ಅಭಿಮಾನಿ

ಅಭಿಮಾನಿ

ಬರಹ

ಚಿತ್ರರಂಗದಲ್ಲಿ ಒಂದೊಮ್ಮೆ ಖ್ಯಾತ ನಟಿಯಾಗಿದ್ದೊಬ್ಬಳ ಮರು ಪ್ರವೇಶ. ಆ ಚಿತ್ರ ನೂರು ದಿನಗಳಿಗಿಂತಲೂ ಹೆಚ್ಚು ಪ್ರದರ್ಶನ ಕಂಡು ಸೂಪರ್ ಹಿಟ್ ಎನಿಸಿಕೊಂಡಿದೆ. ಆತನ ಕೈಯಲ್ಲಿ ಹಣ ಇಲ್ಲ. ಆತ ಆ ಚಿತ್ರ ನೋಡಲೆಂದು ಎಷ್ಟೋ ಕಷ್ಟ ಪಟ್ಟ. ಯಾರಿಂದಲೋ ದುಡ್ಡು ಸಾಲ ತಂದ. ಎಷ್ಟೋ ವರ್ಷಗಳ ನಂತರ ಆಕೆಯ ಚಿತ್ರ ನೋಡುವ ಭಾಗ್ಯ.

ಅಭಿಮಾನಿಯ ಮುಖದಲ್ಲಿ ಎಂದಿಲ್ಲದ ಸಂತೋಷ. ಆತನಿಗೆ ತಿಳಿದಿದೆ, ಈ ಚಿತ್ರದಲ್ಲಿ ಆಕೆಗೆ ಬರೀ ಒಂದು ಹಾಡಿನ ದೃಶ್ಯ ಮಾತ್ರವೆಂದು! ಅಭಿಮಾನಿಗೆ ಹೇಗೋ ನೂಕು ನುಗ್ಗಲಿನಲ್ಲಿ ಟಿಕೇಟು ದೊರೆಯಿತು. ಚಿತ್ರ ಆರಂಭದ ಸೂಚನೆಯಂತೆ ಒಳಗಿನ ದೀಪಗಳು ಆರಿದವು. ಕೈಯಲ್ಲಿನ ಟಾರ್ಚ್ ಬೆಳಗಿಸುತ್ತಾ ಅಭಿಮಾನಿ ಒಳಗೆ ಬಂದ. ಎಡವಿ ತಡವಿ ಒಂದು ಹರುಕಲು ಮುರುಕಲು ಸೀಟಿನಲ್ಲಿ ಕುಳಿತ. ಅದೂ ಬಾಗಿಲ ಬಳಿಯ ಸೀಟು. ಚಿತ್ರದ ಶೀರ್ಷಿಕೆಗಳು ಪರದೆಯ ಮೇಲೆ ಕಾಣಿಸಿಕೊಂಡವು. ಅಭಿಮಾನಿ ಸೆಟೆದು ಕುಳಿತ. ಅಬ್ಬರದ ಸಂಗೀತದೊಂದಿಗೆ ಹಾಡು ಆರಂಭವಾಯಿತು. ಮೊದಲೇ ಆಕೆಯ ಹಾಡಿನ ದೃಶ್ಯವೆಂದು ಅವನಿಗೆ ತಿಳಿದಿತ್ತು. ಪರದೆಯ ಮೇಲೆ ಆಕೆಯ ಹಿಂಭಾಗದ ದೃಶ್ಯ ಮೂಡಿತು. ಅಭಿಮಾನಿ ಸೇರಿದಂತೆ ಎಲ್ಲರ ಬಾಯಿಯಿಂದಲೂ ಸಿಳ್ಳೆ, ಕೂಗು. ಆದರೆ ಅಭಿಮಾನಿಗೇಕೋ ನಿರಾಶೆ.....! ಆಕೆ ಹಾಡುತ್ತಾ ಮುಖ ತಿರುಗಿಸಿದಾಗ, ಅಭಿಮಾನಿ ದಿಗ್ಗನೆ ಎದ್ದು ನಿಂತ. ಯಾಕೋ ಅಸಹ್ಯವೆನಿಸಿತು... ಕೇವಲ ಎರಡು ತುಂಡು ಬಟ್ಟೆ... ಅದು ಸರಿಯಾಗಿ ಮುಚ್ಚಿದಂತಿಲ್ಲ, ಏನೋ ಅಸಮಾಧಾನ. ತಟ್ಟನೆ ಆತನ ತಲೆಯಲ್ಲಿ ಹೊಳೆದಿದ್ದು ಇಷ್ಟೆ... ಕೈಯಲ್ಲಿದ್ದ ಟಾರ್ಚನ ಬೆಳಕನ್ನು ಆಕೆಯ ದೇಹ ಕಾಣಬಾರದೆಂದು ಬೆಳ್ಳಿ ಪರದೆಯ ಮೇಲೆ ಹರಿಸಿದ. ಊಹೂಂ... ಪ್ರಯೋಜನವಿಲ್ಲವಾಯಿತು. ತಟ್ಟನೆ ಓಡಿ ಥಿಯೇಟರಿನ ಬಾಗಿಲುಗಳನ್ನೆಲ್ಲಾ ತೆರೆದ... ಬೆಳ್ಳಿಪರದೆಯ ಮೇಲೆ ಬೆಳಕು ಬಿದ್ದು ದೃಶ್ಯ ಕಾಣದಾಯಿತು. ಅಭಿಮಾನಿ ಸಮಾಧಾನದ ನಿಟ್ಟುಸಿರು ಬಿಟ್ಟ.... ಪ್ರೇಕ್ಷಕರೆಲ್ಲಾ `ಹೋ' ಎಂದರು. ಅಲ್ಲೇ ಇದ್ದ ಕೆಲವರು ಅವನನ್ನು ಹಿಡಿದು ತದಕಿದರು. ಬಲವಾಗಿ ಬಿದ್ದ ಪೆಟ್ಟಿಗೆ ಅಭಿಮಾನಿಗೆ ಮೈಯಲ್ಲೆಲ್ಲಾ ನೋವು. ಎದ್ದು ಕುಳಿತವನ ಮುಖದಲ್ಲಿ ಮಾತ್ರ ಸಂತೃಪ್ತಿಯ ಮುಗುಳು ನಗೆ ತುಂಬಿತ್ತು.