ಅಭಿಜ್ಞಾ ಗೌಡ ಇವರ ಕವನಗಳು

ಅಭಿಜ್ಞಾ ಗೌಡ ಇವರ ಕವನಗಳು

ಕವನ

ಭಾವನೆಗಳ ಪಲ್ಲಕ್ಕಿ

ಭಾವನೆಗಳ ಪಲ್ಲಕ್ಕಿಯಲಿ

ನವ್ಯ ಕವನಗಳ ಮೆರವಣಿಗೆ

ಸಾಗುತಿಹೆ ಬಿಳಿ ಹಾಳೆಯಲಿ

ಭವ್ಯ ವಿಚಾರಗಳ ಬರವಣಿಗೆ...

 

ತಂಬೆಲರ ಅಭಿಷೇಕದಿ

ಹೊಳೆದಿವೆ ಪ್ರತಿಪುಟದ ಸಾಲು

ಹೊಸತನದ ಹೊಂಬೆಳಕಲಿ

ಹೊಮ್ಮುತಿವೆ ಸ್ವರಗಳ ಮಾಲು...

 

ಹೃದಯದ ಪ್ರತಿ ಕವಾಟದಿ

ಹರಿದಿವೆ ಧಮನಿಗಳ ಸಂಚಲನ

ಮನಸಿನ ಸುಪ್ತಭಾವದಲಿ

ಸ್ಫುರಿಸುತಿಹ ರಾಗಗಳ ಗಾಯನ...

 

ಹೂರಾಶಿಯ ಮಂಚದೊಳು

ಚೆಲ್ಲುತಿವೆ ನವ್ಯತೆಯ ರಾಗಾವಳಿ

ಸಸ್ಯಕಾಶಿಯ ಬನಸಿರಿಯಲಿ

ಮೇಳೈಸುತಿವೆ ದಿವ್ಯ ಚಿತ್ರಾವಳಿ...

 

ಎನ್ನೆದೆಯ ಪಲ್ಲಕಿಯಲಿ

ನನ್ನದೆ ಬರಹಗಳ ಜೀಕುವಿಕೆ

ಬೀಸಿ ಕರೆಯುತಿವೆ ನೂರಾರು

ದತ್ತಾಂಶಗಳ ಭವ್ಯ ತೂಗುವಿಕೆ||

*****

ಔದಾರ್ಯ

ಔದಾರ್ಯ ತುಳುಕುತಿದೆ

ಮಾಧುರ್ಯ ಮನದೊಳಗೆ

ಮೇದಿನಿಯ ಶಾತ್ರವನು ತೊಲಗಿಸುತಲಿ|

ಶೋಧನೆಯ ಕಾರ್ಯದಲಿ

ಬೋಧನೆಯು ಬಿಂಬಿಸಿದೆ

ಕಾದಿರುವ ಮನಸಿಗದು ಕುಸುಮದಂತೆ||

 

ಔರಸನು ಘನತೆಯಲಿ

ಸಾರಥ್ಯ ರಥದೊಳಗೆ

ಸಾರೋಕ್ತಿ ಬಿತ್ತರಿಸಿ ಮಿರುಗುತಿಹನು

ವೀರತೆಯ ಸೊಬಗಲ್ಲಿ

ವೈರತ್ವ ತೊಲಗಿಸುತ

ಬಾರಿಸುತ ಢಮರುಗವ ಸಾರೋಟಲಿ||

 

ಔತಣದ ಕೂಟದಲಿ

ಭಾತಿಯಾ ಸಂಗಮದಿ

ಮಾತಿನಲಿ ಚತುರತೆಯು ಝೇಂಕರಿಸುತ

ನಾಥನಾ ಕೃಪೆಯಂತೆ

ನಾತೆಯನು ಬೆಸೆಯುತ್ತ

ಪಾತಕಿಯ ಮಣಿಸುತ್ತ ಮೆರೆಯುತಲಿದೆ||

 

ಔಡಲವು ಹೊಳೆವಂತೆ

ನಾಡಿನಾ ತುಂಬೆಲ್ಲ

ಬಾಡುತಿಹ ಮನವನ್ನು ನಗಿಸುತಿರಲು

ಕೇಡನ್ನು ಬಯಸದಯೆ

ಕಾಡುತಿಹ ಮನುಜರನು

ಪಾಡಳಿಯ ಮಾಡುತಲಿ ಬೀಗುತಿರಲು||

 

ಧರೆಯಲ್ಲಿ ಧಾರಾಳ

ನೆರವನ್ನು ನೀಡುತಲಿ

ಬರವನ್ನು ಮನಗಂಡು ಸಹಕರಿಸುತ

ನಿರಶನದಿ ತೊಂದರೆಯ

ನಿರವಿಸುತ ಪ್ರಗತಿಯನು

ನಿರುಪಮದಿ ನಿಶ್ಚಿಂತೆ ಪಡೆಯುತಲಿದೆ||

 

-ಅಭಿಜ್ಞಾ ಪಿ ಎಮ್ ಗೌಡ

 

ಚಿತ್ರ್