ಅಭಿವೃದ್ಧಿ ಕಾರ್ಯ ಅನಿವಾರ್ಯ ಅಗತ್ಯ

ಅಭಿವೃದ್ಧಿ ಕಾರ್ಯ ಅನಿವಾರ್ಯ ಅಗತ್ಯ

ಕಳೆದ ಐದು ವರ್ಷಗಳಲ್ಲಿ ದೇಶದ ವಿವಿದೆಡೆಗಳಲ್ಲಿ ೮೮,೦೯೩ ಹೆಕ್ಟೇರ್ ಗಳಷ್ಟು ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗೆ ಅಂದರೆ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಹೀಗೆ ಬಳಸಲಾದ ಪ್ರದೇಶ ಮುಂಬೈ ಮತ್ತು ಕೊಲ್ಕತ್ತಾ ಮಹಾನಗರದ ಒಟ್ಟು ವಿಸ್ತಿರ್ಣದಷ್ಟಾಗುತ್ತದೆ ಎಂಬುದು ಗಮನಾರ್ಹ. ಇದರಲ್ಲಿ ೧೯,೪೨೪ ಹೆ.ಪ್ರದೇಶವನ್ನು ರಸ್ತೆಗಳಿಗಾಗಿ ಬಳಸಲಾಗಿದ್ದರೆ, ೧೮,೮೪೭ ಹೆಕ್ಟೆರ್ ಅರಣ್ಯವನ್ನು ಗಣಿಗಾರಿಕೆಗೆ, ೧೩,೩೪೪ ಹೆಕ್ಟೆರ್ ಪ್ರದೇಶವನ್ನು ನೀರಾವರಿ ಯೋಜನೆಗಳಿಗಾಗಿ ಉಪಯೋಗಿಸಲಾಗಿದೆ ಎಂದು ಕೇಂದ್ರ ಪರಿಸರ ಖಾತೆ ಸಹಾಯಕ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ೨೦೦೮ರ ಎಪ್ರಿಲ್ ನಿಂದ ೨೦೨೩ರ ಮಾರ್ಚ್ ವರೆಗಿನ ಐದು ವರ್ಷಗಳ ಅವಧಿಯಲ್ಲಿ ಇಷ್ಟು ಪ್ರಮಾಣದ ಅರಣ್ಯವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗಿದೆ. ೧೯೮೦ರ ಅರಣ್ಯ ಸಂರಕ್ಷಣಾ ಕಾನೂನಿನ ನಿಯಮಾನುಸಾರವೇ ಈ ಯೋಜನೆಗಳಿಗೆ ಅರಣ್ಯ ಪ್ರದೇಶವನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇದು ಸರ್ಕಾರಿ ಯೋಜನೆಗಳಿಗೆ ಬಳಸಲಾದ ಅರಣ್ಯ ಪ್ರದೇಶದ ಲೆಕ್ಕ ಇನ್ನು ಖಾಸಗಿಯಲ್ಲಿ ಲೆಕ್ಕವಿಲ್ಲದೆ ಎಷ್ಟು ಅರಣ್ಯ ಭೂಮಿ ಬಳಸಲಾಗಿದೆಯೋ? ಇವತ್ತು ನಾವು ಯಾವ ಪರಿಸ್ಥಿತಿ ಎದುರಿಸುತ್ತಿದ್ದೇವೆ ಅಂದರೆ, ಪರಿಸರವೂ ಉಳಿಯಬೇಕು, ಅಭಿವೃದ್ಧಿ ಕಾರ್ಯವೂ ಆಗಬೇಕು. ಇದು ಅಂದುಕೊಂಡಷ್ಟು ಸುಲಭವಲ್ಲ. ಆಡಳಿತಾರೂಢ ಸರ್ಕಾರಗಳು ಎದುರಿಸುತ್ತಿರುವ ಬಹುದೊಡ್ದ ಸವಾಲಿದು. ಅಂತರ್ಜಲ ಕುಸಿತ, ಮಾಲಿನ್ಯ ಹೆಚ್ಚಳ, ಪರಿಸರ ನಾಶ ಮುಂತಾದ ಕಾರಣಗಳಿಂದಾಗಿ ಜಾಗತಿಕ ತಾಪಮಾನ ಹೆಚ್ಚಳ ಆಗುತ್ತಿರುವುದು ಜಗತ್ತಿನಾದ್ಯಂತ ಕಂಡುಬಂದಿದೆ. ಈ ಹಿನ್ನಲೆಯಲ್ಲಿಯೇ ತಾಪಮಾನ ನಿಯಂತ್ರಣಕ್ಕೆ ವಿಶ್ವ ದೇಶಗಳು ಪ್ಯಾರಿಸ್ ಒಡಂಬಡಿಕೆ ಮಾಡಿಕೊಂಡಿವೆ. ಆದರೆ, ಆರ್ಥಿಕತೆ ಹಾಗೂ ಜನಸಂಖ್ಯೆ ಬೆಳೆದಂತೆಲ್ಲ ಕೆಲವು ಸಮಸ್ಯೆಗಳು ಬೇಡವೆಂದರೂ ಅನಿವಾರ್ಯವಾಗಿ ಬರುತ್ತವೆ. ಆಧುನಿಕ ಕಾಲಕ್ಕೆ ತಕ್ಕಂತೆ ಸೌಕರ್ಯಗಳನ್ನು ಒದಗಿಸದಿದ್ದರೆ ಆಗದು. ರಸ್ತೆಗಳನ್ನೇ ತೆಗೆದುಕೊಂಡರೆ, ಉತ್ತಮ ರಸ್ತೆಗಳು ದೇಶದ ಜೀವನಾಡಿ ಎಂದೇ ಗುರುತಿಸಲ್ಪಡುತ್ತದೆ. ಆದರೆ ಉತ್ತಮ ರಸ್ತೆಗಳನ್ನು ನಿರ್ಮಿಸುವಾಗ ಅರಣ್ಯದ ಮೇಲೆ ಪರಿಣಾಮಗಳು ಆಗುತ್ತವೆ. ಯಾವುದೇ ನಿರ್ಮಾಣದಲ್ಲಿ ಆಗುವ ಪರಿಸರ ಹಾನಿಗೆ ಪ್ರತಿಯಾಗಿ ಅಷ್ಟೇ ಪ್ರಮಾಣದ ಅರಣ್ಯ ಬೆಳೆಸಬೇಕೆಂಬ ನಿಯಮ ಇದೆ. ಆದರೆ ಕೆಲ ಸಂದರ್ಭಗಳಲ್ಲಿ ಅದು ಸೂಕ್ತವಾಗಿ ಅನುಷ್ಟಾನವಾಗುವುದಿಲ್ಲ. ಹಾಗಾದಾಗ ಹಾನಿಯನ್ನು ಭರಿಸುವುದು ಕಷ್ಟಸಾಧ್ಯ. ಸಾಧ್ಯವಿದ್ದ ಕಡೆಗಳಲ್ಲಿ ಮರಗಿಡಗಳ ಸ್ಥಳಾಂತರವನ್ನೂ ಮಾಡಬಹುದಾಗಿದೆ.

ಬೆಂಗಳೂರಿನ ಉದಾಹರಣೆಯನ್ನೇ ತೆಗೆದುಕೊಂಡರೆ-೨೦೧೮ರಲ್ಲಿ ಮರ ಗಣತಿ ನಡೆಸಿದ್ದ ಐಐಎಸ್ ಸಿಯು , ನಗರದ ಒಟ್ಟು ವಿಸ್ತೀರ್ಣದಲ್ಲಿ ಶೇ ೮.೬ ಭಾಗವನ್ನು ಮರಗಳು ಆವರಿಸಿವೆ; ಒಟ್ಟು ೬೧ ಲಕ್ಷ ಮರಗಳಿವೆ ಎಂದು ತಿಳಿಸಿತ್ತು. ಈಗ ಈ ಪ್ರಮಾಣ ಇನ್ನಷ್ಟು ತಗ್ಗಿದೆ. ಪರಿಸರ ತಜ್ಞರ ಪ್ರಕಾರ, ಒಬ್ಬ ವ್ಯಕ್ತಿಗೆ ಸರಾಸರಿ ೭-೮ ಮರಗಳು ಇರಬೇಕಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಇರುವುದು ಪ್ರತಿ ವ್ಯಕ್ತಿಗೆ ಸರಾಸರಿ ಒಂದು ಮರ ಮಾತ್ರ. ಹಸಿರೀಕರಣವೇ ಇದಕ್ಕೆ ತಕ್ಕಮಟ್ಟಿನ ಪರಿಹಾರ. ಇದರ ಜೊತೆಗೆ, ಪರಿಸರ ಹಾನಿ ಕಡಿಮೆ ಆಗುವ ಹಾಗೆ ಯೋಜನೆ ರೂಪಿಸಬೇಕು. ಹಾಗೇ ಅಭಿವೃದ್ಧಿ ಎಷ್ಟಿರಬೇಕೆಂದು ನಿರ್ಧರಿಸುವ ವಿವೇಕವೂ ಹೆಚ್ಚಬೇಕು. ಸರ್ಕಾರ ಮತ್ತು ಸಮಾಜದ ಸಹಭಾಗಿತ್ವದಲ್ಲಿ ಹಸಿರುಳಿಸುವ ಕಾರ್ಯವಾಗಬೇಕು.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೦-೦೪-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ