ಅಭ್ಯರ್ಥಿಗಳ ಪ್ರಮಾಣ ವಚನ ಅಥವಾ ಪ್ರಚಾರ ಹೀಗಿರಲಿ...!
ಗೆಳೆಯ ಗೆಳತಿಯರೇ, ನಮ್ಮ ಕ್ಷೇತ್ರದ ಮತದಾರ ಬಂಧುಗಳಲ್ಲಿ ಒಂದು ಹೃದಯ ಪೂರ್ವಕ ಮನವಿ. 2023 ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ನಿಮ್ಮ ಕ್ಷೇತ್ರದ ಅಭ್ಯರ್ಥಿಯಾದ ನಾನು ಅಂತರಾಳದಿಂದ ಈ ಕ್ಷೇತ್ರದ ಜನರಿಗಾಗಿ ಮಾಡುವ ಕೆಲಸಗಳ ಒಂದು ಮುನ್ನೋಟ ನಿಮ್ಮ ಮುಂದಿಡುತ್ತಿದ್ದೇನೆ. ದಯವಿಟ್ಟು ತಾಳ್ಮೆಯಿಂದ ಓದಿ ನಿಮ್ಮ ಅಮೂಲ್ಯ ಮತವನ್ನು ನನ್ನ ಗುರುತಿಗೆ ನೀಡಬೇಕೆಂದು ಈ ಮೂಲಕ ಕಳಕಳಿಯ ಮನವಿ ಮಾಡಿಕೊಳ್ಳುತ್ತಿದ್ದೇನೆ..
ಸರ್ಕಾರಿ ಕಛೇರಿಗಳಲ್ಲಿ ಸಂಪೂರ್ಣ ದಕ್ಷ ಮತ್ತು ಪಾರದರ್ಶಕ ಅಡಳಿತ ಇರುವಂತೆ ನೋಡಿಕೊಳ್ಳುತ್ತೇನೆ. ಈಗ ಆಗುತ್ತಿರುವ ಸರ್ಕಾರಿ ಹಣದ ಖರ್ಚಿನಲ್ಲಿ ಸೋರಿಕೆ ಮತ್ತು ಲೂಟಿಯನ್ನು ತಡೆದು ದ್ವಿಗುಣ ಅಭಿವೃದ್ಧಿ ಮಾಡುತ್ತೇನೆ. ಸಾರ್ವಜನಿಕರ ರಕ್ಷಣೆಗಾಗಿ ಹಸ್ತಕ್ಷೇಪ ಮತ್ತು ಪಕ್ಷಪಾತವಿಲ್ಲದ ಪೋಲೀಸ್ ವ್ಯವಸ್ಥೆ ಹಾಗೂ ಸಂಪೂರ್ಣ ಕಾನೂನು ವ್ಯವಸ್ಥೆ ಸುಧಾರಣೆ ಮಾಡಿ ಎಲ್ಲಾ ರೀತಿಯ ವ್ಯವಹಾರಗಳಲ್ಲಿ ಪಾರದರ್ಶಕತೆ ತರಲಾಗುವುದು.
ಪ್ರತಿ ಗ್ರಾಮ ಪಂಚಾಯತಿ - ವಾರ್ಡ್ ಮಟ್ಟದಲ್ಲಿ ಸರ್ಕಾರದ ಅನುದಾನದಿಂದ ಸುಸಜ್ಜಿತ ಡಿಜಿಟಲ್ ಲೈಬ್ರರಿ ಮತ್ತು ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಿಸಿ ಈ ಕ್ಷೇತ್ರದ ಪ್ರತಿಭೆಗಳು ರಾಜ್ಯ - ರಾಷ್ಟ್ರ - ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಉದ್ಯೋಗ ಮೇಳ ನಡೆಸಿ ಎಲ್ಲಾ ಹಂತದ ಎಲ್ಲಾ ರೀತಿಯ ಅವಶ್ಯಕತೆ ಇರುವವರಿಗೆ ಉದ್ಯೋಗ ಖಾತರಿ ಪಡಿಸಲಾಗುವುದು.
ಪ್ರತಿ ಆರು ತಿಂಗಳಿಗೊಮ್ಮೆ ಪ್ರತಿ ಗ್ರಾಮ ಪಂಚಾಯತಿ - ವಾರ್ಡ್ ವ್ಯಾಪ್ತಿಯಲ್ಲಿ ಸಾಂಸ್ಕೃತಿಕ ಹಬ್ಬಗಳನ್ನು ನಡೆಸಿ ಕಲಾಪ್ರತಿಭೆಗಳನ್ನು ಗುರುತಿಸಲು ರಾಜ್ಯ ಮತ್ತು ರಾಷ್ಟ್ರ ಮಟ್ಟದ ವೇದಿಕೆ ಕಲ್ಪಿಸಲಾಗುವುದು. ಕೇಂದ್ರ ಮತ್ತು ರಾಜ್ಯದ ಅನುದಾನಗಳು ಮತ್ತು ಯೋಜನೆಗಳನ್ನು ಜನರಿಗೆ ತಲುಪಿಸಲು ಸ್ವಯಂಸೇವಕ ಪಡೆಯನ್ನು ಹುಟ್ಟುಹಾಕುವ ಮೂಲಕ ಭ್ರಷ್ಟಾಚಾರ ನಿಯಂತ್ರಣ ಮಾಡಲಾಗುವುದು. ಇಡೀ ಕ್ಷೇತ್ರದಲ್ಲಿ ಇರುವ ಸರ್ಕಾರಿ ಆಸ್ಪತ್ರೆ ಮತ್ತು ಸರ್ಕಾರಿ ಶಾಲೆಗಳನ್ನು ಸುಸಜ್ಜಿತ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು.
ಬೀದಿ ಬದಿ ವ್ಯಾಪಾರಿಗಳ ಹಿತಕ್ಕಾಗಿ ನಿಗದಿತ ಜಾಗಗಳಲ್ಲಿ ವ್ಯವಸ್ಥಿತ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು. ಒಳಚರಂಡಿ ಸಮಸ್ಯೆ ಮತ್ತು ಕಸಮುಕ್ತ ಕ್ಷೇತ್ರ ಮಾಡಲಾಗುವುದು. ರೈತರ ಬೆಳೆಗೆ ಮಧ್ಯವರ್ತಿಗಳಿಂದ ಮುಕ್ತಿ ಮತ್ತು ಮುಕ್ತ ಮಾರುಕಟ್ಟೆ ಅವಕಾಶ ಕಲ್ಪಿಸಲಾಗುವುದು. ನನ್ನ 1825 ದಿನಗಳ ಶಾಸಕತ್ವದ ಅವಧಿಯಲ್ಲಿ ಸಂಪೂರ್ಣ ಪಾರದರ್ಶಕವಾಗಿರುತ್ತೇನೆ ಮತ್ತು ಕ್ಷೇತ್ರದ ಜನರ ನೇರ ಸಂಪರ್ಕದಲ್ಲಿ ಇರುತ್ತೇನೆ. ಕ್ಷೇತ್ರಕ್ಕೆ ಒಳಪಡುವ ಪ್ರತಿ ಹಳ್ಳಿಗಳ ಜನರೊಡನೆ ನಿರಂತರ ಸಂಪರ್ಕದಲ್ಲಿ ಇರುತ್ತೇನೆ.
ಶಾಸಕನಾಗಿ ಇರುವವರೆಗೂ ಒಂದೇ ಒಂದು ಪೈಸೆ ಕಮಿಷನ್ ಅಥವಾ ಲಂಚವನ್ನು ಸ್ವೀಕರಿಸುವುದಿಲ್ಲ. ನನ್ನ ಶಾಸಕ ಅವಧಿಯಲ್ಲಿ ತೀರಾ ಅನಿವಾರ್ಯ ಹೊರತುಪಡಿಸಿ ಯಾವುದೇ ಕಾರಣದಿಂದ ಕ್ಷೇತ್ರದ ಹೊರಗೆ ಹೋಗುವುದಿಲ್ಲ. ನನ್ನ ಯಾವುದೇ ಹತ್ತಿರದ ಸಂಬಂಧಿಗಳು ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ಅನವಶ್ಯಕ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳುತ್ತೇನೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಮಂದಿರ, ಮಸೀದಿ, ಚರ್ಚು, ಗುರುದ್ವಾರ, ಜೈನ ಬಸದಿ, ಬೌದ್ಧ ಮಂದಿರ ಅಥವಾ ಯಾವುದೇ ಧಾರ್ಮಿಕ ಸ್ಥಳಗಳಿಗೆ ಪ್ರತಿಯೊಬ್ಬರಿಗೂ ಮುಕ್ತ ಪ್ರವೇಶ ಕಲ್ಪಿಸಲಾಗುವುದು. ಐದು ವರ್ಷಗಳ ನಂತರ ಮುಂದಿನ ಚುನಾವಣೆಗೆ ಯಾವುದೇ ಪ್ರಚಾರ ಮಾಡದೇ ನನ್ನ ಕೆಲಸಗಳು ಮಾತ್ರ ಮಾತನಾಡುವಂತೆ ಮಾಡಿ ಮತ ಹಾಕುವ ವಿವೇಚನೆಯನ್ನು ನಿಮಗೆ ಬಿಡುತ್ತೇನೆ. ನಾನು ಈಗ ಘೋಷಣೆ ಮಾಡಿರುವ ಹಣ ಆಸ್ತಿಯನ್ನು ಹೊರತುಪಡಿಸಿ, ನಾನು ಯಾವುದೇ ರೀತಿಯ ಹೆಚ್ಚುವರಿ ಹಣ ಆಸ್ತಿ ಒಡವೆ ವಾಹನ ಮುಂತಾದ ಐಹಿಕ ಸುಖಭೋಗಗಳನ್ನು ಸಂಪಾದಿಸುವ ಪ್ರಯತ್ನವನ್ನು ಮಾಡುವುದಿಲ್ಲ. ನನ್ನ ಕ್ಷೇತ್ರದ ಸರ್ಕಾರಿ ಜಾಗಗಳಲ್ಲಿ ಸಾಧ್ಯವಾದಷ್ಟು ಹಸಿರು ವನಗಳ ನಿರ್ಮಾಣ ಮಾಡುತ್ತೇನೆ.
ಪ್ಲಾಸ್ಟಿಕ್ ಬಳಕೆಗೆ ಪರ್ಯಾಯ ಮಾರ್ಗಗಳ ಹುಡುಕಾಟ ನಡೆಸಿ ಆರೋಗ್ಯ ಸುಧಾರಣೆಗೆ ಹೆಚ್ಚಿನ ಮಹತ್ವ ನೀಡುತ್ತೇನೆ. ಇಡೀ ಕ್ಷೇತ್ರವನ್ನು ವ್ಯಸನ ಮುಕ್ತ, ಜೂಜು ಮುಕ್ತ, ಆತ್ಮಹತ್ಯೆ ಮುಕ್ತ ಮಾಡುವುದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತೀರಾ ಖಾಸಗಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ನನ್ನ ಇಡೀ ಶಾಸಕತ್ವದ ಅವಧಿಯಲ್ಲಿ ಸರಳ ವಸ್ತ್ರವನ್ನೇ ಧರಿಸುತ್ತೇನೆ ಹೊರತು ಯಾವುದೇ ಕಾರಣಕ್ಕೂ ದುಬಾರಿ ಬೆಲೆಯ ಬಟ್ಟೆಗಳನ್ನು ಧರಿಸುವುದಿಲ್ಲ. ನನ್ನ ಪ್ರತಿ ನಡೆಯಲ್ಲೂ ಕ್ಷೇತ್ರದ ಜನರ ಜೀವನಮಟ್ಟ ಸುಧಾರಣೆಗೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ.
ವಂದನೆಗಳೊಡನೆ,
ನಿಮ್ಮ ವಿಶ್ವಾಸಿ,....
ಇದು ಶಾಸಕರಾಗುವವರು ವೈಯಕ್ತಿಕ ಮಟ್ಟದಲ್ಲಿ ಕಡ್ಡಾಯವಾಗಿ ಮಾಡಬಹುದಾದ ಕೆಲವು ಅಂಶಗಳು ಮಾತ್ರ. ಇನ್ನೂ ಅನೇಕ ಅಂಶಗಳು ಸ್ಥಳೀಯವಾಗಿ ಇರುತ್ತವೆ. ಅದನ್ನು ಸಹ ಇದರಲ್ಲಿ ಸೇರಿಸಿಕೊಳ್ಳಬಹುದು. ದಯವಿಟ್ಟು ಇದನ್ನು ಎಲ್ಲಾ ಅಭ್ಯರ್ಥಿಗಳಿಗೆ ತಲುಪಿಸಲು ಪ್ರಯತ್ನಿಸಿ ಎಂದು ಮನವಿ ಮಾಡಿಕೊಳ್ಳುತ್ತಾ...
-ವಿವೇಕಾನಂದ ಎಚ್.ಕೆ., ಬೆಂಗಳೂರು