ಅಮರ ಪ್ರೇಮಿಯ ನೆನಪಿನಲ್ಲಿ...

ಅಮರ ಪ್ರೇಮಿಯ ನೆನಪಿನಲ್ಲಿ...

ಸಾಧಕನಾಗಲು ಸುಲಭವಿಲ್ಲ, ಆದರೂ ಅಸಾಧ್ಯವಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ, ಯಶಸ್ಸುಗಳಿಸಲು ಅಪ್ರತಿಮ ಶ್ರಮದ ಅಗತ್ಯವಿದೆ. ನಮ್ಮ ಮಕ್ಕಳ ಮನಸ್ಸು ಕಡಿವಾಣವಿಲ್ಲದ ಕುದುರೆಯಂತೆ ದಿಕ್ಕಿಲ್ಲದೆ ಓಡುತ್ತಿದೆ. ಕಲಿಕೆಯತ್ತ ಗಮನ ನೀಡುವುದು ಅವರ ಪಾಲಿಗೆ ನೀರಸವಾಗಿ ಭಾಸವಾಗುತ್ತಿದೆ. ಜಂಗಮವಾಣಿ ಮಕ್ಕಳ ಮನಸ್ಸನ್ನು ಕದಡುತ್ತಿದೆ. ಭವಿಷ್ಯದ ಕಲ್ಪನೆಯಿಲ್ಲದೆ ಕ್ಷಣಿಕ ಸುಖ, ಹಿತವಾದ ಸುಳ್ಳು, ಅವರನ್ನು ಉತ್ತೇಜಿಸುತ್ತಿದೆ. ನಿರ್ಮಾಣಕ್ಕಿಂತ, ನಿರ್ನಾಮದಲ್ಲಿ ನಮ್ಮ ಮಕ್ಕಳು ಪರಮ ಸಂತೋಷ ಅನುಭವಿಸುತ್ತಿದ್ದಾರೆ. ಹಳಿತಪ್ಪಿದ ಮಕ್ಕಳಿಗೆ, ಅವರ ಸಾಮರ್ಥ್ಯದ ಅರಿವು ಮೂಡಿಸಲು ಸಾಹಸ ಪಡಬೇಕಿದೆ. ಸಾಹಸಿಗಳ ಜೀವನ ಅವರಿಗೆ ತೆರೆದಿಡಬೇಕಿದೆ. ಎಲ್ಲರಲ್ಲದಿದ್ದರೂ ಒಂದಿಬ್ಬರು ಬದಲಾದರೂ ನಾವು ಧನ್ಯರು. ಕಳಪೆ ಸಾಧನೆ ತೋರಿ, ಅರ್ಧಕ್ಕಿಂತಲೂ ಹೆಚ್ಚು ಮಕ್ಕಳು ಸೊನ್ನೆಯ ಮೇಲೆ ಸೊನ್ನೆ ಸುತ್ತಿದರೂ, ಕಿಂಚಿತ್ತೂ ಬೇಸರದ ಛಾಯೆ ಅವರ ಮುಖದ ಮೇಲೆ ಕಾಣದಿದ್ದಾಗ, ಮನಸ್ಸು ಕದಡಿದ ಅನುಭವ. ಅದೇನೇ ಆದರೂ ಸೋಲೊಪ್ಪಲು ಸಿದ್ಧವಿಲ್ಲದ ಮನಸ್ಸು, ಸುಂದರವಾದ ನಾಳೆಯ ಕಲ್ಪನೆಯೊಂದಿಗೆ ಮಕ್ಕಳ ಮುಂದೆ ಒಂದು ಅದ್ಭುತ ಜೀವನಗಾಥೆಯೊಂದಿಗೆ ತೆರೆದುಕೊಳ್ಳುತ್ತದೆ.

ದುರ್ಗಮ ಪರ್ವತವೊಂದು ಊರಿನ ಉದ್ದಕ್ಕೂ ಹರಡಿದೆ. ಆ ಪರ್ವತದ ವಿಶಾಲತೆಯು ಕೆಲವು ಊರುಗಳನ್ನೇ ಪ್ರಸಿದ್ಧ ನಗರವೊಂದರಿಂದ ಬೇರ್ಪಡಿಸಿದೆ. ಅದರ ತಪ್ಪಲಿನಲ್ಲಿ ವ್ಯಕ್ತಿಯೊಬ್ಬ ಕಟ್ಟಿಗೆ ಕಡಿಯುತ್ತಿದ್ದಾನೆ. ಆತನಿಗಿನ್ನೂ ಮೂವತ್ತೊಂದರ ಹರೆಯ. ಕಟ್ಟಿಗೆ ಮಾರಾಟವೇ ಆತನ ಆದಾಯದ ಮೂಲ. ಮಧ್ಯಾಹ್ನದ ಸುಡುಬಿಸಿಲು. ಕಟ್ಟಿಗೆ ಕಡಿದು ದಣಿದಿದ್ದ ವ್ಯಕ್ತಿಯತ್ತ, ಊಟದ ಬುತ್ತಿಯೊಂದಿಗೆ ಮಡದಿ ನಡೆಯುತ್ತಿದ್ದಾಳೆ. ಆದೊಂದು ಕಡಿದಾದ ಹಾದಿ. ಎಂದಿಗಿಂತ ತುಸು ತಡವಾಗಿದೆ. "ಪಾಪ ತುಂಬಾ ಹಸಿದಿರಬೇಕು" ಎಂದು ಮನಸ್ಸಲ್ಲೇ ಭಾವಿಸಿ, ತನ್ನ ನಡಿಗೆಯ ವೇಗವನ್ನು ಹೆಚ್ಚಿಸುತ್ತಾಳೆ. ಯಾಕೋ ಆಕೆಯ ಅದೃಷ್ಟ ಚೆನ್ನಾಗಿರಲಿಲ್ಲ. ಇತ್ತೀಚೆಗಷ್ಟೇ ಮಗುವಿಗೆ ಜನ್ಮ ನೀಡಿದ್ದು ಆರೋಗ್ಯವೂ ಸ್ವಲ್ಪ ಕೈಕೊಟ್ಟಿರಬೇಕು. ಇನ್ನೇನು ತಲುಪಬೇಕು ಎನ್ನುವಷ್ಟರಲ್ಲಿ ಮುಂದಿಟ್ಟ ಹೆಜ್ಜೆ ಒಮ್ಮೆಲೇ ಜಾರಿ ಹೋಯಿತು. ಆ ಕ್ಷಣದಲ್ಲೇ ಜೋರಾದ ಕಿರುಚಾಟ. ಹತ್ತಿರವೇ ಇದ್ದ ಆತ ಓಡಿ ಬರುವಷ್ಟರಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಪ್ರೀತಿಯಿಂದ ತಂದಿದ್ದ ಬುತ್ತಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅದೊಂದು ಹೃದಯ ಕಲಕುವ ನೋಟ.

ಪ್ರೀತಿಯ ಅರ್ಧಾಂಗಿ, ಹಸಿದ ಹೊಟ್ಟೆಗೆ ಅನ್ನ ನೀಡಲು ಬುತ್ತಿಕಟ್ಟಿ ಬಂದವಳು ಪ್ರಜ್ಞೆಯಿಲ್ಲದೆ ಬಿದ್ದಿದ್ದಾಳೆ. ಆತನ ಹೃದಯ ಕಂಪಿಸತೊಡಗಿತು. ತಾನು ಅಗಾಧವಾಗಿ ಪ್ರೀತಿಸುತ್ತಿದ್ದ ಆಕೆಯನ್ನು ಹೆಗಲ ಮೇಲೆ ಹೊತ್ತು ಕೊಂಡು ಹಸಿದ ಹೊಟ್ಟೆಯಲ್ಲೇ ಗ್ರಾಮದತ್ತ ಏದುಸಿರು ಬಿಡುತ್ತಾ ಓಡಿದ. ಸಿಕ್ಕ ವಾಹನದಲ್ಲಿ ನಗರದ ಆಸ್ಪತ್ರೆಯತ್ತ ತೆರಳಿದ. ಆಸ್ಪತ್ರೆ ಕೇವಲ ಹದಿನೈದು ಕಿಲೋಮೀಟರ್ ದೂರ. ದಾರಿಗೆ ಅಡ್ಡಲಾಗಿ ನಿಂತ ದುರ್ಗಮ ಪರ್ವತ. ಅದನ್ನು ಬಳಸಿ ನಗರಕ್ಕೆ ತಲುಪಲು ಅನಿವಾರ್ಯವಾಗಿ ಎಪ್ಪತ್ತು ಕಿಲೋ ಮೀಟರ್ ಕ್ರಮಿಸಬೇಕು. 1960ರ ಆ ದಿನ ಆತನ ಪಾಲಿಗೆ ಕರಾಳವಾಗಿತ್ತು. ಮಡಿಲಲ್ಲಿ ರಕ್ತಸಿಕ್ತ ದೇಹದೊಂದಿಗೆ ಎಚ್ಚರವಿಲ್ಲದೆ ಮಲಗಿರುವ ಮಡದಿ. ಹಾದಿಯುದ್ದಕ್ಕೂ ಆತನ ಎದೆಬಡಿತ ವಿಪರೀತವಾಗುತ್ತಿದೆ. ಬೆಳಿಗ್ಗೆಯಿಂದ ಕಟ್ಟಿಗೆ ಹೊಡೆದು ದಣಿದ ದೇಹ. ಹಿಂದಿನ ತನ್ನ ಜೀವನದ ನೆನಪುಗಳು ಒಂದೊಂದಾಗಿ ಮನಪಟಲದಲ್ಲಿ ಹಾದು ಬರುತ್ತಿದೆ. 

ಆತನದ್ದು ತೀರಾ ಶೋಷಿತ ಸಮುದಾಯ. ಊರಿನ ಪ್ರಧಾನರಿಂದ ಸದಾ ಶೋಷಣೆ ಅನುಭವಿಸುತ್ತಿದ್ದರು. ಹಿರಿಯರ ಕಸುಬು ಇಲಿ ಹಿಡಿಯುವುದಾಗಿತ್ತು. 1929ರ ಜನವರಿ 14 ರಂದು ಈತನ ಜನನ. ತೀರಾ ಕಷ್ಟದಲ್ಲಿ ಬೆಳೆದಿದ್ದ. ಚಿಕ್ಕ ವಯಸ್ಸಿನಲ್ಲೇ ಪಕ್ಕದ ಗ್ರಾಮದ ಹುಡುಗಿಯೊಂದಿಗೆ ಬಾಲ್ಯ ವಿವಾಹ ಮಾಡಿದ್ದರು. ಅದು ಆ ಊರಿನಲ್ಲಿ ಸಾಮಾನ್ಯವಾಗಿತ್ತು. ಅವನಿಗೆ ಮದುವೆ ಸುತರಾಂ ಇಷ್ಟವಿರಲಿಲ್ಲ. ಮನೆ ಬಿಟ್ಟು ಜಾರ್ಖಂಡ್ ನ ಪೂರ್ವಭಾಗದಲ್ಲಿದ್ದ ಧನ್ ಬಾದ್ ನತ್ತ ಓಡಿ ಹೋಗಿ ಕಲ್ಲಿದ್ದಲಿನ ಗಣಿಯಲ್ಲಿ ಕೆಲಸಕ್ಕೆ ಸೇರಿದ್ದ. ಸುಮಾರು ಏಳು ವರ್ಷಗಳ ಕಾಲ ಅಹೋರಾತ್ರಿ ದುಡಿದ. ಮನೆಯ ನೆನಪು ತೀವ್ರವಾದಾಗ ಊರಿನತ್ತ ಮರಳಿ, ಮನೆ ಸೇರಿದ. ಯುವಕನಾಗಿದ್ದ ಆತನಿಗೆ ಪಕ್ಕದ ಗ್ರಾಮದ ಪಾಲ್ಗುನಿ ದೇವಿ ಎಂಬಾಕೆಯೊಂದಿಗೆ ಪ್ರೇಮ ಅಂಕುರಿಸುತ್ತದೆ. ಪ್ರೀತಿ ತೀವ್ರವಾದಾಗ ಅವರಿಬ್ಬರು ಮನೆಯವರ ಮುಂದೆ ಮದುವೆಯ ಪ್ರಸ್ತಾಪವಿಡುತ್ತಾರೆ. ಆಶ್ಚರ್ಯವೆಂದರೆ ಅವರಿಬ್ಬರ ಮದುವೆ ಈಗಾಗಲೇ ಆಗಿಹೋಗಿತ್ತು. ತಾನು ಹಿಂದೆ ಇಷ್ಟವಿಲ್ಲದೆ ಬಾಲ್ಯದಲ್ಲಿ ಮದುವೆಯಾದ ಹುಡುಗಿಯೇ ಆಕೆಯಾಗಿದ್ದಳು.

ಅವರಿಬ್ಬರಿಗೂ ಬಹಳನೇ ಖುಷಿಯಾಗುತ್ತದೆ. ಪಾಲ್ಗುನಿ ದೇವಿಯ ತಂದೆ ನಿರುದ್ಯೋಗಿ ತಿರುಗುತ್ತಿದ್ದ ಈತನೊಂದಿಗೆ ಮಗಳನ್ನು ಕಳುಹಿಸಿಕೊಡಲು ಒಪ್ಪಲಿಲ್ಲ. ಇತ್ತ ಅವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದ ಸ್ಥಿತಿ. ದೃಢ ನಿರ್ಧಾರ ಮಾಡಿ ದೂರದ ಊರಿಗೆ ಓಡಿ ಹೋಗಿ ಪ್ರತ್ಯೇಕ ಮನೆ ಮಾಡಿ ವಾಸಿಸತೊಡಗಿದರು. ಈತ ಪರ್ವತದ ಬುಡದಲ್ಲಿ ಕಟ್ಟಿಗೆ ಕಡಿದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಅವರಿಬ್ಬರದ್ದೂ ಅಮರ ಪ್ರೇಮವಾಗಿತ್ತು. ಇತ್ತೀಚೆಗೆ ಒಂದು ಮಗುವಿನ ತಂದೆಯೂ ಆಗಿದ್ದ ಆತನ ಜೀವನ ಪ್ರೀತಿಸಿದ ಮಡದಿಯೊಂದಿಗೆ ನೆಮ್ಮದಿಯಿಂದ ಸಾಗುತ್ತಿತ್ತು.

ಗಯಾ ಸಮೀಪದ ನಗರದ ಆಸ್ಪತ್ರೆಯೊಂದರ ಮುಂದೆ ಜೀಪ್ ತಲುಪುತ್ತಿದ್ದಂತೆ ವಾಸ್ತವಕ್ಕೆ ಮರಳಿದ. ಮಡದಿಯನ್ನು ಎತ್ತಿಕೊಂಡು ಆಸ್ಪತ್ರೆಯೊಳಗೆ ಓಡಿದ. ತುರ್ತು ನಿಗಾ ವಿಭಾಗದೊಳಗೆ ಆಕೆಯನ್ನು ಸಾಗಿಸುತ್ತಿದ್ದಂತೆ ತಾನು ನಂಬಿದ ದೇವರನ್ನೆಲ್ಲಾ ಮನಸ್ಸಿನಲ್ಲೇ ಬಗೆ ಬಗೆಯಾಗಿ ಪ್ರಾರ್ಥಿಸುತ್ತಿದ್ದ. ಆತನಿಗೆ ಆಕೆ ಜೀವಂತ ಬರಬೇಕಿತ್ತು. ಆಕೆಯಿಲ್ಲದ ಜೀವನವನ್ನು ಆತ ಊಹಿಸದಾಗಿದ್ದ. ಬಡತನವಿದ್ದರೂ ಒಂದು ಕ್ಷಣವೂ ಅವರು ತಮ್ಮೊಳಗೆ ಮನಸ್ತಾಪಗೊಂಡವರಲ್ಲ. ರೋಮಿಯೋ ಜೂಲಿಯೆಟ್ ಕೂಡಾ ಅವರ ಪ್ರೀತಿಯ ಮುಂದೆ ಶಿರಭಾಗಬೇಕಿತ್ತು.

ಅಪರೇಷನ್ ಕೋಣೆಯಿಂದ ಹೊರಬಂದ ಡಾಕ್ಟರ್ ಮುಖ ನೋಡಿ ಆತನಿಗೆ ಭಯವಾಗತೊಡಗಿತು. ಡಾಕ್ಟರ್ ಬಂದವರೇ "ಒಂದರ್ಧ ಗಂಟೆ, ಮುಂಚೆ ಬಂದಿದ್ದರೆ ಜೀವ ಉಳಿಸಬಹುದಿತ್ತು" ಎಂದು ಹೇಳುತ್ತಿರುವಂತೆ ಹುಚ್ಚನಂತೆ ಕಿರುಚಾಡಿ ಪ್ರಜ್ಞೆ ತಪ್ಪಿದ. ಎಚ್ಚರಗೊಂಡು ಸುಧಾರಿಸಲು ಗಂಟೆಗಳೇ ಬೇಕಾದವು. ಆದರೂ ಆತ ಅರೆ ಹುಚ್ಚನೇ ಆಗಿದ್ದ. ತಲೆಯಲ್ಲಿ "ಅರ್ಧ ಗಂಟೆ" ಸುಳಿದಾಡುತ್ತಿತ್ತು. ದುರ್ಗಮ ಪರ್ವತವನ್ನು ಸುತ್ತದೆ ನೇರ ಮಾರ್ಗವಿದ್ದಿದ್ದರೆ ಅರ್ಧವೇಕೆ? ಎರಡು ಗಂಟೆ ಮುಂಚಿತವಾಗಿಯೇ ಬರಬಹುದಿತ್ತು.! ಅಲ್ಲಿ ಪರ್ವತ ಛೇದಿಸಿ, ಮಾರ್ಗ ಮಾಡುವಂತೆ ಅದೆಷ್ಟೋ ಬಾರಿ ಮನವಿ ಸಲ್ಲಿಸಲಾಗಿತ್ತು. ಯಾವ ಪ್ರಯತ್ನಕ್ಕೂ ಸರಕಾರ ಕಿವಿಕೊಟ್ಟಿರಲಿಲ್ಲ. ಆತನ ಗ್ರಾಮವಲ್ಲದೆ ಮತ್ತಿಷ್ಟು ಗ್ರಾಮಗಳನ್ನು ಗಯಾ ಸಮೀಪದ ನಗರಕ್ಕೆ ಅದು ಸೇರಿಸುತ್ತಿತ್ತು. 

ಇಂದು ನಿಸ್ತೇಜವಾದ ಮಡದಿಯ ದೇಹವನ್ನು ಹೊತ್ತು ಜೀಪಿಗೆ ಹತ್ತುತ್ತಾನೆ. ಶವವನ್ನು ಮಡಿಲಲ್ಲಿ ಮಲಗಿಸಿ, ಮಗುವಿನಂತೆ ಅಳುತ್ತಿದ್ದಾನೆ. ಆತನ ಕಣ್ಣೀರು ಮಡದಿಯ ಮುಖವನ್ನು ಸಂಪೂರ್ಣ ಒದ್ದೆಯಾಗಿಸಿದೆ. ಹಿಂತಿರುಗಿ ಪಾಲ್ಗುನಿಯ ಅಂತಿಮ ವಿಧಿ ನೆರವೇರಿಸುತ್ತಾನೆ. ಆತ ಅಂದಿನಿಂದ ಸಂಪೂರ್ಣ ಮೌನಿಯಾದ. ಪಾಲ್ಗುನಿಯಿಲ್ಲದ ಜೀವನ ಆತನಿಗೆ ಬರಡಾಗಿತ್ತು. ಪ್ರತಿ ಕ್ಷಣವೂ ಆಕೆ ಅವನ ಮುಂದೆ ಬಂದು ಕರೆಯುತ್ತಿದ್ದಂತೆ ಭಾಸವಾಗುತ್ತಿತ್ತು. ಪರ್ವತವನ್ನು ಕಂಡಾಗ ಕೋಪದಿಂದ ಕುದಿಯ ತೊಡಗುತ್ತಾನೆ. ದೇಶದ ಪ್ರಧಾನಿಯನ್ನೇ ಭೇಟಿಯಾಗಿ ಮನವಿ ಸಲ್ಲಿಸಲು ತೀರ್ಮಾನಿಸಿ ದೆಹಲಿಯತ್ತ ರೈಲು ಹತ್ತಿದ. ಟಿಕೇಟ್ ಪಡೆಯಲು ಜೇಬಿನಲ್ಲಿ ಇಪ್ಪತ್ತು ರೂಪಾಯಿ ಆತನಲ್ಲಿರಲಿಲ್ಲ. ಟಿಟಿ ಬಂದಾಗ ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡರೂ ಕರುಣೆ ತೋರಲಿಲ್ಲ. ನಿರ್ಧಯವಾಗಿ ರೈಲಿನಿಂದ ಹೊರದಬ್ಬಲ್ಪಟ್ಟ. ಆತ ಸೋಲೊಪ್ಪಲಿಲ್ಲ. ಕಾಲುನಡಿಗೆಯಲ್ಲೇ ಪ್ರಯಾಣ ಮುಂದುವರಿಸಿದ. ಸುಮಾರು 1000 ಕಿ.ಮೀ. ಕ್ರಮಿಸಿದ. ಆದರೂ ಆತನ ನಡಿಗೆ ಯಾವ ಫಲವನ್ನೂ ನೀಡಿರಲಿಲ್ಲ.

ಅದೇ ವ್ಯಕ್ತಿ ಅನೇಕ ವರ್ಷಗಳ ಬಳಿಕ ಇಂದು ಬಿಹಾರದ ಮುಖ್ಯಮಂತ್ರಿಯ ಕಚೇರಿಯೊಳಗೆ ಬಂದಿದ್ದ. ಮುಖ್ಯಮಂತ್ರಿ ನಿತೇಶ್ ಕುಮಾರ್ ಎದ್ದು ನಿಂತು ತಲೆಬಾಗುತ್ತಾರೆ. ಆತನನ್ನು ಮುಖ್ಯಮಂತ್ರಿಯ ಆಸನದಲ್ಲಿ ಅಲ್ಪ ಸಮಯ ಕೂರಿಸಿ ವಿಶಿಷ್ಠ ಗೌರವ ಸಲ್ಲಿಸುತ್ತಾರೆ. ಇದು ಅಮರ ಪ್ರೇಮಿಯೊಬ್ಬನಿಗೆ ಸಲ್ಲಿಸಿದ ಗೌರವ. 2015 ರಲ್ಲಿ ಖ್ಯಾತ ನಿರ್ದೇಶಕ ಕೇತನ್ ಮೆಹ್ತಾರ ತೆರೆಯ ಮೇಲಿನ ಕಥಾವಸ್ತುವಾಗಿ ಆತ ಪ್ರದರ್ಶಿಸಲ್ಪಟ್ಟ. 2016 ಡಿಸಂಬರ್ 26 ರಂದು ಭಾರತೀಯ ಅಂಚೆ ಇಲಾಖೆ ಈತನ ಹೆಸರಲ್ಲಿ ಅಂಚೆ ಚೀಟಿ ಬಿಡುಗಡೆಗೊಳಿಸಿ ಗೌರವ ಸಲ್ಲಿಸುತ್ತದೆ. 2006 ರಲ್ಲಿ ಕೇಂದ್ರ ಸರಕಾರ ಅಪ್ರತಿಮ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಿದ ಗೌರವ ಸಮರ್ಪಿಸುತ್ತದೆ. 

ಗೌರವಗಳು ಆತನನ್ನು ಹುಡುಕಿ ಬಂದ ಕಾರಣ ಅತೀ ಸ್ವಾರಸ್ಯಕರವಾಗಿತ್ತು. ಆತನೊಬ್ಬ ಹುಚ್ಚು ಪ್ರೇಮಿಯಾಗಿದ್ದ. ಪಾಲ್ಗುನಿ ಸತ್ತರೂ, ಆತನ ಮನಸ್ಸಿನಲ್ಲಿ ಶಾಶ್ವತವಾಗಿದ್ದಳು. ಮುಂದಿನ ನಲವತ್ತೇಳು ವರ್ಷಗಳ ಕಾಲ ಆಕೆಯ ನೆನಪಿನಲ್ಲೇ ಬದುಕಿದ. ಮಡದಿಯ ಅಂತಿಮ ಸಂಸ್ಕಾರ ಮುಗಿಸಿ ಕೆಲವೇ ದಿನಗಳಾಗಿತ್ತು. ಆಪ್ತನಾದ ಶಿವು ಮಿಸ್ತ್ರಿಯ ಬಳಿ ಬಂದು ಒಂದು ಸುತ್ತಿಗೆ ಹಾಗೂ ಉಳಿ ಕೊಡುವಂತೆ ಬೇಡಿಕೊಂಡ. ಹೆಂಡತಿಯ ನೆನಪಿಗಾಗಿ ತನ್ನೂರಿಗೆ ಮರೆಯಲಾರದ ಕಾಣಿಕೆಯೊಂದನ್ನು ನೀಡಲು ಸಜ್ಜಾಗಿದ್ದ. ಕೇವಲ ಕುಡಿಯುವ ನೀರಿಗಾಗಿ ಮೂರು ಕಿಲೋ ಮೀಟರ್ ನಡೆಯಬೇಕಾಗಿದ್ದ ಊರಿಗಾಗಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲೆಯೊಂದು ಲಭ್ಯವಿಲ್ಲದ ಊರಿನಲ್ಲಿ, ಎದ್ದು ನಿಂತ ಪರ್ವತವನ್ನು ಸೀಳಲು ಎದೆಯೊಡ್ಡಿ ನಿಂತಿದ್ದ. ಸುತ್ತಿಗೆ ಮತ್ತು ಉಳಿ ಹಿಡಿದು ಅಹೋರಾತ್ರಿ ಪರ್ವತವನ್ನು ಸೀಳತೊಡಗಿದ. ಕಂಡವರೆಲ್ಲಾ ಆತನೊಬ್ಬ ಹುಚ್ಚನೆಂದು ಹೀಯಾಳಿಸತೊಡಗಿದರು. ಅವಮಾನಿಸತೊಡಗಿದರು. ಆತ ಹಿಡಿದ ಕಾರ್ಯ ಕೈ ಬಿಡಲೇ ಇಲ್ಲ. ಆತನಲ್ಲೊಂದು ದೃಢತೆ ಇತ್ತು. ಗುರಿಮುಟ್ಟುವ ಆತ್ಮಸ್ಥೈರ್ಯವಿತ್ತು. ಹೃದಯದಲ್ಲಿ ಪಾಲ್ಗುನಿ ದೇವಿಯ ನೆನಪಿತ್ತು. ಒಂದೇ ಸಮನೆ ಪರ್ವತದ ಬಂಡೆಗಳನ್ನು ಕೆತ್ತತೊಡಗಿದ. 1960 ರಲ್ಲಿ ಆರಂಭಿಸಿ 1982 ರ ತನಕ ಇಪ್ಪತ್ತೆರಡು ವರ್ಷ ಪರ್ವತದ ಎದೆಯನ್ನು ಸೀಳಿದ್ದ. ಇಪ್ಪತ್ತೆರಡು ವರ್ಷಗಳ ಶ್ರಮದಿಂದ ಕಡೆಗೂ ಆತ ಗೆದ್ದೇ ಬಿಟ್ಟಿದ್ದ. 360 ಅಡಿ ಉದ್ದ, 30 ಅಡಿ ಅಗಲ ಹಾಗೂ 25ಅಡಿ ಅಗಲದ ದಾರಿ ಆತನೊಬ್ಬನೇ ನಿರ್ಮಿಸಿದ್ದ. ಅತ್ರಿ ಮತ್ತು ವಾಜಿರ್ ಗಂಜಿಯ 70 ಕಿ.ಮೀ ಅಂತರವನ್ನು 15 ಕಿ.ಮೀ.ರಿಗೆ ಇಳಿಸಿದ್ದ. ಷಹಾಜಹಾನ್ ಮಡದಿಯ ನೆನಪಿಗಾಗಿ ತಾಜ್ ಮಹಲ್ ಕಟ್ಟಿಸಿದ್ದ. ಈತ ತನ್ನ ಮಡದಿಯ ಪ್ರೀತಿಗಾಗಿ ಸ್ಮಾರಕ ಕಟ್ಟಿಸಲಿಲ್ಲ. ಸ್ವತಃ ತಾನೇ ಕಟ್ಟಿ ಜಗತ್ತಿಗೆ ಆದರ್ಶನಾದ. 

ಮಡದಿಯ ಮೇಲಿನ ಆತನ ಪ್ರೀತಿಗೆ ಉಪಮೆಯಿಲ್ಲದ್ದು. 2007 ರ ಅಗೋಸ್ತು 17ರ ವರೆಗೆ ಕೊನೆಯುಸಿರಿನ ತನಕವೂ ಹೆಂಡತಿಯ ನೆನಪಿನಲ್ಲೇ ಬದುಕಿದ. 'ದಶರಥ ಮಾಂಜಿ' ಎಂಬ ಶೋಷಿತ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ಅಮರ ಪ್ರೀತಿಗಾಗಿ ಇತಿಹಾಸದಲ್ಲಿ ಶಾಶ್ವತವಾದ. ಜಗತ್ತಿನ ಅದೆಷ್ಟೋ ಸಂಸಾರಗಳಿಗೆ ಆದರ್ಶ ವ್ಯಕ್ತಿಯಾದ. ಆತ ನಿಜಕ್ಕೂ 'ಮೌಂಟೆನ್ ಮ್ಯಾನ್ ಆಫ್ ಇಂಡಿಯಾ' ಎಂಬ ಬಿರುದಿಗೆ ಅರ್ಹನಾಗಿದ್ದ. ಇಂದು ಆತನ ನೆನಪಲ್ಲಿ ಆತನೇ ನಿರ್ಮಿಸಿದ ಮಾರ್ಗಕ್ಕೆ ದ್ವಾರ ನಿರ್ಮಿಸಿ "ದಶರಥ್ ಮಾಂಜಿ ದ್ವಾರ" ಎಂದು ಹೆಸರಿಡಲಾಗಿದೆ. ಮಾರ್ಗವನ್ನು ಆಧುನೀಕರಣಗೊಳಿಸಲಾಗಿದೆ. ಅದನ್ನು ತನ್ನ ಕಣ್ಣುಗಳಲ್ಲಿ ನೋಡಿ ಆನಂದಿಸಲು ಮೌಂಟೆನ್ ಮ್ಯಾನ್ ದಶರಥ ಮಾಂಜಿ ಬದುಕಿಲ್ಲ. ಪ್ರವಾಸೋದ್ಯಮ ಇಲಾಖೆ ಪ್ರತಿವರ್ಷ "ಮೌಂಟೆನ್ ಮ್ಯಾನ್ ದಶರಥ ಮಾಂಜಿ ಉತ್ಸವ" ಆಚರಿಸುತ್ತಾ ಆತನ ನೆನಪನ್ನು ಚಿರಸ್ಥಾಯಿಯಾಗಿಸಿದೆ. ಆತನ ಸ್ಮಾರಕ ವೀಕ್ಷಣೆಗಿಂದು ಸಾವಿರಾರು ಮಂದಿ ದೇಶ ವಿದೇಶಗಳಿಂದ ಆಗಮಿಸುತ್ತಿರುವುದು ಅದ್ಭುತವಾಗಿದೆ. ಆತನ ಸಾಧನೆ ಲಕ್ಷಾಂತರ ಮಂದಿಗೆ ದಾರಿದೀಪವಾಗಲಿ.

-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ