'ಅಮರಾವತಿ ಮಾದರಿ' ಎಲ್ಲೆಡೆ ಅನುಸರಣೆಯಾಗಲಿ

'ಅಮರಾವತಿ ಮಾದರಿ' ಎಲ್ಲೆಡೆ ಅನುಸರಣೆಯಾಗಲಿ

ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿಯನ್ನು ನವೀಕರಿಸಬಹುದಾದ ಮೂಲಗಳಿಂದಲೇ ಶಕ್ತಿಯನ್ನು ಉತ್ಪಾದಿಸಿ ಬಳಸುವ ವಿಶ್ವದ ಮೊತ್ತಮೊದಲ ನಗರವಾಗಿ ರೂಪಿಸಲು ನಿರ್ಧರಿಸಿರುವುದು ಬಹಳ ಉತ್ತಮವಾದ ವಿಷಯ. ಪರಿಸರ ನಾಶ, ಇಂಗಾಲಾಮ್ಲ ಹೊರಸೂಸುವಿಕೆಯೇ ಮೊದಲಾದ ಕಾರಣಗಳಿಂದ ಭೂಮಿ ಅತೀ ವೇಗವಾಗಿ ಬಿಸಿಯೇರುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಜಗತ್ತಿಗೆ ಮಾದರಿಯಾಗಿ ಅಮರಾವತಿಯನ್ನು ನಿರ್ಮಿಸ ಹೊರಟಿರುವುದು ಶ್ಲಾಘನಾರ್ಹ. ಪರಿಕಲ್ಪನೆಯಲ್ಲಿ ಮಾತ್ರವಲ್ಲದೆ ಅನುಷ್ಠಾನದಲ್ಲಿಯೂ ಇದು ಉತ್ತಮವಾಗಿ ಸಾಕಾರಗೊಳ್ಳಲಿ ಎಂಬುದು ಸದಾಶಯ.

ಅಮರಾವತಿ ನಗರದ ಶಕ್ತಿಯ ಅಗತ್ಯಗಳನ್ನು ಪೂರೈಸಿಕೊಳ್ಳಲು ಬೇಕಾಗುವ ೨,೨೦೦ ಮೆಗಾವ್ಯಾಟ್ ವಿದ್ಯುತ್ತನ್ನು ಸೌರ, ಪವನ ಮತ್ತು ಜಲದಂತಹ ಮುಗಿಯದ ಆಕರಗಳಿಂದಲೇ ಉತ್ಪಾದಿಸಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಎಲ್ಲ ಸರಕಾರಿ ಕಟ್ಟಡಗಳು, ವಸತಿಗೃಹಗಳ ಛಾವಣಿಗಳ ಮೇಲೆ ಸೌರಫಲಕಗಳನ್ನು ಸ್ಥಾಪಿಸಲಾಗುತ್ತದೆ. ಕಟ್ಟಡಗಳಿಗೆ ಪರವಾನಿಗೆ ಸಿಗಬೇಕಾದರೆ ಛಾವಣಿಯಲ್ಲಿ ಸೌರಫಲಕ ಅಳವಡಿಕೆ, ಸುಸ್ಥಿರ ಇಂಧನ ಬಳಕೆ, ಇಂಧನ ಬಳಕೆಯಲ್ಲಿ ಮಿತವ್ಯಯದಂತಹ ಅಂಶಗಳನ್ನು ಕಡ್ಡಾಯಗೊಳಿಸಲಾಗುತ್ತದೆ. ಹಸುರು ಕಟ್ಟಡ ಮಾನದಂಡಗಳ ಪಾಲನೆಯೂ ಕಡ್ಡಾಯವಾಗಿರುತ್ತದೆ. ಮೆಟ್ರೋ ರೈಲನ್ನು ಕೂಡ ನವೀಕರಿಸಬಹುದಾದ ಮೂಲದಿಂದ ಉತ್ಪಾದಿಸುವ ವಿದ್ಯುತ್ತಿನಿಂದ ಓಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಆಂಧ್ರಪ್ರದೇಶವು ಬೇಸಗೆಯಲ್ಲಿ ಪ್ರತೀ ವರ್ಷ ಬಿಸಿಗಾಳಿ ಪರಿಸ್ಥಿತಿ, ಅತಿಯಾದ ತಾಪಮಾನ ಎದುರಿಸುತ್ತದೆ. ಗರಿಷ್ಠ ತಾಪ ೪೭.೭ ಡಿಗ್ರಿ ಸೆ. ವರೆಗೆ ಏರಿದ್ದೂ ಇದೆ. ಹೀಗಾಗಿ ಅಲ್ಲಿ ಕಟ್ಟಡಗಳಲ್ಲಿ ಏರ್ ಕಂಡೀಶನ್ ವ್ಯವಸ್ಥೆ ಬಳಕೆ ಅತೀ ಸಾಮಾನ್ಯ, ಏರ್ ಕಂಡೀಶನ್ ಶೀತಲೀಕರಣ ಘಟಕಗಳು, ಉದ್ದಿಮೆಗಳು, ಸಾರಿಗೆಗೂ ಅಗತ್ಯವಾಗಿರುತ್ತದೆ. ನೂತನ ಅಮರಾವತಿ ನಗರದಲ್ಲಿ ಕಟ್ಟಡಗಳನ್ನು ನೈಸರ್ಗಿಕವಾಗಿ ತಂಪಾಗಿರುವಂತೆ ನಿರ್ಮಿಸುವ ಯೋಜನೆಯನ್ನು ಕೂಡ ಹಾಕಿಕೊಳ್ಳಲಾಗಿದೆ. ಈ ಯೋಜನೆಯ ಭಾಗವಾಗಿ ಈಗಾಗಲೇ ೧೬ ಅಂಗನವಾಡಿಗಳು, ೧೪ ಆರೋಗ್ಯ ಕೇಂದ್ರಗಳು, ೧೩ ಸಾರ್ವಜನಿಕ ಶಾಲೆಗಳ ಮೇಲೆ ೪೧೫ ಕಿ. ವ್ಯಾಟ್‌ನ ಛಾವಣಿ ಸೌರಫಲಕಗಳನ್ನು ಅಳವಡಿಕೆ ಮಾಡಲಾಗಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕನಸಿನ ಯೋಜನೆ ಇದಾಗಿದ್ದು, ಶುದ್ಧ ಇಂಧನ ಬಳಕೆ ಮತ್ತು ಹವಾಮಾನ ಬದಲಾವಣೆ ತಡೆಯ ನಿಟ್ಟಿನಲ್ಲಿ ಕ್ರಿಯಾಶೀಲವಾಗುವ ಭಾರತದ ಬದ್ದತೆಗೆ ಅನುಗುಣವಾಗಿರುವುದು ಉಲ್ಲೇಖಾರ್ಹ.

ಶತಮಾನಗಳ ಹಿಂದೆಯೇ ಆರಂಭವಾದ ಕೈಗಾರಿಕೀಕರಣ, ನಗರೀಕರಣದ ದುಷ್ಪಲವನ್ನು ಈಗ ನಾವು ಅನುಭವಿಸುತ್ತಿದ್ದೇವೆ. ಆದರೆ ಇದು ಅನಿವಾರ್ಯ ಮತ್ತು ನಾವು ನಡೆದುಬಂದಿರುವುದು ಹಿಂದಿರುಗಿ ಹೋಗಲಾರದ ದಾರಿಯಲ್ಲಿ ಹೀಗಾಗಿ ಇನ್ನು ಮುಂದೆ ನಮಗೆ ಉಳಿದಿರುವುದು ಮುಂದೆಯಾದರೂ ಸರಿದಾರಿಯಲ್ಲಿ ನಡೆಯುವುದು. ಇದೇ ಕಾರಣದಿಂದಾಗಿ ಭಾರತ. ಇದಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಮುಂಚೂಣಿಯಲ್ಲಿದ್ದು ಸಹಿ ಮಾಡಿದೆ. ಹೀಗಾಗಿಯೇ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ, ಪರಿಸರ ಸಹ್ಯ ಕ್ರಮಗಳ ಅನುಸರಣೆ ಅತ್ಯಂತ ವೇಗವಾಗಿ ನಡೆಯಲಾರಂಭಿಸಿದೆ.

ಈಗ ಅಮರಾವತಿಯ ನಿರ್ಮಾಣದಲ್ಲಿ ಅನುಸರಿಸಲು ನಿರ್ಧರಿಸಿರುವ ಕ್ರಮಗಳು ಮತ್ತು ವಿನ್ಯಾಸ ದೇಶದ ಎಲ್ಲ ನಗರಗಳು ಜತೆಗೆ ಗ್ರಾಮಗಳಲ್ಲಿಯೂ ಅನುಸರಣೆಯಾಗಬೇಕು. ಭೂಮಿ ಬಿಸಿಯೇರುವಿಕೆಯನ್ನು ತಡೆಯುವುದಕ್ಕೆ ನಾವು ಇರಿಸುವ ಸಣ್ಣ ಹೆಜ್ಜೆಯೂ ಅತ್ಯಂತ ಮುಖ್ಯ. ಹೀಗಾಗಿ ಅಮರಾವತಿಯ ಪರಿಕಲ್ಪನೆ ದೇಶದ ಎಲ್ಲೆಡೆಯೂ ಎಷ್ಟು ಸಾಧ್ಯವೋ ಅಷ್ಟು ಗರಿಷ್ಠ ಮಟ್ಟದಲ್ಲಿ ಅನುಸರಣೆಯಾಗಬೇಕಿದೆ. ಇವೆಲ್ಲವೂ ಒಟ್ಟು ಸೇರಿದಾಗ ಶುದ್ಧ ಇಂಧನ ಬಳಕೆ, ಹವಾಮಾನ ಬದಲಾವಣೆ, ಭೂಮಿ ಬಿಸಿಯೇರುವಿಕೆಗೆ ತಡೆಗೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೨-೦೪-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ