ಅಭೇದ್ಯ ವಾಯು ರಕ್ಷಣಾ ವ್ಯವಸ್ಥೆ ಅತ್ಯಗತ್ಯ

ಪಾಕ್ ಉಗ್ರರ ನೇರ ಕೈವಾಡವಿದ್ದ ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಭಾರತ ನಡೆಸಿದ 'ಆಪರೇಷನ್ ಸಿಂದೂರ' ಜಗತ್ತನ್ನೇ ನಿಬ್ಬೆರಗಾಗಿಸಿತ್ತು, ಅಲ್ಲಿಯ ತನಕ ಅಮೆರಿಕ, ಇಸ್ರೇಲ್, ಸೌದಿ ಅರೇಬಿಯಾದಂಥ ರಾಷ್ಟ್ರಗಳ ವಾಯು ರಕ್ಷಣಾ ವ್ಯವಸ್ಥೆ ಮಾತ್ರವೇ ಹೆಚ್ಚು ಚರ್ಚೆಯಲ್ಲಿದ್ದವು. ಆದರೆ, ಭಾರತ ಸದ್ದಿಲ್ಲದೆ ಅಳವಡಿಸಿಕೊಂಡಿದ್ದ ಪ್ರಬಲ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಎಸ್-400 (ಸುದರ್ಶನ) ಬಗ್ಗೆ ಹೆಚ್ಚಿನ ದೇಶಗಳಿಗಿರಲಿ, ಸ್ವತಃ ಭಾರತದಲ್ಲಿ ಬಹುತೇಕರಿಗೆ ಅರಿವಿರಲಿಲ್ಲ. ಆದರೆ, ಪಾಕಿಸ್ತಾನ ಸೇನೆಯು ಬಳಸಿದ ಟರ್ಕಿಯ ಡೋನ್ ಗಳು, ಚೀನಾದ ಕ್ಷಿಪಣಿ, ಯುದ್ಧವಿಮಾನಗಳನ್ನೆಲ್ಲ ಎಸ್-400 ಕ್ಷಣಮಾತ್ರದಲ್ಲಿ ಹೊಡೆದುರುಳಿಸಿ, ಅಭೇದ್ಯ ರಕ್ಷಣೆಯನ್ನು ಒದಗಿಸಿತ್ತು. ಈಗ ರಕ್ಷಣಾ ಇಲಾಖೆಯು ವಾಯು ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿರುವುದು ದೇಶದ ಸುರಕ್ಷತೆ ದೃಷ್ಟಿಯಿಂದ ಅತ್ಯಗತ್ಯದ ಕ್ರಮ.
ಎಸ್-400 ರಷ್ಯಾ ನಿರ್ಮಿತ ವಾಯು ರಕ್ಷಣಾ ವ್ಯವಸ್ಥೆ, ಆದರೆ, ಈಗ ಅಳವಡಿಕೆಯಾಗಲು ರಕ್ಷಣಾ ಇಲಾಖೆ ಅನುಮೋದನೆ ನೀಡಿರುವ ತಂತ್ರಜ್ಞಾನ ಸ್ವದೇಶಿ ಎನ್ನುವುದು ಅಗ್ಗಳಿಕೆಯ ಸಂಗತಿ. ನಮ್ಮದೇ ಡಿಆರ್ಡಿಒ ಅಭಿವೃದ್ಧಿಪಡಿಸಲಿರುವ 'ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ ಸಿಸ್ಟಂ' (ಕ್ಯೂಆರ್.ಎಸ್ಎಎಂ) ದೇಶದ ಗಡಿಭಾಗಗಳಿಗೆ ಇನ್ನಷ್ಟು ಭದ್ರತೆ ಒದಗಿಸಲಿದೆ. ೩೦ ಕಿ.ಮೀ. ವ್ಯಾಪ್ತಿಯಲ್ಲಿ ಗುರಿಗಳನ್ನು ಶೋಧಿಸುವ ಮತ್ತು ಅತ್ಯಂತ ನಿಖರವಾಗಿ ಹೊಡೆದುರುಳಿಸಬಲ್ಲ ಸಾಮರ್ಥ್ಯವಿರುವ ಕ್ಯೂಆರ್ಎಸ್ಎಎಂ ಅನ್ನು ೩೦ ಸಾವಿರ ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾಗುತ್ತಿದೆ.
ಈ ಹಿಂದೆ, ೨೦೧೮ಲ್ಲಿ ರಷ್ಯಾ ಜತೆಗೆ ಎಸ್-400 ಖರೀದಿ ಒಪ್ಪಂದಕ್ಕೆ ಮುಂದಾದಾಗ ಆಗಿನ ರಕ್ಷಣಾ ಸಚಿವ ಮನೋಹರ ಪರಿಕರ್ ಅವರ ನಿಲುವನ್ನು ಪ್ರತಿಪಕ್ಷಗಳು ಖಂಡಿಸಿದ್ದವು. "ಇಷ್ಟು ದುಬಾರಿ ಹಣ ಸುರಿಯಬೇಕೆ?,'' ಎಂದು ಪ್ರಶ್ನಿಸಿದ್ದಲ್ಲದೆ, ಕೆಲವರು ಕೋರ್ಟ್ ಮೆಟ್ಟಿಲನ್ನೂ ಏರಿದ್ದರು. ಆದರೆ, ಆಪರೇಷನ್ ಸಿಂದೂರದ ಸಂದರ್ಭದಲ್ಲಿ ಭಾರತದ ಗಡಿಭಾಗವನ್ನು ಸುಭದ್ರಗೊಳಿಸಿದ ಸುದರ್ಶನ ವ್ಯವಸ್ಥೆಯು ಪಕ್ಷಾತೀತ ಮೆಚ್ಚುಗೆಗೆ ಪಾತ್ರವಾಯಿತು ಎಂಬುದು ಗಮನಾರ್ಹ. ಈಗಾಗಲೇ ಭಾರತದ ದಾಳಿಯಿಂದಾಗಿ ಉಗ್ರರ ನೆಲೆ, ಪ್ರಮುಖ ವಾಯುನೆಲೆಗಳನ್ನು ಕಳೆದುಕೊಂಡಿರುವ ಪಾಕಿಸ್ತಾನ ಸಹಜವಾಗಿ ಬಾಲ ಸುಟ್ಟ ಬೆಕ್ಕಿನಂತಾಗಿದೆ. ಯಾವುದೇ ಸಂದರ್ಭದಲ್ಲಿ ಪಿತ್ತ ಕೆದರಿ, ಭಾರತದ ಮೇಲೆ ಮುಗಿಬೀಳುವ ಅಪಾಯವೂ ಇಲ್ಲದಿಲ್ಲ. ಸಾಲದ್ದಕ್ಕೆ ನೀಚ ಪಾಕ್ನ ಬೆನ್ನಿಗೆ ನಿಂತು ಪುನಃ ಕಪಟಿಯಂತೆ ವರ್ತಿಸುತ್ತಿರುವ ಚೀನಾವು ಇಸ್ಲಾಮಾಬಾದ್ಗೆ ಇನ್ನಷ್ಟು ರಕ್ಷಣಾಶಕ್ತಿ ನೀಡಿದರೂ ಅಚ್ಚರಿಯೇನಿಲ್ಲ, ಭವಿಷ್ಯದ ಈ ಎಲ್ಲ ಆಪತ್ತುಗಳನ್ನು ಎದುರಿಸಲು ಭಾರತ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲೇಬೇಕಿತ್ತು ಕೂಡ.
ರಕ್ಷಣಾ ತಂತ್ರಜ್ಞಾನ ಇಂಥ ದಿಕ್ಕಿನಲ್ಲಿ ಸಾಗಿದಷ್ಟು ನಾವು ನಮ್ಮ ಸೈನಿಕರ, ನಾಗರಿಕರ ಪ್ರಾಣವನ್ನು ಉಳಿಸಿಕೊಳ್ಳಬಹುದು ಎಂಬುದು ನೆನಪಿಡಬೇಕಾದಂಥ ಅಂಶ. ೨೦೨೬ರಲ್ಲಿ ಸೇನೆಗೆ ನಿಯೋಜನೆಗೊಳ್ಳಲಿರುವ ಕ್ಯೂಆರ್ಎಸ್ಎಎಂ ಅಂಥ ಭರವಸೆಯನ್ನು ದೇಶಕ್ಕೆ ಒದಗಿಸಲಿ. ಅಕ್ಕಪಕ್ಕದ ಶತ್ರುಗಳಿಗೆ ಭಾರತ ಅಭೇದ್ಯವಾಗಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೨-೦೬-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ