ಅಭಿಮಾನವೋ, ಅತಿರೇಕವೋ?

ಅಭಿಮಾನವೋ, ಅತಿರೇಕವೋ?

ಚಿತ್ರಮಂದಿರಗಳಲ್ಲಿ ಸೂಪರ್‌ಸ್ಟಾರ್‌ಗಳ ಚಲನಚಿತ್ರ ಬಿಡುಗಡೆಯಾದಾಗ, ಕೌಂಟರ್‌ನಲ್ಲಿ ಕೆಲವೇ ಕ್ಷಣದಲ್ಲಿ (!) ಟಿಕೆಟ್ಟುಗಳೆಲ್ಲ ಮಾರಾಟವಾಗಿ, ಕಾಳಸಂತೆಕೋರರ ಕೈಯಲ್ಲಿ ಅವು ನಲಿದಾಡುವ ದೃಶ್ಯವನ್ನು ಬಹುತೇಕ ಕಂಡಿರುತ್ತೇವೆ. ತಮ್ಮ ಸಿನಿಮಾದ ಟಿಕೆಟ್ಟುಗಳು ಹೀಗೆ ಕಾಳಸಂತೆ ಯಲ್ಲಿ ಮಾರಾಟವಾಗುತ್ತಿವೆ ಎಂಬುದು ಸಂಬಂಧಪಟ್ಟವರಿಗೆ ಜಂಭದ ಬಾಬತ್ತಾಗಿ ಪರಿಣಮಿಸಬಹುದು. ಒಂದಿಷ್ಟು ಅಭಿಮಾನಿಗಳು 'ಬ್ಲ್ಯಾಕ್‌ನಲ್ಲಿ ಟಿಕೆಟ್ ಖರೀದಿಸಿ ಚಿತ್ರವನ್ನು ವೀಕ್ಷಿಸಿದೆ' ಎಂದು ಹೇಳಿಕೊಳ್ಳುವುದೂ ಉಂಟು. ಇವೆಲ್ಲ ಒಂದು ಮಿತಿಯಲ್ಲಿದ್ದರೆ ಪರವಾಗಿಲ್ಲ. ಅದು ಅತಿರೇಕವಾದರೆ ಅಸಹನೀಯ. ಶನಿವಾರದ ಐಪಿಎಲ್ ಪಂದ್ಯದ ಟಿಕೆಟ್ ಮಾರಾಟದ ಪರಿಯನ್ನು ಕಂಡಾಗ ಇಂಥದೊಂದು ಸಂದರ್ಭದ ನೆನಪಾಗುತ್ತದೆ. ಕಾರಣ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡ ಗಳ ನಡುವಿನ ಪಂದ್ಯದ ಒಂದಷ್ಟು ಟಿಕೆಟ್ಟುಗಳು ಕಾಳಸಂತೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾಗಿವೆಯಂತೆ. ೫೦ ಸಾವಿರ ಮುಖಬೆಲೆಯ 'ವಿಐಪಿ' ವರ್ಗದ ಟಿಕೆಟ್ಟು ಒಂದೂವರೆ ಲಕ್ಷ ರುಪಾಯಿಗೆ ಮಾರಾಟವಾಗಿರುವುದು ಈ ಅತಿರೇಕಕ್ಕೊಂದು ನಿರ್ದಶನ. ಇದು ಮಿಕ್ಕ ವರ್ಗಕ್ಕೂ ಅನ್ವಯವಾಗುವ ಮಾತು, ಊಟ-ಉಪಾಹಾರದ ಸೇವನೆಯಿಂದ ಅಥವಾ ಮನರಂಜನೆಯಿಂದ ಸಿಗುವ ಸಮಾಧಾನ/ಸುಖದ ವಿಷಯ ಬಂದಾಗ ದುಡ್ಡಿನ ಮುಖ ನೋಡಬಾರದು ಎಂಬುದೇನೋ ಒಂದು ಹಂತದವರೆಗೆ ಒಪ್ಪುವ ಮಾತೇ; ಆದರೆ ಕೆಲವೇ ಗಂಟೆಗಳ ಮನರಂಜನೆಗೆ ಹೀಗೆ ಸಾವಿರಗಟ್ಟಲೆ, ಲಕ್ಷಗಟ್ಟಲೆ ಪ್ರಮಾಣದಲ್ಲಿ ದುಡ್ಡನ್ನು ಪೋಲುಮಾಡುವುದಿದೆಯಲ್ಲಾ ಅದು ಅಷ್ಟೊಂದು ಸ್ವೀಕಾರಾರ್ಹವಲ್ಲವೇನೋ. 'ನಮ್ಮ ದುಡ್ಡು. ನಮ್ಮ ಮೋಜು, ಅದನ್ನು ಕೇಳಲು ನೀವ್ಯಾರು?' ಎನ್ನುವವರಿಗೆ ಇಲ್ಲಿ ಉತ್ತರವಿಲ್ಲ. ಆದರೆ ಪರಿಶ್ರಮದ ದುಡಿಮೆಯ ಹಣವನ್ನು ಹೀಗೆ ವೃಥಾ ಹುಡಿಗಟ್ಟುವುದು ಮತ್ತು ಅದು ಯಾರದೋ ಮಡಿಲಿಗೆ ಸೇರುವುದು- ಇವೆಲ್ಲಾ ಯಾವ ಪುರುಷಾರ್ಥಕ್ಕಾಗಿ? ಎಂಬುದಿಲ್ಲಿ ಪ್ರಶ್ನೆ. ಆದರೆ ಇದಕ್ಕೆ ಉತ್ತರಿಸುವವರಾರು?

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೩-೦೫-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ