ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದ್ವೇಷ ಭಾಷಣ - ಬರಹಗಳು...

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದ್ವೇಷ ಭಾಷಣ - ಬರಹಗಳು...

ಸುಪ್ರೀಂ ಕೋರ್ಟ್ ಸಹ ಈ ವಿಷಯದಲ್ಲಿ ಗೊಂದಲದಲ್ಲಿದೆ. ಅದರಲ್ಲಿ ಆಶ್ಚರ್ಯವೂ ಇಲ್ಲ. ಬಹುಶಃ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದರ ಅರ್ಥವನ್ನು ಸ್ಪಷ್ಟವಾಗಿ ಹೇಳುವುದು ಸಾಧ್ಯವೇ ಇಲ್ಲ. ಅದನ್ನು ಅನೇಕ ಷರತ್ತುಗಳಿಗೆ ಅನ್ವಯಿಸಿ ಹೇಳಬೇಕಾಗುತ್ತದೆ. ನಮ್ಮ ಅಭಿಪ್ರಾಯ ಏನಿದೆಯೋ ಅದನ್ನು ಮುಕ್ತವಾಗಿ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಕರೆಯಬಹುದೇ ?

ಹಾಗಾದರೆ, ಒಬ್ಬ ಸಕ್ಕರೆ ಕಹಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಬಹುದು, ಇನ್ನೊಬ್ಬ ಕಾಗೆ ಬೆಳ್ಳಗಿದೆ ಎನ್ನಬಹುದು, ಮತ್ತೊಬ್ಬ ಜಾತಿಯೇ ಶ್ರೇಷ್ಠ ಎಂದು  ಹೇಳಬಹುದು, ಮಗದೊಬ್ಬ ಆ ಪಕ್ಷ ದೇಶ ದ್ರೋಹಿ ಎನ್ನಬಹುದು, ಇನ್ಯಾರೋ ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎನ್ನಬಹುದು, ಮತ್ತೊಬ್ಬ ಅಧಿಕಾರಿಗಳೆಲ್ಲಾ ಭ್ರಷ್ಟರು ಎನ್ನಬಹುದು, ಮತ್ಯಾರೋ ಯುವಕರೆಲ್ಲಾ ಕೆಟ್ಟವರು ಎನ್ನಬಹುದು, ಅವರ್ಯಾರೋ ಮುಸ್ಲಿಂ ಕ್ರಿಶ್ಚಿಯನ್ ಸಮುದಾಯದ ಬಗ್ಗೆ ಇನ್ನೇನೋ ಹೇಳಬಹುದು,  ಹೀಗೆ ನಾನಾ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿ ಅದು ನನಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಗತಿ ಏನು ?

ಒಬ್ಬರು ರಾಮ ಕುಡುಕ ಎಂದರೆ ಮತ್ತೊಬ್ಬರು ದೇವರು ಎನ್ನುತ್ತಾರೆ. ಇಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಒಂದೇ. ಎಲ್ಲವನ್ನೂ ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಸ್ವಾತಂತ್ರ್ಯ ನಮಗಿದೆ ನಿಜ. ಆದರೆ ಹೀಗೆ ಮಾತನಾಡುತ್ತಾ ಹೋದರೆ ಸಮಾಜದ ಆರೋಗ್ಯದ ಸ್ಥಿತಿ ಏನು ? ಸತ್ಯ ಮತ್ತು ವಾಸ್ತವಕ್ಕಿಂತ ಅಭಿವ್ಯಕ್ತಿ ಸ್ವಾತಂತ್ರ್ಯ ದೊಡ್ಡದೇ ? ವಿಷಯ ಜ್ಞಾನದ ಆಳ ಅಗಲಗಳ ಅರಿವಿಲ್ಲದೆ, ಪರಿಸ್ಥಿತಿಯ ಒಟ್ಟು ಅವಲೋಕನ ಮಾಡದೆ ಆ ಕ್ಷಣದಲ್ಲಿ ನಮಗೆ ತೋಚಿದ ಅಭಿಪ್ರಾಯ ಹೇಳಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಸಮರ್ಥಿಸಿಕೊಳ್ಳಬಹುದೆ ?

ಇದು ಉಡಾಫೆ ಮತ್ತು ಅಪಾಯಕಾರಿ ಆಗಬಹುದಲ್ಲವೇ ? ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದನ್ನು ಉದಾಹರಣೆ ಸಹಿತ ಅರ್ಥ  ಮಾಡಿಕೊಳ್ಳಲು ಪ್ರಯತ್ನಿಸೋಣ. ನಿಮಗೆ ಪ್ರೀತಿ ಎಂಬ ಪದ ಮತ್ತು ಭಾವ ತಿಳಿದಿದೆಯಲ್ಲವೇ? ಆ ಪ್ರೀತಿ ಕೇವಲ ಪ್ರೀತಿಯಲ್ಲ. ಅದರಲ್ಲಿ ಮೋಹ, ಸ್ವಾರ್ಥ, ತ್ಯಾಗ, ಸಹಕಾರ, ಅವಲಂಬನೆ, ಜವಾಬ್ದಾರಿ, ಮಾನವೀಯ ಮೌಲ್ಯ, ನಾಗರಿಕ ಪ್ರಜ್ಞೆ, ಸಾಮಾನ್ಯ ಜ್ಞಾನ, ಸೇರಿ ಅನೇಕ ಭಾವನೆಗಳು ಅಡಕವಾಗಿವೆ. ಆ ಎಲ್ಲವುಗಳ ಒಟ್ಟು ಮೊತ್ತ ಪ್ರೀತಿ. ಹಾಗೆಯೇ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ,

ಮುಕ್ತತೆ, ಜ್ಞಾನ, ಸಮಷ್ಟಿ ಪ್ರಜ್ಞೆ, ಜವಾಬ್ದಾರಿ, ನೈತಿಕತೆ, ಕಾನೂನಿನ ಅರಿವು, ಸ್ವಾತಂತ್ರ್ಯ, ಪ್ರೀತಿ, ತಾಳ್ಮೆ, ಸ್ವೀಕರಿಸುವ ಮನೋಭಾವ, ಮಾನವೀಯ ಮೌಲ್ಯ, 360 ಡಿಗ್ರಿ ದೃಷ್ಟಿಕೋನ, ವಿನಯ, ಸಭ್ಯತೆ, ಕುಟುಂಬ, ಸಮಾಜ, ದೇಶಪ್ರೇಮದ ಒಲವು, ಕ್ರಿಯಾತ್ಮಕತೆ, ಮುಂತಾದ ಅನೇಕ ಅಂಶಗಳು ಒಳಗೊಂಡಿವೆ.

ದೇವರು ಇದ್ದಾನೆ ಅಥವಾ ಇಲ್ಲಾ, ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳೇ ಅನರ್ಹಳೇ, ಭಾರತ ಹಿಂದು ರಾಷ್ಟ್ರವಾಗಬೇಕೆ ಅಥವಾ ಜಾತ್ಯಾತೀತವಾಗಿ ಉಳಿಯಬೇಕೆ, ಯುದ್ಧ ಬೇಕೆ ಶಾಂತಿ ಬೇಕೆ, ಹೀಗೆ ಎಲ್ಲಾ ವಿಷಯಗಳಲ್ಲೂ ವಿಚಾರ ವಿನಿಮಯ ಮತ್ತು ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದ ಮಾತ್ರಕ್ಕೆ ಇವುಗಳ ಬಗ್ಗೆ ಸ್ಪಷ್ಟವಾಗಿ ಅರಿಯದೆ, ಪರಿಣಾಮಗಳನ್ನು ಯೋಚಿಸದೆ ಯಾರದೋ ಒತ್ತಡಕ್ಕೆ ಮಣಿದು ನಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಸಮಾಜದ ದೇಶದ ಸ್ವಾಸ್ಥ್ಯ ಹಾಳು ಮಾಡುವುದು ಎಷ್ಟು ಸರಿ.

ಹಾಗೆಯೇ ವ್ಯವಸ್ಥೆಯ ಒಳಿತು ಕೆಡಕುಗಳ ಬಗ್ಗೆ, ನಮ್ಮ ಅಂತರಾಳದ ಭಾವನೆಗಳನ್ನು ಹೇಳದೆ ಮೌನವಹಿಸಲು ಮನುಷ್ಯ ಮೂಕ ಪ್ರಾಣಿಯಲ್ಲ ಅಥವಾ ಸರ್ಕಾರಗಳ ಬಂಧಿಯಲ್ಲ ಅಥವಾ ಗುಲಾಮನಲ್ಲ. ಪ್ರೀತಿಗೆ ಇರುವಂತೆ ಅಭಿವ್ಯಕ್ತಿಗು ಹಲವಾರು ಆಯಾಮಗಳು ಇವೆ. ಅದನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ. ಸಾಹಿತ್ಯ ಸಂಗೀತ ಕಲೆ ಸಮಾಜ ಸೇವೆ ರಾಜಕೀಯ ಮುಂತಾದ ಎಲ್ಲಾ ಕ್ಷೇತ್ರಗಳಲ್ಲು ಅಭಿವ್ಯಕ್ತಿ ಸ್ವಾತಂತ್ರ್ಯ ಉಪಯೋಗ ಮತ್ತು ದುರುಪಯೋಗ ಎರಡೂ ಆಗುತ್ತಿದೆ. ಆದರೆ ಅದು ಸ್ವೇಚ್ಛೆಯಾಗಿ ಅಪಾಯಕಾರಿ ಹಂತ ಮುಟ್ಟಿರುವುದು ಮಾತ್ರ ಆತಂಕಕಾರಿ. ರಕ್ಷಣೆಗಾಗಿ ಇರುವ ಬಂದೂಕು ದುಷ್ಟನ ಕೈಗೆ  ಸಿಕ್ಕಿ ಅಮಾಯಕರ ಸಾವಿಗೆ ಕಾರಣವಾಗಬಾರದಲ್ಲವೇ. ಅದೇ ರೀತಿ ‌ಅಭಿವ್ಯಕ್ತಿ ಸ್ವಾತಂತ್ರ್ಯ ಮನುಷ್ಯ ಸ್ವಾತಂತ್ರ್ಯದ - ನಾಗರೀಕತೆಯ ವಿಕಾಸಕ್ಕೆ ಕಾರಣವಾಗಬೇಕೆ ಹೊರತು ಅವನ ವಿನಾಶಕ್ಕೆ ಆಯುಧವಾಗಬಾರದು.

ಪ್ರಜ್ಞಾವಂತರಾದ ಎಲ್ಲರೂ ಜಾಗೃತರಾಗೋಣ. ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಿಸಿ ಅದನ್ನು ಒಳ್ಳೆಯದಕ್ಕೆ ಉಪಯೋಗಿಸೋಣ. ಪ್ರಜಾಪ್ರಭುತ್ವದ ಬೇರುಗಳು ಇರುವುದು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನೆನಪಿಡಿ. ಅಭಿವ್ಯಕ್ತಿ ಸ್ವೇಚ್ಛೆಯಲ್ಲ ನಿರ್ಭಂದಿತ ಸ್ವಾತಂತ್ರ್ಯ, ಅಭಿವ್ಯಕ್ತಿ ಮಿತಿಯೊಳಗೆ ಅಡಗಿದ ಅಪರಿಮಿತ ಸ್ವಾತಂತ್ರ್ಯ, ಅಭಿವ್ಯಕ್ತಿ ಭಾವನೆಗಳ ವಿಕಾಸದೊಳಗೆ ಜವಾಬ್ದಾರಿ ಹೊಂದಿರುವ ಸ್ವಾತಂತ್ರ್ಯ, ಅಭಿವ್ಯಕ್ತಿ ನಮ್ಮ ಹಕ್ಕು ಮತ್ತು ಕರ್ತವ್ಯದೊಳಗಿನ ಸ್ವಾತಂತ್ರ್ಯ, ಅಭಿವ್ಯಕ್ತಿ ಕಾನೂನು, ನೈತಿಕತೆ, ಸ್ವಾಭಾವಿಕತೆಯ ನಾಗರಿಕ ಪ್ರಜ್ಞೆ ಎಂಬ ಸ್ವಾತಂತ್ರ್ಯ, ಅಭಿವ್ಯಕ್ತಿ ನಮ್ಮ ಅರಿವಿನ ಸ್ವಾತಂತ್ರ್ಯ, ಎಲ್ಲವನ್ನೂ ಅಭಿವ್ಯಕ್ತಿಸೋಣ, ತಾಯಿ ಪ್ರೀತಿಯ ಮಮತೆಯ ತ್ಯಾಗದ ನೆರಳಿನಲ್ಲಿ....

-ವಿವೇಕಾನಂದ ಎಚ್ ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ