ಅಭಿವೃದ್ಧಿಯ ಮಾನದಂಡಗಳು...!

ಅಭಿವೃದ್ಧಿಯ ಮಾನದಂಡಗಳು...!

ದೆಹಲಿಯಿಂದ ರಾಷ್ಟ್ರಪತಿ ಮತ್ತು ಪ್ರಧಾನಿಗಳು, ಬೆಂಗಳೂರಿನಿಂದ ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳು, ಜಿಲ್ಲಾ ಕೇಂದ್ರಗಳಿಂದ ಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳು, ತಾಲ್ಲೂಕುಗಳಿಂದ ತಾಲ್ಲೂಕು ಪಂಚಾಯತ್ ಅಧ್ಯಕ್ಷರು, ಶಾಸಕರು ಮತ್ತು ತಹಸೀಲ್ದಾರ್, ಗ್ರಾಮಗಳಿಂದ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಪಿಡಿಓ ಅಧಿಕಾರಿಗಳು ಜನವರಿ 26 ರಂದು ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಿಸಿ ರಾಷ್ಟ್ರದ ಏಕತೆ - ಸಮಗ್ರತೆ - ಅಖಂಡತೆ - ಭಾವೈಕ್ಯತೆ - ಸಮೃಧ್ಧಿ - ಅಭಿವೃದ್ಧಿ ಬಗ್ಗೆ ಕಂಚಿನ ಕಂಠದ ಘೋಷಣೆಗಳು, ದೇಶದ ಹೆಮ್ಮೆಯ ಸಂವಿಧಾನ - ಅದರ ಆಶಯಗಳು - ಸಮಾನತೆ - ಸ್ವಾತಂತ್ರ್ಯ - ನ್ಯಾಯದ ಬಗ್ಗೆ ಪುಂಖಾನುಪುಂಖ ಭಾಷಣಗಳು,  ಪತ್ರಿಕೆ ಟಿವಿಗಳಲ್ಲಿ ಅತ್ಯದ್ಭುತ ಲೇಖನ - ಕಾರ್ಯಕ್ರಮಗಳು, ಕೆಲವೆಡೆ ಔತಣಕೂಟಗಳು, ಹಲವೆಡೆ ಸಿಹಿ ಹಂಚಿಕೆ, ಕೊನೆಗೆ  ದಿನದ ಮುಕ್ತಾಯ. ಭಾರತ್ ಮಾತಾಕಿ ಜೈ.......ಮೇರಾ ಭಾರತ್ ಮಹಾನ್ ....

ಮುಂದೆ… ನಮ್ಮ ದೇಶದಲ್ಲಿ ಶೇಕಡ 60-70%  ರೈತ ಕಾರ್ಮಿಕರಿದ್ದಾರೆ. ಅಂದರೆ ಸರಿಸುಮಾರು 70-80 ಕೋಟಿ ಜನರು ಕೃಷಿ ಮತ್ತು ಅದಕ್ಕೆ ಪೂರಕ ಕೆಲಸಗಳ ಮೇಲೆ ಅವಲಂಬಿತರು. ಅವರ ಪರಿಸ್ಥಿತಿ ಹೇಗಿದೆ ಗೊತ್ತೆ? ದಯವಿಟ್ಡು ನಗಬೇಡಿ..

4 ನಿಂಬೆಹಣ್ಣಿನ ಬೆಲೆ ಕೇವಲ 10 ರೂಪಾಯಿ, 1 ಕೆಜಿ ತೂಗುವ ಸುಮಾರು 15 ಟಮ್ಯಾಟೋ ಬೆಲೆ 10-15 ರೂಪಾಯಿ, ಸಾವಿರಾರು ಕಾಳು ಸೇರಿಸಿ 1 ಕೆಜಿ ಆಗುವ ಅಕ್ಕಿ, ರಾಗಿ, ಗೋದಿ, ಜೋಳ, ಬೇಳೆ ಕಾಳುಗಳ ಬೆಲೆ 30 ರಿಂದ 100-120 ರೂಪಾಯಿಗಳು, ನೂರಾರು ಗಿಡ ಬಳ್ಳಿಗಳು ಸೇರಿ ಕಟ್ಟುವ ಒಂದು ದೊಡ್ಡ ಸೊಪ್ಪಿನ  ಕಟ್ಟಿಗೆ 10-20 ರೂಪಾಯಿಗಳು, ಒಂದು ಲೀಟರ್ ನಷ್ಟು ಹಾಲಿಗೆ 35-40 ರೂಪಾಯಿಗಳು. ಇನ್ನೂ ಇನ್ನೂ ಅನೇಕ...

ಮನುಷ್ಯ ಬದುಕಿರುವುದೇ ಈ ಪದಾರ್ಥಗಳಿಂದ. ಅವನ ಆರೋಗ್ಯ - ನೆಮ್ಮದಿ - ಉತ್ಸಾಹ - ವಂಶಾಭಿವೃದ್ಧಿ ಎಲ್ಲಕ್ಕೂ ಈ ಆಹಾರಗಳೇ ಕಾರಣ. ಇದನ್ನು ಬೆಳೆಸಲು ರೈತರು ಪಡುವ ಕಷ್ಟದ ಅಂದಾಜಿದೆಯೇ. ಅವನ ಶ್ರಮ, ಸಮಯ, ಸವೆಸುವ ಬದುಕು,  ಅನುಭವಿಸುವ ಯಾತನೆ ಯಾವ ಸಾಹಿತಿ ಕಲಾವಿದನಿಗೂ ವರ್ಣಿಸಲು ಸಾಧ್ಯವಾಗುವುದಿಲ್ಲ. ಮಾಲ್ ಗಳಲ್ಲಿ ಕಾರ್ ಪಾರ್ಕಿಂಗ್ ಗೆ ಗಂಟೆಗೆ 50-100 ಇದೆ, ರೊಟ್ಟಿಯಂತ Pizza ಗೆ 400-500 ಬೆಲೆ ಇದೆ, ಸಾಧಾರಣ ದರ್ಜೆಯ ಷೂ ಮತ್ತು ಬಟ್ಟೆಗೆ ಸಾವಿರಾರು ರೂಪಾಯಿ, ಲಿಪ್ ಸ್ಟಿಕ್, ಪರ್ಪ್ಯೂಂ ಬೆಲೆಗೆ ಮಿತಿಯೇ ಇಲ್ಲ, ಮೊಬೈಲ್ ಕಂಪ್ಯೂಟರ್ ಗಳ ಬೆಲೆಯಂತೂ ನಿಮ್ಮ ಹಣದ ತಾಕತ್ತನ್ನು ಅವಲಂಬಿಸಿದೆ.

ಏಕೆ ಈ ಅಸಮಾನತೆ. ರೈತರೇನು ಗುಲಾಮರೇ. ಅವರು ಬೆಳೆದ ಫಸಲಿಗೆ ಒಂದು ವೈಜ್ಞಾನಿಕ ಬೆಲೆ ಬೇಡವೇ. ಒಂದು ಒಳ್ಳೆಯ ಮಾರುಕಟ್ಟೆ ಬೇಡವೇ. ಅವರು ಬೆಳೆಯುವುದೇನು ಕಸ ಕಡ್ಡಿಯೇ? ರಾಜಕಾರಣಿಗಳೇ - ಅಧಿಕಾರಿಗಳೇ - ಪತ್ರಕರ್ತರೇ - ದೇಶಪ್ರೇಮಿಗಳೇ ನೆನಪಿಡಿ. ಭಾರತವಿನ್ನೂ ಅಭಿವೃದ್ಧಿ ಹೊಂದಿಲ್ಲ. ಮೇಲ್ನೋಟದ ಭ್ರಮೆಗೆ ಒಳಗಾಗದಿರಿ. ನಿಲ್ಲಿಸಿ ನಿಮ್ಮ ನಾಟಕ.

ಎಲ್ಲಿಯವರೆಗೆ ರೈತ ಕಾರ್ಮಿಕರೆಲ್ಲಾ ಸೇರಿದಂತೆ ಇರುವ ಸುಮಾರು ನೂರು ಕೋಟಿಯಷ್ಟು ಭಾರತೀಯರ ಮುಖದಲ್ಲಿ ನಗು ಕಾಣುವುದಿಲ್ಲವೋ, ಎಲ್ಲಿಯವರೆಗೆ ಅವರ ದಿನನಿತ್ಯದ ಬವಣೆಗಳು ಕಡಿಮೆಯಾಗಿ ನೆಮ್ಮದಿ ಮೂಡುವುದಿಲ್ಲವೋ ಅಲ್ಲಿಯವರಗೆ ಭಾರತ ಮುಂದುವರಿಯಲು ಪ್ರಯತ್ನಿಸುತ್ತಿರುವ ಹಿಂದುಳಿದ ದೇಶ. ನಾವಿನ್ನೂ ಅಭಿವೃದ್ಧಿಯ ಮೊದಲ ಮೆಟ್ಟಿಲ ಹತ್ತಿರದಲ್ಲಿದ್ದೇವೆ ಅಷ್ಟೆ. ಭ್ರಮೆಗಳಿಂದ ಹೊರಬಂದು ನಿಜವಾದ ಸರ್ವತೋಮುಖವಾದ ಅಭಿವೃದ್ಧಿ ಸಾಧಿಸೋಣ. ಆಗ ಮಾತ್ರ ಗಣರಾಜ್ಯೋತ್ಸವದ ನಿಮ್ಮ ಸಂಭ್ರಮಕ್ಕೆ ಒಂದು ಅರ್ಧ ಸಿಗುತ್ತದೆ.

ಇತ್ತೀಚಿನ ಒಂದು ಖಾಸಗಿ ಸಂಸ್ಥೆಯ ಅಧ್ಯಯನದ ವರದಿಯ ಪ್ರಕಾರ ದೇಶದ ಶೇಕಡಾ 40% ಸಂಪತ್ತು ಕೇವಲ 1% ಜನರ ಬಳಿ ಇದೆ. 70 ಕೋಟಿ ಜನರಲ್ಲಿ ಇರುವ ಆಸ್ತಿಗೆ ಸಮಾನಾದ ಆಸ್ತಿ ಕೇವಲ 10 ಜನರ ಬಳಿ ಇದೆ. ಇದಕ್ಕೆ ದೇಶದ ಆರ್ಥಿಕ ನೀತಿಗಳೇ ಕಾರಣ ಎಂದು ಹೇಳಲಾಗುತ್ತದೆ. ಕೋವಿಡ್ ನಂತರ ಶ್ರೀಮಂತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರುತ್ತಿದೆ ಮತ್ತು ಅದೇ ರೀತಿ ಬಡತನವೂ ಹೆಚ್ಚಾಗುತ್ತಿದೆ. ಆತ್ಮಸಾಕ್ಷಿ ಇರುವ ಯಾರೇ ಆದರು ಇದನ್ನು ಗಮನಿಸಿ ಪ್ರತಿಕ್ರಿಯಿಸಬೇಕು. ಬೆಲೆ ಏರಿಕೆಯ ಬಿಸಿ ಕೆಳ ಮಧ್ಯಮ ವರ್ಗದ ಜನರ ಜೀವನದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಬೇಕು.

ನುಣುಪಾದ ರಸ್ತೆ, ಜಗಮಗಿಸುವ ವಿಮಾನ ನಿಲ್ದಾಣ, ಅತ್ಯಾಕರ್ಷಕ ಮಾಲ್ ಗಳು, ಅದ್ದೂರಿ ಕಾರುಗಳು, ತುಂಡು ಬಟ್ಟೆಗಳು ಮಾತ್ರ ಅಭಿವೃದ್ಧಿಯ ಮಾನದಂಡಗಳಲ್ಲ. ಎಲ್ಲಾ ಜನರ ನೆಮ್ಮದಿಯ ಗುಣಮಟ್ಟ ಮಾತ್ರ ಸುಸ್ಥಿರ ಅಭಿವೃದ್ಧಿಯ ಸಂಕೇತ. ಇದು ಆದಷ್ಟು ಬೇಗ ಸಾಧ್ಯವಾಗಲಿ. ಆಗ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವಗಳ ಆಚರಣೆಗೆ ನಿಜವಾದ ಅರ್ಥ ಬರುತ್ತದೆ. ಅಲ್ಲಿಯವರೆಗೂ...

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ