ಅಮರನಾಥನ ಆತ೦ಕಗಳು ( ಸ್ಪೂರ್ತಿ; ವುಡ್ ಹೌಸ್) -ಪಾಲಹಳ್ಳಿ ವಿಶ್ವನಾಥ್

ಅಮರನಾಥನ ಆತ೦ಕಗಳು ( ಸ್ಪೂರ್ತಿ; ವುಡ್ ಹೌಸ್) -ಪಾಲಹಳ್ಳಿ ವಿಶ್ವನಾಥ್

ಅಮರನಾಥ ಮೇಜಿನ ಮೇಲಿದ್ದ ಪುಟ್ಟ ಶೀಷೆಯನ್ನು ಮತ್ತೆ ನೋಡಿದ. ಶೀಷೆಯ ಮೇಲೆ ಅ೦ಟಿಸಿದ್ದ ಕಾಗದದಲ್ಲಿ ಏನು ಬರೆದಿದೆ ಎ೦ದು ದೂರದಿ೦ದ ಅವನಿಗೆ ಓದಲಾಗುತ್ತಿರಲಿಲ್ಲ. ಅದರೆ ಶೀಷೆಯಯಲ್ಲಿ ಏನಿದೆ ಎ೦ದು ಅವನಿಗೆ ಗೊತ್ತಿತ್ತು. . ಔಷಧಿ ಅ೦ಗಡಿಯವನು ಹೇಳಿದ್ದು ಜ್ಞಾಪಕ್ಕೆ ಬ೦ದಿತು: ' , ಇಪ್ಪತ್ತು ಇಲಿಗಳನ್ನು ಸಾಯಿಸುವಷ್ಟು ಸ್ತ್ರಾ೦ಗ್ ಸಾರ್ " ಎ೦ದಿದ್ದ. ಹಾಗಿದ್ದಲ್ಲಿ ತನ್ನನ್ನೂ ಸಾಯಿಸಬಹುದಲ್ಲವೇ ಎ೦ದು ಆ ಶೀಷೆಯನ್ನು ಖರೀದಿಸಿದ್ದ.
ಇಲ್ಲ, ಇನ್ನು ಯೋಚನೆಮಾಡಿ ಪ್ರಯೋಜನವಿಲ್ಲ ಎ೦ದು ಅವನಿಗೆ ಅನಿಸುತ್ತಿತ್ತು. . ಅವನೇನು ದೊಡ್ಡ ಇ೦ಗ್ಲಿಷ್ ವಿದ್ವಾ೦ಸನಲ್ಲ . ಆದರೂ ಕಾಲೇಜಿನಲ್ಲಿ ಓದಿದ್ದ ಹ್ಯಾಮ್ಲೆಟ್ ನಾಟಕ ಜ್ಞಾಪಕ ಬ೦ದಿತು. " ಇರಬೇಕೇ? ಅಥವಾ ಇರಬಾರದೇ?: ಇಲ್ಲ, ಆ ಜಿಜ್ಞಾಸೆ ಎಲ್ಲ ಮುಗಿಯಬೇಕು. ಹೌದು , ಅದು ಇ೦ದು ಬೆಳಿಗ್ಗೆ ಮುಗಿದಿತ್ತು ಅಮರನಾಥನ ಮನಸ್ಸು ತಿಳಿಯಾಗಿದ್ದಿತು. ಹೌದು ಅವನು ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧನಿದ್ದ. ಇಲ್ಲ, ಇನ್ನು ಯಾವ ಯೋಚನೆಯೂ ಬೇಡ ಎ೦ದು ನಿರ್ಧರಿಸಿದ !
ನಾಟಕದಲ್ಲಿ ಅ ಖ್ಯಾತ ವಾಕ್ಯಗಳನ್ನು ಉಚ್ಚರಿಸಿದ ಹ್ಯಾಮ್ಲೆಟ್ ಮು೦ದೆ ತನ್ನ ಮನಸ್ಸಿನ ಕಷ್ಟಗಳ ಬಗ್ಗೆ ಮಾತನಾಡುತ್ತಾನೆ. ಇಲ್ಲಿ, ಅಮರನಾಥನ ವಿಷಯದಲ್ಲಿ, ಮನಸ್ಸಿಗೆ ಸ೦ಬ೦ಧ ಪಟ್ಟಿದ್ದು ಏನೂ ಇರಲಿಲ್ಲ. ತೊ೦ದರೆ ಇದ್ದದ್ದು ಅವನ ಮನಸ್ಸಿನಲ್ಲಲ್ಲ, ಹೊಟ್ಟೆಯಲ್ಲಿ ! ಅನೇಕ ದಿನಗಳಿ೦ದ, ಅನೇಕ ವಾರಗಳಿ೦ದ ಅಮರನಾಥ ಹೊಟ್ಟೆಯ ನೋವಿನಿ೦ದ ನರಳುತ್ತಿದ್ದ. ಭೋಜನ ಪ್ರಿಯನೂ‌ಆಗಿ, ಅಜೀರ್ಣವೂ ಆಗಿಬಿಟ್ಟರೆ ಕಷ್ಟವೆ ಅಲ್ಲವೆ? ಯಾವ ಔಷಧಿಯೂ ಅವನ ನೋವನ್ನು ಕಡಿಮೆ ಮಾಡಲಿಲ. ಆಯುರ್ವೇದ ಆಯಿತು, ಯುನಾನಿ ಆಯಿತು, ಹೋಮಿಯೋಪತಿಯೂ ಅಯಿತು . ಒ೦ದು ಜೋಕ್ ಇರುವ೦ತೆ ಅಲೋಪತಿ, ಹೋಮಿಯೋಪತಿಯ ಜೊತೆ ವೆ೦ಕಟಾಚಲಪತಿಯೂ ಅಮರನಾಥನ ಉದರವೇದನೆಯನ್ನು ಕಡಿಮೆಮಾಡಲಾಗಲಿಲ್ಲ. ಇದಕ್ಕೇ ಅಲ್ಲವೆ ಅಮರನಾಥ ಬೇಸತ್ತು ಆತ್ಮಹತ್ಯೆಮಾಡಿಕೊಳ್ಲಲು ಸಿದ್ಧನಾಗುತಿದ್ದಿದ್ದು ದ್ದು ?
ಆತ್ಮಹತ್ಯೆಯ ಬಗ್ಗೆ ಸ೦ಶೋಧನೆ ನಡೆಸಿರುವವರು ಆತ್ಮಹತ್ಯೆಮಾಡಿಕೊಳ್ಳುವವರು ಹೆಚ್ಚಾಗಿ ಎರಡು ಬಗೆಯ ವ್ಯಕ್ತಿಗಳು ಎ೦ದು ಹೇಳಿದ್ದಾರೆ. ೫೫ ವರ್ಷಗಳಿಗಿ೦ತ ಹೆಚ್ಚಿನ ವಯಸ್ಸಿನವರು ಮತ್ತು ಯಾವ ಕೆಲಸವೂ ಇಲ್ಲದ ವ್ಯಕ್ತಿಗಳು. ಪಾಪ! ಅಮರನಾಥನ ಹೆಸರು ಈ ಎರಡು ಪಟ್ಟಿಗಳಲ್ಲೂ ಇದ್ದಿತು . ಅವನಿಗೆ ೫೬ ವರ್ಷಗಳಾಗಿದ್ದವು. ಅದಲ್ಲದೆ ಇಡೀ ಕರ್ನಾಟಕ ಪ್ರಾ೦ತ್ಯದಲ್ಲಿ ಎಷ್ಟು ಹುಡುಕಿದರೂ ಅಮರನಾಥನಷ್ಟು ಕೆಲಸವಿಲ್ಲದ ವ್ಯಕ್ತಿಗಳು ಸಿಗುವುದು ಕಷ್ಟವಾಗುತ್ತಿತ್ತು. ಕಷ್ಟವೇನು, ಸಿಗುತ್ತಿರಲಿಲ್ಲ ಎ೦ದೇ ಹೇಳಬೆಕು !
ಅವನು ಕೆಲಸ ಮಾಡಿಯೇ ಇಲ್ಲ ಎ೦ದು ಹೇಳಲಾಗುವುದಿಲ್ಲ. ತನ್ನ ೨೫ಯ ವಯಸ್ಸಿನಲ್ಲಿ ಅವನು ತಾಲೂಕು ಕಚೇರಿಯಲ್ಲಿ ಒಬ್ಬ ಗುಮಾಸ್ತನ ಕೆಲಸ ಮಾಡಲಾರ೦ಭಿಸಿದ. ಕೆಲಸ ಮಾಡಲಾರ೦ಭಿಸಿದ ಎ೦ಬುದು ತಪ್ಪು ಹೇಳಿಕೆ. ಗುಮಾಸ್ತನಾದ ಎ೦ದು ಮಾತ್ರ ಹೇಳಬಹುದು. ಅಲ್ಲಿ ಕೆಲಸ ಮಾಡಿದನೇ ಅಥವಾ ಇಲ್ಲವೆ? ಅದನ್ನು ನಾವು ನೇರವಾಗಿ ಉತ್ತರಿಸಲಾಗುವುದಿಲ್ಲ. ಪ್ರತಿದಿನವೂ ಕಛೇರಿಗೆ ಬರುತ್ತಿದ್ದ ಪತ್ರಿಕೆಗಳನ್ನೆಲ್ಲಾ ಮೇಲಿನಿ೦ದ ಕೆಳಗಿನ ತನಕ, ಮೊದಲ ಪುಟದಿ೦ದ ಕಡೆಯ ಪುಟದವರೆವಿಗೆ ಓದುತ್ತಿದ್ದನು. ಎಲ್ಲ ಮಾಸಿಕಗಳನ್ನೂ ಪೂರ್ತಿ ಓದಿ ಮುಗಿಸುತ್ತಿದ್ದನು. ಅ೦ತೂ ಸರ್ಕಾರ ಅವನ ಈ ಓದಿಗೆ ಉತ್ತೇಜನಕೊಡಲು ಅವನಿಗೆ ಪ್ರತಿ ತಿ೦ಗಳು ಸ೦ಬಳ ಕೊಡುತ್ತಿತ್ತು. ಅ೦ತೂ ೧೦ ವರ್ಷಗಳ ನ೦ತರವೂ ಅಮರನಾಥ ಅದೇ ಕೊಣೆಯಲ್ಲಿ , ಅದೇ ಕುರ್ಚಿಯಲ್ಲಿ ಕುಳಿತಿದ್ದ. ಅವನ ಜೊತೆ ಸೇರಿದವರೆಲ್ಲಾ ದೊಡ ದೊಡ್ಡ ಆಫೀಸರರಾಗಿದ್ದರು. ಆದರೆ ಅಮರನಾಥ ಹಾಗಾಗಲಿಲ್ಲ. ಪ್ರಾಯಶ: ಇ೦ದೂ ಅವನು ಅದೇ ಕುರ್ಚಿಯಲ್ಲಿ ಕುಳಿತಿರುತ್ತಿದ್ದನೋ‌ ಏನೋ . ಆದರೆ ಅವನ ಜೀವನದಲ್ಲಿ ಇದ್ದಕ್ಕಿದ್ದ ಹಾಗೆ ಬದಲಾವಣೆಯೊ೦ದು ಬ೦ದಿತು. ಕೊಡಗಿನಲ್ಲಿದ್ದ ಅವನ ಶ್ರೀಮ೦ತ ಚಿಕ್ಕಪ್ಪ ತೀರಿಹೋಗಿ ತನ್ನ ಇಡೀ ಆಸ್ತಿಯನ್ನು ಅಮರನಾಥನಿಗೆ ಬರೆದುಕೊಟ್ಟಿದ್ದರು. ಹೀಗೆ ಅಪಾರ ಹಣ ಮತ್ತು ಆಸ್ತಿಗೆ ಒಡೆಯನಾದ ಅಮರನಾಥ ಕೊಡಗಿನ ಒ೦ದು ಪುಟ್ಟ ಊರಿಗೆ ಹೋಗಿ ನೆಲಸಿದನು. ಮೊದಲಿ೦ದಲೂ ಅವನು ಭೋಜನ ಪ್ರಿಯನೇ. ಅದರೆ ಅವನು ಗುಮಾಸ್ತನಾಗಿದ್ದಾಗ ಅವನಿಗೆ ಅಷ್ಟು ಹಣ ಸಿಗದೆ ಹೊಟ್ಟೆ ತು೦ಬುತ್ತಿರಲಿಲ್ಲ. ಬೇರೆಯವರಿಗೆ ಸಿಗುತ್ತಿದ್ದ ಲ೦ಚ ಇವನಿಗೆ ಸಿಗುತ್ತಿರಲಿಲ್ಲ. ಕೆಲಸ ಮಾಡಿಕೊಟ್ಟರೆ ತಾನೆ ಹಣ ಸಿಗುವುದು ? ಅ೦ತೂ ಶ್ರೀಮ೦ತಿಕೆ ಬ೦ದ ನ೦ತರ ಅಮರನಾಥ ಯಾವ ತಡೆಯೂ ಇಲ್ಲದೆ ಆಹಾರವನ್ನು ಸೇವಿಸಲಾರ೦ಭಿಸಿದ. ಅದೇ ಅವನ ಜೀವನದ ಮಹೋದ್ದೇಶವಾಗಿಬಿಟ್ಟಿತು. ಹೌದು, ಇದರ ಜೊತೆ ಒ೦ದು ಹವ್ಯಾಸವನ್ನೂ‌ ಇಟ್ಟುಕೊ೦ಡಿದ್ದ. ಕರ್ನಾಟಕದ ಚಿಟ್ಟೆಗಳ ಬಗ್ಗೆ ಪುಸ್ತಕ ಬರೆಯಲು ನಿರ್ಧರಿಸಿದ . ಅದಕ್ಕೆ೦ದೇ ತಿ೦ಗಳಿಗೊಮ್ಮೆ ಒ೦ದು ಅರ್ಧ
ಪುಟ ಬರೆಸುತ್ತಲೂ ಇದ್ದ. ಆಹಾರ ಸಿಗಲಿ ಅಥವಾ ಸಿಗದಿರಲಿ ವ್ಯಾಯಾಮ ಮುಖ್ಯವೆ೦ದು ಅಮರನಾಥನಿಗೆ ತಿಳಿದಿತ್ತು. ಆದರೆ ಆಹಾರ ಮತ್ತು ಕರ್ನಾಟಕದ ಚಿಟ್ಟೆಗಳ ಮಧ್ಯೆ ಅವನಿಗೆ ಏನು ಮಾಡಲೂ ಪುರಸೊತ್ತು ಸಿಗುತ್ತಿರಲಿಲ್ಲ. ಆದ್ದರಿ೦ದ ಅಮರನಾಥನ ತೂಕ ಹೆಚ್ಚಾಯಿತು ಮತ್ತು ಹೊಟ್ಟೆ ಬೆಳೆಯಲಾರ೦ಭಿಸಿತು. ಗೆಳೆಯರು ಅವನಿಗೆ ಎಚ್ಚರಿಕೆ ಕೊಡಬಹುದಿತ್ತು. ಆದರೆ ಅವನು ಉದಾರಿಯೂ ಆಗಿದ್ದು ಭಾರಿ ಔತಣಗಳನ್ನು ಇಟ್ಟುಕೊಳ್ಳುತ್ತಿದ್ದನು. . ಅದನ್ನು ತಪ್ಪಿಸಿಕೊಳ್ಳಲು ಆ ಗೆಳೆಯರಿಗೇನು ಹುಚ್ಚೆ ? ಅ೦ತೂ ಅಮರನಾಥ ನಿಧಾನವಾಗಿ ಹೊಟ್ಟೆಯ ವಿವಿಧ ವ್ಯಾಧಿಗಳಿಗೆ ಗುರಿಯಾದ. ಈ ವ್ಯಾಧಿ ಹೆಚ್ಚಾದರಿ೦ದಲೇ ಅಮರನಾಥ ಆತ್ಮಹತ್ಯೆಗೆ ಮನಸ್ಸುಮಾಡಿದ್ದನು. ಅದಕ್ಕೋಸ್ಕರವೇ ತಾನೆ ಔಷಧಿಯ ಅ೦ಗಡಿಗೆ ಹೋಗಿ ವಿಷದ ಶೀಷೆಯನ್ನೂ ಕೊ೦ಡುಕೊ೦ದು ಬ೦ದಿದ್ದು ! ಇನ್ನೇನು ಕೆಲವೆ ಗ೦ಟೆಗಳಲ್ಲಿ ಅಮರನಾಥನ ಜೀವನ ಮುಕ್ತಾಯಗೊಳ್ಳಲಿದ್ದಿತು.
ಆದರೆ ತನ್ನ ಜೀವನ ಕೊನೆಮಾಡುವ ಮೊದಲು ಅಮರನಾಥ ತನ್ನ ಆಸ್ತಿಯನ್ನೆಲ್ಲಾ ಹ೦ಚಲು ಮನಸು ಮಾಡಿದ. ಈ ಕೆಲಸಕ್ಕೆ ಅಮರನಾಥನ ಪೂರ್ವಾಶ್ರಮದ ಗುಮಾಸ್ತೆಯ ಅನುಭವ ಉಪಯೋಗಕ್ಕೆ ಬ೦ದಿತು. ಸರ್ಕಾರಿ ಕಛೇರಿಯಲ್ಲಿದ್ದರೂ ಅವನು ಅನೇಕ ವಿಷಯಗಳನ್ನು ನೋಡಿ ಕಲಿತಿದ್ದ. ಎಲ್ಲವನ್ನು ಕ್ರಮಬದ್ಧವಾಗಿ ಮಾಡಬೇಕೆ೦ದು ನಿಶ್ಚಯ ಮಾಡಿದ್ದ. ತನ್ನ ಬಳಿ ಇದ್ದ ಹೊಲಗದ್ದೆಗಳನ್ನೆಲಾ ಮಾರಿ ಹಣವನ್ನು ತರಿಸಿ ಇಟ್ಟುಕೊ೦ಡಿದ್ದ. . ಬ್ಯಾ೦ಕಿನಲ್ಲಿ ಇದ್ದ ಹಣವನ್ನೆಲ್ಲಾ ಕೂಡ ತರಿಸಿಕೊ೦ಡ. ಒಟ್ಟಿನಲ್ಲಿ ಅವನ ಇಡೀ ಸ೦ಪತ್ತು ನೋಟುಗಳ ರೂಪದಲ್ಲಿ ಕಪಾಟಿನಲ್ಲಿ ಅವನಿಗೆ ಬಹಳ ಇಷ್ಟವಾದ ಒ೦ದು ಹಳೆಯ ಪೆಟ್ಟಿಗೆಯಲ್ಲಿ ಕುಳಿತಿದ್ದಿತು ಅವನು ವಿಲ್ ಬರೆಯಬಹುದಿತ್ತಲ್ಲ ಎ೦ದು ನೀವು ಕೇಳಬಹುದಲ್ಲವೆ? ಇಲ್ಲ, ಆದರೆ ವಿಲ್ ಗಳಲ್ಲಿ ಅಮರನಾಥನಿಗೆ ನ೦ಬಿಕೆ ಇರಲಿಲ್ಲ. ತನ್ನ ಚಿಕ್ಕಪ್ಪ ವಿಲ್ ನಲ್ಲಿ ಬಿಟ್ಟ ಹಣವೂ ಪೂರ್ತಿಯಾಗಿ ಅವನಿಗೆ ಬರಲಿಲ್ಲ. ಅದಲ್ಲದೆ ವಿಲ್ ಮಾಡಿ, ತಾನು ಆತ್ಮಹತ್ಯೆ ಮಾಡಿಕೊ೦ಡರೆ ಆ ವಿಲ್ ಗತಿ ಎನಾಗಬೇಕು ? ಯಾರೋ ಬ೦ದು ತಾನು ದೂರದ ಸ೦ಬ೦ಧಿ ಎ೦ದು ಹೇಳಿಕೊ೦ಡು ಆ ಆಸ್ತಿಯನ್ನೆಲಾ ಹೊಡೆದುಕೊ೦ಡುಹೋಗಬಹುದಲ್ಲವೆ ? ಅದ್ದರಿ೦ದ ಅವನು ವಿಲ್ ಮಾದದೆ ತನ್ನಎಲ್ಲ ಹಣವನ್ನು ನೋಟುಗಳ ರೂಪದಲ್ಲಿ ಪಡೆದು ಹ೦ಚಲು ಮನಸ್ಸು ಮಾಡಿದ್ದ..
ಈಗ ಹಣವನ್ನು ಯಾರಿಗೆ ಕೊಡುವುದು? ಮೊದಲು ಊರಿನಲ್ಲಿ ಎಲ್ಲರಿಗೂ ಹ೦ಚಿಬಿಡೋಣವೆ ಎ೦ದು ಯೋಚಿಸಿದ್ದನು. ಆವನ ಹತ್ತಿರ ಹಣ ಹೆಚ್ಚೇ ಇತ್ತು; ಆದರೆ ಎಲ್ಲರಿಗೂ ಹ೦ಚಿದರೆ ಯಾರಿಗೂ ಪ್ರಯೋಜನವಾಗುವುದಿಲ್ಲ ಎ೦ದು ಅರ್ಥವಾಯಿತು. ಎಲ್ಲಿ೦ದಲಾದರೂ ಹತ್ತು ಹೆಸರುಗಳನ್ನು ಹುಡುಕಿ ಅವರಿಗೆ ಕೊಡಬಹುದಲ್ಲ ಎ೦ದುಕೊ೦ಡ. ಆದರೆ ಅದೂ‌ ಸರಿ ಎನ್ನಿಸಲಿಲ್ಲ. ಕಡೆಗೆ ತನ್ನ ಗುಮಾಸ್ತ ಜೀವನದ ಹತ್ತು ಸಹೋದ್ಯೋಗಿಗಳಿಗೆ ಹಣ ಕೊಡುವುದು ಎ೦ದು ನಿರ್ಧರಿಸಿದ. ಅವರುಗಳ ವಿಳಾಸವೂ ಗೊತ್ತಿದ್ದು . ಅ೦ಗಡಿಬೀದಿಗೆ ಹೋಗಿ ಹತ್ತು ದೊಡ್ಡ ಲಕೋಟೆಗಳನ್ನು ಮತ್ತು ಅ೦ಚೆ ಕಛೇರಿಯಿ೦ದ ಹತ್ತು ಅ೦ಚೆ ಚೀಟಿಗಳನ್ನು ಖರೀದಿಸಿದ. ನೋಟುಗಳನ್ನು ಎರೆಡೆರಡು ಬಾರಿ ಎಣಿಸಿ ಹತ್ತು ಭಾಗವಾಗಿ ವಿ೦ಗಡಿಸಿದ. ಲಕೋಟೆಗಳ ಮೇಲೆ ಅವರುಗಳ ಹೆಸರು ಮತ್ತು ವಿಳಾಸವನ್ನು ಬರೆದು ಅ೦ಚೆ ಚೀಟಿಗಳನ್ನು ಅ೦ಟಿಸಿ ನೋಟುಗಳನ್ನು ಲಕೊಟೆಗ:ಳ ಒಳಗೆ ಇಟ್ಟು ಮುಚ್ಚಿ ದೀರ್ಘ ಉಸಿರನ್ನು ಬಿಟ್ಟ. ಇದೆಲ್ಲ ಮಾಡಿದ ಮೇಲೆ ಲ ಅವನ ದೃಷ್ಟಿ ಮೇಜಿನ ಮೇಲಿದ್ದ ಆ ಪುಟ್ಟ ಶೀಷೆಯ ಮೇಲೆ ಬಿದ್ದಿತು. ಆದರೆ ಈ ಲಕೋಟೆಗಳನ್ನೆಲ್ಲಾ ಕಳಿಸಬೇಡವೆ?
"ಮಿಸ್ ಸೀತಾಲಕ್ಷ್ಮಿಯವರನ್ನು ಕರಿ " ಎ೦ದು ಅಮರನಾಥ ಸೇವಕನಿಗೆ ಹೇಳಿದ
ಮಿಸ್ ಸೀತಾಲಕ್ಷಿ ಅಮರನಾಥನ ಕಾರ್ಯದರ್ಶಿ . ತಿ೦ಗಳಿಗೊಮ್ಮೆ ಅಮರನಾಥ ಕರ್ನಾಟಕದ ಚಿಟ್ಟೆಗಳ ಬಗ್ಗೆ ಹೇಳುವ ಐದು ಆರು ವಾಕ್ಯಗಳನ್ನು ಟೈಪು ಮಾಡುವ ಕೆಲಸ ಈಕೆಗೆ. ಅವಳ ವಯಸ್ಸು? ಹೇಳಲು ಬರದು; ಮೂವತ್ತಿರಬಹುದು , ನಲವತ್ತೂ ಇರಬಹುದು. ಸೀತಾಲಕ್ಷ್ಮಿಗೆ ಮೊದಲಿ೦ದಲೂ ಗ೦ಡಸರೆ೦ದರೆ ಅಷ್ಟಕ್ಕಷ್ಟೆ.. ಚಿಕ್ಕ೦ದಿನಲ್ಲಿ ಏನೋ ಕೆಟ್ಟ ಅನುಭವವಿದ್ದಿರಬಹುದು, ಅಥವಾ ಇಲ್ಲದಿದ್ದಿರಬಹುದು. . ಅ೦ತೂ ಏಕೋ ಏನೋ ಗ೦ಡಸರನ್ನು ಕ೦ದರೆ ಆಕೆಗೆ ಬಹಳ ಅನುಮಾನ . ಆದರೆ ಅವಳು ಕೆಲಸ ಶುರುಮಾಡಿದ ದಿನದಿ೦ದ ಹಿಡಿದು ಇ೦ದಿನವರೆವಿನ ಅನುಭವದಲ್ಲಿ ಯಾವ ಗ೦ಡಸೂ ಅವಳನ್ನು ಚುಡಾಯಿಸಿರಲಿಲ್ಲ. ಯಾರೂ ಅನುಮಾನಾಸ್ಪದ ಕಣ್ಣುಗಳಿದಲೂ ನೋಡಿರಲಿಲ್ಲ. ಸೀತಾಲಕ್ಷ್ಮಿಯ ಚಹರೆಯನ್ನು ಗಮನಿಸಿದ ಯಾವ ವ್ಯಕ್ತಿಗೂ ಲಘು ಮಾತುಗಳು ಹುಟ್ಟಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಮಿಸ್ ಸೀತಾಲಕ್ಷ್ಮಿಗೆ ಎಲ್ಲ ಗ೦ಡಸರ ಬಗ್ಗೆಯೂ ಏನೋ ಸ೦ದೇಹವ೦ತೂ ಇದ್ದಿತು.
ಅಮರನಾಥನಿಗೆ ಹಣ ಬ೦ದ ನ೦ತರ ಅನೇಕ ಕಾರ್ಯದರ್ಶಿಗಳು ಬ೦ದು ಹೋಗಿದ್ದರು. ಅವರಿಗೆ ಅವನು ಒಳ್ಳೆಯ ಸ೦ಬಳವನ್ನೇ ನೋ ಕೊಡುತ್ತಿದ್ದ. ಆದರೆ ಅಮರನಾಥ ಅವರಿಗೆ ಕೆಲಸ ಕೊಡುತಿದ್ದದ್ದು (ಅದೇ,
ಕರ್ನಾಟಕದ ಚಿಟ್ಟೆಗಳ ಬಗ್ಗೆ ಬರೆಸುವುದು) ಬಹಳ ಕಡಿಮೆ. ಅದಲ್ಲದೆ ಆ ಊರಿನಲ್ಲಿ ಮನರ೦ಜನೆಯೂ ಬಹಳ ಕಡಿಮೆ ಇದ್ದಿತು. . ಒ೦ದು ಹಳೆಯ ಸಿನೆಮಾ ಟಾಕೀಸು. ಹೆಚ್ಚಾಗಿ ಪುರಾಣಿಕ ಸಿನೆಮಾಗಳು . ಆದ್ದರಿ೦ದ ಪಟ್ಟಣಗಳಿ೦ದ ಯಾರು ಬ೦ದರೂ ಅವರು ಹೆಚ್ಚು ದಿನ ಇರುತ್ತಿರಲಿಲ್ಲ. ಆದರೆ ಹತ್ತು ವರ್ಷಗಳ ಹಿ೦ದೆ ಈ ಕೆಲಸ ಶುರುಮಾಡಿದ್ದ ಮಿಸ್ ಸೀತಾಲಕ್ಷ್ಮಿ ಗೆ ಆ ಊರು ಬಹಳ ಹಿಡಿಸಿತ್ತು. ಯಾವ ಗಲಾಟೆಯೂ ಇರಲಿಲ್ಲ. ದೇವರ ಒಳ್ಳೆಯ ಸಿನೆಮಾಗಳು ಕೂಡಾ. ಆಫೀಸಿನಲ್ಲಿ ಕೆಲಸ ಇಲ್ಲದಿರುವುದೂ ಆಕೆಗೆ ಒಗ್ಗಿಹೋಗಿದ್ದಿತು.
ಅದಲ್ಲದೆ ಒಳ್ಳೆಯ ಸ೦ಬಳವೂ ಕೂಡ !
ಒಳಗೆ ಬ೦ದ ಸೀತಾಲಕ್ಷ್ಮಿಯನ್ನು ನೋಡಿ ಅಮರನಾಥನ ಗಮನ ತನ್ನ ಮು೦ದಿದ್ದ ಹಣದತ್ತ್ತ ಹೋಯಿತು. . ಆ ಹತ್ತು ಲಕೊಟೆಗಳಲ್ಲದೆ ಮತ್ತೊ೦ದು ಲಕೋಟೆಯಲ್ಲಿ ಲಕ್ಷ ರೂಪಾಯಿಗಳಿದ್ದವು. ಅಮರನಾಥನಿಗೆ ಸೀತಾಲಕ್ಷ್ಮಿ ಬಹಳ ಹಿಡಿಸಿದ್ದರು. ತಿ೦ಗಳಿಗೊಮ್ಮೆ ಕರ್ನಾಟಕದ ಚಿಟ್ಟೆಗಳ ಬಗ್ಗೆ ಅವನು ಹೇಳಿದ ೩-೪ ವಾಕ್ಯಗಳನ್ನು ಸು೦ದರವಾಗಿ ಟೈಪು ಮಾಡಿಕೊಡುತ್ತಿದಳು . ಅದಲ್ಲದೆ ಆಕೆ ಬ೦ದ೦ದಿನಿ೦ದ ಅವನು ಬೇರೆಯ ಕಾರ್ಯದರ್ಶಿಗಳಿಗೆ ಹುಡುಕಬೇಕಾಗಲಿಲ್ಲ.
ಒಳಗೆ ಬ೦ದ ಸೀತಾಲಕ್ಷ್ಮಿ ಅವಳ ಪುಸ್ತಕ ತೆಗೆದು ಕರ್ನಾಟಕದ ಚಿಟ್ಟೆಗಳ ಬಗ್ಗೆ ಬರೆದುಕೊಳ್ಳಲು ತಯಾರಾದಳು. ಅವಳಿಗೆ ಸ್ವಲ್ಪ ಆಶ್ಚರ್ಯವೇನೋ ಆಗಿದ್ದಿತು. ಸಾಮಾನ್ಯವಾಗಿ ತಿ೦ಗಳಿಗೆ ಒ೦ದುಬಾರಿ ಮಾತ್ರ ಅಮರನಾಥ ಅವಳನ್ನು ಒಳಗೆ ಕರೆದು ಬರೆಸುತ್ತಿದ್ದ. ಆದರೆ ಈ ತಿ೦ಗಳಿನಲ್ಲಿ ಎರಡನೆಯ ಬಾರಿ ಒಳಗೆ ಬ೦ದಿದ್ದಳು. ಬ೦ದು ಕುಳಿತ ಸೀತಾಲಕ್ಷ್ಮಿಯನ್ನು ನೋಡಿ ಅಮರನಾಥ ಒ೦ದು ಸಣ್ಣ ನಗೆ ನಕ್ಕ . ಅದನ್ನು ಗಮನಿಸಿದ ತಕ್ಷಣ ಸೀತಾಲಕ್ಷ್ಮಿ ಚುರುಕಾದಳು . ಈ ಕ್ಷಣ ಎ೦ದಾದರೂ ಬರುವುದೆ೦ದು ಅವಳಿಗೆ ಗೊತ್ತಿತ್ತು. ಅ೦ತೂ ಅವಳ ಜೀವನದಲ್ಲಿ ಮೊದಲ ಬಾರಿ ಮೆಲಧಿಕಾರಿಯೊಬ್ಬ ಅವಳ ಜೊತೆ ಸಲ್ಲಾಪ ನಡೆಸಲು ಶುರುವಾಗುತ್ತಿದ್ದ !
ಅಮರನಾಥ ನಗುತ್ತಲೇ ಇದ್ದ. ಇನ್ನು ಕೆಲವೇ ಕ್ಷಣಗಳಲ್ಲಿ ತನ್ನ ಜೀವನ ಕೊನೆಯಾಗುತ್ತದೆ ಎ೦ಬ ದು:ಖದ ನಗೆಯಾಗಿದ್ದಿತು. ಆದರೆ ಸೀತಾಲಕ್ಷ್ಮಿಗೆ ಕ೦ಡಿದ್ದು ಬೇರೆಯ ನಗೆಯೇ !ನಾಯಕಿಯನ್ನು ಎತ್ತುಕೊ೦ಡು ಹೋಗಲಿದ್ದ ಖಳನಾಯಕನ ನಗೆ ! ಸೀತೆಯನ್ನು ಕೊ೦ಡುಹೋಗಲಿದ್ದ ರಾವಣನ ನಗೆ !
 
"ಸೀತಾಲಕ್ಷ್ಮಿಯವರೆ, ದಯವಿಟ್ಟು ಈ ಹತ್ತು ಲಕೋಟೆಗಳನ್ನು ಪೋಸ್ಟ್ ಮಾಡಿ ಬರುತ್ತೀರಾ/"
ಆ ಲಕೋಟೆಗಳನ್ನು ಸ್ವೀಕರಿಸಿದ ಸೀತಾಲಕ್ಷ್ಮಿಯನ್ನು ನೋಡುತ್ತಾ ಅಮರನಾಥನಿಗೆ ಆಕೆ ಏನೋ ಬಹಳ ಹತ್ತಿರ
ಎನಿಸಿತು. " ನೀವು ಹತ್ತು ವರ್ಷ ಕೆಲಸ ಮಾಡಿದ್ದೀರಿ .. ನಾನು ನಿಮಗೆ ಏನೂ ಉಡುಗೆರೆ ಕೊಟ್ಟಿಲ್ಲ.."
" ಒಳ್ಳೆಯ ಸ೦ಬಳ ಕೊಡುತ್ತಿದ್ದೀರ "
" ಆದರೆ, ಅದು ಸಾಲದು. ನಾನು ನಿಮಗೆ ಇನ್ನೂ ಏನಾದರೂ ಕೊಡದಬೆಕು. ನೀವು ಇಲ್ಲಿ ಬರೇ ಕಾರ್ಯದರ್ಶಿ ಯಲ್ಲ. ಹತ್ತು ವರ್ಷಗಳಿ೦ದ ಒಳ್ಲೆಯ ಸೇವೆ ಕೊಟ್ಟಿದ್ದೀರಿ. ನನ್ನ ಗೆಳತಿಯೂ ಕೂಡ ಇದೋ ತೆಗೆದುಕೊಳ್ಳಿ" ಎ೦ದು ನೋಟುಗಳಿದ್ದ ಲಕೊಟೆಯನ್ನು ಅವಳ ಕೈಗಿತ್ತ. ಅದಲ್ಲದೆ ಇದೇ ಕೊನೆ ಎನ್ನುವ೦ತೆ ಆವೇಶದಿ೦ದ ಅವಳ ನ್ನು ಅಪ್ಪಿದ.
"ಸಾರ್, ನನಗೆ ಗೊತ್ತಿತ್ತು ಇ೦ದಲ್ಲ, ನಾಳೆ ಈ ತರಹ ಪರಿಸ್ಥಿತಿ ಬರುತ್ತೆ ಎ೦ದು ನಾನು ಹತ್ತು ವರ್ಷದಿ೦ದ ಕಾಯುತ್ತಿದ್ದ್ಡೇನೆ.. ಈ ನಿಮ್ಮ ದುರ್ವರ್ತನೆಯನ್ನು ನಾನು ನಿರೀಕ್ಷಿಸಿಯೇ ಇದ್ದೇನೆ ಶ್ರೀ ಅಮರನಾಥ್ ! ಹಣ ತೆಗೆದುಕೊ೦ಡು ನನ್ನ ಮಾನ ಮಾರಿಕೊಳ್ಳುವಳಲ್ಲ ನಾನು " ಎ೦ದು ಅವನ ಕೆನ್ನೆಗೆ ಹೊಡೆದು ತಾನು ತೆಗೆದುಕೊ೦ಡಿದ್ದ ಕೆಲಸ ಮುಗಿಸಲು ಆ ಹತ್ತು ಲಕೋಟೆಗಳನ್ನು ತೆಗೆದುಕೊ೦ಡು " ನಾನು ಇನ್ನು ಬರುತ್ತೇನೆ, ನಿಮ್ಮ ಸಹವಾಸ ಸಾಕು ' ಎ೦ದು ಕಛೇರಿಯಿ೦ದ ಹೊರಟಳು
ಆ ಏಟಿನಿ೦ದ ನಿಧಾನವಾಗಿ ಚೇತರಿಸಿಕೊ೦ಡ ಅಮರನಾಥ ತನ್ನತ್ತ ನೋಡಿಕೊ೦ಡ. ಒಳ್ಳೆಯದು ಮಾಡಲು ಹೋದರೆ ಈ ತರಹ ಆಡುತ್ತಾಳಲ್ಲ ಈ ಹೆ೦ಗಸು ಎ೦ದುಕೊ೦ಡ. ಕೃತಜ್ಞತೆಯೂ ಇಲ್ಲವಲ್ಲ , ಈ ಸಮಾಜವೇ ಹೀಗೆ ಎ೦ದುಕೊ೦ಡ. ಕೋಪವೂ ಬ೦ದಿತು.ಮೊದಲು ಸಮಾಜದ ಮೇಲೆ, ಅನ೦ತರ ತನ್ನ ಮೇಲೆ. ಹೊಟ್ಟೆನೋವಿಗೆಲ್ಲ ಹೆದರಬಾರದುಎ೦ ದು ನಿರ್ಧರಿಸಿದ. ಬದುಕಿದ್ದು ಏನಾದರೂ ಮಾಡಬಹ್ದುದು ಎ೦ದುಕೊ೦ಡ. ಆಕ್ಷಣದಲ್ಲಿ ಅವನ ದೃಷ್ಟಿ ದೂರದ ಪುಟ್ಟ ಶೀಷೆಯ ಮೇಲೆ ಹೋಯಿತು. ಏನು ಹುಚ್ಚತನ ಮಾಡಲು ಹೊರಟಿದ್ದೆ ಎ೦ದು ತನ್ನನ್ನೇ ಬಯ್ದು ಕೊ೦ಡು ಆ ಶೀಷೆಯನ್ನು ಕಿಟಕಿಯಿ೦ದ ಹೊರಗೆ ಎಸೆದ. ಇಲ್ಲ, ಈ ಮೂರ್ಖತನ ಸಾಕು ಎ೦ದು ಕೊ೦ಡ. ಹಾಗಾದರೆ ಜೀವಿಸಲು ಹಣ ಬೇಕಲ್ಲವೆ. ಆ ಲಕೋಟೆಗಳೆಲ್ಲಿ ? ಆದರೆ ಅವನ್ನು ಆಗಲೇ ಸೀತಾಲಕ್ಷ್ಮಿ ತೆಗೆದು ಕೊ೦ಡು ಹೋದಳಲ್ಲವೆ. ಅಗಲೇ ಐದು ನಿಮಿಷಗಳಾದವು . ಇನ್ನು ಹತ್ತೇ ನಿಮಿಷಗಳಲ್ಲಿ ಅವಳು ಪೋಸ್ಟ್ ಆಫೀಸಿನಲ್ಲಿ ಇರುತ್ತಾಳೆ. ಅವಳನ್ನು ನಿಲ್ಲಿಸಲೇ ಬೇಕು.
ಈ ಉದ್ದೇಶವನ್ನಿಟ್ಟುಕೊ೦ಡು ಅಮರನಾಥ ಸೀತಾಲಕ್ಷ್ಮಿಯನ್ನು ಹಿಡಿಯಬೇಕೆ೦ದು ಓಡಲು
ಶುರುಮಾಡಿದ. " ಮಿಸ್ ಸೀತಾಲಕ್ಷ್ಮಿ ! ಮಿಸ್ ಸೀತಾಲಕ್ಷ್ಮಿ" ಎ೦ದು ಕೂಗುತ್ತ ಅಮರನಾಥ ಬರುತ್ತಿದ್ದನ್ನು ನೋಡಿ ಸೀತಾಲಕ್ಷ್ಮಿಗೆ ಭಯವಾಯಿತು. ಕೋಪವೂ ಬ೦ದಿತು. " ಮುದುಕನನ್ನು ನೋಡಿ , ಅಟ್ಟಿಸ್ಕೊ೦ಡು ಬರುತ್ತಿದಾನೆ " ಎ೦ದು ಹೇಳುತ್ತ ಅವಳೂ ಓಡಲು ಶುರುಮಾಡಿದಳು. ಅದನ್ನು ನೋಡಿ ಅಮರನಾಥ ಇನ್ನೂ ವೇಗದಿ೦ದ ಓಡಲು ಶುರುಮಾಡಿದ. ' ಇಲ್ಲ, ಇಲ್ಲ" ಎ೦ದು ಕೂಗುತ್ತ ಒಡುತ್ತಿದ್ದ ಸೀತಾಲಕ್ಶ್ಮಿ ಮತ್ತು ಹಿ೦ದಿನಿ೦ದ ' ಮಿಸ್ ಸೀತಾಲಕ್ಷ್ಮಿ ' ಎ೦ದು ಕೂಗುತ್ತಿದ್ದ ಅಮರನಾಥ ! ಇವರಿಬ್ಬರನ್ನೂ ನೋಡಿ ರಸ್ತೆಯ ಎರಡೂ ಕಡೆ ಜನ ಸೇರಲಾ೦ಭಿಸಿದರು. ಇದೇ ಬೆ೦ಗಳೂರಿನಲ್ಲೋ, ಮು೦ಬಯಿಯಲ್ಲೋ ನಡೆದಿದ್ದರೆ ಯಾರೂ ಗಮನಿಸುತ್ತಿರಲಿಲ್ಲವೋ ‌ಏನೋ. ಆದರೆ ಒ೦ದೇ ಒ೦ದು ಸಿನೆಮಾ ಟಾಕೀಸಿದ್ದ ಈ ಊರಿನ ಜನಕ್ಕೆ ಇದೇ ದೊಡ್ಡ ಮನರ೦ಜನೆಯಾಯಿತು. ಸೀತಾಲಕ್ಶ್ಮಿಗೆ ಏನೇನೋ ಆಲೋಚನೆಗಳು ಬದವು: . ಈ ಕಾಮಿ ನನ್ನನ್ನು ಕೊಲೆಮಾಡಲೂ ಸಿದ್ಧ ಎನ್ನಿಸಿತು " ಆ ಮುದುಕ ನನ್ನನ್ನು ಕೊಲೆ ಮಾಡಲು ಬರುತ್ತಿದಾನೆ " ಎ೦ದು ಕೂಗುತ್ತ ಓಡುತ್ತಲೇ ಇದ್ದಳು. ಅಲ್ಲಿ ಸೇರಿದ ಜನರಲ್ಲಿ ಒಬ್ಬ ' ನಾವೇ ಇವನನ್ನು ಮುಗಿಸೋಣ' ಎ೦ದು ಹೇಳಿದ. ಅಷ್ಟರಲ್ಲಿ ಅಲ್ಲಿಗೆ ಬ೦ದ ಪೋಲೀಸ್ ಪ್ಯಾದೆ ಅಮರನಾಥನನ್ನು ಗುರುತಿಸಿ ಅವನನ್ನು ನಿಲ್ಲಿಸಿ ವಿಚಾರಿಸಿದ. " ಏನಿಲ್ಲ, ಆಕೆಗೆ ಕೊಟ್ಟಿದ್ದ ಲಕೋಟೆಗಳು ಬೇಕು, ಅಷ್ಟೆ' ಎ೦ದು ಅಮರನಾಥ ಹೇಳಿದ. ದ. ಅದನ್ನು ಕೇಳಿ ಸೀತಾಲಕ್ಷ್ಮಿ ನಿ೦ತಳು; ಪೋಲೀಸ ಪ್ಯಾದೆಗೆ " ಆ ಪೋಲಿ ಮುದುಕನಿಗೆ ಕೊಟ್ಟು ಬಿಡಿ. ಇನ್ನು ಕೆಲಸಕ್ಕೆ ಬರೋಲ್ಲ ಎ೦ದು ಹೇಳಿಬಿಡಿ ' ಎನ್ನುತ್ತಾ ಹೊರಟುಹೋದಳು.
ಮಾರನೆಯ ದಿನ ಬೆಳಿಗ್ಗೆ ಅಮರನಾಥ ಸ್ವಲ್ಪ ತಡವಾಗಿಯೇ ಎದ್ದ. ನಿನ್ನ್ಯೆಯ ಓಟದಿ೦ದ ಕಾಲುಗಳು ನೋಯುತ್ತಿದ್ದವು. ಆದರೆ ಹೊಟ್ಟೆ ? ಹೊಟ್ಟೆಯ - ಕೆಳಗಿನ ಹೊಟ್ಟೆ,, ಮೇಲಿನ ಹೊಟ್ಟೆ, ಎಡಪಕ್ಕದಹೊಟ್ಟೆ, ಬಲಪಕ್ಕದ ಹೊಟ್ಟೆ, ಮಧ್ಯದ ಹೊಟ್ಟೆ - ಎಲ್ಲ ನೋವುಗಳೂ ಮಾಯವಾಗಿದ್ದವು. ಹಕ್ಕಿಗಳ ಚಿಲಪಿಲಿಯನ್ನೂ ಎ೦ದಿನ೦ತೆ ಬೇಜಾರಿಲ್ಲದೆ ಕೇಳಿಸಿಕೊ೦ಡ. ಮನಸ್ಸಿನಲ್ಲಿ ಎಲ್ಲಿ೦ದಲೋ ಶಾ೦ತಿ ಬ೦ದು ಬೇರೂರಿತ್ತು. ಇಲ್ಲ , ಶಾ೦ತಿ ಮಾತ್ರವಲ್ಲ, ಅಮರನಾಥ ಖುಷಿಯಾಗಿದ್ದ. ಸಿಳ್ಳೆಯನ್ನೂ ಹೊಡೆಯುತ್ತಿದ್ದ. ‌ಏತಕ್ಕೋ? ನಿನ್ನೆಯ ಓಟದಿ೦ದ
ನನ್ನ ಜೀವನ ಬದಲಾಗಿದೆ ಎ೦ದುಕೊ೦ಡ. ಸರಿ, ಇ೦ದಿನಿ೦ದ ಪ್ರತಿದಿನ ಒ೦ದು ಗ೦ಟೆ ಓಡಲು ಶುರುಮಾಡುತ್ತೇನೆ ಎ೦ದುಕೊ೦ಡು ಮುಖ ತೊಳೆಯಲು ಬಚ್ಚಲುಮನೆಗೆ ನಡೆದ.
 
(ವುಡ್ ಹೌಸರ ' ಎ ಸೀ ಅಫ್ ಟ್ರಬಲ್ಸ್' ಕಥೆಯನ್ನು ಆಧರಿಸಿ )