ಅಭಿವೃದ್ಧಿ ಎಂಬ ಮಾಯಾ ಜಿಂಕೆಯ ಹಿಂದೆ...
ಜನಸಂಖ್ಯೆಯ ಆಧಾರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದರೆ ಆ ದೇಶ ಇನ್ನೂ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿಲ್ಲಾ ಎಂದೇ ಹೇಳಬೇಕು. ಆಧುನಿಕತೆ ಬೆಳೆದಂತೆ ಅಪರಾಧಗಳು ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿಯ ದಾರಿ ತಪ್ಪಾಗಿದೆ ಎಂದೇ ಭಾವಿಸಬೇಕು. ಅಕ್ಷರಸ್ಥರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಮೋಸ ವಂಚನೆ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿ ಅನುಮಾನಾಸ್ಪದವಾಗಿದೆ ಎಂದು ಊಹಿಸಬಹುದು.
ಆಸ್ಪತ್ರೆ, ಸಿಸಿ ಟಿವಿ, ಮೆಡಿಕಲ್ ಲ್ಯಾಬೋರೇಟರಿಗಳು, ಪೋಲೀಸ್ ಸ್ಟೇಷನ್ನುಗಳು ಹೆಚ್ಚಳವಾದಷ್ಟು ದೇಶದ ಅಭಿವೃದ್ಧಿ ಹಿಮ್ಮುಖವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು. ಆಹಾರದ ಉತ್ಪಾದನೆ ಹೆಚ್ಚಾಗಿದ್ದರೂ ಅದರಲ್ಲಿ ಪೌಷ್ಟಿಕಾಂಶಕ್ಕೆ ಬದಲಾಗಿ ರಾಸಾಯನಿಕಗಳು, ಗಾಳಿಯಲ್ಲಿ ವಿಷಯುಕ್ತ ಅಂಶ, ನೀರಿನಲ್ಲಿ ಸಾಂಕ್ರಾಮಿಕ ರೋಗಗಳ ವೈರಸ್ ಗಳು ಹೆಚ್ಚಾಗಿದ್ದರೆ ಅದು ಅಪಾಯಕಾರಿ ಅಭಿವೃದ್ಧಿ ಎಂದೇ ಪರಿಗಣಿಸಬೇಕು.
ಅತ್ಯುತ್ತಮ ತಂತ್ರಜ್ಞಾನ, ಸಮೂಹ ಸಂಪರ್ಕ ಮಾಧ್ಯಮ, ರಸ್ತೆಗಳು, ಕಟ್ಟಡಗಳು, ವಾಹನಗಳು, ಶಿಕ್ಷಣ ಸಂಸ್ಥೆಗಳು ಇದ್ದರೂ ಮಾನವೀಯ ಮೌಲ್ಯಗಳು ಕುಸಿತ ಕಂಡು ಸಾಮಾಜಿಕ ಸ್ವಾಸ್ಥ್ಯ ಅಸಹನೆಯಿಂದ ಕೂಡಿದ್ದರೆ ಅದನ್ನು ತಪ್ಪಾಗಿ ಅರ್ಥೈಸಿದ ಕೆಟ್ಟ ಅಭಿವೃದ್ಧಿ ಎಂದೇ ತಿಳಿಯಬೇಕು.
ಅನ್ನ ಭಾಗ್ಯ, ಕ್ಷೀರ ಭಾಗ್ಯ, ಸಾಲ ಮನ್ನಾ, ಉಚಿತ ಗ್ಯಾಸ್ ಸಿಲಿಂಡರ್, ಚುನಾವಣೆಯಲ್ಲಿ ಹಣ, ಹೆಂಡ, ಸೀರೆ, ಪಂಚೆ, ಜಾತಿಗಳ ಅವಶ್ಯಕತೆ ಇನ್ನೂ ಇದೆ ಎಂದರೆ ನಾವು ತೀರಾ ಹಿಂದುಳಿದಿದ್ದೇವೇ ಎಂದೇ ಗ್ರಹಿಸಬೇಕು. ಬುಲೆಟ್ ಟ್ರೈನ್, ಸ್ಮಾರ್ಟ್ ಸಿಟಿ, ಡಿಜಿಟಲ್ ವ್ಯವಹಾರ, ಅಂತರರಾಷ್ಟ್ರೀಯ ನಾಯಕತ್ವ ಮುಂತಾದ ವಿಷಯಗಳನ್ನು ನಾವು ಈ ಕ್ಷಣದಲ್ಲಿ ಸಂಭ್ರಮಿಸುತ್ತಿದ್ದೇವೆ ಎಂದರೆ ನಾವು ಆತ್ಮವಂಚನೆ ಮಾಡಿಕೊಂಡು ಅಭಿವೃದ್ಧಿಯ ಭ್ರಮೆಯಲ್ಲಿ ತೇಲುತ್ತಿದ್ದೇವೆ ಎಂದೇ ಮನವರಿಕೆ ಮಾಡಿಕೊಳ್ಳಬೇಕು. ವ್ಯಾವಹಾರಿಕವಾಗಿ ಸೇವಾ ಕ್ಷೇತ್ರ ( Service Sector ) ಹೆಚ್ಚು ಅಭಿವೃದ್ಧಿ ಹೊಂದಿ, ಉತ್ಪಾದಕಾ ಕ್ಷೇತ್ರ ( Production Sector ) ಕುಸಿತ ಕಂಡರೆ ಭಾರತದಂತ ಬೃಹತ್ ದೇಶದ ಭವಿಷ್ಯ ಕಷ್ಟವಾಗುತ್ತದೆ ಎಂದು ಅರಿತುಕೊಳ್ಳಬೇಕು.
ಅಭಿವೃದ್ಧಿಯನ್ನು ಸಮಷ್ಟಿ ದೃಷ್ಟಿಕೋನದಿಂದ , ಎಲ್ಲಾ ವಿಭಾಗಗಳನ್ನು ಅಂದರೆ ವಸ್ತು ಮತ್ತು ವ್ಯಕ್ತಿತ್ವಗಳ ಬೆಳವಣಿಗೆಯನ್ನು ಒಟ್ಟಿಗೆ ಮತ್ತು ಸಮಾನಾಂತರವಾಗಿ ತೆಗೆದುಕೊಂಡು ಹೋದರೆ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ. ಕೃಷಿ ಆಧಾರಿತ ಭಾರತದ ಅಭಿವೃದ್ಧಿ ಯಾವುದೋ ಒಂದು ಕ್ಷೇತ್ರದ ಬೆಳವಣಿಗೆಯಿಂದ ಸಾಧ್ಯವೇ ಇಲ್ಲ. ಆದಷ್ಟು ಬೇಗ ನಾವು ಸರ್ವತೋಮುಖ ಅಭಿವೃದ್ಧಿಯ ದಾರಿಯನ್ನು ಹಿಡಿಯೋಣ ಎಂದು ಆಶಿಸುತ್ತಾ...
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ