ಅಭಿಪ್ರಾಯ ವ್ಯಕ್ತಪಡಿಸುವ ಕಲೆಯನ್ನು ಬೆಳೆಸಿಕೊಳ್ಳೋಣ...
ವಿನಯವೆಂದರೆ ಮರ್ಯಾದೆಯಾಗಿ ಮಾತನಾಡುವುದು ಮಾತ್ರವಲ್ಲ, ವಿರೋಧಿಗೂ ಒಳ್ಳೆಯದನ್ನು ಮಾಡಬೇಕೆಂಬ ಇಚ್ಚೆ - ಮಹಾತ್ಮಾ ಗಾಂಧಿ.
ಸಾಮಾಜಿಕ ಜಾಲತಾಣಗಳ ಚರ್ಚೆಗಳ ಅಬ್ಬರದಲ್ಲಿ ಗಾಂಧಿಯವರ ಈ ಮಾತುಗಳು ಪ್ರತಿಕ್ಷಣವೂ ನೆನಪಾಗುತ್ತಿದೆ. ಹೊಸ ಹೊಸ ತಾಣಗಳು ಅತ್ಯುತ್ತಮ ವೇದಿಕೆಗಳನ್ನು ಒದಗಿಸಿಕೊಡುತ್ತಿವೆ. ಕೋವಿಡ್ ಸಮಯದಲ್ಲಿ ಜನರ ಬಳಿ ತುಸು ಹೆಚ್ಚೇ ಸಮಯ ಉಳಿಯುತ್ತಿದೆ. ಮನೆಯಲ್ಲಿಯೇ ಕುಳಿತು ಸಾಕಷ್ಟು ಅಭಿಪ್ರಾಯ ಹಂಚಿಕೊಳ್ಳುವ ಅವಕಾಶಗಳೂ ಇವೆ. ಆದರೆ ಬಹುಮುಖ್ಯವಾಗಿ ವಿನಯ ಮತ್ತು ಸಭ್ಯತೆ ಮಾಯವಾಗುತ್ತಿದೆ. ಅಧ್ಯಯನ ಚಿಂತನೆ ವಾಕ್ ಚಾತುರ್ಯ ಸ್ವಲ್ಪ ಹೆಚ್ಚು ಕಡಿಮೆ ಆದರೂ ಪರವಾಗಿಲ್ಲ. ಆದರೆ ವಿನಯದೊಳಗೆ ಪ್ರೀತಿ ಮತ್ತು ಮಾನವೀಯತೆ ಮಾತ್ರ ಕೊರತೆಯಾಗದಿರಲಿ.
ಏಕವಚನ ಪ್ರಯೋಗಗಳು, ನಿಂದನೆಗಳು, ಅಹಂಕಾರದ ಮಾತುಗಳು, ಅವಮಾನಕರ ಪದ ಪ್ರಯೋಗ ಎಲ್ಲವೂ ಅತಿಹೆಚ್ಚು ಬಳಸಲ್ಪಡುತ್ತಿದೆ. ವಿಷಯ ಯಾವುದೇ ಇರಲಿ ಯಾರೊಂದಿಗೆ ಚರ್ಚಿಸುತ್ತಿರುವಿರಿ ಎಂಬ ಪ್ರಜ್ಞೆ ಇದೆಯೇ ? ನಮ್ಮದೇ ದೇಶದ, ನಮ್ಮದೇ ರಾಜ್ಯದ, ನಮ್ಮದೇ ಭಾಷೆಯ, ನಮ್ಮದೇ ಸಮಾಜದ ಜನರೊಂದಿಗೆ ಅಲ್ಲವೇ ನಮ್ಮ ಬಹುತೇಕ ಮಾತುಕತೆ ನಡೆಯುವುದು. ಆದರೂ ಆಜನ್ಮ ಶತೃವಿನಂತೆ ಮಾತುಕತೆಗಳು ಬೇಕೆ ? ಇದರಿಂದ ನಾವು ಸಾಧಿಸುವುದಾದರೂ ಏನನ್ನು ?
ಚರ್ಚೆಯಲ್ಲಿ ಗೆಲುವೇ ನಿಮ್ಮ ಉದ್ದೇಶವಾದರೆ ದಯವಿಟ್ಟು ವಕೀಲ ವೃತ್ತಿಯನ್ನು ಪ್ರಾರಂಭಿಸಿ. ಆದರೆ ಸಾಮಾಜಿಕ ಜಾಲತಾಣಗಳ ಚರ್ಚೆಗಳ ಉದ್ದೇಶ ಅರಿವಿನ ಗುಣಮಟ್ಟ ಹೆಚ್ಚಿಸಿಕೊಳ್ಳುವುದು, ಅನೇಕ ವಿಷಯಗಳ ಬಗ್ಗೆ ಉತ್ತಮ ಸಾರ್ವಜನಿಕ ಅಭಿಪ್ರಾಯ ರೂಪಿಸಿಕೊಳ್ಳುವುದು, ಒಬ್ಬ ದೇಶದ ನಾಗರಿಕರಾಗಿ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ ನಿರ್ವಹಿಸಲು ಬೇಕಾದ ಪ್ರಬುದ್ಧತೆ ಗಳಿಸುವುದು ಮುಂತಾದ ನಾನಾ ಉಪಯೋಗಗಳನ್ನು ಪಡೆಯುವುದು. ಪಕ್ಷಗಳ ವಕ್ತಾರರೋ, ಸಿದ್ದಾಂತಗಳ ತೀವ್ರ ಮೂಲಭೂತವಾದಿಗಳೋ ನಾಚುವಂತೆ ಸಾಮಾನ್ಯ ಸ್ನೇಹಿತ ಅಥವಾ ಪರಿಚಿತ ವರ್ಗ ಸಹ ಯಾವುದೇ ಜವಾಬ್ದಾರಿ ಸ್ಥಾನದಲ್ಲಿ ಇರದಿದ್ದರೂ ಮೈಮೇಲೆ ದೆವ್ವ ಬಂದವರಂತೆ ಕೂಗಾಡುವುದು ನಿಜಕ್ಕೂ ನಮ್ಮ ಸಾಂಸ್ಕೃತಿಕ ಅವಹೇಳನ. ವ್ಯಕ್ತಿತ್ವದ ಪೊಳ್ಳುತನ.
ಸಾಮಾನ್ಯವಾಗಿ ಸತ್ಯ ಮತ್ತು ವಾಸ್ತವಿಕತೆಗೆ ಸಂಖ್ಯೆಗಳ ದೃಷ್ಟಿಯಲ್ಲಿ ಜನಪ್ರಿಯತೆ ಕಡಿಮೆ. ಸುಳ್ಳು ಮತ್ತು ಭ್ರಮೆಗಳೇ ಹೆಚ್ಚು ಜನಪ್ರಿಯತೆ ಗಳಿಸುತ್ತವೆ. ಈ ಸಾಮಾಜಿಕ ಜಾಲತಾಣಗಳ ಚರ್ಚೆಗಳು ಇವುಗಳನ್ನು ಮೀರಿ ಬೆಳೆಯಬೇಕಾಗಿತ್ತು. ಆದರೆ ವಿನಯವಿಲ್ಲದೆ ಪ್ರೀತಿ ಗೌರವ ಸಭ್ಯತೆಗಳಿಲ್ಲದೆ ದ್ವೇಷ ಅಸೂಯೆ ಸಣ್ಣತನಗಳ ಕಾರಣದಿಂದಾಗಿ ಇಂದು ಅವು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿವೆ.
ಚರ್ಚೆಗಳೆಂದರೆ ಮೊದಲೆಲ್ಲಾ ಕೇವಲ ವಿದ್ವಾಂಸರು - ಪಂಡಿತರು - ಜ್ಞಾನಿಗಳು - ವಿಷಯ ಪರಿಣಿತರು ಮುಂತಾದ ಕೆಲವೇ ಜನರು ಸಭೆ ಸಮಾರಂಭಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ಅಥವಾ ವಿಚಾರ ಸಂಕಿರಣಗಳಲ್ಲಿ ಮಾತ್ರ ಮಾಡುವ ವಿಷಯವಾಗಿತ್ತು. ಕೆಲವು ವಿಷಯಗಳಲ್ಲಿ ಸಾಮಾನ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರಾದರೂ ಅದು ಸ್ಥಳೀಯ ಸ್ನೇಹ ಸಂಬಂಧಗಳ ವ್ಯಾಪ್ತಿ ಮೀರುತ್ತಿರಲಿಲ್ಲ.
ಸಂತೆ - ಅಂಗಡಿ - ಬಸ್ ನಿಲ್ದಾಣ - ಮದುವೆ ಮುಂತಾದ ಸ್ಥಳಗಳಿಗೆ ಸೀಮಿತವಾಗಿತ್ತು. ಆದರೆ ಈ Social media ಗಳ ಉಗಮದೊಂದಿಗೆ ಬಹುತೇಕ ಎಲ್ಲಾ ಸಾಮಾನ್ಯ ಜನರೂ ತಮ್ಮ ಅಭಿಪ್ರಾಯಗಳನ್ನು ಎಲ್ಲ ವಿಷಯಗಳ ಬಗ್ಗೆಯೂ ಸಾರ್ವಜನಿಕವಾಗಿ ಮತ್ತು ವಿಶಾಲ ವ್ಯಾಪ್ತಿಯಲ್ಲಿ ವ್ಯಕ್ತಪಡಿಸುವ ಅವಕಾಶ - ವೇದಿಕೆ ಮತ್ತು ಸ್ವಾತಂತ್ರ್ಯ ದೊರೆಯಿತು. ಇದು ಅತ್ಯಂತ ಸಂತೋಷದ ಮತ್ತು ಸ್ವಾಗತಾರ್ಹ ಬೆಳವಣಿಗೆ. ಆದರೆ ಚರ್ಚೆಗಳ ರೀತಿ - ನೀತಿ - ಗುಣಮಟ್ಟ - ಪ್ರಬುದ್ದತೆ ಯಾವ ಮಟ್ಟದಲ್ಲಿದೆ ಎಂಬ ಪ್ರಶ್ನೆ ಬಹಳವಾಗಿ ಕಾಡುತ್ತಿದೆ. ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಚರ್ಚೆಗಳನ್ನು ಗಮನಿಸಿದಾಗ ಈ ಪ್ರಶ್ನೆ ಉದ್ಭವವಾಗುತ್ತಿದೆ.
ವಿಷಯಗಳನ್ನು ಯಾವ ದೃಷ್ಟಿಕೋನದಿಂದ - ಯಾವ ಆಧಾರದಲ್ಲಿ ಗ್ರಹಿಸುತ್ತಾರೆ ಮತ್ತು ಯಾವ ನೆಲೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂಬುದೇ ಗೊಂದಲವಾಗಿದೆ. ಪ್ರತಿಯೊಬ್ಬರಿಗೂ ಅವರವರದೇ ಆದ ಅಭಿಪ್ರಾಯ ಇರುತ್ತದೆ ಎಂಬುದು ನಿಜವಾದರೂ ಒಟ್ಟು ವ್ಯವಸ್ಥೆಯ ದೃಷ್ಟಿಯಿಂದ ಸತ್ಯ ಮತ್ತು ವಾಸ್ತವವನ್ನು ಹುಡುಕಿ ಅದನ್ನು ಅಳವಡಿಸಿಕೊಳ್ಳಲು ಒಂದು ತಕ್ಷಣದ ಸ್ಪಷ್ಟ ಚಿಂತನೆ ಅವಶ್ಯವಲ್ಲವೇ ?
ಉದಾಹರಣೆಗೆ, ಜಾತಿ ವ್ಯವಸ್ಥೆಯನ್ನು ಹೇಗೆ ನೋಡುವುದು ? ಸೃಷ್ಟಿಯ ಮೂಲದಿಂದ ನೋಡಿದರೆ ಒಂದು ರೀತಿ, ಧರ್ಮದ ಆಧಾರದಲ್ಲಿ ನೋಡಿದರೆ ಮತ್ತೊಂದು ರೀತಿ, ಕಾನೂನಿನ ಪ್ರಕಾರ ನೋಡಿದರೆ ಇನ್ನೊಂದು ರೀತಿ, ಸಮಾಜದ ನೀತಿ ನಡವಳಿಕೆಯಲ್ಲಿ ಮಗದೊಂದು ರೀತಿ ಕಾಣುತ್ತದೆ. ಚರ್ಚೆಯಲ್ಲಿ ಭಾಗವಹಿಸುವವರು ಇದರಲ್ಲಿ ಒಂದು ದೃಷ್ಟಿಕೋನದಿಂದ ವಾದಿಸುತ್ತಾರೆ. ಮುಖ್ಯವಾಗಿ ಕೆಳವರ್ಗದವರು ಜಾತಿಯ ಅಸಮಾನತೆಯನ್ನು ಹೇಳಿದರೆ ಮೇಲ್ವರ್ಗದವರು ಜಾತಿಯ ಶ್ರೇಷ್ಠತೆಯನ್ನು ಹೇಳುತ್ತಾರೆ. ಸಾಮಾನ್ಯರು ವೈಯಕ್ತಿಕ ಅನುಭವಗಳನ್ನು ದಾಖಲಿಸುತ್ತಾರೆ. ಹಾಗಾದರೆ ಸತ್ಯ ಯಾವುದು ಮತ್ತು ಚರ್ಚೆ ಹೇಗೆ ಮಾಡಬೇಕು. ಎಲ್ಲಕ್ಕೂ ಒಂದಷ್ಟು ಒಳ್ಳೆಯ ಮತ್ತು ಕೆಟ್ಟ ಅಂಶಗಳು ಇದ್ದೇ ಇರುತ್ತವೆ ಮತ್ತು ಅದು ವ್ಯಕ್ತಿಯ ಮಾತು ಅಥವಾ ಅಕ್ಷರದ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.
ಆದರೆ ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ, ನಾಗರಿಕ ಸಮಾಜದ ಲಕ್ಷಣಗಳ ಆಧಾರದ ಮೇಲೆ ಜಾತಿ ವ್ಯವಸ್ಥೆ ಅತ್ಯಂತ ಅಮಾನವೀಯ ಎಂಬುದು ಈ ಕ್ಷಣದ ವಾಸ್ತವ. ಇತ್ತೀಚಿನ ದಿನಗಳಲ್ಲಿ ಕೆಲವರು ತಮ್ಮ ಮಿತಿಗಳನ್ನು ಅರಿತುಕೊಳ್ಳದೆ, ವಿಷಯಗಳ ಆಳಕ್ಕೆ ಹೋಗದೆ, ಸಮಗ್ರ ದೃಷ್ಟಿಕೋನದಿಂದ ಅದನ್ನು ವಿಮರ್ಶಿಸದೆ ಅವಕಾಶವಿದೆ ಮತ್ತು ವೇದಿಕೆ ಇದೆ ಎಂಬ ಒಂದೇ ಕಾರಣಕ್ಕೆ ಇದೇ ಸತ್ಯ ಎನ್ನುವಷ್ಟು ಖಚಿತ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಭ್ರಮೆಗೆ ಒಳಗಾಗಿದ್ದಾರೆ.
ಇತಿಹಾಸವಿರಬಹುದು - ದೇಶದ ಆರ್ಥಿಕ ಸುಧಾರಣೆ ಇರಬಹುದು - ವಿದೇಶಾಂಗ ನೀತಿ ಇರಬಹುದು - ದೇವರು ಧರ್ಮಗಳ ವಿಚಾರವಿರಬಹುದು ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಿ ವಿವೇಚನಾರಹಿತವಾಗಿ ಪ್ರತಿಕ್ರಿಯಿಸುವುದು ಕಂಡು ಬರುತ್ತಿದೆ. ಇದು ತಂತ್ರಜ್ಞಾನದ ವಿಕಾಸದ ಹಂತದಲ್ಲಿ ಬದಲಾವಣೆ ಆಗುವಾಗ ಸಹಜ ಕ್ರಿಯೆ ಎಂದು ಭಾವಿಸಬಹುದಾದರೂ ನಾವೆಲ್ಲರೂ ಇನ್ನು ಮುಂದೆ ಇನ್ನಷ್ಟು ಎಚ್ಚರಿಕೆ ಮತ್ತು ಪ್ರಜ್ಞಾಪೂರ್ವಕವಾಗಿ ಮಹಾತ್ಮರ ವಿನಯ ಎಂಬ ನಿಜ ಅರ್ಥದಲ್ಲಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಕಲೆಯನ್ನು ಬೆಳೆಸಿಕೊಳ್ಳೋಣ ಎಂದು ಆಶಿಸುತ್ತಾ....
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ