ಅಭ್ಯಾಸ ಬಲದ ಫಲ
''ನೀನ್ಯಾಕೋ ನಿನ್ನ ಹಂಗ್ಯಾಕೋ ? ನಿನ್ನ ನಾಮದ ಬಲವೊಂದಿದ್ದರೆ ಸಾಕೋ'' ಎಂದರು ದಾಸರು. ಆದರೆ ನಾಮ ಬಲಕ್ಕಿಂತ ದೊಡ್ಡದು ಅಭ್ಯಾಸ ಬಲ! ರವಿ ದಿನವೂ ಸರಿಯಾದ ಸಮಯಕ್ಕೆ ಪೂರ್ವ ದಿಕ್ಕಿನಲ್ಲಿ ಮೂಡುವುದರಿಂದ ಹಿಡಿದು ಬಸ್ಸಿನ ಚಾಲಕ ಸಂಚಾರಿ ದೂರವಾಣಿಯಲ್ಲಿ ಮಾತನಾಡುತ್ತಲೇ ಗೇರು ಬದಲಾಯಿಸುವುದರ ತನಕ ಜೀವನ ವ್ಯಾಪಾರದ ಬಹುತೇಕ ಕ್ರಿಯೆಗಳು ಜರುಗುವುದು ಅಭ್ಯಾಸ ಬಲದಿಂದಲೇ!. ನನ್ನ ಉದ್ಯೋಗದ ದೆಸೆಯಿಂದ ನಿತ್ಯವೂ ಅನೇಕ ಜನರೊಂದಿಗೆ ವ್ಯವಹರಿಸಬೇಕು. ಆಗ ಅವರ ಅಂಗಚೇಷ್ಟೆಗಳನ್ನು ಗಮನಿಸುವುದು ನನ್ನ ವಿಚಿತ್ರ ಅಭ್ಯಾಸ.
ಕೆಲವರ ಅಂಗಚೇಷ್ಟೆಗಳು ದೂರದರ್ಶನದ ಕಾಮಿಡಿ ಷೋಗಳಿಗಿಂತಲೂ ಹೆಚ್ಚಿನ ಮನೋರಂಜನೆಯನ್ನು ಧಾರಾಳವಾಗಿ ನೀಡುತ್ತವೆ. ಈ ಅಂಗಚೇಷ್ಟೆಗಳನ್ನು ಪ್ರಯತ್ನ ಪೂರ್ವಕವಾಗಿಯೇ, ಇಲ್ಲವೇ ಸ್ವತಃ ಅರಿವಿಲ್ಲದಂತೆಯೋ ರೂಢಿಸಿಕೊಂಡಿರುತ್ತಾರೆ. ಕುಳಿತುಕೊಂಡು ಮಾತನಾಡುತ್ತಿರುವಾಗ ತೊಡೆ ಅಲುಗಾಡಿಸುವುದು, ಭುಜ ಕುಣಿಸುವುದು, ಹುಬ್ಬು ಹಾರಿಸುವುದು, ತಲೆ ಕೆರೆದುಕೊಳ್ಳುವುದು, ಗಡ್ಡ ನೀವಿಕೊಳ್ಳುವುದು, ಮಾತು ಮಾತಿಗೆ ಅಕಾರಣವಾಗಿ ನಗುವುದು, ಕ್ಷಣಕ್ಕೊಮ್ಮೆ ಶೀತದಿಂದ ಸಿಂಬಳ ಸುರಿಯುತ್ತಿದ್ದೇಯೇನೋ ಎಂಬಂತೆ ಜೋರಾಗಿ ಸಶಬ್ದದಿಂದ ಸರಕ್ಕೆಂದು ಮೂಗಿನಿಂದ ಉಸಿರೆಳೆದುಕೊಳ್ಳುವುದು, ದೇಹದ ಯಾವುದಾದರೂ ಅಂಗವೊಂದನ್ನು ಪದೇ ಪದೇ ಮುಟ್ಟಿಕೊಳ್ಳುತ್ತಿರುವುದು....... ಹೀಗೆ ಅಂಗಚೇಷ್ಟೆಗಳಲ್ಲಿ ವಿವಿಧ ಪ್ರಕಾರಗಳಿವೆ.
ನನ್ನ ಸ್ನೇಹಿತನೊಬ್ಬ ಬೆಂಗಳೂರಿನ ಐಟಿ ಕಂಪೆನಿಯೊಂದರ ಮುಖ್ಯಸ್ಥ. ತನಗೆ ಸಮಯವೊಂದನ್ನು ಬಿಟ್ಟು ಬೇರೆ ಯಾವುದಕ್ಕೂ ಏನೂ ಕೊರತೆಯಿಲ್ಲವೆಂದು ಯಾವಾಗಲೂ ಹಲುಬುತ್ತಿರುತ್ತಾನೆ. ಅವನಿಗೆ ಆರೋಗ್ಯದ ಬಗ್ಗೆ ತೀವ್ರ ಕಾಳಜಿ. ಆದರೆ, ಕೆಲಸದ ಒತ್ತಡದಿಂದಾಗಿ ವಾಕಿಂಗು, ಜಾಗಿಂಗು, ಜಿಮ್ಮು, ಯೋಗಗಳೆಂದು ಕಾಲಹರಣ ಮಾಡುವಂತಿಲ್ಲ. ಆದ್ದರಿಂದ ಕಂಪನಿಯ ಕೆಲಸದ ವೇಳೆಯಲ್ಲಿಯೇ, ಕುಳಿತಲ್ಲಿಯೇ ಆರೋಗ್ಯವನ್ನು ಕಾಪಾಡಿಕೊಳ್ಳುವ ಕೆಲವು ಸುಲಭ ಯೋಗ ಸೂತ್ರಗಳನ್ನು ಅದ್ಯಾರೋ ಬಾಬಾನಿಂದ ಕಲಿತುಕೊಂಡಿದ್ದಾನೆ. ಮೀಟಿಂಗುಗಳಲ್ಲಿ ಮಾತನಾಡುತ್ತಿರುವಾಗ ಎರಡೂ ಕೈ ಬೆರಳುಗಳ ಉಗುರುಗಳನ್ನು ಪರಸ್ಪರ ಉಜ್ಜಿಕೊಳ್ಳುತ್ತಿರುತ್ತಾನೆ. ಹೀಗೆ ಮಾಡುವುದರಿಂದ ಕೂದಲು ಉದುರುವುದು ನಿಲ್ಲುವುದಂತೆ! ಅವನು ತನ್ನ ಕೊಠಡಿಯಲ್ಲಿ ಕಂಪ್ಯೂಟರ್ ಮುಂದೆ ಕುಳಿತಿರುವಾಗ ಪ್ರತಿ ಅರ್ಧ ಗಂಟೆಗೊಮ್ಮೆ ಕಣ್ಮುಚ್ಚಿ ಮೂರು ಸಲ ಧೀರ್ಘವಾಗಿ, ಕಛೇರಿಯ ಸಿಬ್ಬಂದಿಗೆಲ್ಲಾ ಕೇಳಿಸುವಂತೆ ಓಂಕಾರ ಪಠಿಸುತ್ತಾನೆ. ಅಷ್ಟೇಕೆ ಸಂದರ್ಶಕರ ಭೇಟಿಯ ಸಮಯದಲ್ಲೂ ತಲೆಯನ್ನು ವರ್ತುಲಾಕಾರದಲ್ಲಿ ತಿರುಗಿಸುವುದು, ಸೊಂಟವನ್ನು ಹಿಂದಕ್ಕೆ ಮುಂದಕ್ಕೆ ಬಾಗಿಸುವುದು, ಕೈಗಳನ್ನು ಮೇಲಕ್ಕೆ ಕೆಳಕ್ಕೆ ಎತ್ತುವುದು.....ಇತ್ಯಾದಿ ಬಾಬಾ ಕಲಿಸಿಕೊಟ್ಟ ಅಂಗಚೇಷ್ಟೆಗಳನ್ನು ಮಾಡುತ್ತಲೇ ಇರುತ್ತಾನೆ. ಇಂತಹ ಫಟಾಪಟ್ ಯೋಗ ಚಿಕಿತ್ಸೆಯಿಂದ ಇವನ ಅರೋಗ್ಯ ವರ್ಧಿಸಿತೋ ಇಲ್ಲವೋ ತಿಳಿಯದು. ಆದರೆ, ಈತನ ಮಂಗಾಟ, ಆತನ ಸಹೋದ್ಯೋಗಿಗಳ ಗಾಸಿಪ್ಪಿಗೆ ಸುಗ್ರಾಸ ಭೋಜನವಾಗಿರುವುದಂತೂ ನಿಜ!. ದಿನನಿತ್ಯವೂ ಅವರೆಲ್ಲರೂ ಅದನ್ನು ಸವಿಯುತ್ತಾ, ನಗುತ್ತಾ ಹಗುರಾಗಿ ಆರೋಗ್ಯದಿಂದ್ದಾರೆ!!
ನಮ್ಮೂರಿನಲ್ಲಿ ನಡು ಹರೆಯದ ಆಕರ್ಷಕ ರೂಪಿನ ವಿವಾಹಿತ ಮಹಿಳೆಯೊಬ್ಬರಿದ್ದಾರೆ. ಬಹಳ ಸಂಭಾವಿತ ಹೆಂಗಸು. ಎಲ್ಲರೊಂದಿಗೆ ಸಹಜವಾಗಿ ಕಲೆಯುತ್ತಾ, ನಗೆಚಟಾಕಿಗಳನ್ನು ಹಾರಿಸಿ, ನಗುತ್ತಾ ನಗಿಸುತ್ತಾರೆ. ಆದರೆ ಅದೇಕೋ ಜೋಕ್ ಮಾಡಿದ ಕೂಡಲೇ ಎಡಗಣ್ಣನ್ನು ಮಿಟುಕಿಸಿ ಬಿಡುತ್ತಾರೆ!. ಇದರಿಂದಾಗಿ ಮೊದಲಬಾರಿ ಅವರನ್ನು ಮಾತನಾಡಿಸಿದ ಗಂಡಸರೆಲ್ಲರೂ ದಂಗು ಬಡಿದಂತಾಗಿ ಬಿಡುತ್ತಾರೆ. ಎಷ್ಟೋ ಜನ ಪಡ್ಡೆ ಹುಡುಗರು ಅವರ ಜೋಕಿಗೂ, ನಗುವಿಗೂ ಅನೇಕ ಅಪಾರ್ಥಗಳನ್ನು ಕಲ್ಪಿಸಿಕೊಂಡು ನಿದ್ದೆ ಕೆಡಿಸಿಕೊಂಡಿದ್ದುಂಟು. ಊರಿನ ಹೆಂಗಸರ ಬಾಯಲ್ಲಂತೂ ಅವರ ಈ ಅಂಗಚೇಷ್ಟೆ ಮತ್ತು ಅದರ ಪರಿಣಾಮಗಳ ಬಗ್ಗೆ ಚರ್ಚೆಯಾಗದೇ ಉಳಿದ ದಿನವಿಲ್ಲ!
ಇವೆಲ್ಲವೂ ಅಂಗಚೇಷ್ಟೆಯ ಮಾತಾಯಿತು. ಕೆಲವರು ಮಾತನಾಡುವಾಗ ಒಂದು ಪದ ಅಥವಾ ವಾಕ್ಯವನ್ನು ಪದೇ ಪದೇ ರಿಪೀಟ್ ಮಾಡುತ್ತಲೇ ಇರುತ್ತಾರೆ. ಅಭ್ಯಾಸ ಬಲದಿಂದ!. ಇದನ್ನು ಬಾಯಿ ಚೇಷ್ಟೆ ಎನ್ನಬಹುದು. ಈಗಂತೂ ಕುಳಿತರೆ ನಿಂತರೆ "ಥ್ಯಾಂಕ್ಸ್" ಹೇಳುವುದು, ಮಾತು ಮಾತಿಗೆ "ಸ್ಸಾರಿ" ಕೇಳುವುದು, ಸೀನುವ ಮುಂಚೆ ಮತ್ತು ಆನಂತರ "ಎಕ್ಸ್ಕ್ಯೂಸ್ಮಿ" ಎನ್ನುವುದು, ಇತ್ಯಾದಿ ನಡೆಗಳು ಶಿಷ್ಟಾಚಾರವೆನಿಸಿದೆ. ನಿಮಗೆ ಇವೆಲ್ಲಾ ಅಭ್ಯಾಸವಿಲ್ಲದಿದ್ದರೆ ನಗರದ ಹೈ ಕ್ಲಾಸ್ ಜನ ನಿಮ್ಮನ್ನು ಶಿಲಾಯುಗದ ಅನಾಗರಿಕ ಮಾನವನೆಂಬಂತೆ ತಿರಸ್ಕಾರದಿಂದ ಕಾಣುತ್ತಾರೆ. ನಗರದಲ್ಲಿ ಇನ್ನೊಂದು ಬಗೆಯ ಮಾಸ್ ವರ್ಗವೂ ಇದೆ. ಇವರುಗಳು "ಮಗಾ, ಮಚ್ಚಾ, ಸಿಸ್ಯಾ......" ಎಂಬಿತ್ಯಾದಿ ಪದಗಳ್ನನ್ನು ದಿನದಲ್ಲಿ ಎಷ್ಟು ಬಾರಿ ಉಪಯೋಗಿಸುತ್ತಾರೆಂದು ಲೆಕ್ಕ ಹಾಕಿದರೆ, ಖಂಡಿತವಾಗಿ ಅಜ್ಜಿಯಂದಿರ ರಾಮಕೋಟಿಯನ್ನು ಮೀರಿಸುತ್ತದೆ!. ಈ "ವೀರ-ಪರಂಪರೆ" ಹೀಗೆ ಮುಂದುವರೆದರೆ ಪುತ್ರನು ತಂದೆಯನ್ನು ಮಗಾ ಎಂದು ಕರೆಯುವ, ವಿದ್ಯಾರ್ಥಿಯು ಉಪನ್ಯಾಸಕರನ್ನು ಸಿಸ್ಯಾ ಎನ್ನುವ ಕಾಲ ದೂರವಿಲ್ಲ!
ಈ ಸಂದರ್ಭದಲ್ಲಿ ನಿಮಗೆ ನನ್ನ ಸೋದರ ಮಾವನ ಕಥೆ ಹೇಳಲೇಬೇಕು. ಅವನ ಹೆಸರು ಕೃಷ್ಣ. ಹಳ್ಳಿಯಲ್ಲಿ ವ್ಯವಸಾಯ ಮಾಡಿಕೊಂಡಿದ್ದಾನೆ. ಅವನ ಹೆಂಡತಿ ಅವನನ್ನು ಕರೆಯುವ ರೀತಿ ನಮ್ಮ ನೆಂಟರಿಷ್ಟರಲ್ಲಿ ವರ್ಲ್ಡ್ ಫೇಮಸ್ಸಾಗಿದೆ. ನಮ್ಮಲ್ಲಿ ಗಂಡನ ಹೆಸರು ಹೇಳಬಾರದೆಂಬ. ಹೇಳಿದರೆ ಆತನ ಆಯುಷ್ಯ ಕಡಿಮೆಯಾಗುತ್ತದೆಂಬ ಸಂಪ್ರದಾಯ-ನಂಬಿಕೆಯಿದೆಯಷ್ಟೆ. ಹೀಗಾಗಿ ಗಂಡನನ್ನು ಉದ್ದೇಶಿಸಿ ಮಾತನಾಡುವಾಗ "ರೀ..., ಏನ್ರೀ.. ಏನೂಂದ್ರೇ, ಕೇಳ್ತಾ......." ಎಂಬಿತ್ಯಾದಿ ಪದಗಳು ಬಳಕೆಯಲ್ಲಿರುವುದು ಎಲ್ಲರಿಗೂ ತಿಳಿದ ವಿಷಯವೇ. ಅಂತೆಯೇ ನಮ್ಮ ಮಲೆನಾಡಿನ ಕಡೆ ಆಂಗ್ಲಭಾಷೆಯ "ಹಾಯ್" ಪದಕ್ಕೆ ಸಮಾನಾರ್ಥಕವಾಗಿ "ಹೋಯ್ ಅಥವಾ ಹ್ವಾಯ್" ಎಂಬುದು ಚಾಲ್ತಿಯಲ್ಲಿದೆ. ನಮ್ಮ ಕಿಟ್ಟಿ ಮಾವನ ಹೆಂಡತಿ 'ಹೋಯ್' ಮತ್ತು 'ರೀ' ಗಳನ್ನು ಸೇರಿಸಿ ಅವನನ್ನು "ಹೋ...ರೀsss..., ಹೋ..ರೀssss... ಎಂದು ಹ್ರಸ್ವ ಸಂಧಿಯಲ್ಲಿ ಕರೆಯುತ್ತಾರೆ! ಎಷ್ಟೋ ಸಲ ಕಿಟ್ಟಿ ಮಾವ ಜಗುಲಿಯಲ್ಲಿ ಕುಳಿತುಕೊಂಡು, ಮನೆಗೆ ಬಂದ ನೆಂಟರ ಜೊತೆ ಹರಟೆಯಲ್ಲಿ ತೊಡಗಿರುವಾಗ, ಅತ್ತೆ ಒಳಗೆ ಅಡುಗೆ ಮನೆಯಿಂದಲೋ, ದನದ ಕೊಟ್ಟಿಗೆಯಿಂದಲೋ "ಹೋ..ರೀ ಹೋ..ರೀ" ಎಂದು ಕೂಗತೊಡಗುತ್ತಾರೆ. ಆಗೆಲ್ಲಾ ಬಂದವರು "ನೋಡೋ ಹೋರೀ, ದನ ಕರೀತಾ ಇದೆ. ಹೋಗೋ ಒಳಗೆ!" ಎಂದು ಹಾಸ್ಯ ಮಾಡುತ್ತಾರೆ. ನಮ್ಮ ಅತ್ತೆಯ ಈ ವಿಶಿಷ್ಟ ಸಂಭೋದನೆ ಎಷ್ಟು ಜನಪ್ರಿಯವೆಂದರೆ, ನಮ್ಮ ಮನೆಯಲ್ಲಿ ಯಾರಾದರೂ ಮಾತಿನ ಮಧ್ಯೆ ಕಿಟ್ಟಿ ಮಾವನ ಹೆಸರು ಪ್ರಸ್ತಾಪಿಸಿದರೆ, "ಯಾರು? ಹೋರೀ ಮಾವನೇ?" ಎಂದು ಉಳಿದವರು ಸೃಷ್ಟೀಕರಣ ಕೇಳುವಷ್ಟು!.
ನಮ್ಮ ಅಜ್ಜ ಹೇಳುತ್ತಿದ್ದ ಪ್ರಸಂಗವೊಂದು ಬಹಳ ಸ್ವಾರಸ್ಯಕರವಾಗಿದೆ. ಹಿಂದೆ ನಮ್ಮೂರಿನಲ್ಲಿ ಶ್ರಾದ್ಧಾದಿ ಅಪರಕರ್ಮಗಳನ್ನು ಮಾಡಿಸಲು ರಾಮಭಟ್ಟರೆಂಬ ಪುರೋಹಿತರಿದ್ದರಂತೆ. ಅವರ ಬಾಯಲ್ಲಿ ಯಾವಾಗಲೂ ಅಪರಕರ್ಮಗಳಲ್ಲಿ ಬಳಸುವ ಭಾಷೆಯೇ ರುದ್ರತಾಂಡವವಾಡುತ್ತಿತ್ತು! ಆಗಿನ ಕಾಲದಲ್ಲಿ ಮಂಗಳ ಕಾರ್ಯದ ದಿನಗಳಲ್ಲಿ ಅಂತಹ ಮಾತುಗಳನ್ನಾಡುವುದು ನಿಷಿದ್ಧ. ಆದ್ದರಿಂದ ರಾಮಭಟ್ಟರನ್ನು ಯಾರೂ ಮದುವೆ-ಮುಂಜಿಯಂತಹ ಶುಭ ಕಾರ್ಯಗಳಿಗೆ ಆಹ್ವಾನಿಸುತ್ತಿರಲಿಲ್ಲ. ಒಂದು ದಿನ ಊರಿನ ಶಾನುಭೋಗರ ಮಗಳ ಮದುವೆ. ಮನೆಯ ಮುಂಭಾಗದ ದೊಡ್ಡ ಚಪ್ಪರದಲ್ಲಿ ಸುತ್ತ-ಮುತ್ತಲ ಹಳ್ಳಿಗಳ ಜನ, ಬಂಧು-ಬಳಗವೆಲ್ಲಾ ಸೇರಿದೆ. ಇದ್ದಕ್ಕಿದ್ದಂತೆ ಧಾರೆ ಮಂಟಪದ ಬಳಿ ರಾಮಭಟ್ಟರು ಮುಹೂರ್ತಕ್ಕೆ ಸರಿಯಾಗಿ ಪ್ರತ್ಯಕ್ಷರಾದರು. ಶಾನುಭೋಗರಿಗೆ ಕಸಿವಿಸಿ. ಈ ಅಪರಭಟ್ಟ ಏನಾದರೂ ಅಪದ್ಧ ನುಡಿದು ವಾಮೆಯಾದೀತೇನೋ ಎಂದು ತಕ್ಷಣ ರಾಮಭಟ್ಟರಲ್ಲಿಗೆ ತೆರಳಿ, ಅವರಿಗೆ ಯಥೋಚಿತ ಸತ್ಕಾರ ನೀಡುವುದಾಗಿಯೂ, ಆದರೆ ಯಾವುದೇ ಕಾರಣಕ್ಕೂ ಬಾಯಿ ಬಿಡಬಾರದೆಂದು ತಾಕೀತು ಮಾಡಿದರು. ಪಾಪ! ರಾಮಭಟ್ಟರೂ ತಲೆಯಲ್ಲಾಡಿಸಿ ಒಪ್ಪಿಗೆ ಸೂಚಿಸಿದರು. ವಿವಾಹದ ವಿಧಿಗಳು ಸುಸೂತ್ರವಾಗಿ ಜರುಗಿದವು. ರಾಮಭಟ್ಟರು ಒಂದೂ ಮಾತನಾಡದೇ ಸುಮ್ಮನೇ ಕುಳಿತಿದ್ದರು. ಶಾನುಭೋಗರ ಮುಖದಲ್ಲಿ ತೃಪ್ತಿಯ ಕಳೆ. ಶಾನುಭೋಗರು ಎಲ್ಲರನ್ನೂ ಭೋಜನಕ್ಕೆ ಆಹ್ವಾನಿಸಿದರು. ಆಗ ರಾಮಭಟ್ಟರು ತಟ್ಟನೆ " ಶಾನುಭೋಗರೇ, ನಿನ್ನೆ ಪಕ್ಕದೂರಿನಲ್ಲಿ ಹೆಣ ಸುಡಿಸಿ ಬಂದು ಆರೋಗ್ಯ ಸರಿಯಿಲ್ಲ. ನನಗೆ ಊಟದಲ್ಲಿ ಏನೂ ಹೆಚ್ಚಿನ ಪದಾರ್ಥ ಬೇಡ. ಒಂದು ಪಿಂಡದಷ್ಟು ಅನ್ನ, ದೊನ್ನೆಯಲ್ಲಿ ಮೊಸರು ಮತ್ತು ನಾಲ್ಕು ಅಕ್ಕಿ ಕಾಳಿನಷ್ಟು ಉಪ್ಪು ಸಾಕು" ಅಂದರಂತೆ!!
ನಮ್ಮೂರಿನ ಅಗ್ರಹಾರದಲ್ಲಿ ಅಣ್ಣಪ್ಪಯ್ಯ ಎಂಬ ಸುಮಾರು 75 ವರ್ಷ ವಯಸ್ಸಿನ ಹಿರಿಯರಿದ್ದಾರೆ. ಹರೆಯದ ದಿನಗಳಲ್ಲಿ ಯಕ್ಷಗಾನ ಕಲಾವಿದರಾಗಿ ಸ್ವಲ್ಪ ಮಟ್ಟಿಗೆ ಹೆಸರು ಗಳಿಸಿದವರು. ಆಗಿನ ದಿನಗಳಲ್ಲಿ ಅವರಿಗೆ ಹೆಂಗಸರ ವಿಷಯದಲ್ಲಿದ್ದ ರಸಿಕತೆಯ ಬಗ್ಗೆ ಅನೇಕ ದಂತಕಥೆಗಳಿವೆ. ಅವರದು ಬಹಳ ಹಾಸ್ಯ ಮನೋಭಾವ. ಈಗ ಮನೆಯ ಮುಂದಿನ ಕಟ್ಟೆಯಲ್ಲಿ ಕುಳಿತುಕೊಂಡು ದಾರಿಯಲ್ಲಿ ಹೋಗುವ ಎಲ್ಲರನ್ನೂ ಕರೆದು ಮಾತನಾಡಿಸಿ, ಅನೇಕ ಪ್ರಸಂಗ-ಸಂಗತಿಗಳನ್ನು ವಿನೋದವಾಗಿ ನಿರೂಪಿಸುತ್ತಾ ನಗಿಸುತ್ತಾರೆ. ಆದರೆ ಕಥೆಗಳ ಉಪಸಂಹಾರ ಮಾತ್ರ ಒಂದೇ. ಎಲ್ಲಾ ಕಥೆಗಳಿಗೂ "ಹಿಂದೆಲ್ಲಾ ಕೈ-ಕಾಲು ಗಟ್ಟಿಯಿತ್ತು. ಎಲ್ಲಾ ನಡೀತಿತ್ತು ಈಗ ಏನೂ ಕೂಡುದಿಲ್ಲ, ಮಾರಾಯ!" ಎಂದೇ ಮಂಗಳ ಹಾಡುವುದು. ಒಮ್ಮೆ ಅವರ ಮನೆಯಲ್ಲಿ ಶುಭ ಕಾರ್ಯವೊಂದಕ್ಕೆ ನೆಂಟರು ಸೇರಿದ್ದರು. ಅಣ್ಣಪ್ಪಯ್ಯ ತಮ್ಮ ಎಂದಿನ ಶೈಲಿಯಲ್ಲಿ ಮಾತಾಡುತ್ತಾ ಎಲ್ಲರನ್ನೂ ರಂಜಿಸಿ, ಮತ್ತದೇ ಮಂಗಳ ನುಡಿಯನ್ನು ಹೇಳಿದ ಕೂಡಲೇ, ಪಕ್ಕದಲ್ಲಿಯೇ ಕುಳಿತಿದ್ದ ಅಣ್ಣಪ್ಪಯ್ಯನವರ ಸ್ನೇಹಿತರಾದ ನರಸಿಂಹ ಶಾಸ್ತ್ರಿಗಳು "ಈ ಇಳಿವಯಸ್ಸಿನಲ್ಲೂ ಕೂಡುವುದಿಲ್ಲ ಅಂತ ಅಳ್ತಿಯಲ್ಲೋ, ಭಾರೀ ಚಪಲ ನಿನಗೆ" ಎಂದರು. ಸುತ್ತಲಿದ್ದ ಗಂಡಸರೆಲ್ಲಾ ಜೋರಾಗಿ ನಗತೊಡಗಿದರೆ, ಹೆಂಗಸರೆಲ್ಲರೂ ನಾಚಿಕೆಯಿಂದ ಕೆಂಪಾದರು! ಮಾತು ಶ್ಲೀಲದ ಗಡಿ ದಾಟಿತೇನೋ ಎಂದೆನಿಸುವಷ್ಟರಲ್ಲಿ ನರಸಿಂಹ ಶಾಸ್ತ್ರಿಗಳು ಗಂಭೀರ ಧ್ವನಿಯಲ್ಲಿ "ಇನ್ನೇನಿದ್ದರೂ ಕೂಡುವುದಲ್ಲ, ಒಂದೊಂದಾಗಿ ಕಳೆಯುತ್ತಾ ಹರಿಪಾದಕಮಲದತ್ತ ಸಾಗುವುದು "ಎಂದಾಗ ಎಲ್ಲರ ಹೃದಯದಲ್ಲೂ ಜೀವನ-ಧರ್ಮ ಯೋಗದ ಮಿಂಚು ಸುಳಿದ ಅನುಭವ.
ಸಂಪದಿಗರ ಗಮನಕ್ಕೆ: ಈ ಪ್ರಬಂಧ "ಕೊಡಗು ಸಮಾಚಾರ" ವಾರಪತ್ರಿಕೆಯ ಈ ವರ್ಷದ ವಿಶೇಷಾಂಕದಲ್ಲಿ ಪ್ರಕಟವಾಗಿದೆ.
Comments
ಉ: ಅಭ್ಯಾಸ ಬಲದ ಫಲ
In reply to ಉ: ಅಭ್ಯಾಸ ಬಲದ ಫಲ by yeleravi
ಉ: ಅಭ್ಯಾಸ ಬಲದ ಫಲ
ಉ: ಅಭ್ಯಾಸ ಬಲದ ಫಲ
ಉ: ಅಭ್ಯಾಸ ಬಲದ ಫಲ
In reply to ಉ: ಅಭ್ಯಾಸ ಬಲದ ಫಲ by Chikku123
ಉ: ಅಭ್ಯಾಸ ಬಲದ ಫಲ