ಅಮಾವಾಸ್ಯೆ

ಅಮಾವಾಸ್ಯೆ

ಬರಹ

ಅಂದು ಅಮಾವಾಸ್ಯೆ. ಹನ್ನೆರಡು ಘಂಟೆಯ ಸಮಯ. ಕಪ್ಪು ಬಣ್ಣದ ಡಾಂಬರು ರಸ್ತೆಯ ಮೇಲೆ ಕಪ್ಪು ಬಣ್ಣದ ಕಾರಿನಲ್ಲಿ ಕುಳಿತು ಹೋಗುತ್ತಿದ್ದೆ. ಗಾಡಿಯಲ್ಲಿ ಪೆಟ್ರೋಲ್ ಖಾಲಿಯಾಗುತ್ತಿತ್ತು. ಹೊರಡುವ ಆತುರದಲ್ಲಿ ಟ್ಯಾಂಕಿನಲ್ಲಿ ಪೆಟ್ರೋಲ್ ಇದೆಯೋ ಇಲ್ಲವೋ ನೋಡಲಿಲ್ಲ. ಹಿಂದೆ ಮುಂದೆ ಯಾವ ಗಾಡಿಗಳ ಸುಳಿವೂ ಇರಲಿಲ್ಲ. ಸುತ್ತಲೂ ಬರೀ ಮರಗಳೇ ಇದ್ದು ಸಿಗ್ನಲ್ ಸಿಗದೇ ಇದ್ದುದರಿಂದ ಮೊಬೈಲ್ ಇದ್ದೂ ಇಲ್ಲದಂತಾಗಿತ್ತು. ಯಾರೋ ಗಾಡಿಯ ಮುಂದೆ ಹಾದು ಹೋದಂತಾಗಿ ಗಕ್ಕನೆ ಬ್ರೇಕ್ ಹಾಕಿ ನಿಂತೆ. ಯಾರೂ ಕಾಣಲಿಲ್ಲ. ಭ್ರಮೆ ಇರಬೇಕು. ಹಿಂದಿನ ರಾತ್ರಿ ನಿದ್ದೆ ಬೇರೆ ಸರಿಯಾಗಿ ಆಗಲಿಲ್ಲ.
ಈ ಹಾಳಾದ ರಮೇಶ ಊರಾಚೆ ತೋಪಿನಲ್ಲಿ ಮನೆಗೇ ಬನ್ನಿ ಅಂತ ಕರೆದಿದ್ದಾನೆ ವಿದೇಶದಲ್ಲಿರುವ ರಮೇಶ ಅಪರೂಪಕ್ಕೆ ಒಮ್ಮೆ ಊರಿಗೆ ಬಂದಾಗ ಅಲ್ಲಿ ಉಳಿದುಕೊಂಡು ಎಲ್ಲ ಸ್ನೇಹಿತರನ್ನು ಅಲ್ಲಿಗೇ ಕರೆಸಿಕೊಳ್ಳುವುದು ವಾಡಿಕೆ. ಯಾವಾಗಲೂ ಗುಂಪಲ್ಲಿ ಗೋವಿಂದ ಅಂತ ಸ್ನೇಹಿತರ ಜೊತೆ ಹೋಗುತ್ತಿದ್ದೆ. ಹಾಳಾದವರು ಇವತ್ತು ಯಾರೂ ಜೊತೆಗೆ ಸಿಗಲಿಲ್ಲ. ಎಲ್ಲರೂ ಮುಂಚೇನೇ ಹೊರಟುಹೋಗಿದ್ದಾರೋ ಅಥವಾ ಆಮೇಲೆ ಬರುತ್ತಾರೋ ಗೊತ್ತಿಲ್ಲ. ನನ್ನ ಎಣಿಕೆ ಪ್ರಕಾರ ಇನ್ನು ಹತ್ತು ಕಿಲೋಮೀಟರ್ ಒಳಗೆ ಅವನ ಕಾಡಿನ ಮನೆ ಸಿಗಲಿಲ್ಲವೋ ಕಾರು ನಿಂತೇ ಹೋಗುವುದು ಗ್ಯಾರಂಟಿ.
ಅದೇನೇನು ಅಡಗಿವೆಯೋ ಈ ಮರಗಳ ಮಧ್ಯೆ ಯಾರಿಗೆ ಗೊತ್ತು. ಗಾಡಿ ನಿಂತಾಗ ಕಾರಿನಲ್ಲೇ ಕುಳಿತರೆ ಯಾವುದಾದರೂ ಬೇರೇ ಗಾಡಿ ಬಂದಲ್ಲಿ ನಿಲ್ಲಿಸಲೂ ಪುರುಸೊತ್ತಿರುವುದಿಲ್ಲ. ಹಾಗೆಂದು ಹೊರಗೆ ನಿಂತರೆ ಒಂದೆಡೆ ಚಳಿ ಇನ್ನೊಂದೆಡೆ ಭಯ. ಹಾವು ಬಂದು ’ಹಾಯ್’ ಎಂದರೆ? ಕರಡಿ ಬಂದು ಕಿಸ್ ಕೊಟ್ಟರೆ? ಅಯ್ಯಯ್ಯೋ, ಏನೇನೋ ಆಲೋಚನೆಗಳು ಬರತೊಡಗಿದವು.

ಈಗಲೇ ದೆವ್ವಗಳ ಕಥೆಗಳು, ಹಾರರ್ ಚಲನಚಿತ್ರಗಳು, ಕೆಲವರು ಹೇಳಿದ ’ಸತ್ಯ’ ಘಟನೆಗಳು ಎಲ್ಲ ನೆನಪಿಗೆ ಬರುವುದು. ಮನಸ್ಸಿಗೂ ಒಂದು ’ಫ಼ೈರ್ ವಾಲ್’ ಇದ್ದಿದ್ದರೆ ಇಂತಹ ಆಲೋಚನೆಗಳನ್ನು ತಡೆಗಟ್ಟಬಹುದಿತ್ತು.
ಈ ಅಲೋಚನೆಗಳು ಬದಿಗೊತ್ತಿ ಯಾವುದಾದರೂ ಚೆಲುವಿನ ಮುಖದ ನಾಯಕಿಯನ್ನು ಮನಸ್ಸಿಗೆ ತಂದುಕೊಳ್ಳೋಣ ಎಂದು ಪ್ರಯತ್ನ ಮಾಡಿದೆ. ನನ್ನ ದುರಾದೃಷ್ಟ ! ಮನಸ್ಸಿಗೆ ಬಂದ ಐಶ್ವರ್ಯ ಕೂಡ ’ಎಂದೆಂದಿಗೂ ನಾ ನಿನ್ನ ಬಿಡಲಾರೆ ಬಾ ಚೆನ್ನ’ ಎಂದು ’ನಾ ನಿನ್ನ ಬಿಡಲಾರೆ’ ಚಿತ್ರದ ಹಾಡೇ ಹಾಡಬೇಕೆ? ನಾಯಕಿಯರು ಪ್ರಯೋಜನವಿಲ್ಲ ಎಂದು ಹಾಸ್ಯನಟರನ್ನು ಮೆಲುಕು ಹಾಕಿ ಸ್ವಲ್ಪ ಉಲ್ಲಾಸ ತಂದುಕೊಳ್ಳೋಣ ಎಂದುಕೊಂಡರೆ, ಮನಸ್ಸಿಗೆ ಬಂದೆ ನರಸಿಂಹರಾಜು ಕೂಡ ’ಯಾರು ಯಾರು ನೀ ಯಾರು, ಎಲ್ಲಿಂದ ಬಂದೆ ಯಾವೂರು’ ಎನ್ನ ತೊಡಗಿದರು. ಛೆ! ಈ ಚಲನಚಿತ್ರದ ಜನರ ಸಹವಾಸವೇ ಬೇಡ ಎಂದು, ಅವರನ್ನೆಲ್ಲ ಮನಸ್ಸಿನಿಂದ ದೂರ ಅಟ್ಟಿದೆ.
ಮನಸ್ಸಿನಲ್ಲಿ ಅವರುಗಳು ಆಕ್ರಮಿಸಿದ್ದ ಜಾಗ ಖಾಲಿಯಾಗುತ್ತಿದ್ದಂತೆಯೇ ಯಾರೋ ’ರಾ ರಾ, ಸರಸಕೆ ರಾ ರಾ’ ಎಂದು ಹಾಡಿದಂತೆ ಆಯಿತು. ವೇಗ ಹೆಚ್ಚಿಸಿದೆ. ಹಾಡು ನಿಲ್ಲಲಿಲ್ಲ. ಒಮ್ಮೆಗೇ ಮಂದ ಬುದ್ದಿ ಚುರುಕಾಗಿ ಕಾರಿನ ಟೇಪ್ ರೆಕಾರ್ಡರ್ ಆಫ಼್ ಮಾಡಿದೆ. ಇನ್ನು ಐದು ಕಿಲೋಮೀಟರ್ ಅಷ್ಟೇ ನನಗೆ ಸಮಯ. ಐದು ವರ್ಷಗಳ ಹಿಂದೆ ನೋಡಿದ ಮನೆ. ಸಿಕ್ಕಿತೋ ಸರಿ, ಇಲ್ಲ ಅಂದರೆ ನನ್ನನ್ನು ಸ್ವಾಗತಿಸಲು ಬರುವ ಪ್ರಾಣಿಗಳ ಮುಂದೆ ನನ್ನ ಚರಣ ಶ್ಲೋಕ ನಾನೇ ಹಾಡಬೇಕು ’ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿ ರಕ್ತವಿದೆಕೋ’ ಎಂದು.
ನಾಲ್ಕು ಕಿಲೋಮೀಟರ್ ಕಳೆದವು. ದೂರದಲ್ಲಿ ಮರಗಳ ನಡುವೆ ಗೇಟೊಂದು ಕಾಣಿಸಿತು. ಇನ್ನೇನು ಗೇಟಿನ ಮುಂದೆ ನಿಲ್ಲಿಸಬೇಕು ಅನ್ನುವಷ್ಟರಲ್ಲಿ ಗಾಡಿ ತಾನಾಗೇ ನಿಂತಿತು. ಸರಿ, ಎಂದು ಗೇಟ್ ತೆರೆದು ಒಳಗೆ ಕಾಲಿಟ್ಟೆ. ಬಾಗಿಲ ಬಳಿ ಯಾರೋ ಬಿಳಿ ಪಂಚೆ ಬಿಳಿ ಷರಟು ತೊಟ್ಟು ಪೇಪರ್ ಓದುತ್ತಾ ಕುಳಿತಿದ್ದರು. ಇಷ್ಟು ಹೊತ್ತಿನಲ್ಲಿ ಪೇಪರ್ ಓದುತ್ತಾ ಕುಳಿತುಕೊಳ್ಳುವುದೇ? ನಾನಾಗಿದ್ದಿದ್ದರೆ ಆರಾಮಾಗಿ ಊಟ ಮಾಡಿ ಮಲಗಿರುತ್ತಿದ್ದೆ. ಹಿರಿಯರನ್ನು ಕೇಳಿದೆ ’ಸ್ವಾಮಿ, ರಮೇಶ ಇದ್ದಾನೆಯೇ?’. ಗೊರ ಗೊರ ಸದ್ದಿನೊಂದಿಗೆ ಆ ವ್ಯಕ್ತಿ ಹೇಳಿತು ’ಯಾವ ರಮೇಶನೋ? ನಾನು ಬದುಕಿದ್ದಾಗ ಆ ಹೆಸರಿನವರು ನಮ್ಮ ಮನೆಯಲ್ಲಿ ಯಾರೂ ಇರಲಿಲ್ಲ’ ಅಂತ.
ಮೊದಲೇ ಹೆದರಿದ್ದ ನನಗೆ ಈ ಮಾತುಗಳ ಕೇಳಿ ಎಲ್ಲಾ ಅಲ್ಲೇ ಆಗುವುದೇನೋ ಅನ್ನಿಸುತು. ತಪ್ಪಿಸಿಕೊಂಡು ಹೋಗೋಣ ಎಂದರೆ ಕಾರಿನಲ್ಲಿ ಪೆಟ್ರೋಲ್ ಬೇರೆ ಇಲ್ಲ. ಇನ್ನು ಸ್ವಲ್ಪ ಹೊತ್ತಿನಲ್ಲಿ ಭೂತಗಳಿಗೂ ಪ್ರಾಣಿಗಳಿಗೂ ನನ್ನ ದೇಹದ ಮೇಲಿನ ಹಕ್ಕಿಗಾಗಿ ಪೈಪೋಟಿ ನೆಡೆಯುವುದು ಖಂಡಿತ. ಕಣ್ಣು ಕತ್ತಲಿಟ್ಟುಕೊಂಡು ಬಂದಂತಾಯಿತು ಎನ್ನುವಷ್ಟರಲ್ಲಿ ಹೆಗಲ ಮೇಲೆ ಯಾರೊ ಧೊಪ್ಪೆಂದು ಕೈ ಇಟ್ಟರು. ಕಣ್ಣು ಮುಚ್ಚಿ ಕಿಟಾರೆಂದು ಕಿರುಚಿದೆ. ಹಿಂದಿನಿಂದಲೇ ನಾಲ್ಕಾರು ಜನ ಜೋರಾಗಿ ನಕ್ಕಿದ್ದು ಕೇಳಿ ಕಣ್ಣು ತೆರೆದು ನೋಡಿದರೆ ರಮೇಶ ಮತ್ತು ಮಿಕ್ಕ ಸ್ನೇಹಿತರು ನನ್ನನ್ನು ಗೇಲಿ ಮಾಡಿ ನಗುತ್ತಿದ್ದರು.
ಒಬ್ಬ ಬೆವತಿದ್ದ ಮುಖ ಒರೆಸಿಕೊಳ್ಳಲು ಟವಲ್ ಕೊಟ್ಟರೆ ಇನ್ನೊಬ್ಬ ಆರಿದ ಗಂಟಲಿಗೆ ಕುಡಿಯಲು ನೀರು ಕೊಟ್ಟ. ರಮೇಶ ದೂರದಲ್ಲಿ ನಸುನಗುತ್ತಾ ನಿಂತಿದ್ದ. ರಮೇಶ ಹೇಳಿದ ’ಅಲ್ವೋ ಕಿಟ್ಟಿ. ಇಷ್ಟು ವಯಸ್ಸಾದರೂ ನಿನಗೆ ಇನ್ನೂ ಆ ಭಯ ಹೋಗಿಲ್ಲವೇನೋ.’ ನಾನೆಂದೆ ’ಅಲ್ವೋ, ಮೊದಲೇ ಅಮಾವಸ್ಯೆ ಬೇರೆ, ಒಬ್ಬನೇ ಕಾರ್ ಓಡಿಸುತ್ತಿದ್ದೆ. ಎಲ್ಲೆಲ್ಲೂ ಮರಗಳೇ. ಏನಾದ್ರೂ ಆದ್ರೆ ಏನೋ ಗತಿ’. ರಮೇಶ ಅಂದ ’ಅಲ್ವೋ ದಡ್ಡ. ಇವತ್ತು ಅಮಾವಾಸ್ಯೆ ಸರಿ ಆದರೆ ಇದು ಮಧ್ಯಾನ್ನ! ಹನ್ನೆರಡು ಘಂಟೆ ಮಧ್ಯಾನ್ನ!! ಅದೆಂತದ್ದೋ ಭಯ. ನೀನು ಹಿಂಗಾಡ್ತೀಯಾ ಅಂತಲೇ ನಿನ್ನಿಂದ ಎರಡು ಕಿಲೋಮೀಟರ್ ದೂರದಲ್ಲಿ ನಿನಗೆ ಗೊತ್ತಾಗದ ಹಾಗೆ ಸುರೇಶ ಫ಼ಾಲೋ ಮಾಡ್ತಾ ಇದ್ದ. ನಿನಗೆ ಸ್ವಲ್ಪ ಜಾಸ್ತಿ ಹೆದರಿಸಬೇಕು ಅಂತ ಜಗ್ಗ ಆ ಮುದುಕ ವೇಷ ಹಾಕಿ ಇಲ್ಲಿ ಕುಳಿತಿದ್ದ. ಸರಿ ನಡೀ ಒಳಗೆ, ಊಟ ಮಾಡ್ತಾ ಮಾತಾಡೋಣಾ.’ ಸದ್ಯ, ಬದುಕಿದೆಯಾ ಬಡ ಜೀವವೇ ಅಂತ ಅವನ ಹಿಂದೆಯೇ ಹೋದೆ! ಹೆದರಿಕೆಗೆ ಮಧ್ಯಾನ್ನ ಆದರೇನು ರಾತ್ರಿಯಾದರೇನು.
ನೀವೇನಂತೀರಾ ?