ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿಯಿದೆ

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿಯಿದೆ

ಬೆಳೆದ ಮೂರು ದಿನಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಸರ್ವೋಚ್ಚ ಯಾಲಯದ ವಿವಿಧ ಪೀಠಗಳು ವ್ಯಕ್ತಪಡಿಸಿದ ಅಭಿಪ್ರಾಯಗಳು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುವ ವ್ಯಕ್ತಿ ನಿಂದನೆ, ಅಪಮಾನ, ಮಾನಹಾನಿಗಳು ಸ್ವೀಕಾರಾರ್ಹವಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ಅನಿರ್ಬಂಧಿತವಲ್ಲ, ಅದು ಇತರ ವ್ಯಕ್ತಿಗಳು ಘನತೆಯಿಂದ ಬಾಳುವ ಹಕ್ಕನ್ನು ಗೌರವಿಸಬೇಕು ಎಂಬುದಾಗಿ ನ್ಯಾಯಾಲಯವು ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಸಂವಿಧಾನದ ೧೯ನೇ ವಿಧಿ ಮತ್ತು ಘನತೆಯಿಂದ ಬಾಳುವ ಹಕ್ಕನ್ನು ಪ್ರತಿಪಾದಿಸುವ ೨೧ನೇ ವಿಧಿಯ ಪ್ರಶ್ನೆಗಳು ಬಂದಾಗ ೨೧ನೇ ವಿಧಿಯೇ ಮೇಲುಗೈ ಪಡೆಯುತ್ತದೆ ಎಂದೂ ನ್ಯಾಯಾಲಯವು ಹೇಳುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇತರರ ಮೇಲೆ ಮಾನಹಾನಿಕರ ನಿಂದೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂಬುದನ್ನು ಸಾರಿ ಹೇಳಿದೆ.

ಆರೆಸ್ಸೆಸ್ ಮತ್ತು ಪ್ರಧಾನಿ ಮೋದಿ ವಿರುದ್ಧ ಹೇಮಂತ್ ಮಾಲವೀಯ ಎಂಬಾತ ನಿಂದನಾತ್ಮಕ ವ್ಯಂಗ್ಯಚಿತ್ರ ಪ್ರಕಟಿಸಿದ, ವಜಾಹತ್ ಖಾನ್ ಎಂಬಾತ ಶರ್ಮಿಷ್ಟ ಪಾನೋಳಿ ವಿರುದ್ಧ ನಿಂದನಾತ್ಮಕ ಪೋಸ್ಟ್‌ಗಳನ್ನು ಮಾಡಿದ, ಉದಯಪುರ ಫೈಲ್ಸ್ ಸಿನಿಮಾದ ಮೇಲೆ ನಿಷೇಧ ಹೇರಬೇಕೆಂದು ಕೋರಿದ ಪ್ರಕರಣಗಳಲ್ಲೆಲ್ಲ ನ್ಯಾಯಾಲಯದ ವಿವಿಧ ಪೀಠಗಳು ಇದೇ ಬಗೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಗಮನಾರ್ಹ. ''ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರ ವಿರುದ್ಧ ಏನು ಬೇಕಾದರೂ ಹೇಳಬಹುದೆಂದು ಅರ್ಥವಲ್ಲ" ಎಂಬುದಾಗಿಯೂ ನ್ಯಾಯಾಧೀಶರು ವ್ಯಂಗ್ಯಚಿತ್ರಕಾರನ ಪ್ರಸಂಗದಲ್ಲಿ ಕಟುವಾಗಿ ನುಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ವ್ಯಕ್ತಿಗತ ನಿಂದೆಯ ಪೋಸ್ಟ್‌ಗಳನ್ನು ನಿಯಂತ್ರಿಸುವ ಕುರಿತಂತೆ ಕೇಂದ್ರ ಸರಕಾರವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕಾದ ಅಗತ್ಯ ಇದೆಯೆಂದು ಮತ್ತೊಂದು ಪ್ರಕರಣದಲ್ಲಿ ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸಿದೆ.

ಸಾಮಾಜಿಕ ಜಾಲತಾಣಗಳ ಯುಗ ಬಂದ ಬಳಿಕ ಯಾರು ಬೇಕಾದರೂ ಏನು ಬೇಕಾದರೂ ಬರೆಯಬಹುದು ಎಂಬಂತಹ ಪರಿಸ್ಥಿತಿ ಏರ್ಪಟ್ಟಿದೆ. ಇತರರ ಮಾನ ಕಳೆಯುವ ಕಾರ್ಯದಲ್ಲಿ ಯಾವುದೇ ಹಿಂಜರಿಕೆ ಇಲ್ಲದಂತಾಗಿದೆ. ವ್ಯಕ್ತಿಯೊಬ್ಬನ ಗೌರವ ಮಣ್ಣಪಾಲು ಮಾಡುವುದು ಬಹುಸುಲಭ ಎಂಬಂತಾಗಿದೆ. ಇವೆಲ್ಲದರ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ವಿಷಯ ಮತ್ತು ಭಾಷೆಯ ಮೇಲೆ ನಿರ್ಬಂಧಗಳನ್ನು ಹಾಕುವುದು ಅನಿವಾರ್ಯವಾಗಿ ಮಾರ್ಪಟ್ಟಿದೆ. ಸರಕಾರವು ಈ ನಿಟ್ಟಿನಲ್ಲಿ ಮಾರ್ಗದರ್ಶಿ ಸೂತ್ರ ರೂಪಿಸಬೇಕಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೭-೦೭-೨೦೨೫