ಅಭಿವೃದ್ಧಿಯ ಹಾದಿಯಲ್ಲಿ ಕಾಣದ ಸಂಗತಿಗಳು
ಧಾರವಾಡದಿಂದ ೫೦ ಕಿಮೀ ದೂರದ ಕೊಂಪ್ಲಿಕೊಪ್ಪದ ನಾಗಪ್ಪರ ಹೊಲದಲ್ಲಿ ಏನೇನಿವೆ ಎಂದು ಕಣ್ಣು ಹಾಯಿಸಿದೆ. ಒಂದೆಕ್ರೆಯಲ್ಲಿ ೪೦ ಚಿಕ್ಕು ಗಿಡಗಳು. ಎಂಟು ವರುಷದ ಕಾಲಿಪಟ್ಟಿ ತಳಿ ಚಿಕ್ಕು ಗಿಡಗಳ ತುಂಬ ಫಲಗಳು. ಗಿಡಗಳ ಬುಡದಲ್ಲಿ ೧೫ ಅಡಿ ವ್ಯಾಸದ ಕಳ. ಅದರ ತುಂಬ ಕಸಕಡ್ಡಿಗಳು. ಪ್ರತಿಯೊಂದು ಗಿಡದ ಬುಡದಲ್ಲಿ ನೆಲದಲ್ಲಿ ಅರ್ಧ ಹೂತಿಟ್ಟ ಮಡಕೆಗಳಲ್ಲಿ ನೀರು. ಅವಲ್ಲದೆ, ತೋಟದಲ್ಲಿ ಬೆಳೆದಿದ್ದ ಗಿನಿಹುಲ್ಲು. ಅವರ ಎರಡೂವರೆ ಎಕ್ರೆ ಜಮೀನಿನ ಗಡಿಯಲ್ಲಿ ನೀಲಗಿರಿ, ಹಲಸು, ಸೀಮೆತಂಗಡಿ ಮರಗಳು ಮತ್ತು ಆಡುಸೋಗೆ ಗಿಡಗಳು.
ರಾಜಸ್ಥಾನದಿಂದ ತಂದಿದ್ದ ಸಿರೋಹಿ ಜಾತಿಯ ಮೂರು ಆಡುಗಳು ಮತ್ತು ಒಂದು ದನವೂ ಅಲ್ಲಿದ್ದವು. ನಾಗಪ್ಪರ ಜೊತೆ ಮಾತಾಡುತ್ತಾ ಆಡುಗಳ ಬಗ್ಗೆ ಮಾಹಿತಿ ಪಡೆದೆ. ಈ ಆಡುಗಳ ತಾಯಿ ಒಟ್ಟು ೧೮ ಮರಿ ಹಾಕಿತ್ತು. ಅವನ್ನು ಮಾರಿ ಅವರ ಕೈಗೆ ಬಂದ ಆದಾಯ ರೂಪಾಯಿ ೧೮,೦೦೦. ಅದರಿಂದ ಹುಟ್ಟಿದ ಹೆಣ್ಣು ಆಡೊಂದನ್ನು ಸಾಕುತ್ತಿದ್ದು, ಅದು ಈಗಾಗಲೇ ಎರಡು ಮರಿ ಹಾಕಿದೆ. ಇವನ್ನು ಇನ್ನು ಮೂರು ತಿಂಗಳು ಸಾಕಿ ಮಾರಿದರೆ ರೂಪಾಯಿ ೨,೦೦೦ ಆದಾಯ. ಅವರು ಸಾಕಿರುವ ದನ ದಿನಕ್ಕೆ ಕೊಡುವ ಹಾಲು ಆರು ಲೀಟರ್. ಹಾಲಿನ ಮಾರಾಟದಿಂದಲೂ ಆದಾಯ. ಚಿಕ್ಕು ಮಾರಾಟದಿಂದ ವರುಷಕ್ಕೆ ರೂಪಾಯಿ ೧೦,೦೦೦ ಆದಾಯ. ಕೆಲವೊಮ್ಮೆ ಒಳ್ಳೆಯ ದರ ಸಿಗುತ್ತದೆ. ನಿನ್ನೆ ರೂ. ೧೬೦ ದರದಲ್ಲಿ ೧೦೦ ಚಿಕ್ಕು ಮಾರಾಟ.
ನಾಗಪ್ಪರ ಜಮೀನಿನ ನಡುವಿನಲ್ಲಿ ೩೦ ಅಡಿ ಉದ್ದ, ೩೦ ಅಡಿ ಅಗಲ ಮತ್ತು ೨೦ ಅಡಿ ಆಳದ ಕೃಷಿ ಹೊಂಡ. ಕಳೆದ ಮೂರು ತಿಂಗಳು ಅಲ್ಲಿ ಮಳೆ ಬಂದಿಲ್ಲ. ಆದರೂ ಕೃಷಿ ಹೊಂಡದಲ್ಲಿ ಐದಡಿ ಆಳದ ನೀರು ನಳನಳಿಸುತ್ತಿತ್ತು.
ಅನಂತರ ಎರಡು ಕಿಮೀ ದೂರದ ಹಳ್ಳಿಯಲ್ಲಿದ್ದ ನಾಗಪ್ಪರ ಮನೆಗೆ ಹೋದೆ. ಅವರ ಪತ್ನಿ ಕಲ್ಲವ್ವರಿಂದ ಸ್ವಾಗತ. ಮೂರು ಕೋಣೆಗಳ ಪುಟ್ಟ ಮನೆ. ಮನೆಯೊಳಗೆ ಎಲ್ಲವೂ ಅಚ್ಚುಕಟ್ಟು. ಮೂಲೆಯಲ್ಲೊಂದು ಹೊಲಿಗೆ ಯಂತ್ರ. ಅಡುಗೆಗೆ ಜೈವಿಕಾನಿಲ ಸ್ಥಾವರದಿಂದ ಬಯೋಗ್ಯಾಸ್. ಆಕೆಗೆ ತನ್ನ ಮಗ ಕಲ್ಲಪ್ಪ ಬಿ.ಎ. ಪದವೀಧರನೆಂಬ ಅಭಿಮಾನ.
ಸೂರಶೆಟ್ಟಿಕೊಪ್ಪವನ್ನು ಕೇಂದ್ರವಾಗಿಟ್ಟುಕೊಂಡು, ಸುತ್ತಲಿನ ೨೧ ಹಳ್ಳಿಗಳಲ್ಲಿ ಭೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ೧೯೯೭ರಿಂದ ಕೆಲಸ ಮಾಡಲು ಶುರು ಮಾಡಿತು. ಇದರಿಂದಾಗಿ ನಾಗಪ್ಪರಂತಹ ೨,೦೦೦ ಹಳ್ಳಿಗರ ಬದುಕು ಬದಲಾಗಿದೆ.
“ಇದೆಲ್ಲ ಹೇಗಾಯಿತು?" ಎಂದು ಕೇಳಿದೆ, ಭೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಹೆಚ್ಚುವರಿ ಕಾರ್ಯಕ್ರಮ ನಿರ್ದೇಶಕರಾದ ಡಾ. ಪ್ರಕಾಶ್ ಭಟ್ ಅವರೊಂದಿಗೆ. “ಅದು ಅರ್ಥವಾಗಬೇಕಾದರೆ ನಾಗಪ್ಪರ ಜಮೀನು ಎಂಟು ವರುಷಗಳ ಮುಂಚೆ ಹೇಗಿತ್ತೆಂದು ತಿಳಕೊಳ್ಳಬೇಕು" ಎಂಬುದವರ ಉತ್ತರ. ತಮ್ಮ ಕಡತದಿಂದ ನಾಗಪ್ಪರ ಜಮೀನಿನ ಹಳೆಯ ಫೋಟೋಗಳನ್ನು ತೋರಿಸಿದರು. ಅಲ್ಲಿ ಕಂಡದ್ದು ಬರಡು ನೆಲ.
“ಅಭಿವೃದ್ಧಿಯಲ್ಲಿ ಏನೇನಿವೆ?” ಎಂಬ ಮೂಲಭೂತ ಪ್ರಶ್ನೆಯನ್ನೇ ಎತ್ತಿಕೊಂಡು ಮಾತಿಗೆ ತೊಡಗಿದರು ಡಾ. ಪ್ರಕಾಶ್ ಭಟ್. ಜನರು, ಚಟುವಟಿಕೆಗಳು, ಫಲಿತಾಂಶಗಳು - ಇವೆಲ್ಲ ಅಭಿವೃದ್ಧಿಯ ಅಂಗಗಳು. ಇವುಗಳ ನಡುವಣ ಸಂಬಂಧಗಳೂ ಮುಖ್ಯ. ಮುಂಚೆ ಹೇಗಿತ್ತು? ಎಂದು ಫೋಟೋ, ಧ್ವನಿಸುರುಳಿ, ಬರಹ, ಸಿಡಿಗಳ ಮೂಲಕ ದಾಖಲಿಸಬಹುದು. ಈಗ ಹೇಗಿದೆ? ಅನ್ನೋದನ್ನು ಕಣ್ಣಾರೆ ಕಾಣಬಹುದು. ಆದರೆ ಕೆಲವು ವರುಷಗಳ ಮುಂಚೆ ಹಾಗಿದ್ದದ್ದು, ಈಗ ಹೀಗಾದದ್ದು ಹೇಗೆ? ಎಂಬುದನ್ನು ವಿವರಿಸುವುದೇ ನಮಗಿರುವ ಸವಾಲು. ಯಾಕೆಂದರೆ ಇದು ಬರಿಗಣ್ಣಿಗೆ ಕಾಣಿಸುವುದಿಲ್ಲ ಎಂದವರು ವಿವರಿಸಿದರು.
ಬದಲಾವಣೆಯ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಆದರೆ ಬರಿಗಣ್ಣಿಗೆ ಕಾಣದ ವಿಷಯಗಳನ್ನು ಗುರುತಿಸಬೇಕು ಎನ್ನುತ್ತಾ ಒಂದು ಉದಾಹರಣೆ ನೀಡಿದರು. ಅನಾನಸ್ ಕೃಷಿಯಲ್ಲಿ ರಾವುಫ್ ಸಾಹೇಬರ ಯಶಸ್ಸಿಗೆ ಮುಖ್ಯ ಕಾರಣ ಅನಾನಸನ್ನು ಮುಂಬೈಯಲ್ಲಿ ಅಧಿಕ ದರದಲ್ಲಿ ಮಾರುವುದು. ಇಂಥ ಅಂಶಗಳನ್ನು ಗುರುತಿಸುವುದು ಅಗತ್ಯ ಎಂದರು ಭಟ್.
ಅಭಿವೃದ್ಧಿ ಅಂದರೆ ವ್ಯವಸ್ಥೆಯ ಸುಧಾರಣೆ. ನಾಗಪ್ಪರ ಕುಟುಂಬದವರು ಸಣ್ಣಜೋಳ ಬೆಳೆಯುತ್ತಾರೆ. ಇದುವೇ ಕುಟುಂಬಕ್ಕೆ ಆಹಾರಧಾನ್ಯ. ಅವರು ದನವನ್ನೂ ಸಾಕುತ್ತಿದ್ದರು. ಇದರಿಂದ ಕುಟುಂಬಕ್ಕೆ ಹಾಲು ಮತ್ತು ಹೊಲಕ್ಕೆ ಗೊಬ್ಬರ. ಇವನ್ನೆಲ್ಲ ಉಳಿಸಿಕೊಂಡು ಅವರ ಪರಿಸ್ಥಿತಿ ಸುಧಾರಿಸುವುದು ಹೇಗೆ? ಎಂಬ ಚಿಂತನೆ ಮುಖ್ಯವಾಗುತ್ತದೆ ಎಂದು ವಿವರಿಸಿದರು.
ಎಂಟು ವರುಷಗಳ ಮುಂಚೆ ನಾಗಪ್ಪರ ಬದುಕಿನ ವ್ಯವಸ್ಥೆಗೆ ನಾಲ್ಕು ಸಂಪನ್ಮೂಲಗಳನ್ನು ಹೊಸದಾಗಿ ಸೇರಿಸಲಾಯಿತು: ಮೇವಿನ ಬೆಳೆಗಳು, ಚಿಕ್ಕು ಸಸಿಗಳು, ಮರಬೆಳೆಗಳು ಮತ್ತು ರಾಜಸ್ಥಾನದ ಆಡುಗಳು. ಇವೆಲ್ಲದರಿಂದ ಅವರ ಆದಾಯ ಗಣನೀಯವಾಗಿ ಹೆಚ್ಚಿದೆ. ಆದರೆ ವ್ಯವಸ್ಥೆಯ ಸಮತೋಲನ ಉಳಿದಿದೆ. ಚಿಕ್ಕು ಮಾರಾಟದಿಂದ ಅವರಿಗೆ ಈಗ ಹೆಚ್ಚುವರಿ ಆದಾಯ. ಒಳ್ಳೆಯ ಮೇವಿನಿಂದಾಗಿ ಹಸು ಹೆಚ್ಚು ಹಾಲು ನೀಡುತ್ತಿದ್ದು, ಇದರಿಂದಲೂ ಅಧಿಕ ಆದಾಯ. ಮಾತ್ರವಲ್ಲ, ಕಳೆದ ಮೂರು ವರುಷಗಳಲ್ಲಿ, ಪ್ರತಿ ವರುಷ ಜೆರ್ಸಿ ಕ್ರಾಸ್ ದನ ಸಾಕಣೆ ನಾಗಪ್ಪರ ಮತ್ತೊಂದು ಚಟುವಟಿಕೆ. ಸುಮಾರು ೫,೦೦೦ ರೂಪಾಯಿಗೆ ಖರೀದಿಸಿದ ದನವನ್ನು, ಮಳೆಗಾಲದಲ್ಲಿ ಸಮೃದ್ಧವಾಗಿ ಬೆಳೆಯುವ ಮೇವು ತಿನ್ನಿಸಿ ಚೆನ್ನಾಗಿ ಸಾಕುತ್ತಾರೆ; ಅನಂತರ ಅದನ್ನು ೧೫,೦೦೦ - ೧೮,೦೦೦ ರೂಪಾಯಿಗೆ ಮಾರಿ ಉತ್ತಮ ಲಾಭ ಗಳಿಸುತ್ತಾರೆ. ಅವರ ಜಮೀನಿನ ಗಡಿಯುದ್ದಕ್ಕೂ ಬೆಳೆದಿರುವ ಮರಗಳಿಂದ ಸಾಕಷ್ಟು ಹಸುರುಮೇವು ಸಿಗ್ತಿದೆ; ಇದರ ಲಾಭದಾಯಕ ಬಳಕೆಗಾಗಿ ಆಡು ಸಾಕಣೆ.
ಹೊಲದಲ್ಲಿ ಬದಲಾವಣೆ ಆದರೆ ಸಾಲದು. ಜೊತೆಗೆ ಕುಟುಂಬದ ಜೀವನಮಟ್ಟದಲ್ಲಿಯೂ ಸುಧಾರಣೆಯಾದರೆ ಅದು “ಅಭಿವೃದ್ಧಿ" ಎನಿಸಿಕೊಳ್ಳುತ್ತದೆ. ಅದಕ್ಕಾಗಿ ನಾಗಪ್ಪರಿಗೆ ಜೈವಿಕಾನಿಲ ಸ್ಥಾವರ. ಇವೆಲ್ಲದಕ್ಕೂ “ಸರ್ವೊದಯ ಮಹಾಸಂಘ”ದಿಂದ ಆರ್ಥಿಕ ನೆರವು ಪಡೆದಿದ್ದಾರೆ. ಒಟ್ಟಾರೆಯಾಗಿ, ೨೨ ಹಳ್ಳಿಗಳಲ್ಲಿ ಸಾವಿರಾರು ಕುಟುಂಬಗಳ ಬದುಕು ಹಸುರಾಗಿದೆ. ಜಮೀನು ಮಾರಲು ತಯಾರಾಗಿದ್ದ ಹಲವರು ಆ ಯೋಚನೆ ತೊರೆದು, ತಮ್ಮ ಜಮೀನು ಹಸುರಾಗಿಸಿದ್ದಾರೆ. ಇವರನ್ನು ಕಂಡು ಇತರ ಕುಟುಂಬಗಳು ಬದಲಾವಣೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಿವೆ.
(ಸೂಚನೆ: ಲೇಖನದ ಧಾರಣೆಗಳು ೨೦೦೫ರವು)
(ಫೋಟೋದಲ್ಲಿ ಕೆಮರಾಕ್ಕೆ ಎದುರಾಗಿರುವವರು ಡಾ. ಪ್ರಕಾಶ್ ಭಟ್ ಮತ್ತು ಅವರ ಹಿಂದಿರುವವರು “ಅಡಿಕೆ ಪತ್ರಿಕೆ"ಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ)