ಅಮೂಲ್ಯ ಔಷಧಿಗಳ ಆಗರ ನುಗ್ಗೇಕಾಯಿ

ಅಮೂಲ್ಯ ಔಷಧಿಗಳ ಆಗರ ನುಗ್ಗೇಕಾಯಿ

ಬಹಳ ಹಿಂದೆ ಉಡುಪಿ ಜಿಲ್ಲಾ ಕೃಷಿಕರ ಸಂಘದ ಕೃಷಿ ಮಹೋತ್ಸವದ ಸಂದರ್ಭದಲ್ಲಿ ನಮ್ಮ ಹಿತ್ತಲಲ್ಲಿ ಗಿಡ ಮೂಲಿಕೆಗಳು ಕುರಿತಾಗಿ ಎಂ ದಿನೇಶ್ ನಾಯಕ್ ವಿಟ್ಲ, ಇವರು ನಮ್ಮ ಸುತ್ತಮುತ್ತ ಇರುವ, ಮಹತ್ವ ಗೊತ್ತಿಲ್ಲದ ಕೆಲವೊಂದು ಔಷಧೀಯ ಗಿಡಗಳು, ಮರಗಳು, ಮತ್ತು ಬಳ್ಳಿಗಳ ಬಗ್ಗೆ ಜನರಿಗೆ ಅರ್ಥವಾಗುವಂತೆ ಹೇಳಿದ್ದರು. ಅದರಲ್ಲಿ ಒಂದು ನುಗ್ಗೆ ಕಾಯಿ. ಇದು ನಮಗೆಲ್ಲಾ ಪರಿಚಿತ ಮರ. ಇದು ಕೇವಲ ತರಕಾರಿ ಉದ್ದೇಶಕ್ಕೆ ಮಾತ್ರ ಬಳಕೆಯಾಗುವ ಮರವಲ್ಲ. ಮನೆಯ ಹಿತ್ತಲಿನ ಒಂದು ಅಮೂಲ್ಯ ಔಷಧೀಯ ಗಿಡ.    
ಕಾಸರಗೋಡಿನಿಂದ ಕನ್ಯಾಕುಮಾರಿಯ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ರಸ್ತೆಯ ಯಾವುದೇ ಬದಿಯಲ್ಲಿ ಕಂಡರೂ ನುಗ್ಗೆ ಗಿಡಗಳು ಕಾಣದೇ ಇರುವುದೇ ಇಲ್ಲ. ಇತರ ರಸ್ತೆ ಬದಿಗಳೂ ಇದಕ್ಕೆ ಹೊರತಲ್ಲ. ತಮಿಳುನಾಡಿನಲ್ಲಿ ಯಾವುದೇ ಸಸ್ಯಾಹಾರಿ ಸಾಂಬಾರಿಗೂ ನುಗ್ಗೆ ಕಾಯಿ ಹಾಕದೆ ಅದು ಅವರಿಗೆ ಪರಿಪೂರ್ಣ ಅನ್ನಿಸುವುದೇ ಇಲ್ಲ. ನುಗ್ಗೆ ಹಾಕಿ ಮಾಡಿದ ಸಾಂಬಾರಿನ ಪರಿಮಳಕ್ಕೆ ಸರಿಸಾಟಿ ಮತ್ತೆ ಯಾವುದೂ ಇಲ್ಲ ಎನ್ನಬಹುದು.
ನುಗ್ಗೆ ಬಹು ಉಪಯೋಗಿ: ನುಗ್ಗೆ ಸಸ್ಯಲ್ಲಿ ಬಿಡುವ ಕೋಲಿನಾಕಾರದ ಕೊಡುಗಳನ್ನು ಅಡುಗೆಗೆ ಬಳಕೆ ಮಾಡುವುದಲ್ಲದೆ , ಈ ಮರದ ಸರ್ವಾಂಗವೂ ಉಪಯುಕ್ತ. ಇದರ ಎಲೆ, ಚೆಕ್ಕೆ, ಬೀಜ, ಬೇರು ಎಲ್ಲವೂ ಮನುಷ್ಯನಿಗೆ, ಪಶುಗಳಿಗೆ ಉಪಯುಕ್ತವಾಗಿದೆ.
ಹಳ್ಳಿಯಲ್ಲಿ ಹಿರಿಯರು ಸಣ್ಣ ಮಕ್ಕಳ ಶಿಶ್ನದ ತುದಿ ಬಾವು ಸಂಭವಿಸಿದಾಗ ನುಗ್ಗೆ ಸಸಿಯ ಎಲೆಯನ್ನು ಕಡ್ದಿ ಸಮೇತ ತಂದು ಮೆಲ್ಲಗೆ ತುದಿ ಭಾಗಕ್ಕೆ ಒರೆಸುವುದು ಮತ್ತು ಅದರಲ್ಲಿ ಕೆಲವೇ ಕ್ಷಣದಲ್ಲಿ ಬಾವು ಕಡಿಮೆಯಾಗುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಅಂಶ. 
ನುಗ್ಗೆ ಕಾಯಿಯ ಬೀಜ ಮತ್ತು ಎಲೆಗಳು ನೀರು ಶುದ್ದೀಕರಣಕ್ಕೆ ಪ್ರಯೋಜನಕಾರಿ. ಇದರ ಬೀಜಗಳನ್ನು ಪರಿಶುದ್ಧವಲ್ಲವೆಂದು ಅಪನಂಬಿಕೆ ಇರುವ ನೀರಿಗೆ ಹಾಕಿ ನಂತರ ಬಳಸಿದರೆ ಅದು ಪೂರ್ತಿ ಶುದ್ಧವಾದಂತೆ. ನೀರು ಶುದ್ದೀಕರಣಕ್ಕಾಗಿ ನುಗ್ಗೆ ಬೀಜಗಳನ್ನು ನಮ್ಮ ದೇಶವೂ ಅಲ್ಲದೆ ಬೇರೆ ದೇಶದಲ್ಲೂ ಬಳಕೆ ಮಾಡುತ್ತಾರೆ. 
 ಬೀಜ ಬಲಿಯದ ಹಂತದ ನುಗ್ಗೆ ಕಾಯಿಯನ್ನು ಬದನೆಯ ಜೊತೆಯಲ್ಲಿ ಅಡುಗೆಗಾಗಿ ಬಳಕೆ ಮಾಡುವುದಕ್ಕೆ ಕಾರಣ, ಬದನೆಯಲ್ಲಿರುವ ನಂಜಿನ ಅಂಶವನ್ನು ಕಡಿಮೆ ಮಾಡುವುದಕ್ಕಾಗಿ. ನಮ್ಮ ಹಿರಿಯರು ಇದನ್ನು ಹಿಂದೆಯೇ ಕಂಡುಕೊಂಡಿರುತ್ತಾರೆ.
ನುಗ್ಗೆ ಸೊಪ್ಪನ್ನು  ಪಲ್ಯ ಮಾಡುತ್ತಾರೆ. ಇದು ದೇಹಕ್ಕೆ ನೈಸರ್ಗಿಕ ಮೂಲದಲ್ಲಿ ಕಬ್ಬಿಣ ಸತ್ವವನ್ನು ಹೇರಳವಾಗಿ ಒದಗಿಸಿಕೊಡುತ್ತದೆ. ಇದನ್ನು ಪಶು ಮೇವಾಗಿ ಬಳಸಿದಾಗ ಖನಿಜಾಂಶ ಒದಗಿಸಿದಂತೆ. ನುಗ್ಗೆ ಗಿಡದ ಕಾಂಡದ ಕೆತ್ತೆ (ತೊಗಟೆ)ಯನ್ನು  ಕುರು (ಹುಣ್ಣು) ಗುಣಪಡಿಸಲು ಬಳಕೆ ಮಾಡುತ್ತಾರೆ. ಮರದ ಕಾಂಡಕ್ಕೆ ಗಾಯವಾಗದಂತೆ ಸ್ವಲ್ಪ ಕೆತ್ತೆಯನ್ನು ತೆಗೆದು ಅದನ್ನು ಬೆಂಕಿಯಲ್ಲಿ ಕರಟಿಸಿ ಹುಡಿ ಮಾಡಿ ಅದಕ್ಕೆ ಬೆಣ್ಣೆ ಸೇರಿಸಿ ಕುರುವಿನ ಭಾಗದ ಸುತ್ತ ಹಚ್ಚಿದರೆ ಒಂದೇ ದಿನದಲ್ಲಿ ಕುರು ಹಣ್ಣಾಗುತ್ತದೆ ಮತ್ತು ಅದು ಗುಂಜು ಸಮೇತ ಹೊರ ಬಂದು ಮುಂದೆ ಹುಣ್ಣು ಮುಂದುವರಿಯುವುದಿಲ್ಲ.
ಹಿಂದೆ ನಮ್ಮ ಹಿರಿಯರು ಬಾವಿ ಕಟ್ಟೆಗೆ ನುಗ್ಗೆ ಗೆಲ್ಲನ್ನು ರಾಟೆ ಹಾಕುವ ಕಂಬವಾಗಿ ನೆಡುತ್ತಿದ್ದರು, ಇದಕ್ಕೆ ಕಾರಣ ಇದರ ಎಲೆ ಬಿದ್ದು ಬಾವಿಯ ನೀರು ಶುದ್ಧವಾಗುತ್ತದೆ ಎಂದು. ನುಗ್ಗೆ ನೈಸರ್ಗಿಕವಾಗಿ ದೊರೆಯುವ ಲೈಂಗಿಕ ಶಕ್ತಿವರ್ಧಕ.
ಈ ಸಸ್ಯವನ್ನು ಬೀಜದಿಂದ ಸಸ್ಯಾಭಿವೃದ್ದಿಗೊಳಿಸಲಾಗುತ್ತದೆ. ಗೆಲ್ಲುಗಳನ್ನೂ ನೆಟ್ಟು  ಬದುಕಿಸಬಹುದು. ಸರಿಯಾಗಿ ಪ್ರೂನಿಂಗ್ ಮಾಡಿದರೆ ಕುಬ್ಜವಾಗಿ ಹೆಚ್ಚು ಫಸಲು ಕೊಡಬಲ್ಲುದು. ಅಧಿಕ ಕಾಯಿಯಾಗಲು ಅದಕ್ಕೆ ಹೆಚ್ಚು ನೀರಾವರಿ ಮಾಡಬಾರದು. ಇದು ಬರ ನಿರೋಧಕ ಸಸ್ಯ. ನುಗ್ಗೆಯ ವೈಜ್ಞಾನಿಕ ಹೆಸರು Moringa oleifera ಇದು Plantae ಕುಟುಂಬಕ್ಕೆ  ಸೇರಿದೆ. ಇದರಲ್ಲಿ ಈಗ ಹಲವಾರು ಸುಧಾರಿತ ತಳಿಗಳನ್ನು ಅಭಿವೃದ್ದಿಪಡಿಸಲಾಗಿದೆ.
ಮಾಹಿತಿ: ಶ್ರೀ ಎಂ. ದಿನೇಶ್ ನಾಯಕ್ ವಿಟ್ಲ (ಚಿತ್ರ:ಅಂತರ್ಜಾಲದಿಂದ)