿಹ ಮುತ್ತು ಕಿರಣದ ಬೆಳಕಂ||

 

ಮೇದಿನಿಯಲ್ಲಿಯೆ ಚಿಗುರುತ

ಮೇದುರ ಕೊಳದಲ್ಲಿ ಸೊಬಗ ಸಿರಿಯದು ಪೇಳ್ವಂ

ಕಾದಲ ನೋಡಲು ನಿಂತಿಹೆ

ವದನದಿ ನಾಚಿಕೆಯ ಕಂಡ ಬೆರಗಲಿ ನೋಳ್ಪಂ||

 

ಹಚ್ಚನೆ ಹಸಿರಲಿ ಮಿನುಗಿದೆ

ಬೆಚ್ಚನೆ ಪಲ್ಲವಿಸಿ ನಿಂತ ಬಗೆಬಗೆ ವನಜಂ

ನೆಚ್ಚಿನ ಹೂವದು ಸೆಳೆದಿದೆ

ಕೆಚ್ಚನೆ ವರ್ಣದೊಳು ಚಂದ ಗಂಧವ ಬಿಡುತಂ||

 

ಅಭಿಜ್ಞಾ ಪಿ ಎಮ್ ಗೌಡ 

 

ಚಿತ್ರ್